ಗ್ರಾಮೀಣ, ನಗರ, ಜಾತಿ, ಧರ್ಮ ಬೇಧವಿಲ್ಲದೆ ಗುಣಮಟ್ಟದ ಆರೋಗ್ಯ ಸೇವೆ
ರಾಜ್ಯದ ಜನರಿಗೆ ಗುಣಮಟ್ಟದ ಆರೋಗ್ಯ ಸೇವೆ ನೀಡಲು ಸರ್ಕಾರ ಬದ್ದ
ಬೆಂಗಳೂರು: ರಾಜ್ಯದ ಜನರಿಗೆ ಗುಣಮಟ್ಟದ ಆರೋಗ್ಯ ಸೇವೆ ನೀಡಲು ಸರ್ಕಾರ ಬದ್ದವಾಗಿದ್ದು, ಜಯದೇವ ಆಸ್ಪತ್ರೆಯಲ್ಲಿರುವ ಮಾದರಿಯಲ್ಲಿ ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲೂ ಆರೋಗ್ಯ ಸೇವೆ ಸಿಗಬೇಕು ಎನ್ನುವುದು ಗುರಿ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ಆರೋಗ್ಯ ಇಲಾಖೆಗೆ ಹೊಸದಾಗಿ 262 ಆಧುನಿಕ ಜೀವರಕ್ಷಕ ಆಂಬ್ಯುಲೆನ್ಸ್ಗಳನ್ನು ಲೋಕಾರ್ಪಣೆ ಮಾಡಿ ಮಾತನಾಡಿದರ ಅವರು, ಪ್ರತಿಯೊಂದು ಜಿಲ್ಲಾ ಕೇಂದ್ರಗಳಲ್ಲೂ ಎಂಆರ್ಐ ಸೌಲಭ್ಯಗಳು ದೊರೆಯಬೇಕು, ಸರ್ಕಾರಿ ಆಸ್ಪತ್ರೆಗಳಲ್ಲಿ ಖಾಸಗಿ ಆಸ್ಪತ್ರೆಯಷ್ಟೆ ಉತ್ತಮ ಆರೋಗ್ಯ ಸೇವೆ ದೊರೆಯಲಿದೆ ಎಂಬ ಭಾವನೆ ಮೂಡಿಸಬೇಕು ಎಂದು ಸಲಹೆ ನೀಡಿದರು.
ಹಳೆ ಬಟ್ಟೆ-ಕೊಳಕು ಬಟ್ಟೆ ಹಾಕಿಕೊಂಡು ಬರುವ ಬಡವರನ್ನೂ ಮಾನವೀಯವಾಗಿ ನಡೆಸಿಕೊಂಡು ತಾರತಮ್ಯ ಇಲ್ಲದ ಉತ್ತಮ ಆರೋಗ್ಯ ಸೇವೆ ನೀಡಬೇಕು. ಚಿಕಿತ್ಸೆ ಸಿಗದೆ ಯಾರೂ ಪ್ರಾಣ ಕಳೆದುಕೊಳ್ಳುವಂತೆ ಆಗಬಾರದು ಎನ್ನುವ ಕಾರಣಕ್ಕೇ ತುರ್ತು 108 ಆಂಬ್ಯುಲೆನ್ಸ್ಗಳನ್ನು ಆರೋಗ್ಯ ಸೇವೆಗೆ ಒದಗಿಸಲಾಗಿದೆ. ರಾಜ್ಯದಲ್ಲಿ 840ಕ್ಕೂ ಹೆಚ್ಚು ಆಂಬ್ಯುಲೆನ್ಸ್ಗಳ ಅಗತ್ಯವಿದೆ. ಪ್ರತಿ ತಾಲ್ಲೂಕಿನಲ್ಲಿ 4 ಆಂಬ್ಯುಲೆನ್ಸ್ಗಳು ಕಾರ್ಯನಿರ್ವಹಿಸುತ್ತಿದ್ದು, ಪ್ರತಿ ದಿನ ನೂರಾರು ಮಂದಿಗೆ ತುರ್ತು ಆರೋಗ್ಯ ಸೇವೆ ಒದಗಿಸುತ್ತಿವೆ ಎಂದು ಮಾಹಿತಿ ನೀಡಿದರು.
ರಾಜ್ಯದ ಎಲ್ಲಾ ಜನರ ಆರೋಗ್ಯ ರಕ್ಷಣೆ ಮಾಡುವ ಜವಾಬ್ದಾರಿಯನ್ನು ಸರ್ಕಾರ ಹೊಂದಿದೆ. ಗ್ರಾಮೀಣ, ನಗರ, ಜಾತಿ, ಧರ್ಮ ಬೇಧವಿಲ್ಲದೆ ಗುಣಮಟ್ಟದ ಆರೋಗ್ಯ ಸೇವೆ ಒದಗಿಸುತ್ತಿದೆ. ನಾವು ಎಲ್ಲರಿಗೂ ಉತ್ತಮ ಆರೋಗ್ಯ ಸೇವೆ ನೀಡಿದರೆ ಮಾನವ ಸಂಪನ್ಮೂಲ ಹೆಚ್ಚಾಗಲು ಸಾಧ್ಯ. ಮಾನವ ಸಂಪನ್ಮೂಲ ಹೆಚ್ಚಾದರೆ ಉತ್ಪಾದನೆ ಹೆಚ್ಚಾಗುತ್ತದೆ, ಜಿಡಿಪಿ ವೃದ್ಧಿಯಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದಾಗ ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಸೇವೆ ಆರಂಭಿಸಿದರು. ಯೋಜನೆಯಡಿ ಕೇಂದ್ರ ಸರ್ಕಾರ ಶೇ.60ರಷ್ಟು, ರಾಜ್ಯ ಸರ್ಕಾರ ಶೇ.40ರಷ್ಟು ಹಣ ಖರ್ಚು ಮಾಡುತ್ತಿವೆ. ಒಟ್ಟಾರೆ ಯೋಜನೆಯ ಉದ್ದೇಶ ಎಲ್ಲರಿಗೂ ಉತ್ತಮ ಆರೋಗ್ಯ ಸೇವೆ ಒದಗಿಸುವುದಾಗಿದೆ. ಅಪಘಾತ, ಹೆರಿಗೆ, ಹೃದಯಾಘಾತ ಸೇರಿದಂತೆ ಇತರ ತುರ್ತು ಸಂದರ್ಭಗಳಲ್ಲಿ ಚಿಕಿತ್ಸೆ ಸಿಗದೆ ಯಾರೂ ಸಾವನ್ನಪ್ಪಬಾರದು ಎಂದು 2008ರಲ್ಲಿ ತುರ್ತು ಆ್ಯಂಬುಲೇನ್ಸ್ಗಳನ್ನು ಆರೋಗ್ಯ ಸೇವೆಗೆ ಸಮರ್ಪಿಸಲಾಗಿದೆ ಎಂದು ಮಾಹಿತಿ ನೀಡಿದರು.
ರಾಜ್ಯದಲ್ಲಿ 236 ತಾಲ್ಲೂಕುಗಳಿದ್ದು, ಏಳು ಕೋಟಿ ಜನಸಂಖ್ಯೆ ಇದೆ. ತುರ್ತು ಸೇವೆಗೆ 840 ಆ್ಯಂಬುಲೆನ್ಸ್ಗಳ ಅಗತ್ಯ ಇದೆ. ಪ್ರಸ್ತುತ 740 ಆ್ಯಂಬುಲೆನ್ಸ್ಗಳಿವೆ. ಈಗ ಪ್ರತಿ ತಾಲ್ಲೂಕಿಗೆ ನಾಲ್ಕು ಆ್ಯಂಬುಲೆನ್ಸ್ಗಳಿವೆ ಎನ್ನಲಾಗಿದೆ. ರಸ್ತೆ ಅಪಘಾತದಲ್ಲಿ ಒಂದು ಗಂಟೆಯಲ್ಲಿ ಗೋಲ್ಡನ್ ಅವರ್ನಲ್ಲಿ ಚಿಕಿತ್ಸೆ ದೊರೆತರೆ ಜೀವ ಉಳಿಸಲು ಸಾಧ್ಯ. ಪ್ರಾಥಮಿಕ ಚಿಕಿತ್ಸೆ ಬಳಿಕ ರೋಗಿಗೆ ಹೆಚ್ಚಿನ ಚಿಕಿತ್ಸೆ ಕೊಡಿಸಲು ವೈದ್ಯರು ನಿರ್ಧರಿಸುತ್ತಾರೆ. ಹೊಸ ಆ್ಯಂಬುಲೆನ್ಸ್ನಲ್ಲಿ ನುರಿತ ಶೂಶ್ರೂಶಕರು, ತರಬೇತಿ ಪಡೆದ ತಂತ್ರಜ್ಞರು ಇರಲಿದ್ದಾರೆ. ಆತ್ಯಾಧುನಿಕ ಜೀವ ರಕ್ಷಕ ಸಲಕರಣೆಗಳನ್ನು ಅಳವಡಿಸಲಾಗಿದೆ. ಅಗತ್ಯದಷ್ಟು ಆ್ಯಂಬುಲೆನ್ಸ್ಗಳ ಸಂಖ್ಯೆಯನ್ನು ಹೆಚ್ಚಿಸಲು ಆರ್ಥಿಕ ನೆರವು ನೀಡಲಾಗುವುದು ಎಂದು ಭರವಸೆ ನೀಡಿದರು.
ಪ್ರತಿ ಜಿಲ್ಲೆಯಲ್ಲಿ ಎಂಆರ್ಐ ಸ್ಕ್ಯಾನಿಂಗ್ ಸೌಲಭ್ಯ ಇರಬೇಕು. ಖಾಸಗಿ ಡಯಾಗ್ನಸ್ಟಿಕ್ ಸೆಂಟರ್ಗಳಲ್ಲಿ ಸೇವಾವೆಚ್ಚ ದುಬಾರಿ ಆಗಿರುವುದರಿಂದ ಬಡವರಿಗೆ ಕಷ್ಟ ಆಗುತ್ತಿದೆ. ಈ ಕಾರಣಕ್ಕೆ ಮುಖ್ಯಮಂತ್ರಿ ಪರಿಹಾರ ನಿಧಿಗೆ ಸಾವಿರಾರು ಮಂದಿ ಬೇಡಿಕೆ ಅರ್ಜಿ ಕೊಡುತ್ತಿದ್ದಾರೆ ಎಂದರು.
ಜಯದೇವ ಆಸ್ಪತ್ರೆಯಿಂದ ಉತ್ತಮಸೇವೆ ಸಾಧ್ಯ ಆಗಿರುವಾಗ ಇತರ ಕಡೆಗಳಲ್ಲೂ ಅದೇ ಗುಣಮಟ್ಟದ ಸೇವೆ ಒದಗಿಸಲು ಸಾಧ್ಯವಿದೆ. ರಾಜ್ಯ ಸರ್ಕಾರ ಆ ದಿಕ್ಕಿನಲ್ಲಿ ಶ್ರಮಿಸುತ್ತಿದೆ. ಉತ್ತರ ಕರ್ನಾಟಕದ ಕಡೆ ಹೆಚ್ಚಿನ ಗಮನ ನೀಡುವಂತೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರಿಗೆ ಸಲಹೆ ನೀಡಿದರು.
ಡಿಸಿಎಂ ಡಿ.ಕೆ. ಶಿವಕುಮಾರ್ ಮಾತನಾಡಿ, ಆಂಬ್ಯುಲೆನ್ಸ್ ಚಾಲಕರು ರೋಗಿಗಳನ್ನು ಮೊದಲು ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಬೇಕು. ಆದರೆ ಕೆಲವರು ಖಾಸಗಿ ಆಸ್ಪತ್ರೆಗಳ ಜೊತೆಗೆ ಹೊಂದಾಣಿಕೆ ಮಾಡಿಕೊಳ್ಳುತ್ತಾರೆ. ಅಂಥವರು ರೋಗಿಗಳನ್ನು ನೇರವಾಗಿ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಾರೆ. ಯಾಕೆ ಸರ್ಕಾರಿ ಆಸ್ಪತ್ರೆಯಲ್ಲಿ ಏನು ಕಡಿಮೆ ಆಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸರ್ಕಾರದ ಆಸ್ಪತ್ರೆಗಳು ಯಾವುದಕ್ಕೂ ಕಡಿಮೆ ಇಲ್ಲ. ನಾರಾಯಣ ಹೃದಯಾಲಯದಲ್ಲಿರುವಂತೆ ಆಧುನಿಕ ಸೌಲಭ್ಯಗಳು ಜಯದೇವ ಆಸ್ಪತ್ರೆಯಲ್ಲೂ ಇವೆ. ಖುದ್ದು ನಾನೇ ಬೌರಿಂಗ್ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದೇನೆ. ವಿಕ್ಟೋರಿಯಾ ಆಸ್ಪತ್ರೆಯಲ್ಲೂ ಚಿಕಿತ್ಸೆ ಪಡೆದಿದ್ದೇನೆ. ಆ್ಯಂಬುಲೆನ್ಸ್ ಚಾಲಕರು ಜಯನಗರ, ವಿಕ್ಟೋರಿಯಾ, ಬೌರಿಂಗ್ನಂತಹ ಆಸ್ಪತ್ರೆಗಳಿಗೆ ರೋಗಿಗಳನ್ನು ಕರೆತರುವುದಿಲ್ಲ. ಈ ನಿಟ್ಟಿನಲ್ಲಿ ಚಾಲಕರಿಗೆ ಸೂಕ್ತ ತರಬೇತಿ ನೀಡಬೇಕು. ಅಗತ್ಯ ತಿಳುವಳಿಕೆಯೊಂದಿಗೆ ಕರ್ತವ್ಯಕ್ಕೆ ನಿಯೋಜಿಸಬೇಕು ಎಂದು ಸಲಹೆ ನೀಡಿದರು.
ದಿನೇಶ್ ಗುಂಡೂರಾವ್ ಮಾತನಾಡಿ, ತುರ್ತು ಸಂದರ್ಭದಲ್ಲಿ 108 ಆಂಬ್ಯುಲೆನ್ಸ್ಗಳ ಸೇವೆ ಬಹಳ ಮುಖ್ಯ. ಆದರೆ, ಈ ಸೇವೆಯ ಗುಣಮಟ್ಟದಲ್ಲಿ ಕೆಲವು ಸಮಸ್ಯೆಗಳಿವೆ. ಈ ಸೇವೆಗೆ ಹೊಸ ರೂಪ ಕೊಡಬೇಕಿದೆ ಎಂದರು.
108 ಸೇವೆಯ ಬಗ್ಗೆ ಸಾಕಷ್ಟು ದೂರುಗಳಿವೆ. ಅವುಗಳನ್ನು ಸರಿಪಡಿಸಲು ಹಂತ ಹಂತವಾಗಿ ಕ್ರಮ ಕೈಗೊಳ್ಳಲಾಗುವುದು. 2008ರಲ್ಲಿ ಆರಂಭವಾದ ಈ ಸೇವೆಗಳು ಕಾಲಕ್ಕನುಗುಣವಾದಂತಹ ತಂತ್ರಜ್ಞಾನ ಮತ್ತು ಆಧುನಿಕತೆಯನ್ನು ಅಳವಡಿಸಿಕೊಂಡಿಲ್ಲ. ಗುಣಮಟ್ಟ ವೃದ್ಧಿಯಲ್ಲಿ ಕುಂಟಿತವಾಗಿದೆ. ಸಮಯಕ್ಕೆ ಸರಿಯಾಗಿ ತಲುಪದಿರುವ ಬಗ್ಗೆಯೂ ಸಾಕಷ್ಟು ದೂರುಗಳಿವೆ. ಮುಂದಿನ ದಿನಗಳಲ್ಲಿ ಎಲ್ಲವನ್ನೂ ಸರಿಪಡಿಸಿ ದೇಶದಲ್ಲೇ ನಂ.1 ಸೇವೆಯನ್ನಾಗಿಸುವ ಗುರಿಯೊಂದಿಗೆ ಕೆಲಸ ಮಾಡಲಾಗುವುದು ಎಂದು ಭರವಸೆ ನೀಡಿದರು.
ಶಾಸಕ ರಿಜ್ವಾನ್ ಅರ್ಷದ್, ಆರೋಗ್ಯ ಇಲಾಖೆಯ ಅಧಿಕಾರಿಗಳು ಮತ್ತು ಇತರರು ಹಾಜರಿದ್ದರು.



