ಡಿಫೆನ್ಸ್ ಕಾರಿಡಾರ್ ಬೇಡಿಕೆಗೆ ಕೇಂದ್ರದಿಂದ ಸಕಾರಾತ್ಮಕ ಸ್ಪಂದನೆ

9 months ago

ರಾಜ್ಯ ಸರ್ಕಾರದ ಡಿಫೆನ್ಸ್ ಕಾರಿಡಾರ್ ಬೇಡಿಕೆಗೆ ಕೇಂದ್ರದಿಂದ ಸಕಾರಾತ್ಮಕ ಸ್ಪಂದನೆ: ಎಂ ಬಿ ಪಾಟೀಲ್ 

ಭೂಸ್ವಾಧೀನ ಮಾಡಿಕೊಂಡರೆ ರೈತರಿಗೆ ಸರಿಯಾದ ಪರಿಹಾರ ಕೊಡಬೇಕೆನ್ನುವುದು ನಮ್ಮ ಕಳಕಳಿ

ಬೆಂಗಳೂರು: ಉತ್ತರ ಕರ್ನಾಟಕ ಭಾಗದ ಹುಬ್ಬಳ್ಳಿ ಧಾರವಾಡ, ಬೆಳಗಾವಿ-ವಿಜಯಪುರ ಮತ್ತು ದಕ್ಷಿಣ ಕರ್ನಾಟಕದ ಬೆಂಗಳೂರು ಗ್ರಾಮಾಂತರ -ಕೋಲಾರ- ಚಿಕ್ಕಬಳ್ಳಾಪುರಕ್ಕೆ ಡಿಫೆನ್ಸ್ ಕಾರಿಡಾರ್ ಬೇಕೆನ್ನುವ ರಾಜ್ಯ ಸರ್ಕಾರದ ಬೇಡಿಕೆಗೆ ಕೇಂದ್ರ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸಿದೆ.

ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರನ್ನು ಭೇಟಿ ಮಾಡಿದಾಗ ಈ ಬೇಡಿಕೆ ಸಲ್ಲಿಸಿದ್ದು, ಅದಕ್ಕೆ ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಈ ಸಂಬಂಧ ಆದಷ್ಟು ಬೇಗ ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನೂ ಭೇಟಿ ಮಾಡಲಾಗುವುದು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ್ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಈ ವಿಚಾರ ಕೇಂದ್ರ ಸಂಪುಟದ ಮುಂದೆ ಬರಬೇಕಾಗುತ್ತದೆ. ನಂತರ ತೀರ್ಮಾನವಾಗಲಿದೆ ಎಂದರು.

ಇಸ್ರೇಲ್-ಇರಾನ್, ರಷ್ಯಾ-ಉಕ್ರೇನ್ ಸಂಘರ್ಷ ಮತ್ತು ಜಾಗತಿಕ ರಾಜಕೀಯ ಪರಿಸ್ಥಿತಿಯಲ್ಲಿನ ಬದಲಾವಣೆಗಳಿಂದಾಗಿ ಮುಂದಿನ 20 ವರ್ಷಗಳ ಕಾಲ ರಕ್ಷಣಾ ಉದ್ಯಮ, ಏರೋಸ್ಪೇಸ್, ಸೆಮಿಕಂಡಕ್ಟರ್, ಎಐ ಮುಂತಾದ ಡೀಪ್-ಟೆಕ್ ಆಧಾರಿತ ಉದ್ಯಮಗಳಿಗೆ ಬೇಡಿಕೆ ಇರಲಿದೆ. ನ್ವಿಡಿಯಾ ಕಂಪನಿ ಈ ವಲಯದಲ್ಲಿ 4 ಟ್ರಿಲಿಯನ್ ಡಾಲರ್ ವಹಿವಾಟು ದಾಖಲಿಸಿರುವ ಪ್ರಪ್ರಥಮ ಕಂಪನಿಯಾಗಿ ಹೊರಹೊಮ್ಮಿದೆ. ಇದನ್ನು ನಾವು ಸದವಕಾಶವಾಗಿ ಬಳಸಿಕೊಳ್ಳಲು ಕರ್ನಾಟಕವನ್ನು ಸಜ್ಜುಗೊಳಿಸಬೇಕಾದ ಜರೂರಿದೆ ಎಂದರು.

ದೇವನಹಳ್ಳಿ ಸಮೀಪ ಹೈಟೆಕ್ ಡಿಫೆನ್ಸ್ ಮತ್ತು ಏರೋಸ್ಪೇಸ್ ಪಾರ್ಕ್ ಸ್ಥಾಪನೆಗೆ ಭೂಮಿ ಬೇಕಾಗಿದೆ. ಆದರೆ ರೈತರು ಭೂಸ್ವಾಧೀನಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಈ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇದೇ 15ರಂದು ಸಭೆ ಕರೆದಿದ್ದಾರೆ. ಸರಕಾರವೇನಾದರೂ ಭೂಸ್ವಾಧೀನ ಮಾಡಿಕೊಂಡರೆ ರೈತರಿಗೆ ಸರಿಯಾದ ಪರಿಹಾರ ಕೊಡಬೇಕೆನ್ನುವುದು ನಮ್ಮ ಕಳಕಳಿಯಾಗಿದೆ. ಏಕೆಂದರೆ, ರೈತರು ಕೂಡ ನಮ್ಮವರೇ ಆಗಿದ್ದಾರೆ ಎಂದರು.

ಬೆಂಗಳೂರಿನಲ್ಲಿ ಎರಡನೆಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಸಂಬಂಧಿಸಿದಂತೆ ನಾಗರಿಕ ವಿಮಾನಯಾನ ಸಚಿವರನ್ನು ಮುಂದಿನ ವಾರ ದೆಹಲಿಗೆ ಹೋಗಿ ಭೇಟಿಯಾಗಿ, ಮಾತುಕತೆ ನಡೆಸಲಾಗುವುದು. ನೋಯಿಡಾ, ನವೀ ಮುಂಬೈ ನೂತನ ವಿಮಾನ ನಿಲ್ದಾಣಗಳ ಅಭಿವೃದ್ಧಿಯನ್ನು ವಿಸ್ತೃತವಾಗಿ ಗಮನಿಸಿ, ಈ ಬಗ್ಗೆ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದರು.

Leave a Reply