ಬೆಂಗಳೂರು: ರಾಜ್ಯ ಸರಕಾರದ ವಿವಿಧ ಇಲಾಖೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ನೂರಾರು ವಿಕಲಚೇತನ ಉದ್ಯೋಗಿಗಳು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರೊಂದಿಗೆ 6ನೇ ವರ್ಷದ ಸಂಕ್ರಾಂತಿ ಹಬ್ಬ ಆಚರಿಸಿದರು.
- Modi is confident that he can capture the Delimitation Commission too: Rahul Gandhi
- ಅಳವು ಅರಿಯದ ಭಾಷೆ – ತುಳುನಾಡಿನ ಅತ್ಯಂತ ಹೆಮ್ಮೆಯ ಕೃತಿ
- ಬದುಕುವ ದಾರಿ ಮಾತ್ರ ಶಿಕ್ಷಣವಲ್ಲ, ಮಾನವೀಯತೆಯೇ ನಿಜವಾದ ವಿದ್ಯೆ: ಸಿದ್ದರಾಮಯ್ಯ
- ಮರಾಠಿ ಕಡ್ಡಾಯಗೊಳಿಸಿದ ಮಹಾರಾಷ್ಟ್ರ ಮಾದರಿ ಕರ್ನಾಟಕಕ್ಕೂ ಬರಲಿ: ಟಿ.ಎ. ನಾರಾಯಣಗೌಡ
- ಅಂಬೇಡ್ಕರ್ ಸಂವಿಧಾನ ಸಮಿತಿಯಲ್ಲಿ ಇರದೇ ಇದ್ದರೆ ಸಂವಿಧಾನ ಸರ್ವವ್ಯಾಪಕವಾಗುತ್ತಿರಲಿಲ್ಲ: ಬೊಮ್ಮಾಯಿ
2019ರಿಂದಲೂ 600ಕ್ಕೂ ಹೆಚ್ಚು ವಿಕಲಚೇತನ ಉದ್ಯೋಗಿಗಳು ಕುಮಾರಸ್ವಾಮಿ ಅವರೊಂದಿಗೆ ಪ್ರತೀ ವರ್ಷ ತಪ್ಪದೇ ಸಂಕ್ರಾಂತಿ ಹಬ್ಬ ಆಚರಿಸಿಕೊಂಡು ಬರುತ್ತಿದ್ದಾರೆ.
ತಮ್ಮ ಕುಟುಂಬ ಸಮೇತವಾಗಿ ಕುಮಾರಸ್ವಾಮಿ ಅವರೊಂದಿಗೆ ಸಂಕ್ರಾಂತಿ ಹಬ್ಬ ಆಚರಿಸಿಕೊಳ್ಳಲು ಈ ಸಿಬ್ಬಂದಿ, ರಾಜ್ಯದ ಎಲ್ಲಾ ಭಾಗಗಳಿಂದ ಬಂದಿದ್ದರು ಹಾಗೂ ಹಬ್ಬದ ದಿನ ಕುಮಾರಸ್ವಾಮಿ ಅವರು ಎಲ್ಲಿರುತ್ತಾರೋ ಅಲ್ಲಿಗೆ ಬಂದು ತಮ್ಮ ಮಕ್ಕಳ ಜತೆ ಸೇರಿಕೊಂಡು ಹಬ್ಬ ಆಚರಿಸುತ್ತಾರೆ. ಕಳೆದ ಆರು ವರ್ಷಗಳಿಂದ ಅವರು ಇದನ್ನು ನಿರಂತರವಾಗಿ ಮುಂದುವರಿಸಿಕೊಂಡು ಬಂದಿದ್ದಾರೆ. ಈ ಹಬ್ಬಕ್ಕೆ ಉದ್ಯೋಗಿಗಳೆಲ್ಲ ಮಂಗಳವಾರ ಸಚಿವರ ಬೆಂಗಳೂರಿನ ಜೆ.ಪಿ.ನಗರದ ನಿವಾಸಕ್ಕೆ ಬಂದು ಹಬ್ಬ ಆಚರಿಸಿದರು.
ಈ ಸಂದರ್ಭದಲ್ಲಿ ಎಲ್ಲರಿಗೂ ಶುಭ ಕೋರಿದ ಕುಮಾರಸ್ವಾಮಿ, ನಿಮ್ಮ ಪ್ರೀತಿ ವಿಶ್ವಾಸಕ್ಕೆ ನಾನು ಋಣಿ ಆಗಿದ್ದೇನೆ. ನಿಮ್ಮ ಹೃದಯದಲ್ಲಿ ಸ್ಥಾನ ಕೊಟ್ಟಿದ್ದಕ್ಕೆ ನಾನು ಆಭಾರಿ. ನಿಮ್ಮ ಹಾರೈಕೆ ಪ್ರೀತಿಯೇ ನನಗೆ ಶ್ರೀರಕ್ಷೆ ಎಂದು ಭಾವುಕರಾದರು.
ಅವಕಾಶ ಸಿಕ್ಕಿದಾಗ ನನ್ನ ಕೈಲಾದಷ್ಟು ಸಹಾಯ ಮಾಡಿದ್ದೇನೆ. ವಿಕಲಚೇತನರಿಗೆ ಸಾಧ್ಯವಾದಷ್ಟು ನೆರವು ಕೊಟ್ಟಿದ್ದೇನೆ. ಮುಂದೆಯೂ ದೈಹಿಕವಾಗಿ ಶಕ್ತಿ ಇಲ್ಲದ ಯಾರೇ ಇದ್ದರೂ ಅವರಿಗಾಗಿ ನನ್ನ ಹೃದಯ ಮಿಡಿಯುತ್ತದೆ. ಪ್ರಾಮಾಣಿಕವಾಗಿ ಅಂತಹವರ ಒಳಿತಿಗಾಗಿ ಪ್ರಯತ್ನ ಮಾಡುತ್ತೇನೆ ಎಂದರು.
ವಿಕಲಚೇತನರು, ದೈಹಿಕವಾಗಿ ಆಶಕ್ತರ ಬಗ್ಗೆ ನಮಗೆ ಅನುಕಂಪಕ್ಕಿಂತ ಮಿಗಿಲಾಗಿ ಅವರನ್ನು ಆರ್ಥಿಕವಾಗಿ ಸಬಲರನ್ನಾಗಿ ಮಾಡುವ ಕೆಲಸ ಆಗಬೇಕಿದೆ. ನನಗೆ ಅವಕಾಶ ಸಿಕ್ಕಿದಾಗ ನಾನು ಇಂಥವರ ಪರವಾಗಿ ಕೆಲಸ ಮಾಡುತ್ತೇನೆ. ನನ್ನ ಪಾಲಿಗೆ ಇವರು ದೇವರ ಸಮಾನರು ಎಂದರು.
ಸಮಾಜದಲ್ಲಿ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ವಿಕಲಚೇತನರು ಕಷ್ಟದಲ್ಲಿ ಇದ್ದಾರೆ. ದೊಡ್ಡ ಪ್ರಮಾಣದಲ್ಲಿ ಅವರಿಗೆ ಶಕ್ತಿ ತುಂಬುವ ಕೆಲಸ ಮಾಡಬೇಕಿದೆ. ಮುಂದಿನ ಜನರು, ದೇವರು ಅವಕಾಶ ಕೊಡಬಹುದು ಎಂದು ನಂಬಿದ್ದೇನೆ. ನಿಮ್ಮ ಮಕ್ಕಳಿಗೆ ಶುಭವಾಗಲಿ, ಅವರನ್ನು ಚೆನ್ನಾಗಿ ಓದಿಸಿ ಎಂದರು.
ವಿಕಲಚೇತನರು, ದೈಹಿಕವಾಗಿ ಶಕ್ತಿ ಇಲ್ಲದವರು ಧೃತಿಗೆಡಬೇಡಿ. ಅಂಗವೈಕಲ್ಯ ಬಂತು ಎಂದು ಹೆದರಬೇಡಿ. ದೇವರಿದ್ದಾನೆ, ನಿಮಗೂ ಅವಕಾಶ ಬಂದೆ ಬರುತ್ತದೆ. ನಾನು ಸದಾ ನಿಮ್ಮೊಂದಿಗೆ ಇದ್ದೇನೆ. ಇವತ್ತು ಭಾರತ ಯಾರೂ ಊಹೆ ಮಾಡದ ರೀತಿಯಲ್ಲಿ ಪ್ರಗತಿ ಹೊಂದುತ್ತಿದೆ. ಅವಕಾಶಗಳು ಹೆಚ್ಚುತ್ತಿವೆ, ಯಾರೂ ದೃತಿಗೆಡಬಾರದು. ಕಷ್ಟಗಳು ಬಂದರೆ ಧೈರ್ಯವಾಗಿ ಎದುರಿಸಿ, ಯಾವುದೇ ಸಮಸ್ಯೆ ಬಂದರೂ ಕೆಚ್ಚೆದೆಯಿಂದ ಎದುರಿಸಿ. ಮಾನವೀಯ ಮೌಲ್ಯಗಳನ್ನು ಮೈಗೂಡಿಸಿಕೊಳ್ಳಿ. ಕೌಟುಂಬಿಕವಾಗಿ ಒಳ್ಳೆಯ ಬಾಂಧವ್ಯ ರೂಢಿಸಿಕೊಳ್ಳಿ ಎಂದು ಕರೆ ನೀಡಿದರು.
ಸಮಾಜದಲ್ಲಿ ಕೆಟ್ಟ ವಾತಾವರಣ ಸೃಷ್ಟಿ ಆಗುತ್ತಿದೆ. ಬೆಂಗಳೂರಿನಲ್ಲಿ ಹಸುಗಳ ಕೆಚ್ಚಲು ಕೊಯ್ದ ಘಟನೆ ನಡೆದಿದೆ. ಆ ದೃಶ್ಯವನ್ನು ನಾನು ವಿದ್ಯುನ್ಮಾನ ಮಾಧ್ಯಮಗಳಲ್ಲಿ ನೋಡಿ ತೀವ್ರ ಆಘಾತಕ್ಕೆ ಒಳಗಾದೆ. ಮನಸ್ಸಿಗೆ ಬಹಳ ನೋವಾಯಿತು. ಇಂಥ ಪರಿಸಿತಿಯಿಂದ ಸಮಾಜವನ್ನು ಹೊರಕ್ಕೆ ತರಬೇಕಿದೆ ಎಂದರು.
ಈ ಸಂದರ್ಭದಲ್ಲಿ ಸಚಿವ ಕುಮಾರಸ್ವಾಮಿ ಅವರಿಗೆ ಅಹವಾಲು ಸಲ್ಲಿಸಿದ ವಿಕಲಚೇತನ ಉದ್ಯೋಗಿಗಳು, ಇವತ್ತು ನಿಮಗೆ ಶುಭ ಕೋರಲು ರಾಜ್ಯದ ಎಲ್ಲಾ ಜಿಲ್ಲೆಗಳಿಂದ ಬಂದಿದ್ದೇವೆ. ಮುಂದಿನ ವರ್ಷ ದೇಶದ ಎಲ್ಲೆಡೆಯಿಂದ ಬಂದು ನಿಮಗೆ ಶುಭ ಕೋರುವಂತಾಗಬೇಕು. ತಾವು ಹೆಚ್ಚು ಪ್ರಮಾಣದಲ್ಲಿ ದೇಶಾದ್ಯಂತ ಇರುವ ಕೇಂದ್ರ ಸರಕಾರಿ ಸ್ವಾಮ್ಯದ ಕೈಗಾರಿಕೆಗಳಲ್ಲಿ ವಿಕಲಚೇತನರಿಗೆ ಉದ್ಯೋಗ ಅವಕಾಶ ಕಲ್ಪಿಸಬೇಕು ಎಂದು ಮನವಿ ಮಾಡಿದರು.
ಪ್ರಧಾನಿ ನರೇಂದ್ರ ಮೋದಿ ಅವರು 2015ರಲ್ಲಿ ವಿಕಲಚೇತನರಿಗಾಗಿಯೇ ಸ್ವಾವಲಂಬನ ಆರೋಗ್ಯ ವಿಮೆ ಯೋಜನೆಯನ್ನು ಜಾರಿಗೆ ತಂದಿದ್ದರು. ಆ ಯೋಜನೆ ಈಗ ನಿಂತು ಹೋಗಿದೆ. ₹300 ಕೊಟ್ಟರೆ ನಮಗೆ ಅತ್ಯುತ್ತಮವಾದ ಆರೋಗ್ಯ ಸೌಲಭ್ಯ ದೊರೆಯುತ್ತಿತ್ತು. ಈ ಯೋಜನೆಯನ್ನು ಮತ್ತೆ ಆರಂಭ ಮಾಡಿಸಬೇಕು ಎಂದು ಮನವಿ ಮಾಡಿದರು.
ಈ ಮನವಿಗೆ ಸ್ಪಂದಿಸಿದ ಕುಮಾರಸ್ವಾಮಿ, ವಿಮಾ ಯೋಜನೆ ಮರು ಜಾರಿ ಮಾಡುವುದಕ್ಕೆ ಸಂಬಂಧಪಟ್ಟ ಸಚಿವರ ಗಮನ ಸೆಳೆಯುತ್ತೇನೆ ಎಂದು ಭರವಸೆ ನೀಡಿದರು.
ಕುಮಾರಸ್ವಾಮಿ ಅವರ ಜತೆ ಸಂಕ್ರಾಂತಿ: ರಾಜ್ಯ ಸರಕಾರದ ವಿವಿಧ ಇಲಾಖೆಗಳಲ್ಲಿ ಕೆಲಸ ಮಾಡುತ್ತಿರುವ ವಿಕಲಚೇತನ ಉದ್ಯೋಗಿಗಳು,ಕುಮಾರಸ್ವಾಮಿ ಅವರೊಂದಿಗೆ ಸಂಕ್ರಾಂತಿ ಆಚರಿಸುವ ಹಿನ್ನೆಲೆ ಇದೆ.
2006ರಲ್ಲಿ ಕುಮಾರಸ್ವಾಮಿ ಅವರು ಸಿಎಂ ಆಗಿದ್ದಾಗ ಜನತಾದರ್ಶನ ಚಾಲ್ತಿಯಲ್ಲಿ ಇತ್ತು. ಈ ಸಂದರ್ಭದಲ್ಲಿ ಅಪಾರ ಪ್ರಮಾಣದಲ್ಲಿ ಮುಖ್ಯಮಂತ್ರಿಗಳಿಗೆ ಉದ್ಯೋಗಕ್ಕಾಗಿ ಮನವಿ ಸಲ್ಲಿಸುತ್ತಿದ್ದರು. ವಿಕಲಚೇತನರು ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಲು ಹಾಗೂ ಆರ್ಥಿಕವಾಗಿ ಅವರು ಸಬಲರಾಗುವ ನಿಟ್ಟಿನಲ್ಲಿ ಕುಮಾರಸ್ವಾಮಿ ಅವರು; ಎಸ್ಎಸ್ಎಲ್ಸಿ ಪಾಸಾಗಿದ್ದ 300, ಪದವಿ ಉತ್ತೀರ್ಣರಾಗಿದ್ದ 300 ವಿಕಲಚೇತನ ಅಭ್ಯರ್ಥಿಗಳಿಗೆ ಇಂಧನ ಇಲಾಖೆಯಲ್ಲಿ ಉದ್ಯೋಗವಕಾಶ ಕಲ್ಪಿಸಿ ನೇಮಕಾತಿ ಆದೇಶ ನೀಡಿದ್ದರು.
ಏಕಕಾಲಕ್ಕೆ 600 ವಿಕಲಚೇತನರು ಗುತ್ತಿಗೆ ಆಧಾರದ ಮೇಲೆ ನೇಮಕಗೊಂಡರು, ಆ ನಂತರ ಬಂದ ಸರಕಾರಗಳು ಅವರ ಸೇವೆಯನ್ನು ಕಾಯಂ ಮಾಡಲಿಲ್ಲ. ಅನೇಕ ಸಲ ಅವರು ಮನವಿ ಸಲ್ಲಿಸಿದರೂ ಅವರು ಕಾಯಂ ಆಗಲಿಲ್ಲ. 2018ರಲ್ಲಿ ಮತ್ತೆ ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾದರು. ಅವರು ಮರಳಿ ಅಧಿಕಾರಕ್ಕೆ ಬಂದ ನಂತರ 2019ರ ಸಂಕ್ರಾಂತಿ ಹಬ್ಬದ ದಿನವೇ 600 ವಿಕಲಚೇತನರ ಸೇವೆಯನ್ನು ಕಾಯಂ ಮಾಡಿ ಆದೇಶ ಮಾಡಿದರು. ಅಲ್ಲಿಗೆ ಅವರ ಸುಮಾರು ಹತ್ತು ವರ್ಷಗಳ ವನವಾಸ ಅಂತ್ಯವಾಯಿತು.
ಕುಮಾರಸ್ವಾಮಿ ಅವರಿಗೆ ಕೃತಜ್ಞತೆ ಸಲ್ಲಿಸಿದ ಉದ್ಯೋಗಿಗಳು: ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿರುವಾಗ ನಮ್ಮ ವೇತನ ₹3000 ಇತ್ತು. ನಮ್ಮ ಸೇವೆ ಕಾಯಂ ಆದ ಮೇಲೆ ₹80,000ರಿಂದ ₹90,000 ಮೀರಿ ವೇತನ ಪಡೆಯುತ್ತಿದ್ದೇವೆ. ನಾವು ಸ್ವಂತ ಮನೆ ಕಟ್ಟಿಕೊಂಡಿದ್ದೇವೆ, ಸ್ವಂತ ಕಾರು ಖರೀದಿ ಮಾಡಿದ್ದೇವೆ. ಮಕ್ಕಳಿಗೆ ಒಳ್ಳೆಯ ವಿದ್ಯಾಭ್ಯಾಸ ಮಾಡಿಸುತ್ತಿದ್ದೇವೆ. ಇದೆಲ್ಲವೂ ಸಾಧ್ಯವಾಗಿದ್ದು ಕುಮಾರಸ್ವಾಮಿ ಅವರಿಂದ. ಹೀಗಾಗಿ ನಾವು ಸಂಕ್ರಾಂತಿ ಹಬ್ಬವನ್ನು ಪ್ರತಿ ವರ್ಷ ಅವರ ಜತೆಯಲ್ಲಿ ಆಚರಿಸುತ್ತೇವೆ ಎಂದರು.




