ಬೆಂಗಳೂರು: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಮೇಲಿನ ಹಲ್ಲೆ ಘಟನೆ ತಿಳಿದು ಆಘಾತವಾಯ್ತು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅವರು ಶೀಘ್ರ ಗುಣಮುಖರಾಗಲಿ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ನಿನ್ನೆ ಚುನಾವಣೆ ಪ್ರಚಾರದ ವೇಳೆ ಅನಾಮಿಕ ದಾಳಿ ನಡೆಸಿದ ಪರಿಣಾಮದಿಂದ ಮಮತಾ ಬ್ಯಾನರ್ಜಿಯವರು ಗಾಯಗೊಂಡಿದ್ದರು. ಈ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿಕ್ರಿಯಿಸಿರುವ ಕುಮಾರಸ್ವಾಮಿ, ಚುನಾವಣೆಗಳನ್ನು ಪ್ರಜಾಸತ್ತಾತ್ಮಕವಾಗಿ ಗೆಲ್ಲಬೇಕು. ಹಿಂಸೆಯಿಂದ ಅಲ್ಲ. ಘಟನೆಯನ್ನು ಚುನಾವಣಾ ಆಯೋಗ ಗಂಭೀರವಾಗಿ ಪರಿಗಣಿಸಬೇಕು. ಚುನಾವಣಾ ವ್ಯವಸ್ಥೆಯನ್ನು ರಕ್ಷಿಸಬೇಕು ಎಂದಿದ್ದಾರೆ.
ಬಂಗಾಳದಲ್ಲಿ ಅತ್ಯಂತ ಜನಪರ ಮತ್ತು ಸ್ವಚ್ಛ ಆಡಳಿತವನ್ನು ಮಮತಾ ಬ್ಯಾನರ್ಜಿ ನೀಡಿದ್ದಾರೆ. ಹೀಗಾಗಿ ಅವರಿಗೆ ಜನಬೆಂಬಲ ಅಪಾರವಾಗಿದೆ. ಎಂಥ ಶಕ್ತಿಯ ವಿರುದ್ಧ ಹೋರಾಡಿಯಾದರೂ ಬಂಗಾಳವನ್ನು ಗೆಲ್ಲುವ ಶಕ್ತಿ ಮಮತಾ ಅವರಿಗಿದೆ. ಈ ಚುನಾವಣೆಯನ್ನು ಅವರು ಗೆಲ್ಲುತ್ತಾರೆ ಕೂಡ. ಅವರಿಗೆ ಈಗ ನೈತಿಕ ಬೆಂಬಲ ನೀಡಬೇಕಿದೆ. ನಾನು ಅವರ ಬೆಂಬಲಕ್ಕಿರುವೆ ಎಂದಿದ್ದಾರೆ.




