ಸಭೆ, ಸಮಾರಂಭಗಳಲ್ಲಿ ಹೆಚ್ಚು ಜನ ಸೇರದಂತೆ ಕ್ರಮ: ಸುಧಾಕರ್

5 years ago

ಬೆಂಗಳೂರು: ಮದುವೆ ಮೊದಲಾದ ಸಭೆ, ಸಮಾರಂಭಗಳಲ್ಲಿ ಹೆಚ್ಚು ಜನರು ಸೇರದಂತೆ ಈಗಾಗಲೇ ಸೂಚಿಸಲಾಗಿದೆ. ಆದರೆ ಗಡಿ ಭಾಗಗಳಲ್ಲಿ ಪ್ರಯಾಣಕ್ಕೆ ನಿರ್ಬಂಧ ಹೇರಿಲ್ಲ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಂಚತಾರಾ ಹೋಟೆಲ್, ಕಲ್ಯಾಣ ಮಂಟಪ ಮೊದಲಾದವುಗಳಿಗೆ ಕೊರೊನಾ ಹರಡದಂತೆ ಸುರಕ್ಷಿತ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಲಾಗಿದೆ. ತಡರಾತ್ರಿ ಪಾರ್ಟಿಗಳು, ಹೆಚ್ಚು ಜನ ಸೇರುವುದನ್ನು ತಡೆಗಟ್ಟಲು ಮಾರ್ಗಸೂಚಿ ನೀಡಲಾಗಿದೆ. ಪಕ್ಕದ ರಾಜ್ಯ ಮಹಾರಾಷ್ಟ್ರ, ಕೇರಳದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿದ್ದು, ಹರಡದಂತೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಆದರೆ ಪ್ರಯಾಣಕ್ಕೆ ನಿರ್ಬಂಧ ಹೇರಿಲ್ಲ ಎಂದರು.

ಕೋವಿಡ್ ಬೆಳವಣಿಗೆಗಳನ್ನು ಗಮನಿಸಲಾಗುತ್ತಿದೆ. ಇದೇ ಸಮಯದಲ್ಲಿ 3,500 ಕೇಂದ್ರಗಳಲ್ಲಿ ಕೋವಿಡ್ ಲಸಿಕೆ ನೀಡಲಾಗುತ್ತಿದೆ. ಜೊತೆಗೆ ಪರೀಕ್ಷೆ ಸಂಖ್ಯೆ ಹೆಚ್ಚಿಸಲಾಗಿದೆ ಎಂದರು.

ತೇಜೋವಧೆ ಮಾಡುವಂಥ ಅಪ್ರಮಾಣೀಕೃತ ಸುದ್ದಿಗಳನ್ನು ಪ್ರಸಾರ ಮಾಡದಂತೆ ನ್ಯಾಯಾಲಯ ನಿರ್ಬಂಧ ಹೇರಿರುವ ಕುರಿತಂತೆ ಪ್ರತಿಕ್ರಿಯಿಸಿದ ಅವರು, ಮಾಧ್ಯಮಗಳು ಪ್ರಜಾಪ್ರಭುತ್ವದ ಸ್ಥಂಭವಾಗಿದೆ. ವೀಡಿಯೋ ಪ್ರಸಾರದ ವಿಚಾರದಲ್ಲಿ ಮಾಧ್ಯಮಗಳು ಪರಿಶೀಲಿಸಬೇಕಿತ್ತು. ಮಾಧ್ಯಮಗಳು ವೀಡಿಯೋ ಪಡೆದಾಗ ಅದನ್ನು ಪರಿಶೀಲಿಸಬೇಕು. ಸತ್ಯ ಪರಿಶೀಲಿಸದೆ ಯಾವುದನ್ನೂ ಪ್ರಸಾರ ಮಾಡಬಾರದು. ವೀಡಿಯೋ ಹಿಂದೆ ರಾಜಕೀಯ ಸೇರಿದಂತೆ ಬೇರೆ ಬೇರೆ ಕಾರಣಗಳಿವೆ ಎಂದರು.

ಪಿಎಚ್ ಸಿಗಳನ್ನು ಗಟ್ಟಿಗೊಳಿಸಲು ರಾಜ್ಯ ಸರ್ಕಾರ ಕ್ರಮ

ಪ್ರಾಥಮಿಕ ಆರೋಗ್ಯ ಕೇಂದ್ರಗಳು ಆರೋಗ್ಯ ಕ್ಷೇತ್ರದ ಅಡಿಪಾಯವಾಗಿದ್ದು, ಇದನ್ನು ಗಟ್ಟಿಗೊಳಿಸಲು ರಾಜ್ಯ ಸರ್ಕಾರ ಕ್ರಮ ವಹಿಸುತ್ತಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದರು.

ಸಿಂಗಸಂದ್ರದಲ್ಲಿ ಬಾಶ್ ಕಂಪನಿಯ ಆರೋಗ್ಯ ಯೋಜನೆಗೆ ಚಾಲನೆ ನೀಡಿ ಮಾತನಾಡಿದ ಅವರು, ಗ್ರಾಮೀಣ ಪ್ರದೇಶಗಳಿಗೆ ಪ್ರಾಥಮಿಕ ಚಿಕಿತ್ಸಾ ಕೇಂದ್ರಗಳು ಬಹಳ ಮುಖ್ಯ. ಈ ಅಡಿಪಾಯವನ್ನು ಬಹಳ ಗಟ್ಟಿಯಾಗಿ ನಿರ್ಮಿಸಬೇಕು. ರಾಜ್ಯದಲ್ಲಿ ಪಿಎಚ್ ಸಿಗಳನ್ನು ಗಟ್ಟಿಯಾಗಿ ನಿರ್ಮಿಸಲು ತೀರ್ಮಾನಿಸಲಾಗಿದೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಬಜೆಟ್ ನಲ್ಲಿ 250 ಪಿಎಚ್ ಸಿಗಳನ್ನು ಹಂತಹಂತವಾಗಿ ಮೇಲ್ದರ್ಜೆಗೇರಿಸುವ ಘೋಷಣೆ ಮಾಡಿದ್ದಾರೆ ಎಂದರು.

ಇದು ಕೇವಲ ಕಟ್ಟಡ ನಿರ್ಮಾಣವಲ್ಲ. ರೋಗಿಗಳು ಹೆಚ್ಚಾಗಿ ಬರುವ ಕಡೆ, ಹೆಚ್ಚು ಒತ್ತಡವಿರುವ ಕಡೆ ಅಭಿವೃದ್ಧಿ ಮಾಡಲಾಗುತ್ತದೆ. ಪಿಎಚ್‍ಸಿ ಯಲ್ಲಿ ಸಾಮಾನ್ಯವಾಗಿ ಒಬ್ಬರೇ ವೈದ್ಯರು ಇದ್ದರು. ಈ ವರ್ಷದಿಂದ ಒಬ್ಬ ಪುರುಷ ಹಾಗೂ ಒಬ್ಬ ಮಹಿಳಾ ವೈದ್ಯರನ್ನು ನಿಯೋಜಿಸಲಾಗುತ್ತದೆ. ಈ ರೀತಿಯ ಬದಲಾವಣೆ ತಂದು ಅಭಿವೃದ್ಧಿಪಡಿಸಲಾಗುತ್ತದೆ ಎಂದರು.

ಈ ಭಾಗದಲ್ಲಿ ಬಾಶ್ ಕಂಪನಿಯ ಸಹಯೋಗದಲ್ಲಿ ಈ ಪ್ರಾಥಮಿಕ ಆರೋಗ್ಯ ಕೇಂದ್ರ ನಿರ್ಮಿಸಲಾಗಿದೆ. ಆರೋಗ್ಯ ಇಲಾಖೆ ಸುಮಾರು 2.5 ರೂ ಕೋಟಿ ಮತ್ತು ಬಾಷ್ ಕಂಪನಿಯ ಸಿಎಸ್ಆರ್ ಅಡಿಯಲ್ಲಿ 43 ಲಕ್ಷ ರೂ. ವೆಚ್ಚದಲ್ಲಿ ಆಸ್ಪತ್ರೆ ನಿರ್ಮಿಸಲಾಗಿದೆ. ಉಳ್ಳವರು ಇಲ್ಲದವರಿಗೆ ದಾನ ಕೊಡುವುದು ಒಂದು ಸಂಪ್ರದಾಯ. ಈಗ ಸಿಎಸ್ ಆರ್ ನಲ್ಲಿ ಈ ರೀತಿ ನೀಡಲಾಗುತ್ತಿದೆ. ಸಿಎಸ್ ಆರ್ ನಡಿ ಎಲ್ಲ ಕಂಪನಿಗಳು ಆದಾಯದಲ್ಲಿ 2%ರಷ್ಟು ಸಮುದಾಯಕ್ಕೆ ಉಪಯೋಗವಾಗುವ ಕೆಲಸ ಮಾಡುತ್ತಿವೆ ಎಂದರು.

ಆರೋಗ್ಯ ಕ್ಷೇತ್ರಕ್ಕೆ ಬಾಶ್ ಕಂಪನಿಯವರು ಇನ್ನಷ್ಟು ಕೈ ಜೋಡಿಸಬೇಕು. ಸಿಎಸ್ ಆರ್ ನಡಿ ಮಾಡಬಹುದಾದ ಕೆಲಸಗಳನ್ನು ಬಗ್ಗೆ ಚರ್ಚಿಸಬಹುದು ಎಂದರು.

ಇಲ್ಲಿ ಕೂಡ ಕೋವಿಡ್ ಲಸಿಕೆ ನೀಡಲಾಗುತ್ತಿದೆ. ರಾಜ್ಯದಲ್ಲಿ 3,500 ಕೇಂದ್ರಗಳಲ್ಲಿ ಲಸಿಕೆ ನೀಡುತ್ತಿದ್ದು, ಒಂದೇ ದಿನ 79 ಸಾವಿರ ಲಸಿಕೆ ನೀಡಲಾಗಿದೆ 60 ವರ್ಷ ಮೇಲ್ಪಟ್ಟವರು ಕಡ್ಡಾಯವಾಗಿ ಲಸಿಕೆ ಪಡೆಯಬೇಕು. ಇದರಿಂದ ಯಾವುದೇ ಅಡ್ಡ ಪರಿಣಾಮವಿಲ್ಲ ಎಂದರು.

Leave a Reply