ಇಂಥದೊಂದು ಕ್ಯಾಮೆರಾ ಹೊಂದಿರುವುದು ಪ್ರತಿಷ್ಠೆಯ ವಿಷಯವೂ ಆಗಿತ್ತು

2 years ago

#camera #matter #prestige #parameshwaraguruswamy #pentaxp30

ಪೆಂಟಾಕ್ಸ್ ಪಿ೩೦ ಮಾಡೆಲ್ ಜಪಾನ್ ನಿರ್ಮಿತ ಫಿಲ್ಮ್ ರೋಲ್‌ಗಳನ್ನು ಬಳಸಿ ಫೋಟೋ ಟೋ ತೆಗೆಯುತ್ತಿದ್ದ ಕ್ಯಾಮೆರಾ. ಆಗ, ಇಂಥದೊಂದು ಕ್ಯಾಮೆರಾ ಹೊಂದಿರುವುದು ಪ್ರತಿಷ್ಠೆಯ ವಿಷಯವೂ ಆಗಿತ್ತು. ನನ್ನಂಥವರಿಗೆ ಗಳಿಕೆಯ ಸಾಧನವೂ ಆಗಿತ್ತು.

ಒಂದು ರೋಲನ್ನು ಲೋಡ್ ಮಾಡಿದಮೇಲೆ ೩೬ ಪ಼ೋಟೋಗಳನ್ನು ಕ್ಲಿಕ್ಕಿಸಬಹುದಿತ್ತು. ಉಪಾಯ ಮತ್ತು ಜತನದಿಂದ ಲೋಡ್ ಮಾಡಿದರೆ ೪೦ರವರೆಗೂ ಕ್ಲಿಕ್ಕಿಸಬಹುದಿತ್ತು. ಆಗೆಲ್ಲಾ ನಾನು ಚಾಮುಂಡೇಶ್ವರಿ ಬೋರ್ಡಿಂಗ್ ಅಂಡ್ ಲಾಡ್ಜಿಂಗ್ ಅಥವಾ ಪ್ರೀಮಿಯರ್ ಸ್ಟುಡಿಯೋಗಳಿಗೆ ಹೋಗಿ ಸಿನೆಛಾಯಾಗ್ರಾಹಕರಲ್ಲಿ ಎಕ್ಸ್‌ಪೋಸ್ ಆಗಿರದ ೩೫ ಎಂಎಂ ಪ಼ಿಲ್ಮ್ ಸ್ಟ್ರಿಪ್ಗಳಿಗಾಗಿ ಕೋರುತ್ತಿದ್ದೆ. ಅವರು ಸಿನೆಮಾ ಚಿತ್ರೀಕರಣ ಮಾಡಿ ಕ್ಯಾನ್‌ನಲ್ಲಿ ಬಳಸಲಾಗದೆ ಉಳಿದುಕೊಂಡಿರುವ ೨೦-೨೫ ಅಡಿಗಳ ಸ್ಟ್ರಿಪ್‌ಗಳನ್ನು ಕೆಲವರು ಬಹಳ ಕಡಿಮೆ ಕಾಸಿಗೆ ಕೆಲವರು ಉಚಿತವಾಗೇ ಕೊಡುತ್ತಿದ್ದರು. ನಾನು ಎರಡೆರಡು ಕಪ್ಪು ಕಂಬಳಿಗಳನ್ನು ಕೌಚಿಕೊಂಡು ಲೋಡಿಂಗ್ ಕ್ಯಾಸ್ಕೆಟ್‌ಗಳಿಗೆ ೪೫ರಿಂದ ೪೮ ಪ಼್ರೇಮ್‌ಗಳಷ್ಟು ಉದ್ದ ಫಿಲ್ಮ್ ತುಂಬಿಸಿಕೊಳ್ಳುತ್ತಿದ್ದೆ.

ಯಾಕೆಂದರೆ, ಕೆಲವು ಸಂದರ್ಭಗಳಲ್ಲಿ ಉದಾ: ತಾಳಿ ಕಟ್ಟುವಾಗ ನಮ್ಮ ಕ್ಯಾಮೆರಾದೊಳಗಿನ‌ ರೀಲ್ ಮುಗಿದು ಹೋದರೆ, ಅದನ್ನು ರೀವೈಂಡ್ ಮಾಡಿ ಹೊಸ್ ಕ್ಯಾಸ್ಕೆಟ್ ಲೋಡ್ ಮಾಡುವುದರಲ್ಲಿ ಮುಖ್ಯ ಶಾಸ್ತ್ರವೇ ಮುಗಿದು ಹೋಗಿರುತ್ತಿತ್ತು. ಆವತ್ತಿನ ದಿನಮಾನಗಳಲ್ಲಿ ಕೆಲವು ಹಿರಿಯರು ಮತ್ತು ಮುಖ್ಯವಾಗಿ ಪುರೋಹಿತರೇ ಇಡೀ ವಿದ್ಯಾಮಾನದ ಕ್ಯಾಪ್ಟನ್‌ಗಳು. ಹಳ್ಳಿಗಳ ಕಡೆಯಂತೂ ಛಾಯಾಗ್ರಾಹಕನನ್ನು ಎಂಜಲು ಎಲೆಗೆ ಮುನ್ನುಗ್ಗುವ ಬೀದಿ ನಾಯಿಯನ್ನು ಓಡಿಸುವಂತೆ ಓಡಿಸುತ್ತಿದ್ದರು. ನಮ್ಮದೇನಿದ್ದರೂ ಗಂಡಿನ ಅಥವ ಗಂಡಿನ ಮತ್ತು ಹೆಣ್ಣಿನ ಅಣ್ಣ ತಮ್ಮರೊಂದಿಗಿನ ವ್ಯಹಾರವಷ್ಟೆ. ತಾಳಿ ಕಟ್ಟುವುದನ್ನೇ ಪ಼ೋಟೋ ತೆಗೆಯಲಾಗದಿದ್ದ ಮೇಲೆ ಅವನೆಂಥ ಪ಼ೋಟೋಗ್ರಾಪ಼ರ್! ದುಡ್ಡಿಗೂ ಸಂಚಕಾರವಾಗುತ್ತಿತ್ತು. ಎರಡೆರಡು ಕ್ಯಾಮೆರಾ ಇಟ್ಟುಕೊಳ್ಳುವ ಸಾಮರ್ಥ್ಯ ಬಂದಾಗ ಈ ಸಮಸ್ಯೆ ಇರುತ್ತಿರಲಿಲ್ಲ.

ನಂತರ ಡಾರ್ಕ್ ರೂಮಿನಲ್ಲಿ ಪ಼ಿಲ್ಮ್ ಪ್ರೋಸೆಸಿಂಗ್ ಮತ್ತು ಪ್ರಿಂಟಿಂಗ್, ಡೆಲಿವರಿ ಅ್ಯಂಡ್ ಕಂತುಗಳಲ್ಲಿ ಅಮೌಂಟ್ ಕಲೆಕ್ಷನ್. ಕೆಲವು ಸಜ್ಜನರು ಪೇಮೆಂಟಿಗೆ ತೊಂದರೆ ಮಾಡುತ್ತಿರಲಿಲ್ಲ. ಬಹಳಷ್ಟು ಕೇಸುಗಳಲ್ಲಿ ವಸೂಲಾತಿಯದ್ದೇ ಸಮಸ್ಯೆ. ಆಗ ತಾನೆ ಹೆಚ್ಚು ಹೆಚ್ಚು ಜನ ಅನುಸರಿಸಲಾರಂಭಿಸಿದ್ದ ಅಯ್ಯಪ್ಪ ಯಾತ್ರೆಯ ಭಕ್ತರು ಧಾರಾಳವಾಗೂ ಎಲ್ಲ ಮೊತ್ತವನ್ನೂ ಮುಂಚಿತವಾಗಿಯೇ ಸಂದಾಯ ಮಾಡಿಬಿಟ್ಟು ಶಬರಿಮಲೆಯಿಂದ ಹಿಂದಿರುಗಿದ ಮೇಲೆ ಪ಼ೋಟೋಗಳನ್ನು ಪಡೆದುಕೊಳ್ಳುತ್ತಿದ್ದರು.

– ಪರಮೇಶ್ವರ ಗುರುಸ್ವಾಮಿ
( ಫೇಸ್ಬುಕ್ ಬರಹ)

Leave a Reply