ಶ್ವಾಸಕೋಶದ ಕ್ಯಾನ್ಸರ್ ಸ್ಕ್ರೀನಿಂಗ್ ತಂತ್ರಜ್ಞಾನ ಅಳವಡಿಕೆ

3 years ago

#Adoption #lung #cancer #screening #technology #dineshgundurao #health #govthospital #districthospital

ಬೆಂಗಳೂರು: ಶ್ವಾಸಕೋಶದ ಕ್ಯಾನ್ಸರ್ ನಿಂದ ‌ಬಳಲುತ್ತಿರುವರಿಗೆ ತ್ವರಿತವಾಗಿ ರೋಗ ಪತ್ತೆ ಮತ್ತು ಅತ್ಯಾಧುನಿಕ ರೀತಿಯಲ್ಲಿ ಔಷಧೋಪಚಾರ ನೀಡುವ ದೃಷ್ಟಿಯಿಂದ ರಾಜ್ಯದ 19 ಜಿಲ್ಲಾಸ್ಪತ್ರೆಗಳಲ್ಲಿ ಶ್ವಾಸಕೋಶದ ಕ್ಯಾನ್ಸರ್ ಸ್ಕ್ರೀನಿಂಗ್ ತಂತ್ರಜ್ಞಾನ ಅಳವಡಿಸಲಾಗುತ್ತಿದೆ.

ಕ್ಯಾನ್ಸರ್ ಸ್ಕ್ರೀನಿಂಗ್ ತಂತ್ರಜ್ಞಾನ ಅಳವಡಿಸುವ ಸಂಬಂಧ ಅಷ್ಟ್ರಾಜೆನಕಾ ಇಂಡಿಯಾ ಸಂಸ್ಥೆಯೊಂದಿಗೆ ಒಡಂಬಡಿಕೆಗೆ ಸಹಿ ಹಾಕುವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಮೊದಲ ಹಂತದಲ್ಲಿ ರಾಜ್ಯದ 19 ಜಿಲ್ಲೆಗಳ ಜಿಲ್ಲಾಸ್ಪತ್ರೆಗಳಲ್ಲಿ ಶ್ವಾಸಕೋಶದ ಕ್ಯಾನ್ಸರ್ ಪತ್ತೆ ಹಚ್ಚುವ AI ಆಧಾರಿತ ತಂತ್ರಜ್ಞಾನ ಅಳವಡಿಸಲಾಗುತ್ತಿದೆ ಎಂದರು.

ಆರಂಭಿಕ ಹಂತದಲ್ಲಿಯೇ ಶ್ವಾಸಕೋಶದ ಕ್ಯಾನ್ಸರ್ ಪತ್ತೆ ಹಚ್ಚುವ ಕೃತಕ ಬುದ್ಧಿಮತ್ತೆ ಆಧಾರಿತ ತಂತ್ರಜ್ಞಾನವನ್ನ ಅಷ್ಟ್ರಾಜೆನಕಾ ಸಂಸ್ಥೆಯವರು ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಅಳವಡಿಸಲು ಮುಂದೆ ಬಂದಿದ್ದಾರೆ. ಉಚಿತವಾಗಿ ಸೇವೆ ಒದಗಿಸಲು ಆರೋಗ್ಯ ಇಲಾಖೆಯೊಂದಿಗೆ ಒಡಂಬಡಿಕೆ ಮಾಡಿಕೊಂಡಿದ್ದಾರೆ ಎಂದರು.

ಒಂದು ವರ್ಷದ ವರೆಗೆ ತಂತ್ರಜ್ಞಾನದ ಸದುಪಯೋಗನ್ನ ಪರಿಶೀಲಿಸಿ ಬಳಿಕ ಉಳಿದ ಜಿಲ್ಲೆಗಳಿಗೂ ಈ ಸೇವೆಯನ್ನ ವಿಸ್ತರಿಸುವ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು. ಒಂದೇ ಬಾರಿಗೆ 29 ಶ್ವಾಸಕೋಶದ ಕಾಯಿಲೆಗಳಿಂದ ಬಳಲುತ್ತಿರುವ ರೋಗಿಯನ್ನು ಪರೀಕ್ಷಿಸುವ Qure.ai ಅಭಿವೃದ್ಧಿಪಡಿಸಿದ AI ಆಧಾರಿತ ಶ್ವಾಸಕೋಶದ ಕ್ಯಾನ್ಸರ್ ಸ್ಕ್ರೀನಿಂಗ್ ತಂತ್ರಜ್ಞಾನ ಇದಾಗಿದೆ. ಡಿಜಿಟಲ್‌ ಎದೆಯ ಎಕ್ಸ್‌-ರೇ ಬಳಸಿಕೊಂಡು ಶ್ವಾಸಕೋಶದ ಕ್ಯಾನ್ಸರ್‌ನಿಂದ ಬಳಲುತ್ತಿರುವ ರೋಗಿಗಳನ್ನು ಗುರುತಿಸಲು ಸಹಾಯಕಾರಿಯಾಗಿದೆ ಎಂದರು.

ಕ್ಯಾನ್ಸರ್‌ ಅನ್ನು ಆರಂಭಿಕ ಹಂತದಲ್ಲೇ ಪತ್ತೆ ಹಚ್ಚಿದರ ಚಿಕಿತ್ಸೆ ನೀಡಬಹುದು. ವಿಶೇಷವಾಗಿ ಆರ್ಥಿಕ ಸಮಸ್ಯೆಯಿಂದ ಪ್ರಾಥಮಿಕ ಆರೈಕೆ ಪಡೆಯಲು ಸಾಧ್ಯವಾಗದ ವ್ಯಕ್ತಿಗಳಿಗೆ ಇದು ಅತ್ಯಂತ ಪ್ರಯೋಜನಾಕಾರಿ ಮಾರ್ಗವಾಗಿ ಹೊರಹೊಮ್ಮುತ್ತದೆ ಎಂದರು.‌

ಆರೋಗ್ಯ ಇಲಾಖೆ ಆಯುಕ್ತ ರಂದೀಪ್, ಅಷ್ಟ್ರಾಜೆನಿಕಾ ಸಂಸ್ಥೆಯ ಸಂಜೀವ್ ಪಾಂಚಾಲ್ ಅವರು ಪರಸ್ಪರ ಒಡಂಬಡಿಕೆ ಹಸ್ತಾಂತರಿಸಿಕೊಂಡರು.

Leave a Reply