ರಾಜ್ಯ ಸರ್ಕಾರದ ವಿರುದ್ಧ ಗೂಡಂಗಡಿದಾರರಿಂದ ಪ್ರತಿಭಟನೆ
ಮಂಗಳೂರು: ರಾಜ್ಯ ಸರ್ಕಾರ ತಂಬಾಕು ಲೈಸೆನ್ಸ್ ಹೆಸರಿನಲ್ಲಿ ವಿಪರೀತ ಶೋಷಣೆ ನಡೆಸುತ್ತಿದೆ, ಸುಲಿಗೆಕೋರ ನೀತಿಗಳ ಅನುಸರಿಸುತ್ತಿದೆ ಎಂದು ಗೂಂಡಂಗಡಿದಾರರು ನಗರದಲ ಕ್ಲಾಕ್ ಟವರ್ ಬಳಿಯಲ್ಲಿ ಪ್ರತಿಭಟನೆ ನಡೆಸಿದರು. ದ.ಕ.ಜಿಲ್ಲಾ ಸಣ್ಣ ಬೀಡಿ ಸಿಗರೇಟು ಮಾರಾಟಗಾರರ ಸಂಘದ ನೇತೃತ್ವದಲ್ಲಿ ಜರುಗಿದ ಪ್ರತಿಭಟನೆಯಲ್ಲಿ 500ಕ್ಕೂ ಹೆಚ್ಚು ಗೂಡಂಗಡಿದಾರರು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶಭರಿತರಾಗಿ ಘೋಷಣೆ ಕೂಗಿದರು.
ಪ್ರತಿಭಟನೆ ಉದ್ಘಾಟಿಸಿ ಮಾತನಾಡಿದ ದ.ಕ.ಜಿಲ್ಲಾ ಸಣ್ಣ ಬೀಡಿ ಸಿಗರೇಟು ಮಾರಾಟಗಾರರ ಸಂಘದ ಗೌರವಾಧ್ಯಕ್ಷ ಸುನಿಲ್ ಕುಮಾರ್ ಬಜಾಲ್, ಸಮಾಜದಲ್ಲಿ ಪ್ರಾಮಾಣಿಕವಾಗಿ ದುಡಿದು ತಿನ್ನುವ ಅಭಿಲಾಷೆ ಇರುವ ಸಾಮಾನ್ಯ ಜನತೆ ತನ್ನ ಹೊಟ್ಟೆಪಾಡಿಗಾಗಿ ರಸ್ತೆ ಬದಿಯಲ್ಲಿ ಸಣ್ಣಪುಟ್ಟ ಗೂಡಂಗಡಿಗಳನ್ನು ಇಟ್ಟುಕೊಂಡು ಜೀವನ ನಡೆಸುವ ಮೂಲಕ ಸರಕಾರಕ್ಕೆ ಪರೋಕ್ಷವಾಗಿ ಸಹಾಯ ಮಾಡಿದರೆ, ಅದಕ್ಕೆ ವ್ಯತಿರಿಕ್ತವಾಗಿ ಸರಕಾರವು ಬಡಪಾಯಿ ಗೂಡಂಗಡಿದಾರರ ಮೇಲೆ ಇಲ್ಲಸಲ್ಲದ ಕಾನೂನು ಕಟ್ಟಲೆಗಳನ್ನು ಹೇರಿ ನೇರವಾಗಿ ದಾಳಿ ನಡೆಸುತ್ತಿದೆ. ತಂಬಾಕು ಲೈಸನ್ಸ್ ಹೆಸರಿನಲ್ಲಿ ವಿಪರೀತ ಸುಲಿಗೆ ಮಾಡುವ ಸರಕಾರದ ಕ್ರಮ ತೀರಾ ಖಂಡನೀಯ. ಇದನ್ನು ಕೂಡಲೇ ವಾಪಸ್ ಪಡೆಯದಿದ್ದಲ್ಲಿ ಜಿಲ್ಲೆಯಾದ್ಯಂತ ತೀವ್ರ ರೀತಿಯ ಪರಿಣಾಮವನ್ನು ಎದುರಿಸಬೇಕಾದೀತು ಎಂದು ರಾಜ್ಯ ಸರಕಾರಕ್ಕೆ ಎಚ್ಚರಿಕೆ ನೀಡಿದರು.
ಜಿಲ್ಲೆಯ ಹಿರಿಯ ಕಾರ್ಮಿಕ ಮುಖಂಡರಾದ ಸುಕುಮಾರ್ ರವರು ಮಾತನಾಡಿ, ತಂಬಾಕು ಹೊರತುಪಡಿಸಿ ವಿವಿಧ ಕಾರಣಗಳಿಂದ ಜನತೆಯ ಆರೋಗ್ಯ ಹದಗೆಡುತ್ತಿದ್ದರೂ ಅದರ ಬಗ್ಗೆ ಚಕಾರವೆತ್ತದ ಸರಕಾರಗಳು ಕೇವಲ ತಂಬಾಕಿನಿಂದಲೇ ಭಾರೀ ಆರೋಗ್ಯ ಸಮಸ್ಯೆಗಳು ಉಂಟಾಗುತ್ತವೆಯೆಂದು ಗುಲ್ಲೆಬ್ಬಿಸುತ್ತಿವೆ. ತಂಬಾಕು ನಿಷೇಧದ ಹಿಂದೆ ಲಕ್ಷಾಂತರ ಸಂಖ್ಯೆಯ ಕಾರ್ಮಿಕರ ಬದುಕು ದಿವಾಳಿಯಾಗುವಾಗ ಅದಕ್ಕೆ ಪರ್ಯಾಯ ವ್ಯವಸ್ಥೆ ಕಲ್ಪಿಸದೆ ಸರಕಾರಗಳು ಬೇಜವಾಬ್ದಾರಿತನವನ್ನು ಪ್ರದರ್ಶಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬೀದಿಬದಿ ವ್ಯಾಪಾರಸ್ಥರ ಸಂಘದ ಜಿಲ್ಲಾ ಗೌರವಾಧ್ಯಕ್ಷ ಬಿ.ಕೆ.ಇಮ್ತಿಯಾಜ್ ಮಾತನಾಡಿ, ಜನಸಾಮಾನ್ಯರ ಬದುಕನ್ನು ಉತ್ತಮ ಸ್ಥಿತಿಯತ್ತ ಕೊಂಡೊಯ್ಯಬೇಕಾದ ಸರಕಾರಗಳು ಜನವಿರೋಧಿ ನೀತಿಗಳನ್ನು ಜಾರಿಗೊಳಿಸಿ ಜನರ ಬದುಕನ್ನೇ ಸರ್ವನಾಶಗೊಳಿಸಿದೆ. ತಂಬಾಕು ಲೈಸೆನ್ಸ್ ವಿರುದ್ಧ ಭುಗಿಲೆದ್ದ ಗೂಡಂಗಡಿದಾರರ ಹೋರಾಟಕ್ಕೆ ಬೀದಿಬದಿ ವ್ಯಾಪಾರಸ್ಥರು ಸಂಪೂರ್ಣ ಬೆಂಬಲ ನೀಡಲಿದ್ದಾರೆ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ CITU ಜಿಲ್ಲಾ ನಾಯಕ ಯೋಗೀಶ್ ಜಪ್ಪಿನಮೊಗರು, ಗೂಡಂಗಡಿದಾರರ ಬದುಕಿನ ಬವಣೆಗಳ ಬಗ್ಗೆ ಬೆಳಕು ಚೆಲ್ಲುತ್ತಾ, ತಂಬಾಕು ಲೈಸನ್ಸ್ ನಿಂದಾಗಿ ಆಗುವ ಸಂಕಷ್ಟಗಳನ್ನು ಎಳೆಎಳೆಯಾಗಿ ಬಿಡಿಸಿ ಹೇಳಿದರು.
ಪ್ರತಿಭಟನೆಯಲ್ಲಿ ಬೀದಿಬದಿ ವ್ಯಾಪಾರಸ್ಥರ ಸಂಘದ ನಾಯಕರಾದ ಮಹಮ್ಮದ್ ಮುಸ್ತಫಾ, ಹರೀಶ್ ಪೂಜಾರಿ, ಆಸಿಫ್, ಸಂತೋಷ್ ಆರ್.ಎಸ್, ನೌಷಾದ್, ರಿಯಾಜ್ ಭಾಗವಹಿಸಿದ್ದರು. ಪ್ರತಿಭಟನೆಯ ನೇತೃತ್ವವನ್ನು ಸಂಘದ ಜಿಲ್ಲಾ ನಾಯಕರಾದ ಎನ್.ಕೆ.ಅಬೂಬಕ್ಕರ್, ಅಬ್ದುಲ್ ರೆಹಮಾನ್, ಗಿರೀಶ್, ನಟೇಶ್, ಅಶ್ವಿನಿ, ರೇಷ್ಮಾ, ಬಾಲಕೃಷ್ಣ ಮುಂತಾದವರು ವಹಿಸಿದ್ದರು.




