ಚಿತ್ರದುರ್ಗ: ವಿದ್ಯಾರ್ಥಿಗಳಲ್ಲಿ ರಾಷ್ಟ್ರ ಪ್ರೇಮ, ಧ್ವಜ ಗೌರವ ಮತ್ತು ಸ್ವಾಭಿಮಾನದ ಸಂಕೇತಗಳನ್ನು ಹೊರಹೊಮ್ಮಿಸಬೇಕಾಗುತ್ತದೆ ಎಂದು ಅಪರ ಜಿಲ್ಲಾಧಿಕಾರಿಗಳಾದ ಇ.ಬಾಲಕೃಷ್ಣ ಹೇಳಿದರು.
ಚಿತ್ರದುರ್ಗ ಜಿಲ್ಲಾ ಭಾರತ್ ಸೇವಾದಳ ಸಮಿತಿ ನೇತೃತ್ವದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಭಾರತ್ ಸೇವಾದಳ ಸಮಿತಿ ವತಿಯಿಂದ ನಗರದಲ್ಲಿ ವಿದ್ಯಾರ್ಥಿಗಳಿಂದ ಪ್ರಭಾತ್ ಬೇರಿ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ಮಾತಾಡಿದ ಅವರು, 75ನೇ ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ಅದ್ದೂರಿಯಾಗಿ ಆಚರಣೆ ಮಾಡುವ ಸದುದ್ದೇಶದಿಂದ ಹರ್ ಘರ್ ತಿರಂಗಾ ಯೋಜನೆಯನ್ನು ಸರ್ಕಾರ ಜಾರಿಗೊಳಿಸಿದ್ದು, ದೇಶದ ಪ್ರತಿಯೊಬ್ಬ ಪ್ರಜೆಯು ಅನುಸರಿಸಬೇಕು. ದೇಶದ ಹೆಮ್ಮೆ ಹರ್ ಘರ್ ತಿರಂಗಾವು ಜನಸಾಮಾನ್ಯರಿಗೆ ತಲುಪಿಸುವ ಕಾರ್ಯದಲ್ಲಿ ಭಾರತ್ ಸೇವಾದಳ ಮುಂದಾಗಿರುವುದು ಪ್ರಶಂಸನೀಯ ಎಂದರು.
ನೂತನ ಡಿ.ವೈ.ಎಸ್.ಪಿ ಅನಿಲ್ ಕುಮಾರ್ ಮಾತನಾಡಿ, ತಿರಂಗಾ ಯಾತ್ರೆಯು ವಿದ್ಯಾರ್ಥಿ, ಯುವಜನರಲ್ಲಿ ಜಾಗೃತಿ ಮೂಡಿಸುವುದಾಗಿದ್ದು, ಇಂತಹ ಕಾರ್ಯಕ್ರಮಗಳು ಹೆಚ್ಚಾಗಿ ನಡೆಯಬೇಕು ಎಂದರು.
ಹರ್ ಘರ್ ತಿರಂಗಾ ಕಾರ್ಯಕ್ರಮದಲ್ಲಿ ಭಾರತ್ ಸೇವಾದಳದ ಜಿಲ್ಲಾ ಅಧ್ಯಕ್ಷ ಎಸ್.ಕೆ.ಬಸವರಾಜನ್, ಪ್ರಧಾನ ಕಾರ್ಯದರ್ಶಿ ನರೇನಹಳ್ಳಿ ಅರುಣ್ ಕುಮಾರ್, ಕಾರ್ಯಾಧ್ಯಕ್ಷ ಎಸ್.ಶಿವಣ್ಣ, ಸದಸ್ಯರಾದ ಪಿ.ಶಿವಪ್ರಕಾಶ್, ಲಕ್ಷ್ಮಿಪತಿ, ಸೈಯದ್ ಸಾದತ್, ತಾಲ್ಲೂಕು ಸಮಿತಿ ಅಧ್ಯಕ್ಷ ಕಾಟ್ಮಲ್ಲಪ್ಪ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ನಿವೃತ್ತ ಅಧಿಕಾರಿ ಜಯಣ್ಣ, ನೀಲಕಂಠಚಾರ್, ಸರ್ಕಲ್ ಇನ್ಸ್ಪೆಕ್ಟರ್ ಶಂಕರಪ್ಪ, ಭಾರತ್ ಸೇವಾದಳದ ಜಿಲ್ಲಾ ಸಂಘಟಕರಾದ ಬಸವಣ್ಣೆಪ್ಪ ಪತ್ರಿ, ಪೊಲೀಸ್ ಇಲಾಖೆಯ ಸಿಬ್ಬಂದಿ ಹಾಜರಿದ್ದರು.




