ಬಿಜೆಪಿಯಿಂದ 3ನೇ ಸಿಎಂ ಶೀಘ್ರ ಎಂದ ಕೆಪಿಸಿಸಿ: ಕಾಂಗ್ರೆಸ್ ಪಕ್ಷದಿಂದ ಪಾಠ ಕಲಿಯಬೇಕಾಗಿಲ್ಲ ಎಂದ ಡಾ.ಕೆ.ಸುಧಾಕರ್

4 years ago

ಬೆಂಗಳೂರು: ಕೇಂದ್ರ ಗೃಹ ಸಚಿವರಾದ ಅಮಿತ್ ಶಾ ರಾಜ್ಯಕ್ಕೆ ಬಂದು ಹೋದ ಬಳಿಕ ಬಿಜೆಪಿಯಲ್ಲಿ ಮೋಡ ಕವಿದ ವಾತಾವರಣವಿದೆ! 40% ಸರ್ಕಾರದಲ್ಲಿ ‘3ನೇ ಮುಖ್ಯಮಂತ್ರಿ’ ಕುರ್ಚಿ ಹತ್ತುವ ಕಾಲ ಸನ್ನಿಹಿತವಾಗಿದೆ! ಎಂದು ಕೆಪಿಸಿಸಿ ಹೇಳಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಆಡಳಿತಾರೂಢ ಬಿಜೆಪಿ ವಿರುದ್ಧ ಕಿಡಿಕಾರಿರುವ ಕೆಪಿಸಿಸಿ #puppetcm Basavaraj Bommai ಅವರ ಗೊಂಬೆಯಾಟ ಇನ್ನೇನು ಮುಗಿಯುವ ಹಂತಕ್ಕೆ ಬಂದಿದೆ. ಅಮಿತ್ ಶಾ ಅವರ ಭೇಟಿಯ ಬಗ್ಗೆ ಸರ್ಕಾರದ ಯಾವೊಬ್ಬ ಸಚಿವರು ಮಾತಾನಾಡದಿರುವುದು, ಸಂಭ್ರಮ ಇಲ್ಲದಿರುವುದೇ ಇದಕ್ಕೆ ನಿದರ್ಶನ ಎಂದಿದೆ.

ಎಷ್ಟು ಪ್ರಯತ್ನಿಸಿದರೂ ಜನತಾ ಪರಿವಾರಿವಾರಿಯಾಗಿದ್ದ Basavaraj Bommai ಅವರನ್ನು ಕೇಶವ ಕೃಪಾದವರು ‘ಸಂಘಪರಿವಾರಿ’ಯಾಗಿ ಸ್ವೀಕರಿಸಲು ಒಪ್ಪಲೇ ಇಲ್ಲ! ಆಡಿಸಿ ನೋಡು ಎಂದು ಗೊಂಬೆಯಂತಿದ್ದ #puppetcm ಬೊಮ್ಮಾಯಿಯವರನ್ನು ಈಗ ಬೀಳಿಸಿ ನೋಡಲು ಹೊರಟಿದೆ ಬಿಜೆಪಿ ಹೈಕಮಾಂಡ್! ಈ ಬದಲಾವಣೆ ಪ್ರಯತ್ನ ಸರ್ಕಾರದ ಸಾಲು-ಸಾಲು ವೈಫಲ್ಯಗಳ ಕಾರಣಕ್ಕೋ ಅಥವಾ ಮೂರನೇ ಮುಖ್ಯಮಂತ್ರಿ ಎಂಬ ನಿಮ್ಮ ಸಂಪ್ರದಾಯಕ್ಕೋ BJP Karnataka? ಎಂದು ಪ್ರಶ್ನಿಸಿದೆ.

ಬೊಮ್ಮಾಯಿಯವರೇ, ಸಿಎಂ ಹುದ್ದೆಗೆ ‘ಕತ್ತಿ ವರಸೆ’ ಶುರುವಾಗಿದೆ ಎಂದರೆ ನೀವು ಕುರ್ಚಿಯಿಂದ ಇಳಿಯಲು ದಿನಗಳನ್ನಲ್ಲ, ಗಂಟೆಗಳನ್ನು ಎಣಿಸುತ್ತಿದ್ದೀರಿ ಎನಿಸುತ್ತಿದೆ! Basavaraj Bommai ಅವರೇ, ಸಿಎಂ ಬದಲಾವಣೆ ಎಂಬ ಬೆಳವಣಿಗೆಗೆ ಕಾರಣವೇನು, ನಿಮ್ಮ ಆಡಳಿತ ವೈಫಲ್ಯವೇ? ಅಥವಾ #BJPvsBJP ಕಾದಾಟವೇ? ಅಥವಾ ಯಡಿಯೂರಪ್ಪನವರ ಕೋಪವೇ? ಎಂದು ಪ್ರಶ್ನಿಸಿದೆ.

ರಾಜ್ಯ ಸಂಕಷ್ಟದಲ್ಲಿದೆ, ಬಿಜೆಪಿಗೆ ಅಧಿಕಾರದಾಟ ಶುರು ಮಾಡಿದೆ. ಅತಿವೃಷ್ಟಿಯಿಂದಾಗಿ ರಾಜ್ಯದ ಹಲವು ಜಿಲ್ಲೆಗಳು ಪ್ರವಾಹ ಪೀಡಿತವಾಗಿದ್ದು, ಜನತೆ ಪರದಾಡುತ್ತಿದ್ದಾರೆ, ಸರ್ಕಾರದ ಸಹಾಯ ಕೇಳುತ್ತಿದ್ದಾರೆ. ಇಂತಹ ಸಮಯದಲ್ಲಿ ಸಮರೋಪಾಧಿಯಲ್ಲಿ ಪರಿಹಾರ ಕಾರ್ಯಗಳನ್ನು ಕೈಗೊಳ್ಳಬೇಕಾದ BJP Karnataka ಪಕ್ಷ 3ನೇ ಮುಖ್ಯಮಂತ್ರಿಗಳ ಪ್ರತಿಷ್ಠಾಪನೆಗೆ ಕಸರತ್ತು ನಡೆಸುತ್ತಿದೆ. ಇದು ಅತ್ಯಂತ ನಾಚಿಕೆಗೇಡು. ರಾಜ್ಯ ಸಂಕಷ್ಟಕ್ಕೆ ಎದುರಾದಾಗಲೆಲ್ಲ ಬಿಜೆಪಿ ರಾಜಕೀಯದಾಟಕ್ಕೆ ಚಾಲನೆ ಕೊಡುತ್ತದೆ ಎಂದು ಹೇಳಿದೆ.

ಕೆಪಿಸಿಸಿಗೆ ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿಕ್ರಿಯೆ ನಿಡಿರುವ ಆರೋಗ್ಯ ಸಚಿವ ಡಾ.ಕೆ.ಸುಧಾಕರ್, ಗಾಜಿನ ಮನೆಯಲ್ಲಿ ನಿಂತು ಅನ್ಯರತ್ತ ಕಲ್ಲು ತೂರುತ್ತಿರುವ ಕಾಂಗ್ರೆಸಿಗರ ಮನಃಸ್ಥಿತಿಯ ಬಗ್ಗೆ ಅಯ್ಯೋ ಎನ್ನಿಸುತ್ತಿದೆ. ದಿಲ್ಲಿ ಮಾಲೀಕರು ಕಳುಹಿಸಿದ ಚೀಟಿ ಆಧಾರದ ಮೇಲೆ ಮುಖ್ಯಮಂತ್ರಿಗಳನ್ನು ಬದಲಾಯಿಸಿದ ಘನ ಉದಾಹರಣೆ ನಿಮ್ಮ ಪಕ್ಷಕ್ಕೆ ಮಾತ್ರ ಇದೆ ಎಂದಿದ್ದಾರೆ.

ದೇವರಾಜ್ ಅರಸು ಅವರು ಇನ್ನೂ ಅಧಿಕಾರದಲ್ಲಿದ್ದಾಗಲೇ ಗುಂಡಾರಾವ್ ಅವರನ್ನು ದೆಹಲಿಗೆ ಕರೆಸಿಕೊಂಡು ನೀವೇ ಸಿಎಂ ಎಂದಿದ್ದರು ಇಂದಿರಾ ಗಾಂಧಿ ಅವರು. ಶರ್ಟು ಬದಲಾಯಿಸುವಷ್ಟೇ ವೇಗವಾಗಿ ವಿರೇಂದ್ರ ಪಾಟೀಲ್ ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಿದ್ದರು ಅಂದಿನ ಪ್ರಧಾನಿ ರಾಜೀವ್ ಗಾಂಧಿ ಅವರು ಎಂದಿದ್ದಾರೆ.

ಕರ್ನಾಟಕ ಕಂಡಂತಹ ಧೀಮಂತ, ಜನಪ್ರಿಯ ನಾಯಕರುಗಳಾದ ಶ್ರೀ ನಿಜಲಿಂಗಪ್ಪ, ಶ್ರೀ ದೇವರಾಜು ಅರಸು, ಶ್ರೀ ವೀರೇಂದ್ರ ಪಾಟೀಲ, ಶ್ರೀ ಎಸ್.ಬಂಗಾರಪ್ಪ ಮುಂತಾದವರನ್ನ ಕಾಂಗ್ರೆಸ್ ಹೈಕಮಾಂಡ್ ಹೇಗೆ ನಡೆಸಿಕೊಂಡಿದೆ ಎಂಬುದನ್ನು ಜನ ಮರೆತಿಲ್ಲ ಎಂದಿದ್ದಾರೆ.

ನಮ್ಮ ರಾಜ್ಯ ಅಷ್ಟೇ ಅಲ್ಲ, ಮಹಾರಾಷ್ಟ್ರದಲ್ಲಿ ಶರದ್ ಪವಾರ್, ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ, ಆಂಧ್ರಪ್ರದೇಶದಲ್ಲಿ ಜಗನ್ ಮೋಹನ್ ರೆಡ್ಡಿ ಮುಂತಾದ ಅನೇಕ ಪ್ರಭಾವಿ ನಾಯಕರು ಕಾಂಗ್ರೆಸ್ ಪಕ್ಷ ತೊರೆಯಲು ಕಾರಣ ನಿಮ್ಮ ಹೈಕಮಾಂಡ್ ಸಂಸ್ಕೃತಿ ಅಲ್ಲದೆ ಇನ್ನೇನು? ಎಂದಿದ್ದಾರೆ.

ಸ್ವಪಕ್ಷದವರನ್ನು ಬಿಡಿ ತಮ್ಮ ತಾಳಕ್ಕೆ ಕುಣಿಯದ ಬೇರೆ ಪಕ್ಷದ ಮುಖ್ಯಮಂತ್ರಿಗಳನ್ನೂ ಸಹಿಸಿದ ಕಾಂಗ್ರೆಸ್ ಹೈಕಮಾಂಡ್ ಸಂವಿಧಾನದ 356ನೇ ವಿಧಿಯನ್ನು ಬರೋಬ್ಬರಿ 93 ಬಾರಿ ದುರುಪಯೋಗ ಮಾಡಿ ಸರ್ಕಾರಗಳನ್ನು ಉರುಳಿಸಿರುವುದು ಕರಾಳ ಸತ್ಯ. ಇಂತಹ ಹೈಕಮಾಂಡ್ ಎಂಬ ವಿಕೃತಿಯ ಸೃಷ್ಟಿಕರ್ತರಾದ ಕಾಂಗ್ರೆಸ್ ಪಕ್ಷದಿಂದ ಬಿಜೆಪಿ ಪಾಠ ಕಲಿಯಬೇಕಾಗಿಲ್ಲ ಎಂದಿದ್ದಾರೆ.

Leave a Reply