ಸಾಹಿತ್ಯ ಲೋಕವನ್ನು ಜೀವಂತವಾಗಿ ಇರಿಸಿರುವ ತರುಣರ ನಡೆಯಿಂದ ಸಂತಸ

2 years ago

ಕನ್ನಡ ಸಾಹಿತ್ಯ ಸಂದರ್ಭದಲ್ಲಿ ಅತ್ಯಂತ ಕ್ರಿಯಾಶೀಲವೂ ಸೃಜನಶೀಲವೂ ಆಗಿರುವ ಕೆಲವೇ ತರುಣರಲ್ಲಿ ಶಂಕರ್ ಶಿಹಿಮೊಗ್ಗೆ ಹಾಗೂ ಸೂರ್ಯಕೀರ್ತಿ ಎಂಬ ಈ ಇಬ್ಬರು ತರುಣರ ಸಾಹಿತ್ಯದ ಬಗೆಗಿನ ಶ್ರದ್ಧೆ, ಹಾಗೂ ತಮ್ಮೊಡನೆ ತಮ್ಮ ಓರಗೆಯ ಯುವ ಸಾಹಿತಿ ತರುಣರನ್ನೂ ಸಾಹಿತ್ಯ ಚಟುವಟಿಕೆಗಳಲ್ಲಿ ತೊಡಗಿಸುವ ಮೂಲಕ ಇವರುಗಳು ಸಾಗಿರುವ ನಡೆ ಅತ್ಯಂತ ಶ್ಲಾಘನೀಯವಾದದ್ದು.

ಶಂಕರ್ ಶಿಹಿಮೊಗ್ಗೆ ತಾನೆಲ್ಲೋ ಸಾಫ್ಟ್ ವೇರ್ ಉದ್ಯೋಗಿಯಾಗಿದ್ದುಕೊಂಡು, ಕನ್ನಡ ಮೇಷ್ಟ್ರಾಗಿರುವ ಸೂರ್ಯಕೀರ್ತಿಯೊಡನೆ ಕೂಡಿಕೊಂಡು ನಡೆಸುತ್ತಿರುವ ಮಿಂಚುಳ್ಳಿ ಎಂಬ ಆನ್ಲೈನ್ ಪತ್ರಿಕೆ, ಅಹೋಹೊರಾತ್ರಿ ಕಿ.ರಂ‌.ಕಾರ್ಯಕ್ರಮವನ್ನು ಡಾ.ಪ್ರದೀಪ್ ಮಾಲ್ಗುಡಿ, ಸಂಸ ಸುರೇಶ್, ಎಲ್.ಎನ್.ಮುಕುಂದರಾಜ್, ಡಾ.ವೆಂಕಟೇಶಮೂರ್ತಿ ಮುಂತಾದ ಕಿ.ರಂ.ಬಳಗದೊಂದಿಗೆ ಆಯೋಜಿಸಿ ಇಡೀ ನಾಡಿನ ಯುವ ಕವಿಗಳನ್ನು ಕಲೆ ಹಾಕಿದ ಪರಿ, ಪುಸ್ತಕ ಪ್ರಕಟಣೆಗಳ ಮೂಲಕ, ಮಿಂಚುಳ್ಳಿ ಕಾವ್ಯ ಶಿಬಿರಗಳ ಮೂಲಕ ಸಾಹಿತ್ಯ ಲೋಕವನ್ನು ಸದಾ ಜೀವಂತವಾಗಿ ಇರಿಸಿರುವ ಈ ತರುಣರ ನಡೆಗೆ ಸಂತಸವಾಗುತ್ತದೆ.

ಸಾಹಿತ್ಯ ಚಳುವಳಿಗಳ ಕಾವು ತಣ್ಣಗಾಗಿರುವ ಈ ಹೊತ್ತಿನಲ್ಲಿ ಇಂತಹ ಕ್ರಿಯಾಶೀಲ, ಸೃಜನಶೀಲ ಮನಸಿನ ಯುವಕರ ಇಂತಹ ಸಾಹಿತ್ಯ ಕೈಂಕರ್ಯ ಬೇರೆಬೇರೆ ರಂಗಗಳಲ್ಲಿ ತೊಡಗಿರುವ ಯುವಕರ ಮನಸನ್ನು ಸಾಹಿತ್ಯದ ಓದು ಮತ್ತು ರಚನೆಯ ಕಡೆ ತಿರುಗಿಸುವ ಪ್ರೇರಣೆಯನ್ನು ಖಂಡಿತಾ ಇಂತಹ ಯುವಕರ ಚಟುವಟಿಕೆಗಳು ಭವಿತವ್ಯದ ಕನ್ನಡ ಸಾಹಿತ್ಯದ ಬಗೆಗಿನ ಭರವಸೆಯನ್ನು ಹೆಚ್ಚಿಸಬಲ್ಲವು ಎಂದು ಈ ತರುಣರ ಬಗ್ಗೆ ಅಭಿಮಾನವೆನ್ನಿಸುತ್ತದೆ ನನಗೆ.

ಈ ತರುಣರು ಇದೀಗ ಮತ್ತೂ ಒಂದೆಜ್ಜೆ ಮುಂದಿಟ್ಟು ಆನ್ಲೈನ್ ರೂಪದ ತಮ್ಮ ‘ಮಿಂಚುಳ್ಳಿ’ ಎಂಬ ಸಾಹಿತ್ಯ ಪತ್ರಿಕೆಯನ್ನು ಮುದ್ರಿತ ಪುಸ್ತಕ ರೂಪದಲ್ಲಿ ಹೊರತರುವ ಸಾಹಸದ ಕೆಲಸಕ್ಕೆ ಕೈಹಚ್ಚಿದ್ದು ಇದರಲ್ಲಿ ಅನೇಕ ಹೊಸ ತಲೆಮಾರಿನವರ ಬರಹಗಳಿಗೆ ಆದ್ಯತೆ ಲಭಿಸಿರುವುದೂ ಮತ್ತೂ ಸಂತಸದ ಸಂಗತಿಯಾಗಿದೆ.

ಈ ತರುಣರೊಡನೆ ಬೆಂಬಲವಾಗಿ ನಿಂತು ಮಾರ್ಗದರ್ಶನ ನೀಡುತ್ತಿರುವ ಎಲ್.ಎನ್.ಮುಕುಂದರಾಜ್ , ಎಚ್.ಎಸ್.ಸತ್ಯನಾರಾಯಣ, ರಾಜಶೇಖರ ಮಠಪತಿ, ಬೇಲೂರು ರಘುನಂದನ, ಎಂ.ಆರ್.ಕಮಲ, ಡಾ.ವೆಂಕಟೇಶಮೂರ್ತಿ, ಪ್ರದೀಪ್ ಮಾಲ್ಗುಡಿ, ಮುಂತಾದ ಮಿತ್ರರನ್ನೂ ಈ ಸಂದರ್ಭದಲ್ಲಿ ಅಭಿನಂದಿಸಬೇಕು.

ಮಿಂಚುಳ್ಳಿ ಪ್ರಕಾಶನದ ವತಿಯಿಂದ ನೆನ್ನೆ ನಡೆದ ಡಾ.ಸತ್ಯನಾರಾಯಣ ಅವರ ‘ತಡಿಕೆಯ ಹಿಂದೆ ಹಾಗೂ ಸೂರ್ಯಕೀರ್ತಿ ಅವರ ಮಳೆ ಪ್ರಬಂಧ ಸಂಕಲನ, ಮಿಂಚುಳ್ಳಿ ಪತ್ರಿಕೆಗಳ ಬಿಡುಗಡೆ ಹಾಗೂ ಕವಿಗೋಷ್ಠಿ ಅರ್ಥಪೂರ್ಣವಾಗಿ ನಡೆದವು. ಬಿದಿರ ತಡಿಕೆ ಕೃತಿಯ ಬಗ್ಗೆ ವಿಜಯವಾಣಿಯ ಉಪಸಂಪಾದಕರಾದ ಕೀರ್ತಿ ಕೋಲ್ಗಾರ್ ಹಾಗೂ ಮಳೆ ಪ್ರಬಂಧಗಳ ಬಗ್ಗೆ ರಾಜಶೇಖರ ಮಠಪತಿ ಅವರು ಸೊಗಸಾಗಿ ಪರಿಚಯಿಸಿದರು.

ಕವಿಗೋಷ್ಠಿಯ ಎಲ್ಲಾ ಕವಿತೆಗಳು ಸಮಕಾಲೀನ ವಾಸ್ತವಗಳಿಗೆ ಕನ್ನಡಿ ಹಿಡಿದವು. ಅಧ್ಯಕ್ಷತೆ ವಹಿಸಿದ್ದ ಕವಯತ್ರಿ ಎಂ.ಆರ್ ಕಮಲಾ ಅವರು ಕೃತಕಬುದ್ಧಿಮತ್ತೆಯ ತಾಂತ್ರಿಕತೆ ವಿಜೃಂಭಿಸುತ್ತಿರುವ ಈ ಹೊತ್ತಲ್ಲೂ ಕವಿಯ ಹೃದಯದ ಭಾವಕೋಶ ಮತ್ತು ಕವಿಯ ಮಿದುಳಿನ ಅನನ್ಯತೆಯನ್ನೂ ಯಾವ ತಾಂತ್ರಿಕತೆಯೂ ಕದಿಯಲಾರದು ಎಂದು ಸಮಾಧಾನ ವ್ಯಕ್ತಪಡಿಸಿದರು.

ಕವಿ ಎಲ್.ಎನ್ ಮುಕುಂದರಾಜ್ ಅವರ ಕಿರು ಸಾಹಿತ್ಯ ಪತ್ರಿಕೆಗಳಲ್ಲಿನ ಸಾಹಿತ್ಯವನ್ನು ಓದುವ ಸೃಜನ ಶೀಲ ಆನಂದಕ್ಕೆ ಡಿಜಿಟಲ್ ಮಾಧ್ಯಮಗಳ ಮೂಲಕ ಓದಿ ಪಡೆಯುವ ಆನಂದ ಸಾಟಿಯಾಗಲಾರದು ಮತ್ತು ಕಿರು ಸಾಹಿತ್ಯ ಪತ್ರಿಕೆಗಳು ತಮ್ಮ ಅಸ್ತಿತ್ವಕ್ಕಾಗಿ ಕಾಪಾಡಿಕೊಳ್ಳಬೇಕಾದ ಕಾಳಜಿಗಳು, ಬದ್ಧತೆಗಳು ಹಾಗು ಎದುರಾಗಬಹುದಾದ ಸವಾಲುಗಳನ್ನು ನಿರ್ವಹಿಸಬೇಕಾದ ಜಬಾಬ್ಧಾರಿಗಳ ಬಗ್ಗೆ ಕಿವಿಮಾತು ನುಡಿದರು.

ಕಥೆಗಾರ ಹಾಗು ಜನಪದ ವಿದ್ವಾಂಸರಾದ ಕರೀಗೌಡ ಬೀಚನಹಳ್ಳಿ ಅವರು, ಕನ್ನಡ ಲಲಿತ ಪ್ರಬಂಧಗಳ ಇತಿಹಾಸ ಹಾಗು ಅವುಗಳನ್ನು ರಚಿಸುವವರು ಕಾಪಾಡಿಕೊಳ್ಳಬೇಕಾದ ಕೌಶಲಗಳನ್ನು ಕುರಿತು ನುಡಿದದ್ದಲ್ಲದೆ ಸತ್ಯನಾರಾಯಣ ಹಾಗೂ ಸೂರ್ಯಕೀರ್ತಿ ಇಬ್ಬರೂ ಈ ಪರಂಪರೆಯ ವಾರಸುದಾರಿಕೆಯನ್ನು ಮುಂದುವರಿಸಿರುವ ಬಗ್ಗೆ ಸಂತಸ ವ್ಯಕ್ತಪಡಿಸಿ ಶುಭಹಾರೈಸಿದರು.

ಸೂರ್ಯಕೀರ್ತಿ ತನ್ನ ಪ್ರಬಂಧಗಳ ಹಿಂದಿನ ತನ್ನ ಗ್ರಾಮೀಣ ಬದುಕಿನ ಜೀವನದ್ರವ್ಯದ ವಿವರಗಳನ್ನು ನೀಡಿದರೆ, ಸತ್ಯನಾರಾಯಣ ಅವರು ತಮ್ಮ ಪ್ರಬಂಧಗಳೆ ಮಾತನಾಡಲಿ ನಾನು ಮಾತನಾಡಲಾರೆನೆಂದು ಮೌನಿಯಾದರು.

ಕಾರ್ಯಕ್ರಮದ ಪ್ರಾರಂಭದಲ್ಲಿ ಆಯೋಜಿಸಿದ್ದ ಕೊಳ್ಳೇಗಾಲದ ಕಂಸಾಳೆ ಧನುಷ್ ಮತ್ತು ಮಾಯ್ಕಾರ ಮಾದೇಶ್ವರ ತಂಡದ ಕಲಾವಿದರು ಪ್ರಸ್ತುತಪಡಿಸಿದ ಮಂಟೇಸ್ವಾಮಿ ಕಾವ್ಯದ ಗಾಯನ ಕಾರ್ಯಕ್ರಮದ ಸಂಭ್ರಮವನ್ನು ಹೆಚ್ಚಿಸಿತು.

ಜೊತೆಗೆ ಸಮಕಾಲೀನ ಸಂಗತಿಗಳೊಂದಿಗೆ ಅವರು ಮಂಟೇಸ್ವಾಮಿ ಕಾವ್ಯವನ್ನು ಅನುಸಂಧಾನಗೊಳಿಸಿ, ವ್ಯಂಗ್ಯ, ವಿಡಂಬನೆ, ಲಾಸ್ಯಗಳೊಂದಿಗೆ ಪ್ರಸ್ತುತಪಡಿಸಿದ್ದು ಅತ್ಯಂತ ಸಂತಸದ ಸಂಗತಿಯಾಗಿತ್ತು.

  • ಪ್ರೊ.ಟಿ.ಯಲ್ಲಪ್ಪ, ಪ್ರಾಧ್ಯಾಪಕರು

Leave a Reply