ಬೆಂಗಳೂರು: ಸೌಜನ್ಯ ಕೊಲೆ ಸಂಬಂಧ ಧರ್ಮಸ್ಥಳದ ಧರ್ಮಾಧಿಕಾರಿ ಮತ್ತು ಬಿಜೆಪಿಯಿಂದ ರಾಜ್ಯಸಭೆಗೆ ನಾಮಕರಣಗೊಂಡಿರುವ ವೀರೇಂದ್ರ ಹೆಗ್ಗಡೆಯವರಿಗೆ ಕರ್ನಾಟಕ ರಾಷ್ಟ್ರ ಸಮತಿ ರಾಜ್ಯಾಧ್ಯಕ್ಷ ರವಿಕೃಷ್ಣಾ ರೆಡ್ಡಿ ಪತ್ರ ಬರೆದಿದ್ದಾರೆ. ಪತ್ರದ ಪೂರ್ಣಪಾಠ ಈ ಕೆಳಗಿನಂತಿದೆ:
ಧರ್ಮಸ್ಥಳವು ತಲೆತಲಾಂತರಗಳಿಂದಲೂ ರಾಜ್ಯದ ಲಕ್ಷಾಂತರ ಜನರ ಶ್ರದ್ಧಾಕೇಂದ್ರವಾಗಿದೆ. ನಾನೂ ಸೇರಿದಂತೆ ನಮ್ಮ ಕುಟುಂಬದವರು ಹತ್ತಾರು ಬಾರಿ ಇಲ್ಲಿಗೆ ಬಂದು, ಸಾಧ್ಯವಾದಾಗ ಮುಡಿ ಕೊಟ್ಟು, ನೇತ್ರಾವತಿಯಲ್ಲಿ ಸ್ನಾನ ಮಾಡಿ, ಭಯ ಭಕ್ತಿಯಿಂದ ಮಂಜುನಾಥನನ್ನು ದರ್ಶಿಸಿದ್ದೇವೆ. ನಮ್ಮ ಕುಟುಂಬದ ಯಾರೊಬ್ಬರಾದರೂ ವರ್ಷಕ್ಕೊಮ್ಮೆಯಾದರೂ ಕ್ಷೇತ್ರಕ್ಕೆ ಬಂದು ದರ್ಶನ ಪಡೆಯುತ್ತಾರೆ. ಇದು ಕೇವಲ ನಮ್ಮ ಕುಟುಂಬದ ಆಚಾರವಿಚಾರ ಮಾತ್ರವಲ್ಲದೆ, ರಾಜ್ಯದ ಲಕ್ಷಾಂತರ ಕುಟುಂಬಗಳ ಆಚಾರವೂ ಹೌದು.
ಇಂತಹ ಪುಣ್ಯಕ್ಷೇತ್ರದಲ್ಲಿ, ಸ್ಥಳೀಯ ನಿವಾಸಿಯಾಗಿದ್ದ ಸೌಜನ್ಯ ಎನ್ನುವ 17 ವರ್ಷದ ಕಾಲೇಜು ವಿದ್ಯಾರ್ಥಿನಿಯನ್ನು ಅಕ್ಟೋಬರ್ 9, 2012ರಂದು ಕಿರಾತಕ/ಕಿರಾತಕರು ಬರ್ಬರವಾಗಿ ಅತ್ಯಾಚಾರ ಮಾಡಿ ಹಾಡುಹಗಲಿನಲ್ಲಿಯೇ ದಾರುಣವಾಗಿ ಕೊಂದು ಬಿಸಾಕಿದ್ದರು. ಇದು ಆ ಸಮಯದಲ್ಲಿ ರಾಜ್ಯಾದ್ಯಂತ ಬಹಳ ದೊಡ್ಡ ಸುದ್ದಿಯಾಗಿತ್ತು ಮತ್ತು ಸೌಜನ್ಯಳಿಗಾಗಿ ಜನರು ದುಃಖದಿಂದ ಮಿಡಿದಿದ್ದರು. ಧರ್ಮಸ್ಥಳದಂತಹ ಸ್ಥಳದಲ್ಲಿ ಈ ಘಟನೆ ಆಗಿದ್ದು ಜನರನ್ನು ಆಘಾತಕ್ಕೆ ಈಡು ಮಾಡಿತ್ತು. ಈ ದುರಂತದ ಮೇಲಿನ ಮತ್ತೊಂದು ದುರಂತವೆಂದರೆ ಈ ಪ್ರಕರಣದಲ್ಲಿ ಇಲ್ಲಿಯವರೆಗೂ ಯಾರಿಗೂ ಶಿಕ್ಷೆ ಅಗಿಲ್ಲ. ಪೊಲೀಸರಿಂದ ಆರೋಪಿ ಎಂದು ಹೇಳಲ್ಪಟ್ಟ ಸಂತೋಷ್ ರಾವ್ ಎನ್ನುವ ವ್ಯಕ್ತಿ ಈ ಕೊಲೆ ಮಾಡಿದ್ದಾನೆ ಎನ್ನಲು ಸೂಕ್ತ ಸಾಕ್ಷ್ಯಾಧಾರಗಳಿಲ್ಲ ಎಂದು ನ್ಯಾಯಾಲಯವು ಇತ್ತೀಚೆಗೆ ಅವರನ್ನು ಆರೋಪಮುಕ್ತ ಮಾಡಿದೆ. ಈ ಹಿನ್ನೆಲೆಯಲ್ಲಿ, ರಾಜ್ಯಾದ್ಯಂತ ಜನ ಮತ್ತೊಮ್ಮೆ ತೀವ್ರ ದುಃಖಿತರಾಗಿದ್ದಾರೆ ಮತ್ತು ಆಕ್ರೋಶಗೊಂಡಿದ್ದಾರ. ಅಪರಾಧಿಗಳನ್ನು ಪತ್ತೆ ಹಚ್ಚಲು ಮತ್ತು ಕಾನೂನಿನ ಪ್ರಕಾರ ಶಿಕ್ಷಿಸಲು ಸರ್ಕಾರ ಶೀಘ್ರವೇ ಕ್ರಮ ಕೈಗೊಳ್ಳಬೇಕು ಎಂದು ರಾಜ್ಯದ ಹಲವಾರು ಕಡೆ ಧರಣಿ ಮತ್ತು ಪ್ರತಿಭಟನೆಗಳನ್ನು ಮಾಡುತ್ತಿದ್ದಾರೆ. ಸಾಮಾಜಿಕ ಮಾಧ್ಯಮಗಳಲ್ಲಿ ನೋವು ಮತ್ತು ಆಕ್ರೋಶವನ್ನು ಹೊರಹಾಕುತ್ತಿದ್ದಾರೆ. ನಾವು ಕಟ್ಟಿಕೊಂಡಿರುವ ವ್ಯವಸ್ಥೆಯ ಬಗ್ಗೆ ರಾಜ್ಯದಲ್ಲಿ ಜನ ದಿನೇದಿನೇ ಭ್ರಮನಿರಸನ ಹೊಂದುತ್ತಿದ್ದಾರೆ.
ಈ ಹಿನ್ನೆಲೆಯಲ್ಲಿ, ಸೌಜನ್ಯ ಮತ್ತು ಆಕೆಯ ಕುಟುಂಬಕ್ಕೆ ಆಗಿರುವ ಅನ್ಯಾಯಕ್ಕೆ ಈಗಲಾದರೂ ನ್ಯಾಯ ಸಿಗುವಂತಾಗಲು ಮತ್ತು ಅಪರಾಧ ಕೃತ್ಯ ಎಸಗಿದವರು ಕಾನೂನಿನ ವ್ಯಾಪ್ತಿಗೆ ಒಳಪಟ್ಟು ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಇಂತಹ ಘಟನೆಗಳು ಮರುಕಳಿಸುವುದನ್ನು ನಿರುತ್ತೇಜಿಸಲು ಸರ್ಕಾರ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕೆಂದು ಆಗ್ರಹಿಸಿ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ವತಿಯಿಂದ ಇದೇ ಆಗಸ್ಟ್ 26, 2023ರಿಂದ ಬೆಳ್ತಂಗಡಿಯಿಂದ ಆರಂಭಿಸಿ ಧರ್ಮಸ್ಥಳದ ಮಾರ್ಗವಾಗಿ ಬೆಂಗಳೂರಿಗೆ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ. ದಿನಾಂಕ 07-09-2023ರಂದು ಈ ಪಾದಯಾತ್ರೆ ಬೆಂಗಳೂರು ತಲುಪಲಿದ್ದು, 08-09-2023ರಂದು ವಿಧಾನಸೌಧ ಮುಟ್ಟಲಿದೆ.
ಸುಮಾರು 14 ದಿನಗಳ ಕಾಲ ನಡೆಯಲಿರುವ ಸುಮಾರು 330 ಕಿಲೋಮೀಟರ್‌ಗಳ ಈ ಪಾದಯಾತ್ರೆಯಲ್ಲಿ KRS ಪಕ್ಷವು ಕರ್ನಾಟಕ ರಾಜ್ಯ ಸರ್ಕಾರಕ್ಕೆ ರಾಜ್ಯದ ಜನತೆಯ ಪರವಾಗಿ ಈ ಕೆಳಕಾಣಿಸಿರುವ ಹಕ್ಕೊತ್ತಾಯಗಳನ್ನು ಮಂಡಿಸುತ್ತಿದೆ:
- ಸೌಜನ್ಯ ಹತ್ಯೆಯ ಪ್ರಕರಣವನ್ನು ವಿಶೇಷ ಪ್ರಕರಣವೆಂದು ಪರಿಗಣಿಸಿ ತಕ್ಷಣವೇ ಮರು ತನಿಖೆ ನಡೆಸಲು ಕ್ರಮ ಕೈಗೊಳ್ಳಬೇಕು.
- ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ಪೊಲೀಸ್ ತನಿಖಾ ತಂಡ ರಚಿಸಿ ಪರ್ಯಾಯವಾಗಿ ಈಗಾಗಲೇ ತನಿಖೆ ಮಾಡಿರುವ ತನಿಖಾಧಿಕಾರಿಗಳು ಸಮರ್ಪಕವಾಗಿ ಮತ್ತು ವೃತ್ತಿಪರವಾಗಿ ತನಿಖೆ ನಡೆಸಿಲ್ಲ ಎನ್ನುವ ಆರೋಪಗಳ ಹಿನ್ನೆಲೆಯಲ್ಲಿ ಅವರನ್ನೂ ತನಿಖೆಗೆ ಒಳಪಡಿಸಬೇಕು.
- ರಾಜ್ಯದಲ್ಲಿ ಮಕ್ಕಳ ಮತ್ತು ಮಹಿಳೆಯರ ಮೇಲೆ ನಡೆಯುವ ಅತ್ಯಾಚಾರ ಮತ್ತು ಕೊಲೆ ಪ್ರಕರಣಗಳ ಶೀಘ್ರ ವಿಲೇವಾರಿಗೆ ವಿಶೇಷ ತ್ವರಿತ ನ್ಯಾಯಾಲಯಗಳನ್ನು (Fast Track Courts) ಸ್ಥಾಪಿಸಬೇಕು.
- ಮಕ್ಕಳ ಮತ್ತು ಮಹಿಳೆಯರ ಮೇಲೆ ನಡೆಯುವ ಅತ್ಯಾಚಾರ ಮತ್ತು ಕೊಲೆ ಪ್ರಕರಣಗಳಲ್ಲಿ ಸಂತ್ರಸ್ತರಿಗೆ ಮತ್ತು ಅವರ ಕುಟುಂಬದವರಿಗೆ ಮಾನಸಿಕ ಮತ್ತು ಆರ್ಥಿಕ ಸಹಾಯ ನೀಡುವ ನಿಟ್ಟಿನಲ್ಲಿ ಮತ್ತು ತನಿಖೆಯ ಮತ್ತು ನ್ಯಾಯಲಯದಲ್ಲಿಯ ವಿಚಾರಣೆಯ ಪ್ರಗತಿಯನ್ನು ಕಾಲಕಾಲಕ್ಕೆ ಪರಿಶೀಲಿಸುವಂತಹ ವ್ಯವಸ್ಥೆಗಾಗಿ ರಾಜ್ಯದಲ್ಲಿ “ಸೌಜನ್ಯ ಮಹಿಳಾ ಸುರಕ್ಷಾ ಆಯೋಗ” ಸ್ಥಾಪಿಸಬೇಕು. ಸಾರ್ವಜನಿಕ ಸ್ಥಳಗಳಲ್ಲಿ ಮತ್ತು ಕೆಲಸದ ಸ್ಥಳಗಳಲ್ಲಿ ಮಕ್ಕಳ ಮತ್ತು ಮಹಿಳೆಯರ ಸುರಕ್ಷೆಗಾಗಿ ಸರ್ಕಾರ ಮತ್ತು ಖಾಸಗಿ ಸಂಸ್ಥೆಗಳು ಕೈಗೊಳ್ಳಬೇಕಾದ ಕ್ರಮಗಳನ್ನು ಜಾರಿ ಮಾಡಿಸುವ ಮತ್ತು ಖಾತ್ರಿಪಡಿಸುವ ಅಧಿಕಾರವನ್ನು ಮತ್ತು ಆಯೋಗದ ಆದೇಶಗಳನ್ನು ಉಲ್ಲಂಘಿಸುವವರಿಗೆ ದಂಡ/ಶಿಕ್ಷೆ ವಿಧಿಸುವ ಅರೆನ್ಯಾಯಿಕ ಅಧಿಕಾರವನ್ನು ಈ ಆಯೋಗಕ್ಕೆ ನೀಡಬೇಕು. ಇದಕ್ಕಾಗಿ ಸರ್ಕಾರ ಅಗತ್ಯ ಕಾನೂನುಗಳನ್ನು ರೂಪಿಸಬೇಕು.
- ಮಕ್ಕಳನ್ನು ಮತ್ತು ಮಹಿಳೆಯರನ್ನು ಲೈಂಗಿಕ ಶೋಷಣೆಗೆ ಒಳಪಡಿಸಲು ಮತ್ತು ವೇಶ್ಯಾವಾಟಿಕೆಗೆ ತಳ್ಳಲು ಮಾಡುವ ಅಪಹರಣ ಮತ್ತು ಅಮಿಷಗಳನ್ನು ಒಡ್ಡಿ ವಂಚಿಸುವ ಮಾನವ ಕಳ್ಳಸಾಗಾಣಿಕೆ ಕಾಳದಂಧೆಯ ಕರಾಳಜಾಲ (Human Trafficking) ರಾಜ್ಯದಲ್ಲಿ ಸಕ್ರಿಯವಾಗಿದೆ. ಕಳೆದ ಮೂರೇ ವರ್ಷಗಳ ಅವಧಿಯಲ್ಲಿ ರಾಜ್ಯದಲ್ಲಿ 40000 ಮಹಿಳೆಯರು ನಾಪತ್ತೆ ಆಗಿದ್ದಾರೆ ಎಂದು ಇತ್ತೀಚೆಗೆ ಕೇಂದ್ರ ಗೃಹ ಸಚಿವಾಲಯ ಮಾಹಿತಿ ನೀಡಿದೆ. ಇದನ್ನು ತಡೆಗಟ್ಟಲು ಮತ್ತು ಮಕ್ಕಳ ಹಾಗೂ ಮಹಿಳೆಯರ ಮೇಲಿನ ಅತ್ಯಾಚಾರ ಹಾಗೂ ಕೊಲೆ ಪ್ರಕರಣಗಳ ತನಿಖೆಗೆ ರಾಜ್ಯದ ಸಿಐಡಿ ಇಲಾಖೆ ಮಾದರಿಯಲ್ಲಿ ವಿಶೇಷ ಪೊಲೀಸ್ ಪಡೆ/ಇಲಾಖೆಯನ್ನು ಸೃಜಿಸಬೇಕು ಮತ್ತುಆ ರೀತಿಯ ಎಲ್ಲಾ ಪ್ರಕರಣಗಳು ಈ ಇಲಾಖೆಯ ವ್ಯಾಪ್ತಿಗೆ ಬರಬೇಕು.
- ಧರ್ಮಸ್ಥಳದ ಸುತ್ತಮುತ್ತ ಹಲವಾರು ದಶಕಗಳಿಂದ ಆತ್ಮಹತ್ಯೆಗಳೂ ಸೇರಿದಂತೆ ನೂರಾರು ಅಸಹಜ ಸಾವಿನ ಪ್ರಕರಣಗಳು ನಡೆದಿವೆ ಎಂಬ ಆರೋಪಗಳು ಕೇಳಿಬರುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಉಚ್ಚ ನ್ಯಾಯಾಲಯದ ನಿವೃತ್ತ ನಾಯಮೂರ್ತಿಗಳ ನೇತೃತ್ವದಲ್ಲಿ ನ್ಯಾಯಾಂಗ ತನಿಖೆ ನಡೆಸಬೇಕು.
- ರಾಜ್ಯದಲ್ಲಿ ನಿರಂತರವಾಗಿ ಮಹಿಳೆಯರ ಮೇಲೆ ಅತ್ಯಾಚಾರ, ದೌರ್ಜನ್ಯ ಮತ್ತು ದಬ್ಬಾಳಿಕೆ ನಡೆಯುತ್ತಿದ್ದು, ಅದಕ್ಷ ಮತ್ತು ಭ್ರಷ್ಟ ಪೊಲೀಸ್ ವ್ಯವಸ್ಥೆಯಿಂದ ಬಹುತೇಕ ಪ್ರಕರಣಗಳಲ್ಲಿ ಅಪರಾಧಿಗಳಿಗೆ ಶಿಕ್ಷೆಯಾಗದಿರುವುದೇ ಇಂತಹ ಪ್ರಕರಣಗಳು ಹೆಚ್ಚಾಗಲು ಕಾರಣವಾಗಿದೆ. ಈ ನಿಟ್ಟಿನಲ್ಲಿ ಕೆ.ಆರ್.ಎಸ್ ಪಕ್ಷವು ಕಲೆ ಹಾಕಿರುವ ಮಾಹಿತಿಯ ಪ್ರಕಾರ ಕಳೆದ ಹತ್ತು ವರ್ಷಗಳಲ್ಲಿ ಮಹಿಳೆಯರ ಮೇಲೆ ನಡೆದಿರುವ ಅತ್ಯಾಚಾರ, ದೌರ್ಜನ್ಯ ಮತ್ತು ದಬ್ಬಾಳಿಕೆ ಪ್ರಕರಣಗಳಲ್ಲಿ ಕೇವಲ 1.18 % ಶಿಕ್ಷೆಯಾಗಿರುತ್ತದೆ. ಈ ಪ್ರಮಾಣದಲ್ಲಿ ಮತ್ತು ನಿಧಾನಗತಿಯಲ್ಲಿ ಶಿಕ್ಷೆಯಾಗುತ್ತದೆ ಎಂದರೆ, ಸಮಾಜದಲ್ಲಿ ಕಾನೂನಿನ ಬಗೆಗಿನ ಭಯದ ವಾತಾವರಣ ಇರುವುದಿಲ್ಲ. ಇಷ್ಟು ಕಡಿಮೆ ಪ್ರಕರಣಗಳಲ್ಲಿ ಅಪರಾಧಿಗಳಿಗೆ ಶಿಕ್ಷೆಯಾಗುತ್ತಿರುವುದಕ್ಕೆ ಲೋಪಗಳನ್ನು ಪತ್ತೆಹಚ್ಚಿ, ಅವುಗಳನ್ನು ಸರಿಪಡಿಸುವ ಜವಾಬ್ದಾರಿ ಸರ್ಕಾರದಾಗಿರುತ್ತದೆ. ಆದ್ದರಿಂದ ಈ ನಿಟ್ಟಿನಲ್ಲಿ ಸರ್ಕಾರವು ಉಚ್ಚ ನ್ಯಾಯಾಲಯದ ನ್ಯಾಯಾಧೀಶರ ನೇತೃತ್ವದಲ್ಲಿ ವಕೀಲರು, ಪೊಲೀಸ್ ಅಧಿಕಾರಿಗಳು ಮತ್ತು ಸಂಘ ಸಂಸ್ಥೆಗಳ ಪ್ರತಿನಿಧಿಗಳು ಒಳಗೊಂಡ ಸಮಿತಿಯನ್ನು ರಚಿಸಿ, ಶಿಕ್ಷೆ ಪ್ರಮಾಣ ಹೆಚ್ಚಿಸುವುದಕ್ಕೆ ಕ್ರಮ ಕೈಗೊಳ್ಳಬೇಕು.
…
ಈ ಹಕ್ಕೊತ್ತಾಯಗಳ ಈಡೇರಿಕೆಗಾಗಿ ಕೈಗೊಳ್ಳಲಾಗುತ್ತಿರುವ ಪಾದಯಾತ್ರೆಯು ದಿ: 26-08-2023ರಂದು ಸಂಜೆ ಧರ್ಮಸ್ಥಳ ತಲುಪುತ್ತದೆ. ಅಂದು ಪಾದಯಾತ್ರಿಗಳು ಶ್ರೀ ಮಂಜುನಾಥನ ದರ್ಶನ ಪಡೆದು ಈ ಹೋರಾಟಕ್ಕೆ ಆತನ ಅನುಗ್ರಹವನ್ನು ಬೇಡಲಿದ್ದಾರೆ. ದೇವಸ್ಥಾನದ ಆಡಳಿತ ಮಂಡಳಿಯ ಮುಖ್ಯಸ್ಥರಾದ ತಾವೂ ಸಹ ಈ ಹೋರಾಟಕ್ಕೆ ಯಶಸ್ಸು ಸಿಗಲೆಂದು ರಾಜ್ಯದ ಜನತೆಯ ಪರವಾಗಿ ಶ್ರೀ ಮಂಜುನಾಥನಲ್ಲಿ ಪ್ರಾರ್ಥಿಸಬೇಕೆಂದು ಈ ಮೂಲಕ ವಿನಯಪೂರ್ವಕವಾಗಿ ಮನವಿ ಮಾಡುತ್ತೇವೆ.
ಇದೇ ಸಮಯದಲ್ಲಿ ನಮ್ಮ ಪಕ್ಷದ ಮುಖಂಡರ ನಿಯೋಗವು ತಮ್ಮನ್ನೂ ಖುದ್ದಾಗಿ ಭೇಟಿ ಮಾಡಬಯಸುತ್ತಾರೆ. ತಾವು ಈಗ ದೇಶದ ಸರ್ವೊಚ್ಚ ಶಾಸನಸಭೆಗಳಲ್ಲಿ ಒಂದಾದ ರಾಜ್ಯ ಸಭೆಯ ಸದಸ್ಯರೂ ಆಗಿರುವ ಕಾರಣ KRS ಪಕ್ಷವು ಈ ಹೋರಾಟದಲ್ಲಿ ಪ್ರಸ್ತಾಪಿಸಿರುವ ಹಕ್ಕೊತ್ತಾಯಗಳಲ್ಲಿ ತಮಗೆ ಸೂಕ್ತ ಎನ್ನಿಸಿದ ವಿಚಾರಗಳ ಬಗ್ಗೆ ರಾಜ್ಯ ಸರ್ಕಾರದ ಮುಖ್ಯಮಂತ್ರಿಗೆ ಮತ್ತು ಭಾರತ ಸರ್ಕಾರದ ಪ್ರಧಾನಮಂತ್ರಿಗೆ ಪತ್ರ ಬರೆದು ಸೂಕ್ತ ಕ್ರಮಗಳಿಗೆ ಆಗ್ರಹಿಸಬೇಕೆಂದು ನಾವು ಮನವಿ ಮಾಡುತ್ತೇವೆ. ಅದಕ್ಕಾಗಿ ನಮ್ಮ ಪಕ್ಷದ ಮುಖಂಡರ ಭೇಟಿಗೆ ತಾವು ಸಮಯಾವಕಾಶ ನೀಡಬೇಕೆಂದು ಕೋರುತ್ತೇವೆ.
ರಾಜ್ಯದಲ್ಲಿ ಮುಂದಿನ ದಿನಗಳಲ್ಲಿ ಸೌಜನ್ಯ ಪ್ರಕರಣದಂತಹ ದುರಂತಗಳು ನಡೆಯದೇ ಇರಲೆಂದು ಆಶಿಸುತ್ತ, ಪ್ರಾಯಶ್ಚಿತ್ತ ಮತ್ತು ಪಶ್ಚಾತ್ತಾಪಗಳಿಲ್ಲದ ಅಪರಾಧಿಗಳನ್ನು ಧರ್ಮಸ್ಥಳದ ದೈವಗಳಾದ ಶ್ರೀ ಅಣ್ಣಪ್ಪ ಸ್ವಾಮಿ ಮತ್ತು ಶ್ರೀ ಮಂಜುನಾಥರು ಕಠಿಣವಾಗಿ ಶಿಕ್ಷಿಸಲಿ ಎಂದು ಬೇಡುತ್ತ, ಜೀವನದ ನಶ್ವರತೆಯನ್ನು ಪ್ರತಿಪಾದಿಸುತ್ತಲೇ ಸತ್ಯ, ಅಹಿಂಸೆ ಮತ್ತು ಧರ್ಮವನ್ನು ಜನರು ಪರಿಪಾಲಿಸಬೇಕು ಎಂದು ಧರ್ಮಸ್ಥಳದ ರತ್ನಗಿರಿಯ ಮೇಲೆ ಗಾಳಿಮಳೆಬಿಸಿಲಿಗೆ ಬೆತ್ತಲೆಯಾಗಿ ಮೈಯೊಡ್ಡಿ ನಿಂತಿರುವ ಬಾಹುಬಲಿ ಗೊಮ್ಮಟೇಶ್ವರನು ರಾಜ್ಯದ ಜನರಿಗೆ ಸದಾ ಪ್ರೇರಣೆ ನೀಡಲಿ ಎಂದು ನಾನು ಪ್ರಾರ್ಥಿಸುತ್ತೇನೆ.
ಓಂ ಣಮೋ ಅರಿಹಂತಾಣಂ (ಅರಿಹಂತರುಗಳಿಗೆ ನಮಸ್ಕಾರ)
ಣಮೋ ಸಿದ್ಧಾಣಂ (ಸಿದ್ಧರುಗಳಿಗೆ ನಮಸ್ಕಾರ)
ಣಮೋ ಆಇರಿಯಾಣಂ (ಆಚಾರ್ಯರುಗಳಿಗೆ ನಮಸ್ಕಾರ)
ಣಮೋ ಉವಜ್ಝಾಯಾಣಂ (ಉಪಾಧ್ಯಾಯರುಗಳಿಗೆ ನಮಸ್ಕಾರ)
ಣಮೋ ಲೋಏ ಸವ್ವ ಸಾಹೂಣಂ (ಲೋಕದಲ್ಲಿರುವ ಎಲ್ಲ ಸಾಧುಗಳಿಗೆ ನಮಸ್ಕಾರ).
ವಂದನೆಗಳೊಂದಿಗೆ,
- ರವಿ ಕೃಷ್ಣಾರೆಡ್ಡಿ, ಅಧ್ಯಕ್ಷರು, ಕರ್ನಾಟಕ ರಾಷ್ಟ್ರ ಸಮಿತಿ



