ಬೆಳಗಾವಿ: ಕೇಂದ್ರ ಗೃಹಸಚಿವ ಅಮಿತ್ ಶಾ ಅವರ ಕಾರ್ಯಕ್ರಮದಲ್ಲಿ ಭಾಗವಹಿಸುವ ಸಲುವಾಗಿ ನಾಳಿನ ಸದನವನ್ನು ರದ್ದು ಮಾಡಿರುವ ರಾಜ್ಯ ಸರ್ಕಾರದ ನಿಲುವು ನಾಡವಿರೋಧಿಯಾದುದ್ದು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಮಂಡ್ಯದಲ್ಲಿ ನಾಳೆ ನಡೆಯಲಿರುವ ಬಿಜೆಪಿ ಸಮಾವೇಶದಲ್ಲಿ ಭಾಗಿಯಾಗಲು ರಾಜ್ಯಕ್ಕೆ ಅಮಿತ್ ಶಾ ಆಗಮಿಸುತ್ತಿದ್ದು, ಈ ಹಿನ್ನೆಲೆಯಲ್ಲಿ ಸರ್ಕಾರ ಅಧಿವೇಶನವನ್ನು ರದ್ದುಪಡಿಸಿದೆ. ಈ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿಕ್ರಿಯೆ ನೀಡಿರುವ ಸಿದ್ದರಾಮಯ್ಯ, ಸದನವನ್ನು ಇನ್ನು ಒಂದು ವಾರ ವಿಸ್ತರಿಸಿ, ಜನರ ಸಮಸ್ಯೆಗಳ ವಿಸ್ತೃತ ಚರ್ಚೆಗೆ ಅವಕಾಶ ನೀಡಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಇನ್ನೂ ಹದಿನೈದು ದಿನ ಚರ್ಚಿಸಿದರೂ ಮುಗಿಯದಷ್ಟು ಜನರ ಸಮಸ್ಯೆಗಳಿವೆ, ಅವೆಲ್ಲವನ್ನೂ ಬದಿಗೊತ್ತಿ ಅಮಿತ್ ಶಾ ಅವರ ಎದುರು ನಡುಬಗ್ಗಿಸಿ ನಿಲ್ಲಲು ಸದನವನ್ನೇ ಮೊಟಕುಗೊಳಿಸಿರುವುದು ಜನತೆಯ ಮೇಲೆ ಸರ್ಕಾರಕ್ಕಿರುವ ಅಸಡ್ಡೆಯನ್ನು ತೋರುತ್ತದೆ ಎಂದಿದ್ದಾರೆ.
ಹಳೆಯ ಪಿಂಚಣಿ ಪದ್ಧತಿ ಮರುಜಾರಿ, ಸರ್ಕಾರಿ ಉದ್ಯೋಗಗಳಿಗೆ ನೇಮಕಾತಿ, ಚಿಕಿತ್ಸೆ ಸಿಗದೆ ತುಮಕೂರಿನಲ್ಲಿ ಬಾಣಂತಿ, ಹಸುಗೂಸಿನ ಸಾವು ಇಂಥಾ ಹತ್ತಾರು ವಿಷಯಗಳು ಇನ್ನೂ ಚರ್ಚೆಯಾಗಬೇಕಿವೆ. ರಾಜ್ಯ ಸರ್ಕಾರಕ್ಕೆ ಇದ್ಯಾವುದು ಬೇಕಿಲ್ಲ, ಅವರಿಗೆ ಬೇಕಿರುವುದು ಅಮಿತ್ ಶಾ ಅವರ ಕೃಪಾಕಟಾಕ್ಷ ಮಾತ್ರ ಎಂದಿದ್ದಾರೆ.




