ಬೆಂಗಳೂರು-ಪುಣೆ ಹೆದ್ದಾರಿ ಎಕ್ಸ್‌ಪ್ರೆಸ್‌ ಹೆದ್ದಾರಿಯಾಗಿ ಅಭಿವೃದ್ಧಿ

3 years ago

ಬೆಂಗಳೂರು-ಪುಣೆ ಹೆದ್ದಾರಿ ಎಕ್ಸ್‌ಪ್ರೆಸ್‌ ಹೆದ್ದಾರಿಯಾಗಿ ಅಭಿವೃದ್ಧಿ

ಬೆಂಗಳೂರು: ರಾಜ್ಯದ ಅತ್ಯಂತ ಸಂಚಾರ ದಟ್ಟಣೆಯ ಹೆದ್ದಾರಿ ಎನಿಸಿಕೊಂಡಿರುವ ರಾಷ್ಟ್ರೀಯ ಹೆದ್ದಾರಿ 4 ರ ಬೆಂಗಳೂರು-ಪುಣೆಯವರೆಗಿನ ಮಾರ್ಗವನ್ನು ಎಕ್ಸ್‌ಪ್ರೆಸ್‌ ಹೆದ್ದಾರಿಯಾಗಿ ಅಭಿವೃದ್ಧಿ ಪಡಿಸಲು ಕೇಂದ್ರ ಭೂ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ತೀರ್ಮಾನಿಸಿದೆ.
ಸದ್ಯದಲ್ಲೇ ಈ ಕಾಮಗಾರಿಗೆ ಚಾಲನೆ ನೀಡಲು ತೀರ್ಮಾನಿಸಿದ್ದು, ಇಲಾಖೆ ಕ್ರಿಯಾ ಯೋಜನೆ ಮತ್ತು ನಿರ್ಮಾಣಕ್ಕೆ ಸಿದ್ಧತೆ ಆರಂಭಿಸಿದೆ. ಈ ಸಂಬಂಧ ವಿವರವಾದ ಯೋಜನಾ ವರದಿ ತಯಾರಿಸಲಾಗುತ್ತಿದೆ.
ಉನ್ನತ ಮೂಲಗಳ ಪ್ರಕಾರ ಈ ಕಾಮಗಾರಿಗೆ ₹50 ಸಾವಿರ ಕೋಟಿ ವೆಚ್ಚವಾಗಲಿದೆ. ಒಟ್ಟು 699 ಕಿ.ಮೀ. ಉದ್ದದ ರಸ್ತೆ ಆರು ಪಥಗಳನ್ನು ಹೊಂದಿರಲಿದೆ. ಇದಕ್ಕಾಗಿ ರಾಜ್ಯದಲ್ಲೇ 5,205 ಹೆಕ್ಟೇರ್‌ ಭೂಮಿ ಸ್ವಾಧೀನಪಡಿಸಿಕೊಳ್ಳಬೇಕಿದೆ.
ಈ ಮಾರ್ಗ ಕರ್ನಾಟಕದಲ್ಲೇ ಅತಿ ಹೆಚ್ಚು ದೂರ ಅಂದರೆ 498 ಕಿ.ಮೀ ಹಾದು ಹೋಗಲಿದೆ. ಉದ್ದೇಶಿತ ರಸ್ತೆಯಲ್ಲಿ ವಾಹನಗಳು ಪ್ರತಿ ಗಂಟೆಗೆ 120 ಕಿ.ಮೀ.ವೇಗದಲ್ಲಿ ಚಲಿಸುವಂತೆ ಈ ಹೆದ್ದಾರಿಯನ್ನು ಅಭಿವೃದ್ಧಿಪಡಿಸಲಾಗುತ್ತದೆ. ಉದ್ದೇಶಿತ ಹೆದ್ದಾರಿಯಿಂದಾಗಿ ಉಭಯ ನಗರಗಳ ನಡುವಣ ಪ್ರಯಾಣದ ಅವಧಿಯು 6 ಗಂಟೆಗಳಿಗೆ ಇಳಿಯಲಿದೆ ಎಂದು ಅಂದಾಜಿಸಲಾಗಿದೆ.
ಸದ್ಯದ ಬೆಂಗಳೂರು-ಪುಣೆ ಹೆದ್ದಾರಿಯು ಒಟ್ಟು 783 ಕಿ.ಮೀ ಉದ್ದವಿದ್ದು, ಇದನ್ನು ಕ್ರಮಿಸಲು 14 ರಿಂದ 15 ಗಂಟೆ ಬೇಕಾಗುತ್ತದೆ.
ಭಾರತ್‌ ಮಾಲಾ ಹಂತ-2ರ ಅಡಿಯಲ್ಲಿ ಎಕ್ಸ್‌ಪ್ರೆಸ್‌ವೇ ನಿರ್ಮಿಸಲು ನಿರ್ಧರಿಸಲಾಗಿದೆ. ಪುಣೆಯ ಕಂಜಾಳೆಯಲ್ಲಿ ಆರಂಭವಾಗಲಿರುವ ಮಾರ್ಗ ದೊಡ್ಡಬಳ್ಳಾಪುರ ತಾಲ್ಲೂಕಿನ ಮುತುಗದಹಳ್ಳಿಯ ಹೊರ ವರ್ತುಲ ರಸ್ತೆಯಲ್ಲಿ ಕೊನೆಗೊಳ್ಳಲಿದೆ. ಕರ್ನಾಟಕದಲ್ಲಿ ಈ ಮಾರ್ಗ ಅಥಣಿ ತಾಲ್ಲೂಕಿನ ಬೊಮ್ಮನಾಳ್‌ನಲ್ಲಿ ಆರಂಭವಾಗಲಿದ್ದು, ಅಥಣಿ, ಜಮಖಂಡಿ, ಬಾಗಲಕೋಟೆ, ಮುಧೋಳ, ಬಾದಾಮಿ, ನರಗುಂದ, ರೋಣ, ಯಲಬುರ್ಗ, ಕೊಪ್ಪಳ, ಹಗರಿಬೊಮ್ಮನಹಳ್ಳಿ, ಕೂಡ್ಲಿಗಿ, ಜಗಳೂರು, ಚಿತ್ರದುರ್ಗ, ಶಿರಾ, ಮಧುಗಿರಿ, ಕೊರಟಗೆರೆ, ತುಮಕೂರು, ನೆಲಮಂಗಲ ಹಾಗೂ ದೊಡ್ಡಬಳ್ಳಾಪುರ ತಾಲ್ಲೂಕಿನ ಮೂಲಕ ಹಾದುಹೋಗಲಿದೆ. ಮಹಾರಾಷ್ಟ್ರದಲ್ಲಿ ಪುಣೆ, ಸತಾರ ಮತ್ತು ಸಾಂಗ್ಲಿ ಜಿಲ್ಲೆಗಳ ಮೂಲಕ ಹಾದು ಹೋಗಲಿದೆ.

Leave a Reply