ಬೆಂಗಳೂರು: ರಾಜ್ಯದ ನೆಲ-ಜಲ, ನುಡಿಯ ಹಿತಾಸಕ್ತಿ ಕಾಯಲು ಸರ್ಕಾರ ಬದ್ಧತೆ ಹೊಂದಿದೆ. ಈ ವಿಷಯದಲ್ಲಿ ಯಾವುದೇ ರಾಜಿ ಇಲ್ಲ ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ಹೇಳಿದ್ದಾರೆ.
ರಾಜಭವನದಲ್ಲಿಂದು ನಡೆದ ಶಸಸ್ತ್ರ ಪಡೆಯ ಧ್ವಜ ದಿನಾಚರಣೆಯ ಕಾರ್ಯಕ್ರಮದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಹಾರಾಷ್ಟ್ರದವರು ಏನು ಬೇಕಾದರೂ ಹೇಳಲಿ. ನಾವು ಸಂಯಮದಿಂದ ಇರೋಣ ಎಂದು ಹೇಳಿದ್ದಾರೆ.
ಸರ್ಕಾರ ನಾಡು-ನುಡಿ ಗಡಿ ವಿಷಯದಲ್ಲಿ ಗಟ್ಟಿಯಾಗಿದೆ. ಯಾರೊಬ್ಬ ಸಾರ್ವಜನಿಕರು ಭಾವುಕರಾಗಿ ಏನು ಮಾಡಲು ಹೋಗಬಾರದು. ಶಾಂತಿ ಭಂಗವಾಗುತ್ತೆ ಎಂಬ ಕಾರಣಕ್ಕೆ ಎಲ್ಲರೂ ಸಂಯಮದಿಂದಿರಬೇಕು ಎಂದು ಮನವಿ ಮಾಡಿದರು.
ಗಡಿ ವಿಚಾರದಲ್ಲಿ ನಮ್ಮ ನಿಲುವನ್ನು ನಾವು ಕೃತಿಯಲ್ಲಿ ತೋರಿಸುತ್ತೇವೆ. ಮಾತಿನಲ್ಲಿ ಅಲ್ಲ, ಕಾನೂನು ಹೋರಾಟ ನಡೆಸಿದ್ದೇವೆ. ಇದರಲ್ಲಿ ನಮ್ಮ ಬದ್ಧತೆಯನ್ನು ತೋರುತ್ತೇವೆ ಎಂದರು.
ಗಡಿ ವಿಚಾರದಲ್ಲಿ ಯಾರೇ ತಂಟೆ ಮಾಡಿದರೂ ಬಿಡಲ್ಲ. ಗಡಿ ಭಾಗದಲ್ಲಿ ಬಂದೋಬಸ್ತ್ ಮಾಡಲಾಗಿದೆ. ಕಾನೂನು ಕೈಗೆತ್ತಿಕೊಂಡರೆ ಸಹಿಸಲ್ಲ ಎಂದರು.
ಯಾರು ಎಲ್ಲಿಗೆ ಬೇಕಾದರೂ ಹೋಗಬಹುದು, ಬರಬಹುದು, ಆದರೆ, ಈಗಿರುವ ಪರಿಸ್ಥಿತಿಯಲ್ಲಿ ಬೆಳಗಾವಿಗೆ ಬರುವುದು ಬೇಡ, ಇಲ್ಲಿಗೆ ಬಂದು ಪ್ರಚೋದನೆ ಮಾಡುವ ಅವಶ್ಯಕತೆ ಇಲ್ಲ ಎಂದು ಮಹಾರಾಷ್ಟ್ರ ಸಚಿವರಿಗೆ ರಾಜ್ಯಸರ್ಕಾರ ಹೇಳಿದೆ. ಈ ಬಗ್ಗೆ ಮುಖ್ಯಮಂತ್ರಿಗಳು ಮಹಾರಾಷ್ಟ್ರ ಮುಖ್ಯಮಂತ್ರಿಯೊಂದಿಗೆ ಮಾತನಾಡಿದ್ದಾರೆ ಎಂದು ಅವರು ಹೇಳಿದರು.




