ಮಹಾರಾಷ್ಟ್ರದಿಂದ ಗಡಿ ವಿವಾದ ಕೆಣಕಿ ರಾಜಕೀಯ ಬೇಳೆ ಬೇಯಿಸಿಕೊಳ್ಳುವ ಕೆಲಸ: ಕಾರಜೋಳ

3 years ago

ಬೆಂಗಳೂರು: ರಾಜಕೀಯ‌ ಕಾರಣಕ್ಕಾಗಿ ಮಹಾರಾಷ್ಟ್ರದವರು ಪದೇಪದೇ ಗಡಿ ವಿವಾದವನ್ನು ಕೆಣಕಿ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ ಎಂದು ಜಲ ಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಆರೋಪಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾವುದೇ ಕಾರಣಕ್ಕೂ ಕರ್ನಾಟಕದ ಒಂದಿಂಚೂ ಜಾಗವನ್ನು ಮಹಾರಾಷ್ಟ್ರಕ್ಕೆ ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದರು.

ಕರ್ನಾಟಕ ಮತ್ತು ಮಹಾರಾಷ್ಟ್ರ ನಡುವೆ ಗಡಿವಿವಾದ ಸಂಬಂಧ ಮಹಾಜನ್ ವರದಿಯೇ ಅಂತಿಮ. ರಾಜ್ಯದಲ್ಲಿ ಮರಾಠಿ ಮಾತನಾಡುವ ಪ್ರದೇಶಗಳು ಸೇರಿದಂತೆ ಒಂದಿಂಚು ಜಾಗವನ್ನು ಬಿಟ್ಟು ಕೊಡುವ ಪ್ರಶ್ನೆಯೇ ಉದ್ಬವಿಸುವುದಿಲ್ಲ ಎಂದರು.

ಗಡಿ ವಿವಾದ ಕುರಿತಂತೆ ಈಗಾಗಲೇ ಮಹಾಜನ್ ಆಯೋಗದ ವರದಿಯೇ ಅಂತಿಮ ಎಂದಿದ್ದರೂ ಮಹಾರಾಷ್ಟ್ರ ಸರ್ಕಾರ ತನ್ನ ಸ್ವಾರ್ಥಕ್ಕಾಗಿ ಗಡಿ ವಿವಾದವನ್ನು ಕೆದಕುತ್ತಿದೆ. ಉಭಯ ರಾಜ್ಯಗಳ ನಡುವೆ ಸಾಕಷ್ಟು ಸಾಮರಸ್ಯವಿದೆ. ಇದನ್ನು ಹಾಳುಗೆಡುವ ಕೆಲಸ ಮಾಡಬೇಡಿ ಎಂದು ಮಹಾರಾಷ್ಟ್ರದ ರಾಜಕಾರಣಿಗಳಿಗೆ ಮನವಿ ಮಾಡಿದರು.

ಮಹಾರಾಷ್ಟ್ರ ಸರ್ಕಾರ ತನ್ನ ಸ್ವಾರ್ಥಕ್ಕಾಗಿ ಗಡಿ ವಿವಾದವನ್ನು ಕೆದಕುತ್ತಿದೆ. ಅವರು ಕನ್ನಡಿಗರನ್ನು ಭಾಷಾ ವಿವಾದ ಮುಂದಿಟ್ಟುಕೊಂಡು ನಮ್ಮ ಭಾವನೆಗಳಿಗೆ ಧಕ್ಕೆ ತರುವ ಕೆಲಸ ಮಾಡುತ್ತಿದ್ದಾರೆ. ಆದರೆ ನಾವು ಇದಕ್ಕೆ ಸೊಪ್ಪು ಹಾಕುವುದಿಲ್ಲ ಎಂದರು.

ಉಭಯ ರಾಜ್ಯಗಳ ನಡುವೆ ಶಾಂತಿ ಸೌಹಾರ್ದತೆ ಕಾಪಾಡುವುದು ಮುಖ್ಯ. ಭಾಷಾ ಸಾಮರಸ್ಯವನ್ನು ಹಾಳುಗೆಡುವವ ಪ್ರಯತ್ನ ಯಾರು ಮಾಡಬಾರದು. ಮಹಾರಾಷ್ಟ್ರ ಸರ್ಕಾರ ಅಲ್ಲಿನ ಸಂಘಟನೆಗಳ ಪುಂಡಾಟಕ್ಕೆ ಕಡಿವಾಣ ಹಾಕಬೇಕೆಂದು ಒತ್ತಾಯಿಸಿದರು.

ಈಗಾಗಲೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ಮಹಾರಾಷ್ಟ್ರದ ಸಿಎಂ ಏಕನಾಥ್ ಸಿಂಧೆ, ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, ಅಲ್ಲಿನ ಮುಖ್ಯ ಕಾರ್ಯದರ್ಶಿ ಮತ್ತಿತರರ ಜೊತೆ ಮಾತುಕತೆ ನಡೆಸಿದ್ದಾರೆ. ಸಕಾರಾತ್ಮಕವಾದ ಮಾತುಕತೆ ನಡೆದಿದೆ ಎಂದರು.

ಗಡಿವಿವಾದ ಕುರಿತು ಸರ್ವಪಕ್ಷ ಸಭೆ ಕರೆಯಬೇಕೆಂದು ವಿಧಾನಸಭೆಯ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯನವರ ಆಗ್ರಹಕ್ಕೆ ಪ್ರತಿಕ್ರಿಯಿಸಿದ ಕಾರಜೋಳ ಸದ್ಯ ಸರ್ವಪಕ್ಷ ಸಭೆ ಕರೆಯುವ ಪರಿಸ್ಥಿತಿ ನಿರ್ಮಾಣವಾಗಿಲ್ಲ. ಆಡಳಿತ ಪಕ್ಷಕ್ಕೆ ಯಾವಾಗ ಸರ್ವಪಕ್ಷ ಸಭೆ ಕರೆಯಬೇಕೆಂಬುದು ಗೊತ್ತಿದೆ. ಸಿದ್ದರಾಮಯ್ಯ ಹೇಳಿದಂತೆ ನಾವು ಆಡಳಿತ ನಡೆಸಲು ಸಾಧ್ಯವಿಲ್ಲ. ರಾಜಕೀಯ ಲಾಭಕ್ಕಾಗಿ ಅಲ್ಲಿನವರು ಗಡಿ ವಿವಾದ ಕೆದಕುತ್ತಾರೆ. ಅದಕ್ಕೆಲ್ಲ ನಾವು ತಲೆಕೆಡಿಸಿಕೊಳ್ಳಬಾರದು ಎಂದರು.

ಇದಕ್ಕೂ ಮುನ್ನ ಬೆಳಗಾವಿ ಜಿಲ್ಲೆಯ ಉಸ್ತುವಾರಿಯಾಗಿರುವ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಅವರನ್ನು ಭೇಟಿ ಮಾಡಿದರು. ವಿವಾದದ ಹಿನ್ನೆಲೆಯಲ್ಲಿ, ಬೆಳಗಾವಿಯಲ್ಲಿ ಉಂಟಾಗಿರುವ ಪ್ರಕ್ಷುಬ್ದತೆ, ಕಿಡಿಗೇಡಿಗಳಿಂದ ಬಸ್ ತಡೆ, ಜಿಲ್ಲಾಡಳಿತ ತೆಗೆದುಕೊಂಡಿರುವ ಕ್ರಮಗಳು, ಕಾನೂನು ಮತ್ತು ಸುವ್ಯವಸ್ಥೆ ಕುರಿತಂತೆ ಮಾಹಿತಿ ನೀಡಿದರು.

Leave a Reply