ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಭ್ರಷ್ಟತೆ ವಿರುದ್ಧ ಮೊಳಗಿದ ಕಲಾವಿದರ ಕ್ರಾಂತಿ ಕಹಳೆ

3 years ago

ಬೆಂಗಳೂರು: ಧನ ಸಹಾಯ ಪಡೆಯುತ್ತಿರುವ ಸಂಘ ಸಂಸ್ಥೆಗಳ ಕುತ್ತಿಗೆ ಹಿಸುಕುವ ರೀತಿಯಲ್ಲಿ ರೂಪಿತವಾಗಿರುವ ಮಾರ್ಗಸೂಚಿ ರದ್ದುಪಡಿಸಿ, ಸರಳ ಮಾರ್ಗಸೂಚಿ ರೂಪಿಸಿ ಕೂಡಲೇ ಧನ ಸಹಾಯ ಬಿಡುಗಡೆ ಮಾಡಬೇಕು ಎಂದು ಕರ್ನಾಟಕ ರಾಜ್ಯ ಸಾಹಿತಿ, ಕಲಾವಿದರ, ಸಾಂಸ್ಕೃತಿಕ ಚಿಂತಕರ ಸಂಘ ಸಂಸ್ಥೆಗಳ ಒಕ್ಕೂಟದ ಎಲ್ಲಾ ಪ್ರಕಾರದ ಕಲಾವಿದರು ಸಾಹಿತಿಗಳು ಚಿಂತಕರು ಇಂದು ಒತ್ತಾಯಿಸಿದರು.

ಬೆಂಗಳೂರಿನಲ್ಲಿ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಕಲಾವಿದರ ಪ್ರತಿನಿಧಿಗಳು, ಕಲೆ, ಸಾಹಿತ್ಯ, ಸಂಸ್ಕೃತಿಗಳ ಭವ್ಯ ಪರಂಪರೆ ಹೊಂದಿರುವ ಕರ್ನಾಟಕ (ಸಾಂಸ್ಕೃತಿಕ ಜಗತ್ತಿನಲ್ಲಿ) ಗೌರವ ಸ್ಥಾನ ಪಡೆದುಕೊಂಡಿದೆ. ಇಂತಹ ಕಲಾ ಸಿರಿವಂತಿಕೆ ಉಳಿಸಿ, ಬೆಳೆಸಲು ಅನುವಾಗುವಂತೆ ರಾಜ್ಯದ ಮಾಜಿ ಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯನವರು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯನ್ನು ಸ್ಥಾಪಿಸಿದರು. ಅವರ ದೂರದೃಷ್ಟಿಯ ಫಲವಾಗಿ ಇಂದು ಕಲೆ, ಕಲಾವಿದರಿಗೆ ಮಾನ್ಯತೆ ದೊರೆತಿದೆ. ಆದರೆ ಗುರಿ ಸಾಧನೆಯಲ್ಲಿ ಇಲಾಖೆಯ ಅಧಿಕಾರಿಗಳ ನಿರ್ಲಕ್ಷತನದಿಂದ ವೈಫಲ್ಯ ಎದ್ದು ಕಾಣುತ್ತಿದೆ ಎಂದು ಆರೋಪಿಸಿದರು.

ಭ್ರಷ್ಟ ಅಧಿಕಾರಿಗಳು ಕಲೆಯ ಬೆಳವಣಿಗೆಯ ಹೆಸರಿನಲ್ಲಿ ದಂಧೆಕೋರರು, ಮಧ್ಯವರ್ತಿಗಳ ಜೊತೆಗೂಡಿ ಸರ್ಕಾರ ಕಲೆ, ಸಾಹಿತ್ಯ, ಸಂಸ್ಕೃತಿ ಕನ್ನಡದ ಅಭಿವೃದ್ಧಿಗಾಗಿ ಬಿಡುಗಡೆಗೊಳಿಸಿರುವ ಅನುದಾನವನ್ನು ಲೂಟಿ ಹೊಡೆಯುತ್ತಿದ್ದಾರೆ. ಕಲೆ, ಸಾಹಿತ್ಯ, ಸಂಸ್ಕೃತಿ ಅರಿವಿಲ್ಲದವರು ಇಂದು ಇಲಾಖೆಯ ಮುಖ್ಯಸ್ಥರಾಗಿ ಕಲೆ, ಸಾಹಿತ್ಯ, ಸಂಸ್ಕೃತಿ ಹಾಗೂ ಕನ್ನಡ ಅಭಿವೃದ್ಧಿಯನ್ನು ಹೀನಾಯ ಸ್ಥಿತಿಗೆ ತಂದು ನಿಲ್ಲಿಸಿದ್ದಾರೆ. ಇದೆ ಅಧಿಕಾರಿಗಳು ಹೀಗೆಯೇ ಮುಂದುವರೆದರೆ ಸಂಸ್ಕೃತಿ ಇಲಾಖೆಯ ಬಾಗಿಲನ್ನು ಮುಚ್ಚಬೇಕಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.

ಈ ಹಿಂದೆ ಇಲಾಖೆಯ ಮುಖ್ಯಸ್ಥರಾಗಿ ಆಡಳಿತವನ್ನು ನಡೆಸುತ್ತಿದ್ದಂತಹ ಎಲ್ಲಾ ಅಧಿಕಾರಿಗಳು ಪ್ರಾಮಾಣಿಕತೆ, ದಕ್ಷತೆಗೆ ಹೆಸರಾದವರು ಕನ್ನಡದ ಅಭಿವೃದ್ಧಿಗೆ ಕಲೆ, ಸಾಹಿತ್ಯ, ಸಂಸ್ಕೃತಿ ಬೆಳವಣಿಗೆಗೆ ಹಗಲು ರಾತ್ರಿ ಕ್ರಿಯಾಶೀಲರಾಗಿ ದುಡಿದು ಇಲಾಖೆಗೆ ಕೀರ್ತಿಯನ್ನು ತಂದುಕೊಟ್ಟ ಇಲಾಖೆಯ ಬೆಳವಣಿಗೆಗೆ ಬುನಾದಿ ಹಾಕಿಕೊಟ್ಟಿದ್ದಾರೆ ಎಂದು ಸ್ಮರಿಸಿದರು.

ಈ ಹಿಂದೆ ಸಾಹಿತಿಗಳು, ಕಲಾವಿದರು ಅಷ್ಟೇ ಏಕೆ ಶ್ರೀಸಾಮಾನ್ಯರೂ ಇಲಾಖೆಗೆ ಭೇಟಿಕೊಟ್ಟರೆ ಅವರಿಗೆ ಸಲ್ಲುತ್ತಿದ್ದ ಗೌರವ ಅಪಾರ, ಅದರಲ್ಲಿ ಬಡಸಾಹಿತಿ, ಕಲಾವಿದರನ್ನು ಕಂಡರೆ ಎಲ್ಲಿಲ್ಲದ ಅಭಿಮಾನ, ಎಲ್ಲಾ ವರ್ಗದವರಿಗೆ ಎಲ್ಲಾ ಪ್ರಕಾರದ ಕಲಾವಿದರಿಗೂ ಸಿಗಬೇಕಾದ ಸವಲತ್ತುಗಳು ಸಕಾಲದಲ್ಲಿ ತಲುಪಿಸುತ್ತಿದ್ದರು. ಇಲಾಖೆಯ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಿದ ಅನೇಕ ನಿರ್ದೇಶಕರು, ಇದ್ದ ಅವಧಿಯಲ್ಲಿ ಕಲೆ, ಸಾಹಿತ್ಯ, ಸಂಸ್ಕೃತಿ ಕನ್ನಡದ ಅಭಿವೃದ್ಧಿಗೆ ಪ್ರೋತ್ಸಾಹ ನೀಡಿ ಇಲಾಖೆಯನ್ನು ಉನ್ನತ ಸ್ಥಿತಿಯಲ್ಲಿಟ್ಟಿದ್ದರು. ಭ್ರಷ್ಟತೆ, ದುರಾಡಳಿತ ಎಂಬುದೇ ಇರಲಿಲ್ಲ. ಅಧಿಕಾರಿಗಳ ಪ್ರಾಮಾಣಿಕತೆ ಮತ್ತು ದಕ್ಷತೆ ಎದ್ದು ಕಾಣುತಿತ್ತು ಎಂದರು.

ಆದರೆ ಇಂದು ಇಲಾಖೆಯಲ್ಲಿ ಅವೆಲ್ಲವೂ ಮಾಯವಾಗಿ ಭ್ರಷ್ಟತನ, ದುರಾಡಳಿತ, ಅಧಿಕಾರಿಗಳ ಗುಂಪುಗಾರಿಕ ಎದ್ದು ಕಾಣುತ್ತಿದೆ. ಇಲಾಖೆಯ ಎಲ್ಲಾ ಯೋಜನೆಗಳು ಕುಂಠಿತಗೊಂಡಿವೆ. ಸಾಹಿತಿ, ಕಲಾವಿದರಿಗೆ ಸಿಗಬೇಕಾದ ಸವಲತ್ತುಗಳು ಸಕಾಲಕ್ಕೆ ಸಿಗುತ್ತಿಲ್ಲ. ಸರ್ಕಾರ ಒದಗಿಸಿದ ಅನುದಾನ ಪೂರ್ಣ ಪ್ರಮಾಣದಲ್ಲಿ ಅರ್ಥಪೂರ್ಣವಾಗಿ ವೆಚ್ಚವಾಗುತ್ತಿಲ್ಲ. ಬಜೆಟ್‌ನಲ್ಲಿ ಸಂಸ್ಕೃತಿ ಇಲಾಖೆಗೆ ಘೋಷಣೆಯಾದ ಹಣ ಹೆಚ್ಚು ದುರುಪಯೋಗವಾಗುತ್ತಿದೆ. ಭ್ರಷ್ಟರ ಪಾಲಾಗುತ್ತಿದೆ. ನಿಜವಾದ ಕಲೆ, ಸಾಹಿತ್ಯ, ಸಂಸ್ಕೃತಿಯ ಅರಿವಿರುವವರಿಗೆ, ಕಲೆ, ಸಾಹಿತ್ಯ ಅಭಿವೃದ್ಧಿಗಾಗಿ ದುಡಿಯುತ್ತಿರುವವರಿಗೆ ಇಲಾಖೆಯ ಸವಲತ್ತುಗಳು ಸಿಗುತ್ತಿಲ್ಲ. ಆದುದರಿಂದ ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಹಾಗೂ ಇಲಾಖೆಗೆ ದಕ್ಷ, ಪ್ರಾಮಾಣಿಕ ಅಧಿಕಾರಿಗಳನ್ನು ನೇಮಿಸಿ, ಕಾರ್ಯದರ್ಶಿಯವರನ್ನು ಕೂಡಲೇ ಬದಲಾಯಿಸಬೇಕು ಎಂದು ಆಗ್ರಹಿಸಿದರು.

ಹಕ್ಕೊತ್ತಾಯಗಳು:

1. ಸಂಘ ಸಂಸ್ಥೆಗಳಿಗೆ ಧನ ಸಹಾಯ ನೀಡುವಲ್ಲಿ ಏಕರೂಪದ ಮಾರ್ಗಸೂಚಿ ಪಾಲಿಸಬೇಕು, ಕ್ರಮ ಸಂಖ್ಯೆ 9 ರಂತೆ ಸರ್ಕಾರ ಸೂಚಿಸುವ ಕಾರ್ಯಕ್ರಮಗಳಿಗೆ ಧನ ಸಹಾಯ ನೀಡಬೇಕು.

2. ಈ ಆರ್ಥಿಕ ವರ್ಷದಿಂದ ಸಂಘ ಸಂಸ್ಥೆಗಳಿಗೆ ಧನ ಸಹಾಯ ಕನಿಷ್ಠ5 ಲಕ್ಷ ದಿಂದ ಗರಿಷ್ಠ 15 ಲಕ್ಷಗಳಿಗೆ ನಿಗದಿಗೊಳಿಸಿ, ತಕ್ಷಣ ಬಿಡುಗಡೆ ಮಾಡಬೇಕು.

3. ಆರ್.ಟಿ.ಜಿ.ಎಸ್. ಪದ್ಧತಿ ರದ್ದುಗೊಳಿಸಬೇಕು.

4. ಅವೈಜ್ಞಾನಿಕವಾಗಿರುವ ಕಲಾ ತಂಡ App ದೋಷಪೂರಿತವಾಗಿದೆ ತತ್‌ಕ್ಷಣ ರದ್ದುಗೊಳಿಸಬೇಕು.

5. ಮಾರ್ಗಸೂಚಿಗಳನ್ನು ಗ್ರಾಮೀಣ ಕಲಾವಿದರು, ಕಲಾ ಸಂಸ್ಥೆಗಳಿಗೆ ಅನುಕೂಲವಾಗುವಂತೆ ಸರಳೀಕರಣಗೊಳಿಸಬೇಕು.
6. ವಿವಿದ್ದೋದೇಶ ಅಂಶಗಳನ್ನು ಹೊಂದಿರುವ ಕ್ರಿಯಾಶೀಲ, ಸಾಂಸ್ಕೃತಿಕ ಸಂಘ ಸಂಸ್ಥೆಗಳಿಗೆ ವಿನಾಕಾರಣ ಕಿರುಕುಳ ನೀಡುವುದನ್ನು ತಪ್ಪಿಸಿ, ಅವರನ್ನು ಕೂಡ ಪರಿಗಣಿಸಿ ಧನಸಹಾಯ ಯೋಜನೆಯ ಮಿತಿಗೆ ತರಬೇಕು. (ಈ ಆರ್ಥಿಕ ವರ್ಷದಲ್ಲಿ ಈ ಸಂಸ್ಥೆಗಳನ್ನು ಪರಿಗಣಿಸಬೇಕು)

7. ಅವೈಜ್ಞಾನಿಕ ಮತ್ತು ದೋಷಪೂರಿತ ನಿರ್ಧಾರಗಳನ್ನು ಕೂಡಲೇ ರದ್ದುಗೊಳಿಸಿ, ಜೇಷ್ಟತೆ ಆಧಾರದ ಮೇಲೆ ವಲಯವಾರು, ಪ್ರಾದೇಶಿಕವಾರು ಧನ ಸಹಾಯಕ್ಕೆ ಪರಿಗಣಿಸಬೇಕು.

8. ಅಸಂಘಟಿತ ಕಲಾವಿದರಿಗೆ ವೇಷಭೂಷಣ, ರಂಗ ಪರಿಕರಗಳು, ವಾದ್ಯ ಪರಿಕಗಳ ಧನ ಸಹಾಯವನ್ನು ರೂ. 1 ಲಕ್ಷದಿಂದ 2 ಲಕ್ಷಕ್ಕೆ ಏರಿಸಿ ಜೇಷ್ಟತೆ ಆಧಾರದ ಮೇಲೆ ನೀಡಬೇಕು.

9. ಎಲ್ಲಾ ಉತ್ಸವಗಳನ್ನು ಹಾಗೂ ಜಿಲ್ಲಾ ಉತ್ಸವಗಳನ್ನು ಜಿಲ್ಲಾಧಿಕಾರಿಗಳ ಮೂಲಕ ಮಾಡುವುದನ್ನು ರದ್ದುಗೊಳಿಸಿ, ಸಂಸ್ಕೃತಿ ಇಲಾಖೆಯೇ ನೇರವಾಗಿ ಕಾರ್ಯಕ್ರಮಗಳನ್ನು ಆಯೋಜಿಸಬೇಕು.

10. ಉತ್ಸವಗಳಲ್ಲಿ ಕರ್ನಾಟಕದ ಕಲಾವಿದರಿಗೆ ಹೆಚ್ಚಿನ ಪ್ರಾಶಸ್ತ್ರ ನೀಡಬೇಕು.

11. ಕಷ್ಟ ಪರಿಸ್ಥಿತಿಯಲ್ಲಿರುವ ಎಲ್ಲಾ ಪ್ರಾಕಾರದ ಕಲಾವಿದರ, ಸಾಹಿತಿಗಳ ವೈದ್ಯಕೀಯ ಸಂಪೂರ್ಣ ವೆಚ್ಚವನ್ನು ಏಕಗವಾಕ್ಷಿ ವ್ಯವಸ್ಥೆಯಲ್ಲಿ ತಕ್ಷಣವೇ ಭರಿಸುವಂತೆ ಕ್ರಮ ಕೈಗೊಳ್ಳಬೇಕು.

12. ಜಾನಪದ ಜಾತ್ರೆಯನ್ನು ಮಧ್ಯವರ್ತಿಗಳ ಹಾವಳಿ ಇಲ್ಲದೆ ಮತ್ತೆ ಪ್ರಾರಂಭಿಸುವುದು.

13. ಸ್ಥಗಿತಗೊಂಡಿರುವ ಹಲವು ಹೆಸರಾಂತ ಯೋಜನೆಗಳಾದ ಸುಗ್ಗಿ-ಹುಗ್ಗಿ, ಯುವಸೌರಭ, ಉದಯರಾಗ, ಸಂಧ್ಯಾರಾಗ, ಮಹಿಳಾ ಉತ್ಸವ ಇನ್ನು ಮುಂತಾದ ಹಲವು ಯೋಜನೆಗಳು ಮರು ಪ್ರಾರಂಭಿಸುವುದು. ಹಾಡಿರೇ ರಾಗಗಳ ತೂಗಿರೇ ದೀಪಗಳ ಕಾರ್ಯಕ್ರಮವನ್ನು ಪುನಃ ಪ್ರಾರಂಭಿಸಬೇಕು.

14. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿಯಮಾನುಸಾರ ನೋಂದಾಯಿಸಲ್ಪಟ್ಟ ಸಂಘ ಸಂಸ್ಥೆಗಳಿಗೆ, ಏಕರೂಪ ಮಾನದಂಡವನ್ನು ಅನುಸರಿಸಿ, ತಾರತಮ್ಯ ಮಾಡದೇ, ಅನುದಾನವನ್ನು ಸಕಾಲಕ್ಕೆ ಬಿಡುಗಡೆ ಮಾಡುವುದು. ಅನುದಾನ ಧನ ಸಹಾಯ ನೀಡುವಾಗ ಆ ಸಂಘ ಸ೦ಸ್ಥೆಗಳ ಜೇಷ್ಠತೆ, ಕಾರ್ಯಕ್ಷಮತೆ, ದಕ್ಷತೆ ನಿರಂತರ ಮತ್ತು ಗುಣಾತ್ಮಕ ಕಾರ್ಯಚಟುವಟಿಕೆಗಳನ್ನು ಆಧರಿಸಿ, ಸಂಘ ಸಂಸ್ಥೆ ಸಲ್ಲಿಸುವ ಕ್ರಿಯಾಯೋಜನೆಗನುಗುಣವಾಗಿ ಸಮರ್ಪಕ ಅನುದಾನವನ್ನು ನಿಗದಿ ಮಾಡಬೇಕು.

15. ಕರ್ನಾಟಕ ಸರ್ಕಾರ ನೀಡುವ 12 ರಿಂದ 14 ಪ್ರಶಸ್ತಿಗಳನ್ನು ಆಯಾಯ ವರ್ಷದಲ್ಲೇ ಘೋಷಣೆ ಮಾಡಿ ಅರ್ಹ ಕಲಾವಿದರಿಗೆ ಪ್ರಶಸ್ತಿಗಳನ್ನು ನೀಡುವುದು.

16. ಕಲಾವಿದರ ಜೊತೆ ಅನುಚಿತವಾಗಿ ವರ್ತಿಸುವ ಕೆಲವು ಅಧಿಕಾರಿಗಳನ್ನು ಕೇಂದ್ರ ಕಛೇರಿಯಿಂದ ಕೂಡಲೇ ವರ್ಗಾಯಿಸಬೇಕು. ಮತ್ತು ಹಲವಾರು ವರ್ಷಗಳಿಂದ ಇಲ್ಲೇ ಬಿಡುಬಿಟ್ಟಿರುವ ಅಧಿಕಾರಿಗಳನ್ನು ವರ್ಗಾಯಿಸಬೇಕು.

17. ವಿಶೇಷ ಘಟಕ ಯೋಜನೆ ಅನುದಾನವನ್ನು ಸಮರ್ಪಕವಾಗಿ ವೆಚ್ಚ ಮಾಡದೆ 2 ವರ್ಷಗಳಿಂದ ಸರ್ಕಾರಕ್ಕೆ ಅನುದಾನವನ್ನು ಹಿಂತಿರುಗಿಸಿರುವ ವಿಷಯ ನಿರ್ವಾಹಕರನ್ನು ಅಮಾನತ್ತುಗೊಳಿಸಿ ತನಿಖೆಗೊಳಪಡಿಸಬೇಕು. ಈ ಹಣವನ್ನು ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಹೆಚ್ಚು ಹೆಚ್ಚು ವಿನಿಯೋಗ ಮಾಡಬೇಕು. ಮತ್ತು ಪ್ರಕಟಣೆಗಳಿಗೆ ವ್ಯಯ ಮಾಡುವುದನ್ನು ತಕ್ಷಣ ಸ್ಥಗಿತಗೊಳಿಸಬೇಕು.

18. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಆರಂಭವಾಗಿದ್ದು, ಕನ್ನಡ ನಾಡಿನ ಕಲೆ, ಸಾಹಿತ್ಯ, ಸಂಗೀತ, ಸಂಸ್ಕೃತಿ ಮತ್ತು ನಾಡು ನುಡಿ ಸಂರಕ್ಷಣೆ ಮತ್ತು ಅಭಿವೃದ್ಧಿಯ ಧ್ಯೇಯೋದ್ದೇಶದಿಂದ ಇತ್ತೀಚೆಗೆ ಪ್ರಭಾವಿ ಶೈಕ್ಷಣಿಕ ಸಂಘ ಸಂಸ್ಥೆಗಳು ಮತ್ತು ಮಠಗಳಿಗೆ ಇಲಾಖೆ ವತಿಯಿಂದ ಕೋಟಿಗಟ್ಟಲೆ ಅನುದಾನ ನೀಡುವ ಮೂಲಕ ಧೇಯೋದ್ದೇಶವನ್ನು ಗಾಳಿಗೆ ತೂರಿದ್ದೀರಿ. ಈ ಕೂಡಲೇ ಶಿಕ್ಷಣ ಸಂಸ್ಥೆ ಮತ್ತು ಮಠಗಳಿಗೆ ಅನುದಾನ ನೀಡುವುದನ್ನು ನಿಲ್ಲಿಸಬೇಕು.

19. ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಕನ್ನಡ ನಾಡು, ನುಡಿ, ಕಲೆ ಮತ್ತು ಸಂಸ್ಕೃತಿಯ ಅಭಿವೃದ್ಧಿಯ ಬಗ್ಗೆ ಅರಿವು ಮತ್ತು ಕಾಳಜಿಯಿರುವ ಕಾರ್ಯದರ್ಶಿಗಳನ್ನು ನೇಮಿಸಬೇಕು.

20. ಮಹಿಳಾ ಕಲಾತಂಡ/ಕಲಾವಿದರಿಗೆ ಕಾಲಕಾಲಕ್ಕೆ ಸರ್ಕಾರದ ನಿಯಮಾನುಸಾರ 33% ಕಾರ್ಯಕ್ರಮ ಮತ್ತು ಅನುದಾನ ನೀಡುವುದು.

21. ಇಲಾಖೆಯ ಅಧಿಕಾರಿಗಳು/ಸಿಬ್ಬಂದಿ ವರ್ಗದವರು ಸರ್ಕಾರಿ ನೌಕರರು’ ಬೇನಾಮಿ ಹೆಸರಿನಲ್ಲಿ ನಡೆಸುತ್ತಿರುವ ಸಂಘ ಸಂಸ್ಥೆಗಳಿಗೆ ಅನುದಾನ ಪಡೆಯುತ್ತಿರುವ ಸಂಘ ಸಂಸ್ಥೆಗಳನ್ನು ಗುರ್ತಿಸಿ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು.

22.ಇಲಾಖೆಯ ಸಚಿವರಾದವರು ತಮ್ಮ ಮತಕ್ಷೇತ್ರದಲ್ಲಿ ಚಿತ್ರವಿಚಿತ್ರವಾದ ಕಾರ್ಯಕ್ರಮ ಹೆಸರಿನಲ್ಲಿ ಇಲಾಖೆಯ ಬಹುತೇಕ ಧನಸಹಾಯ ಹಣವನ್ನು ಬಳಕೆ ಮಾಡುವುದನ್ನು ನಿಲ್ಲಿಸಿ, ರಾಜ್ಯವಾರು ಕಾರ್ಯಕ್ರಮಗಳನ್ನು ರೂಪಿಸುವಲ್ಲಿ ಸಚಿವರಾದವರು ಪ್ರಯತ್ನಿಸಬೇಕು.

23. ಬೇರೆ ಇಲಾಖೆಯಿಂದ ಪ್ರತಿ ನಿಯೋಜನೆಯಡಿಯಲ್ಲಿ ಬಂದಿರುವ ಅಧಿಕಾರಿ/ನೌಕರರನ್ನು ತತ್‌ಕ್ಷಣವೇ ಮಾತೃ ಇಲಾಖೆಗೆ ವಾಪಸ್ಸು ಕಳುಹಿಸಬೇಕು.

24. ನೇರ ನೇಮಕಾತಿಯಡಿ ಖಾಲಿ ಇರುವ ಹುದ್ದೆಗಳನ್ನು ತುರ್ತಾಗಿ ತುಂಬಬೇಕು.

ಮೇಲ್ಕಂಡ ಹಕ್ಕೊತ್ತಾಯಗಳನ್ನು ಕೂಡಲೇ ಪುರಸ್ಕರಿಸಬೇಕೆಂದು ಸಿಎಂ ಬಸವರಾಜ ಬೊಮ್ಮಾಯಿಯವರನ್ನು ಒತ್ತಾಯಿಸಿದ್ದಾರೆ. ತಕ್ಷಣವೇ ನಮ್ಮ ಈ ಎಲ್ಲಾ ಬೇಡಿಕೆಗಳನ್ನು ಈಡೇರಿಸುತ್ತೀರೆಂದು ಆಶಿಸುತ್ತೇವೆ. ಕೂಡಲೇ ಕ್ರಮಕೈಗೊಳ್ಳದಿದ್ದರೆ ನಾಡಿನ ಸಂಘ ಸಂಸ್ಥೆಗಳು, ಕನ್ನಡಪರ ಹೋರಾಟಗಳು, ಸಾಹಿತಿಗಳು, ಪತ್ರಕರ್ತರು, ಸಂಸ್ಕೃತಿ ಚಿಂತಕರು ದಿ: 12.12.2022ರಂದು ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಕಲಾವಿದರಾದ ವೈಕೆಮುದ್ದುಕೃಷ್ಣ, ಕೆ.ಹೆಚ್.ಕುಮಾರ್, ಪದ ದೇವರಾಜ್, ಬೈರಮಂಗಲ ರಾಮೇಗೌಡ, ಸವಿತಾ ಗಣೇಶ್ ಪ್ರಸಾದ್, ಪ್ರತಿಭಾ ನಾರಾಯಣ್, ಡಾ.ಗೋವಿಂದ ನಾಯಕ್, ಕುವೆಂಪು ಪ್ರಕಾಶ್, ವಿಶ್ವನಾಥ್ ನಾಕೊಡ್, ಉದಯಭಾನು ನರಸಿಂಹ, ನಾಗರಾಜರಾವ್ ಹವಾಲ್ದಾರ್, ಜಯಸಿಂಹ, ಶಿವಕುಮಾರ್ ಬೇಗಾರ್, ಸಾಯಿ ವೆಂಕಟೇಶ್, ಗಣೇಶ್ ಪ್ರಸಾದ್, ಶಾಂತವಾಣಿ ಸುಧಾಕರ, ಕಿಕ್ಕೇರಿ ಕೃಷ್ಣಮೂರ್ತಿ, ಶಾಂತಕುಮಾರ್, ಡಿ.ಶ್ರೀನಾಥ್, ಇಂದ್ರಜಾ, ಜಯಲಕ್ಷ್ಮಿ, ಸುಮಾ ಸುಧೀಂದ್ರ, ಮಾಲತಿ ಸುಧೀರ್, ಪುಟ್ಟರಾಜ್, ಪರಮೇಶ್, ಬಂಟಹಳ್ಳಿ ವಿಜಯಕುಮಾರ್, ಪ್ರತಿಭಾ ನಾರಾಯಣ್ ಬಸವರಾಜಪುರ ಮುಂತಾದ ಸಂಘ-ಸಂಸ್ಥೆಗಳ ಮುಖ್ಯಸ್ಥರು ಸಂಘಗಳ ಅಧ್ಯಕ್ಷರು ಒಕ್ಕೂಟಗಳ ಸಂಚಾಲಕರು ಭಾಗವಹಿಸಿದ್ದರು.

Leave a Reply