ಕರ್ನಾಟಕ – ಮಹಾರಾಷ್ಟ್ರ ರಾಜ್ಯ ರಸ್ತೆ ಸಾರಿಗೆ ಸಂಚಾರ ಬಂದ್

3 years ago

ಬೆಳಗಾವಿ: ಗಡಿ ವಿವಾದ ಭುಗಿಲೆದ್ದಿದ್ದು ಬೆಳಗಾವಿ ಹಾಗೂ ಮಹಾರಾಷ್ಟ್ರದ ಕೆಲವು ಭಾಗಗಳಲ್ಲಿ ಪ್ರತಿಭಟನೆಗಳು ಮುಂದುವರೆದಿರುವುದರಿಂದ ಎರಡು ರಾಜ್ಯಗಳ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ.

ಗಡಿಭಾಗಗಳ ಗ್ರಾಮಗಳು ಪಟ್ಟಣ ನಗರಗಳಿಗೆ ಹೋಗುವ ಬರುವ ಎರಡು ರಾಜ್ಯಗಳ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಗಳ ಸಂಚಾರವನ್ನು ಸ್ಥಗಿತಗೊಳಿಸಲಾಗಿದ್ದು ಎರಡು ರಾಜ್ಯಗಳಿಗೆ ಸೇರಿದ ಲಾರಿ ಇನ್ನಿತರ ಖಾಸಗಿ ವಾಹನಗಳ ಸಂಚಾರ ಕೂಡ‌ ವಿರಳವಾಗಿದೆ.

ಕೆಎಸ್‌ಆರ್‌ಟಿಸಿ ಬಸ್ ಸೇವೆಯನ್ನು ಇಂದು ಬೆಳಗ್ಗೆಯಿಂದ ನಿಲ್ಲಿಸಲಾಗಿದ್ದರೆ ಮಧ್ಯಾಹ್ನ ವೇಳೆಗೆ ಮಹಾರಾಷ್ಟ್ರ ಸಾರಿಗೆ ಸಂಸ್ಥೆಯೂ ಕೂಡ ಕರ್ನಾಟಕಕ್ಕೆ ಹೋಗುವ ಬಸ್‍ಗಳ ಸೇವೆಯನ್ನು ಸ್ಥಗಿತಗೊಳಿಸಿದೆ.

ಇದರ ನಡುವೆ ಎಂಇಎಸ್ ಪುಂಡರು ಬೆಳಗಾವಿಯ ಬಸ್ ಡಿಪೋಗಳಲ್ಲಿ ರಾತ್ರಿ ಕೆಎಸ್‌ಆರ್‌ಟಿಸಿ ಬಸ್‍ಗಳಿಗೆ ಮಸಿ ಬಳಿದು ದರ್ಪ ತೋರಿಸಿದ್ದಾರೆ. ಇದನ್ನು ಖಂಡಿಸಿ ಕನ್ನಡ ಪರ ಸಂಘಟನೆಗಳು ಮತ್ತೆ ಬೀದಿಗಿಳಿದು ಪ್ರತಿಭಟನೆ ನಡೆಸಿವೆ.

ಮಹಾರಾಷ್ಟ್ರ ಭಾಗದಿಂದ ಬರುವ ವಾಹನಗಳನ್ನು ತಡೆದು ಧಿಕ್ಕಾರ, ಘೋಷಣೆ ಕೂಗಲಾಗುತ್ತಿದೆ. ಯಾವುದೇ ಕಾರಣಕ್ಕೂ ಶಿವಸೇನೆ ಹಾಗೂ ಎಂಇಎಸ್‍ನ ಪುಂಡಾಟಿಕೆ ಮುಂದುವರೆಸಿದರೆ ಕನ್ನಡಿಗರು ಸುಮ್ಮನಿರುವುದಿಲ್ಲ ಎಂಬ ಎಚ್ಚರಿಕೆಯನ್ನು ನೀಡಿದ್ದಾರೆ.

ಎರಡೂ ರಾಜ್ಯದ ಪೊಲೀಸರು ಗಡಿ ಭಾಗದಲ್ಲಿ ನಿಂತು ಪರಿಸ್ಥಿತಿಯನ್ನು ಹತೋಟಿಗೆ ತರಲು ಹರಸಾಹಸ ಪಟ್ಟಿದ್ದಾರೆ. ಆದರೆ ಎರಡೂ ಕಡೆಗಳಲ್ಲೂ ಪ್ರತಿಭಟನೆ ಜೋರಾಗಿದ್ದು ಬಿಗಿ ಪೊಲೀಸ್ ಭದ್ರತೆಯನ್ನು ಕೈಗೊಳ್ಳಲಾಗಿದೆ.

Leave a Reply