ಲಿಫ್ಟ್ ಸೌಕರ್ಯಗಳಿಲ್ಲದ ಸರ್ಕಾರಿ ಕಛೇರಿಗಳು

2 years ago

ಬೆಂಗಳೂರು ನಗರವೂ ಸೇರಿದಂತೆ ಅನೇಕ ಭಾಗಗಳಲ್ಲಿ ಇರುವಂತಹ ಸರ್ಕಾರಿ ಕಛೇರಿಗಳು ಒಂದರಿಂದ ಹಿಡಿದು ಹಲವಾರು ಮಹಡಿಗಳ ಕಟ್ಟಡಗಳಲ್ಲಿ ಕಾರ್ಯನಿರ್ವಹಿಸುತ್ತಿವೆ. ಕೆಲವು ಕಟ್ಟಡಗಳಲ್ಲಿ ಸಾರ್ವಜನಿಕರ ಅನುಕೂಲಕ್ಕಾಗಿ ಲಿಫ್ಟ್ ಸೌಲಭ್ಯವಿದೆ. ಆದರೆ ಬಹಳಷ್ಟು ಕಟ್ಟಡಗಳಲ್ಲಿ ಇನ್ನೂ ಸಹ ಈ ರೀತಿಯ ಸೌಕರ್ಯವನ್ನು ಒದಗಿಸಿಕೊಟ್ಟಿಲ್ಲ.

ಇದಕ್ಕೆ ಉದಾಹರಣೆಯಾಗಿ ಬೆಂಗಳೂರಿನ ಕೆ.ಆರ್. ವೃತ್ತದಲ್ಲಿರುವ ಬೆಸ್ಕಾಂ ಕಛೇರಿಯ ಒಂದು ಕಟ್ಟಡದಲ್ಲಿ ಲಿಫ್ಟ್ ಸೌಲಭ್ಯಯವಿಲ್ಲ. ಸಾರ್ವಜನಿಕರು ತಮ್ಮ ಅರ್ಜಿಗಳನ್ನು ಸಲ್ಲಿಸುವ ಟಪಾಲು ಸಲ್ಲಿಸಲು ಕಛೇರಿ ಎರಡನೇ ಮಹಡಿಗೆ ಹತ್ತಿಕೊಂಡು ಹೋಗಬೇಕಿದೆ. ಇಲ್ಲಿ ತಮ್ಮ ದೂರುಗಳನ್ನು ಸಲ್ಲಿಸಲು ಕಛೇರಿಗೆ ಹೋಗುವ ನಾಗರಿಕರು ಎರಡು ಮಹಡಿ ಕಟ್ಟಡವನ್ನು ಹತ್ತಬೇಕು.

ಬಹಳಷ್ಟು ಜನರಲ್ಲಿ ಕಾಲಿನ ಸಮಸ್ಯೆ ಇದೆ ಮತ್ತು ಹೃದಯದ ಸಮಸ್ಯೆಯೂ ಇದೆ. ಇವರುಗಳು ಈ ಕಟ್ಟಡದಲ್ಲಿರುವ ಕಿರಿದಾದ ಮೆಟ್ಟಿಲುಗಳನ್ನು ಹತ್ತುವ ವೇಳೆಯಲ್ಲಿ ಜಾರಿಬಿದ್ದಿರುವ ಉದಾಹರಣೆಗಳು ಇವೆ. ಇದು ಒಂದು ಕಟ್ಟಡದ ಕಥೆಯಲ್ಲ, ಇಂತಹ ಹಲವಾರು ಕಛೇರಿಗಳು ನಗರದಲ್ಲಿವೆ.

ಸರ್ಕಾರ ಸಾರ್ವಜನಿಕರ ದೂರುಗಳನ್ನು ಸ್ವೀಕರಿಸುವ ಅಥವಾ ಟಪಾಲು ವಿಭಾಗವನ್ನು ನೆಲಮಹಡಿಯಲ್ಲಿ ಕಾರ್ಯನಿರ್ವಹಿಸುವಂತೆ ಮಾಡಿದರೆ ಇದರಿಂದ ನಾಗರಿಕರಿಗೆ ಅನುಕೂಲವಾಗುತ್ತದೆ. ರಾಜ್ಯ ಸರ್ಕಾರ ತನ್ನ ಎಲ್ಲಾ ಇಲಾಖೆಗಳಿಗೆ ಸೂಚನೆಯನ್ನು ನೀಡಿ ಲಿಫ್ಟ್ ಇಲ್ಲದ ಮತ್ತು ಲಿಫ್ಟ್ ಅವಶ್ಯಕತೆ ಇರುವ ಸರ್ಕಾರಿ ಕಟ್ಟಡಗಳ ಮಾಹಿತಿ ಪಡೆದು ಇದನ್ನು ಒದಗಿಸಿಕೊಡುವ ವ್ಯವಸ್ಥೆಯನ್ನು ಕೂಡಲೇ ಮಾಡುವುದು ನಾಗರಿಕರ ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು.

ಕೆಲವು ಪಾರಂಪರಿಕ ಕಟ್ಟಡಗಳು ಯಾವುದೇ ರೀತಿಯ ಬದಲಾವಣೆಗಳನ್ನು ಮಾಡಬಾರದೆಂದು ಅದೇ ಸ್ವರೂಪದಲ್ಲಿ ಉಳಿಸಿಕೊಂಡಿದ್ದೇವೆಂದು ಹೇಳುತ್ತಾರೆ. ಪಾರಂಪರಿಕ ಕಟ್ಟಡಗಳ ಮೂಲ ಸ್ವರೂಪಕ್ಕೆ ಧಕ್ಕೆಯಾಗದಂತೆ ವ್ಯವಸ್ಥೆಗಳನ್ನು ಮಾಡಬಹುದು. ವಿಧಾನಸೌಧದ ಕಟ್ಟಡದ ಒಳಗಿನ ಕೊಠಡಿಗಳ ನವೀಕರಣದ ಹೆಸರಿನಲ್ಲಿ ಅದೆಷ್ಟು ಬಾರಿ ಗೋಡೆಗಳನ್ನು ಕೆಡವಿರುವುದು ಜನರಿಗೆ ನೆನಪಿದೆ.

  • ಕೆ.ಎಸ್.ನಾಗರಾಜ್, ಬೆಂಗಳೂರು

Leave a Reply