ಅತಿಥಿ ಉಪನ್ಯಾಸಕರ ಬೇಡಿಕೆ ಈಡೇರಿಕೆಗೆ ಶೀಘ್ರದಲ್ಲೇ ಕ್ರಮ: ಡಾ.ಎಂ.ಸಿ.ಸುಧಾಕರ್

2 years ago

ಬೆಳಗಾವಿ: 15 ದಿನಗಳಿಂದ ರಾಜ್ಯಾದ್ಯಂತ ಸರಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರು ಸೇವಾ ಖಾಯಮಾತಿ, ಸೇವಾ ಭದ್ರತೆ ಮತ್ತು ಇತರ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ನಡೆಸುತ್ತಿರುವ ಪ್ರತಿಭಟನೆ ಕುರಿತು ಬೆಳಗಾವಿಯ ಚಳಿಗಾಲದ ಅಧಿವೇಶನದಲ್ಲಿ ಕಡೆಗೂ ಚರ್ಚೆ ನಡೆಯಿತು.

ಅತಿಥಿ ಉಪನ್ಯಾನಸಕರು ನಡೆಸುತ್ತಿರುವ ಮುಷ್ಕರದಿಂದಾಗಿ ವಿದ್ಯಾರ್ಥಿಗಳಿಗೆ ತೊಂದರೆ ಆಗುತ್ತಿರುವುದು ಸರಕಾರದ ಗಮನಕ್ಕಿದೆ. ಶೀಘ್ರವೇ ಈ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಸದನದಲ್ಲಿ ಭರವಸೆ ನೀಡಿದರು.

ವಿಧಾನ ಪರಿಷತ್ ಕಲಾಪದ ಶೂನ್ಯವೇಳೆಯಲ್ಲಿ ವಿಪಕ್ಷ ಸದಸ್ಯ ಚಿದಾನಂದ ಅತಿಥಿ ಉಪನ್ಯಾಸಕರ ಹೋರಾಟ ಮತ್ತು ವಿದ್ಯಾರ್ಥಿಗಳ ಸಮಸ್ಯೆ ಕುರಿತು ಸಚಿವರ ಗಮನ ಸೆಳೆದರು. ಬೇರೆ ಬೇರೆ ರಾಜ್ಯಗಳಲ್ಲಿ ಅತಿಥಿ ಉಪನ್ಯಾಸಕರನ್ನು ಖಾಯಂ ಮಾಡಿಕೊಂಡಿರುವ ಮಾದರಿ ಅನುಸರಿಸಬೇಕು ಎಂದರು.

ಈ ವಿಷಯದಲ್ಲಿ ಪ್ರತಿ ಸಲ ಉಮಾದೇವಿ ಪ್ರಕರಣವನ್ನು ಮುಂದಿಟ್ಟುಕೊಂಡು ಅತಿಥಿ ಉಪನ್ಯಾಸಕರಿಗೆ ಆಗುವ ಅನ್ಯಾಯ ನಿಲ್ಲಬೇಕಾದರೆ ವೃಂದ ಮತ್ತು ನೇಮಕಾತಿ ನಿಯಮಗಳಿಗೆ ತಿದ್ದುಪಡಿ ತರಬೇಕು. ಯುಜಿಸಿ ನಿಗದಿಯಂತೆ ವೇತನ ಪರಿಷ್ಕರಣೆ ಮಾಡಿ, ಅತಿಥಿ ಉಪನ್ಯಾಸಕರಿಗೆ ಸೇವಾಭದ್ರತೆ ಒದಗಿಸಬೇಕು ಎಂದು ಸರ್ಕಾರಕ್ಕೆ ಕಿವಿಮಾತು ಹೇಳಿದರು.

ಚಿದಾನಂದ ಅವರ ಮಾತುಗಳಿಗೆ ಪ್ರತಿಕ್ರಿಯೆ ನೀಡಿದ ಎಂ.ಸಿ.ಸುಧಾಕರ್, ಅತಿಥಿ ಉಪನ್ಯಾಸಕರ ಸಮಸ್ಯೆ ನಮ್ಮ ಸರಕಾರ ಅಸ್ತಿತ್ವಕ್ಕೆ ಬಂದಾಗ ಉದ್ಭವಿಸಿದ್ದಲ್ಲ. ಸುಮಾರು 20 ವರ್ಷಗಳಿಂದ ಜೀವಂತವಾಗಿರುವ ಬೇಡಿಕೆ ಎಂದರು.

ಈಗಾಗಲೇ ಪ್ರತಿಭಟನಾನಿರತ ಅತಿಥಿ ಉಪನ್ಯಾಸಕರೊಂದಿಗೆ ಮಾತನಾಡಿ, ಹೋರಾಟ ಕೈ ಬಿಡುವಂತೆ ಮನವೊಲಿಸುವ ಪ್ರಯತ್ನ ವಿಫಲವಾಗಿದೆ. ಈ ಬಗ್ಗೆ ಸಿಎಂ ಜೊತೆ ಮಾತನಾಡಿದ್ದು, ಪರಿಹಾರ ಕಂಡುಕೊಂಡಿದ್ದೇವೆ. ಅದಕ್ಕೆ ಕೊಂಚ ಕಾಲಾವಕಾಶದ ಅಗತ್ಯವಿದೆ. ಶೀಘ್ರ ಈ ಸಮಸ್ಯೆಯನ್ನು ಬಗೆಹರಿಸುತ್ತೇವೆ ಎಂದು ಸದನಕ್ಕೆ ಮಾಹಿತಿ ನೀಡಿದರು.

Leave a Reply