ದಿಡೀರ್ ಡಿ.ಕೆ.ಶಿವಕುಮಾರ್ ಭೇಟಿಯಾದ ಡಾ.ಜಿ.ಪರಮೇಶ್ವರ್

2 years ago

ಬೆಂಗಳೂರು: ಲೋಕಸಭೆ ಚುನಾವಣೆ ಸನಿಹದಲ್ಲಿರುವಾಗ ಆರಂಭವಾಗಿರುವ ಪಕ್ಷಾಂತರ ಪರ್ವ ಹಾಗೂ ರಾಜ್ಯ ಕಾಂಗ್ರೆಸ್ ನಲ್ಲಿ ತಲ್ಲಣ ಸೃಷ್ಟಿಸಿರುವ ಹೆಚ್ಚುವರಿ ಡಿಸಿಎಂ ಹುದ್ದೆ ಸೃಷ್ಟಿ ವಿವಾದದ ಬೆನ್ನೆಲ್ಲೆ ಗೃಹ ಸಚಿವ ಪರಮೇಶ್ವರ್ ಅವರು ದಿಡೀರ್ ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ನಿವಾಸಕ್ಕೆ ತೆರಳಿ ಮಾತುಕತೆ ನಡೆಸಿರುವುದು ಕುತೂಹಲ ಮೂಡಿಸಿದರು. ನಿಗಮ ಮಂಡಗಳಿಗಳ ನೇಮಕ ಪಟ್ಟಿ ಹೊರಬರುತ್ತಿದ್ದಂತೆ ಶಿವಕುಮಾರ್ ಮನೆಗೆ ದಿಢೀರ್ ಭೇಟಿ ನೀಡಿದ ಪರಮೇಶ್ವರ್ ಸುದೀರ್ಘ ಚರ್ಚೆ ನಡೆಸಿದರು.

ಆರಂಭದಿಂದ ಡಿ.ಕೆ.ಶಿವಕುಮಾರ್ ಮತ್ತು ಡಾ.ಜಿ.ಪರಮೇಶ್ವರ್ ಆಪ್ತ ಸ್ನೇಹಿತರಾಗಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ಡಿ.ಕೆ.ಶಿವಕುಮಾರ್ ಅವರಿಂದ ಅಂತರ ಕಾಯ್ದುಕೊಂಡಿದ್ದರಲ್ಲದೆ ಸಿಎಂ ಸಿದ್ದರಾಮಯ್ಯನವರ ಬಣದಲ್ಲಿ ಸಕ್ರಿಯವಾಗಿ ಕಾಣಿಸಿಕೊಂಡಿದ್ದರು. ಡಿ.ಕೆ.ಶಿವಕುಮಾರ್ ಅವರನ್ನು ಕಟ್ಟಿಹಾಕಲು ಸಿದ್ದರಾಮಯ್ಯ ಬಣ ಹೆಚ್ಚುವರಿ ಉಪಮುಖ್ಯಮಂತ್ರಿ ಹುದ್ದೆ ಸೃಷ್ಟಿಯ ಪ್ರಸ್ತಾಪ ಮಂಡಿಸಿತು. ಇದರಲ್ಲಿ ಪರಮೇಶ್ವರ್ ಅವರು ಪ್ರಧಾನ ಪಾತ್ರ ನಿರ್ವಹಿಸಿದ್ದರು. ಅದರಲ್ಲೂ ಸ್ವತಃ ಸಿದ್ದರಾಮಯ್ಯ ಅವರು ಪರಮೇಶ್ವರ್ ನಿವಾಸಕ್ಕೆ ತೆರಳಿ ರಾಜಕೀಯ ವಿದ್ಯಮಾನಗಳ ಬಗ್ಗೆ ಮಾತುಕತೆ ನಡೆಸುವ ಮೂಲಕ ಗಮಗ ಸೆಳೆದಿದ್ದರು. ಈ ಹಿನ್ನೆಲೆಯಲ್ಲಿ ಶಿವಕುಮಾರ್ ಮತ್ತು ಅವರ ನಡುವಿನ ಸಂಬಂಧ ಹಳಸಿತ್ತು ಎನ್ನಲಾಗಿತ್ತು.

ಈ ಬೆಳವಣಿಗೆಗಳ ನಡುವೆ ಮಧ್ಯಪ್ರವೇಶಿಸಿದ ಹೈಕಮಾಂಡ್ ಹೆಚ್ಚುವರಿ ಡಿಸಿಎಂ ಹುದ್ದೆ ಸೃಷ್ಟಿ ವಿಚಾರ ಯಾರೂ ಮಾತನಾಡಬಾರದು ಮತ್ತು ಲೋಕಸಭಾ ಚುನಾವಣೆ ಕಡೆ ಗಮನಹರಿಸುವಂತೆ ತಾಕೀತು ಮಾಡಿತ್ತು. ಇದರೊಂದಿಗೆ ಡಿಸಿಎಂ ಹುದ್ದೆ ಕುರಿತ ಚಟುವಟಿಕೆಗಳಿಗೆ ವಿರಾಮ ಬಿದ್ದಿತ್ತು. ಇದರ ನಡುವೆ ಪರಮೇಶ್ವರ್ ಅವರು ಶಿವಕುಮಾರ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿರುವುದು ಕುತೂಹಲ ಕೆರಳಿಸಿದೆ.

ನಿಗಮ ಮಂಡಳಿಗಳ ನೇಮಕಾತಿ ಅಷ್ಟೇ ಅಲ್ಲದೆ ಲೋಕಸಭೆ ಚುನಾವಣೆಯ ಟಿಕೆಟ್ ಹಂಚಿಕೆ, ಎಸ್.ಪಿ.ಮುದ್ದಹನುಮೇಗೌಡರ ಕಾಂಗ್ರೆಸ್ ಸೇರ್ಪಡೆ, ಬಿಟ್ಕಾಯಿನ್ ಹಗರಣದಲ್ಲಿ ಎಸ್ಐಟಿ ತನಿಖೆಯಲ್ಲಾಗಿರುವ ಬೆಳವಣಿಗೆ, ಪಿಎಸ್ಐ ನೇಮಕ ಹಗರಣದಲ್ಲಿ ವಿಚಾರಣೆ ನಡೆಸಿ ನ್ಯಾಯಮೂರ್ತಿ ವೀರಪ್ಪ ಅವರು ಸಲ್ಲಿಸಿರುವ ವರದಿಯಲ್ಲಿರುವ ಪ್ರಭಾವಿಗಳ ಹೆಸರುಗಳನ್ನೂ ಕೂಡ ಪ್ರಸ್ತಾಪಿಸಲಾಗಿದೆ ಎಂದು ವರದಿಯಾಗಿದೆ.

Leave a Reply