ಹಾಸನ: ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿರುವ
ಕಾಂಗ್ರೆಸ್ ಅಭ್ಯರ್ಥಿಗಳ ಪರ ಬಿರುಸಿನ ಪ್ರಚಾರ ನಡೆಸುತ್ತಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಇದೀಗ ಮಹದಾಯಿ ನದಿ ನೀರು ಹಂಚಿಕೆ ವಿವಾದವನ್ನು ಪ್ರಸ್ತಾಪಿಸಿ ಪ್ರಧಾನಿಗಳಿಂದ ಉತ್ತರ ಬಯಸಿದ್ದಾರೆ.
ಹಾಸನ ಜಿಲ್ಲೆಯ ಅರಸೀಕೆರೆಯಲ್ಲಿ ಏರ್ಪಡಿಸಿದ್ದ ಬಹಿರಂಗ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಕರ್ನಾಟಕ, ಗೋವಾ, ಮಹಾರಾಷ್ಟ್ರದ ನಡುವಿನ ನೀರಿನ ಹಂಚಿಕೆಯ ಕುರಿತು ಏನು ಕ್ರಮ ಕೈಗೊಂಡಿದ್ದೀರಿ? ಕರ್ನಾಟಕಕ್ಕೆ ಅದರ ಪಾಲಿನ ತೆರಿಗೆ ಹಣ ಕಡಿಮೆ ಹಣ ನೀಡಿದಾಗ, ಆ ಸಂದರ್ಭದಲ್ಲಿ ಯುವಕರಿಗೆ ಯಾವ ರೀತಿ ಸಹಾಯ ಮಾಡಿದ್ದೀರಿ? ಪ್ರವಾಹ ಬಂದಾಗ ಏನು ಸಹಾಯ ಮಾಡಿದ್ದೀರಿ? ನಿಮ್ಮ ಮಾತುಗಳನ್ನು ಹೇಳಿ, ಜೊತೆಗೆ ಕರ್ನಾಟಕದ ಬಗ್ಗೆಯೂ ಮಾತನಾಡಿ ಎಂದು ಆಗ್ರಹಿಸಿದರು.
ರಾಜ್ಯಕ್ಕೆ ಬರುವ ಪ್ರಧಾನಿ, ಕಾಂಗ್ರೆಸ್ ನನ್ನ ವಿರುದ್ಧ ಅಕ್ರಮಣ ಮಾಡುತ್ತಿದೆ ಎನ್ನುತ್ತಿದ್ದಾರೆ. ಅದರ ಬದಲು ರಾಜ್ಯದ ಜನರಿಗೆ ಏನು ಮಾಡಿದ್ದೀರಿ ಎನ್ನುವುದನ್ನು ಹೇಳಿ. ಇಲ್ಲಿ ಪ್ರಧಾನಿಯ ಪ್ರಶ್ನೆ ಇಲ್ಲ. ಇದು ರಾಜ್ಯದ ಮಹಿಳೆಯರು, ಯುವಕರು, ರೈತರ ಪ್ರಶ್ನೆ. ಕರ್ನಾಟಕ–ಮಹಾರಾಷ್ಟ್ರ ಗಡಿಯಲ್ಲಿ ನಡೆದ ಹಿಂಸೆಯ ಬಗ್ಗೆ ಯಾವ ಕ್ರಮ ಕೈಗೊಂಡಿದ್ದೀರಿ ಎಂದು ಪ್ರಶ್ನಿಸಿದರು.
ರಾಜ್ಯಕ್ಕೆ ಬಂದಾಗ, ನಿಮ್ಮ ನಾಯಕರ ಬಗ್ಗೆ ಮಾತನಾಡುವುದಿಲ್ಲ. ಹಿರಿಯರಾದ ಯಡಿಯೂರಪ್ಪ, ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರ ಹೆಸರು ಹೇಳುತ್ತಿಲ್ಲ. ನಿಮ್ಮ ಭಾಷಣದ ಮಧ್ಯೆ ರಾಜ್ಯದ ನಿಮ್ಮ ನಾಯಕರ ಹೆಸರನ್ನೂ ಹೇಳುವ ಹವ್ಯಾಸ ಬೆಳೆಸಿಕೊಳ್ಳಿ. ಇದರಿಂದ ನಿಮ್ಮ ಗೌರವ ಕಡಿಮೆ ಆಗುವುದಿಲ್ಲ. ಬದಲಿಗೆ ನಿಮ್ಮ ನಾಯಕರು, ಜನರಿಗೆ ಒಳ್ಳೆಯ ಸಂದೇಶ ಕೊಟ್ಟಂತಾಗುತ್ತದೆ ಎಂದು ಹೇಳಿದರು.
ರಾಜ್ಯದಲ್ಲಿ ಅಧಿಕಾರದಲ್ಲಿ ಇರುವ ಬಿಜೆಪಿ ಸರ್ಕಾರ ಜನರಿಂದ ಆಯ್ಕೆಯಾಗಿದ್ದಲ್ಲ. ಕಳ್ಳದಾರಿಯಿಂದ ಅಧಿಕಾರ ಹಿಡಿದಿದೆ. ಹಣ ನೀಡಿ ಶಾಸಕರನ್ನು ಖರೀದಿಸಿ, ಸರ್ಕಾರವನ್ನು ರಚಿಸಿದೆ. ಮೊದಲು ಸರ್ಕಾರವನ್ನು ಕಳವು ಮಾಡಿದ ಬಿಜೆಪಿ, ಸರ್ಕಾರದ ಮೂಲಕ ನಿಮ್ಮಿಂದ ಕಳ್ಳತನ ಮಾಡುತ್ತ ಬಂದಿದೆ ಎಂದು ಆಪಾದಿಸಿದರು.
ಪ್ರಧಾನಿ ಇಲ್ಲಿಗೆ ಬಂದು ಭಾಷಣ ಮಾಡುತ್ತಾರೆ. ಆದರೆ, ಸತ್ಯ ಏನೆಂದರೆ, ರಾಜ್ಯದಲ್ಲಿ 3 ವರ್ಷ ಭ್ರಷ್ಟಾಚಾರ ನಡೆದಿದ್ದು, ಶೇ 40 ಕಮಿಷನ್ ಪಡೆಯಲಾಗಿದೆ. ಇದು ಪ್ರಧಾನಿಗೂ ಗೊತ್ತಿದೆ. ರಾಜ್ಯದ ಮಕ್ಕಳಿಗೂ ಈ ಸುದ್ದಿ ಗೊತ್ತಿರಬೇಕಾದರೆ, ಪ್ರಧಾನಿಗೂ ಗೊತ್ತಿರಬೇಕು. ಪ್ರಧಾನಿ ರಾಜ್ಯದಲ್ಲಿ 3 ವರ್ಷದಲ್ಲಿ ಭ್ರಷ್ಟಾಚಾರ ತಡೆಯಲು ಯಾವ ಕ್ರಮ ಕೈಗೊಂಡಿದ್ದಾರೆ? ಎಷ್ಟು ಮಂದಿಯ ಮೇಲೆ ಕ್ರಮ ಕೈಗೊಂಡಿದ್ದೀರಿ? ರಾಜ್ಯಕ್ಕೆ ಬಂದಾಗ ಭಾಷಣದಲ್ಲಿ ಇದನ್ನು ಜನರಿಗೆ ಹೇಳಿ ಎಂದು ಒತ್ತಾಯಿಸಿದರು.
ಯಾವ ಮಕ್ಕಳನ್ನು ಕೇಳಿದರೂ, ಇಲ್ಲಿರುವ ಸರ್ಕಾರ ಶೇ 40 ಕಮಿಷನ್ ಸರ್ಕಾರ ಎಂದು ಹೇಳುತ್ತಾರೆ. ಕರ್ನಾಟಕದ ಪ್ರತಿಯೊಬ್ಬರಿಗೂ ಗೊತ್ತಿದೆ. ಗುತ್ತಿಗೆದಾರರ ಸಂಘದವರೂ ಪ್ರಧಾನಿಗೆ ಪತ್ರ ಬರೆದು, ಕರ್ನಾಟಕದಲ್ಲಿ ಇರುವ ಸರ್ಕಾರ ಶೇ 40 ಕಮಿಷನ್ ಪಡೆಯುತ್ತಿದೆ ಎಂದು ತಿಳಿಸಿದ್ದಾರೆ. ಪ್ರಧಾನಿ ಪತ್ರ ಓದಿದರೂ, ಇದುವರೆಗೆ ಉತ್ತರ ನೀಡಿಲ್ಲ ಎಂದು ಹೇಳಿದರು.
ಗದಗಿನ ಸ್ವಾಮೀಜಿಯೊಬ್ಬರು ಶೇ 30 ಕಮಿಷನ್ ಪಡೆದಿದ್ದು, ಶೇ 10 ರಿಯಾಯಿತಿ ನೀಡಲಾಗಿದೆ ಎಂದು ದೂರಿದ್ದಾರೆ. ಶಾಸಕರ ಪುತ್ರ ₹8 ಕೋಟಿ ನಗದಿನೊಂದಿಗೆ ಸಿಕ್ಕಿದ್ದಾರೆ. ನೇಮಕಾತಿ ಹಗರಣಗಳೂ ನಡೆದಿವೆ ಎಂದು ಹೇಳಿದರು.
ಬಿಜೆಪಿಯವರಿಗೆ 40 ಸಂಖ್ಯೆಯ ಮೇಲೆ ಬಹಳ ಪ್ರೀತಿ. ಎಲ್ಲಿ ಹೋದರೂ 40 ಸಂಖ್ಯೆಯನ್ನು ಪ್ರಯೋಗಿಸುತ್ತಾರೆ. ಈ ಬಾರಿ ಇವರಿಗೆ ನೀವು 40 ಸಂಖ್ಯೆಯನ್ನು ಮತ್ತೊಮ್ಮೆ ಜ್ಞಾಪಿಸಿ. 3 ವರ್ಷ ನಿಮಗೆ 40 ಸಂಖ್ಯೆಯನ್ನು ತೋರಿಸಿದವರಿಗೆ, 40 ಸ್ಥಾನಗಳನ್ನು ಕೊಡಿ. ಕಾಂಗ್ರೆಸ್ಗೆ 150 ಸ್ಥಾನಗಳನ್ನು ಕೊಡಬೇಕು. ಕಾಂಗ್ರೆಸ್ಗೆ ಕಡಿಮೆ ಸ್ಥಾನ ಬಂದರೆ, ಬಿಜೆಪಿ ಮತ್ತೆ ಶಾಸಕರನ್ನು ಖರೀದಿಸುವ ಪ್ರಯತ್ನ ಮಾಡಲಿದೆ. ಮುಂದೆ ಶೇ 40 ರಿಂದ ಶೇ 60 ಕಮಿಷನ್ ಮಾಡುತ್ತಾರೆ. ಅದಕ್ಕಾಗಿ ಕಾಂಗ್ರೆಸ್ಗೆ ಬಹುಮತ ನೀಡಿ, ಬಿಜೆಪಿಗೆ ಪಾಠ ಕಲಿಸಬೇಕು ಎಂದು ಹೇಳಿದರು.
ನಾವು ರಾಜ್ಯದ ಜನರಿಗೆ ನಮ್ಮ ಐದು ಗ್ಯಾರಂಟಿಗಳು, ಯೋಜನೆಗಳನ್ನು ಹೇಳಿದ್ದೇವೆ. ಬಿಜೆಪಿಯವರು ಅಧಿಕಾರಕ್ಕೆ ಬಂದರೆ ಏನು ಮಾಡುತ್ತೀರಿ? ಕಮಿಷನ್ ಅನ್ನು ಶೇ 40 ರಿಂದ ಶೇ 60ಕ್ಕೆ ಏರಿಸುತ್ತೀರಾ ಎಂದು ಪ್ರಶ್ನಿಸಿದರು.
ಬಿಜೆಪಿಯವರು ನೆಪಗಳನ್ನು ಹೇಳಬಾರದು. ಭ್ರಷ್ಟಾಚಾರದ ಬಗ್ಗೆ ಯಾವ ಕ್ರಮ ಕೈಗೊಂಡಿದ್ದೀರಿ? ಪ್ರವಾಹದ ಸಂದರ್ಭದಲ್ಲಿ ಏನು ಮಾಡಿದ್ದೀರಿ? ನಿರುದ್ಯೋಗ ನಿವಾರಣೆಗೆ ಏನು ಕ್ರಮ ಕೈಗೊಂಡಿದ್ದೀರಿ? ಮುಂದಿನ ಐದು ವರ್ಷ ಏನು ಮಾಡುತ್ತೀರಿ ಎಂಬುದನ್ನು ಪ್ರಧಾನಿ ಅವರು ರಾಜ್ಯಕ್ಕೆ ಬಂದಾಗ ಜನರಿಗೆ ಹೇಳಬೇಕು ಎಂದು ಒತ್ತಾಯಿಸಿದರು.




