ಮಂಗಳೂರು: ದೇಶದ ಸಾರ್ವಭೌಮತೆಯ ಸಂಕೇತಗಳಾದ ಸಾರ್ವಜನಿಕ ಉದ್ದಿಮೆಗಳನ್ನು ಕಾರ್ಪೊರೇಟ್ ಕಂಪೆನಿಗಳಿಗೆ ಕೊಳ್ಳೆ ಹೊಡೆಯಲು ಅವಕಾಶ ಮಾಡಿದ ದೇಶದ ಕೇಂದ್ರ ಸರ್ಕಾರ ನಿಜಕ್ಕೂ ದೇಶದ್ರೋಹಿಯಾಗಿದೆ ಎಂದು CITU ದ . ಕ .ಜಿಲ್ಲಾಧ್ಯ ಜೆ.ಬಾಲಕೃಷ್ಣ ಶೆಟ್ಟಿಯವರು ಆಕ್ರೋಶ ವ್ಯಕ್ತಪಡಿಸಿದರು.
ಸ್ವಾತಂತ್ರ್ಯ ಪ್ರಜಾಪ್ರಭುತ್ವ ಸಂವಿಧಾನದ ರಕ್ಷಣೆಗಾಗಿ ಕಾರ್ಮಿಕ ವರ್ಗದ ನೇತೃತ್ವದಲ್ಲಿ ದೇಶಾದ್ಯಂತ ನಡೆಯುತ್ತಿರುವ ಪ್ರಚಾರಾಂದೋಲನದ ಭಾಗವಾಗಿ ಮಂಗಳೂರಿನಲ್ಲಿ ನಡೆಯುತ್ತಿರುವ ಎರಡು ದಿನಗಳ ವಾಹನ ಪ್ರಚಾರ ಜಾಥಾವನ್ನು ಉದ್ಘಟಿಸುತ್ತಾ ಈ ಮಾತಾಡಿದ ಅವರು, ಸರ್ವ ಜನತೆಯ ಹಿತ ಕಾಯುವುದಾಗಿ ವಚನ ನೀಡಿದ ಇದೇ ಸರಕಾರ ಜನತೆಯ ಬದುಕನ್ನು ಸರ್ವನಾಶ ಗೊಳಿಸಿ ವಚನಭ್ರಷ್ಟವಾಗಿದೆ ಎಂದು ವಾಗ್ದಾಳಿ ನಡೆಸಿದರು.
CITU ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ಮಾತನಾಡಿ, ಹೊಟ್ಟೆಪಾಡಿಗಾಗಿ ದೇಶದ ವಿವಿಧ ಭಾಗಗಳಿಂದ ಮತ್ತೊಂದು ಊರಿಗೆ ಆಗಮಿಸುವ ವಲಸೆ ಕಾರ್ಮಿಕರ ಸಮಸ್ಯೆಯನ್ನು ಹೇಳತೀರದು. ಕೊರೋನ ಸಂಕಷ್ಟದ ಕಾಲಘಟ್ಟದಲ್ಲಿ ವಲಸೆ ಕಾರ್ಮಿಕರ ಬಗ್ಗೆ ಮೊಸಳೆ ಕಣ್ಣೀರು ಸುರಿಸಿದ ಕೇಂದ್ರ ಸರ್ಕಾರ ಬಳಿಕ ತೀರಾ ತಾತ್ಸಾರ ಮನೋಭಾವ ತಾಳಿ ಜನದ್ರೋಹಿಯಾಗಿ ವರ್ತಿಸಿದೆ ಎಂದು ಹೇಳಿದರು.
ಜಾಥಾದ ನೇತೃತ್ವವನ್ನು CITU ಜಿಲ್ಲಾ ನಾಯಕರಾದ ಯೋಗೀಶ್ ಜಪ್ಪಿನಮೋಗರು, ಭಾರತಿ ಬೋಳಾರ, ಜಯಲಕ್ಷ್ಮಿ, ಅಶೋಕ್ ಸಾಲಿಯಾನ್ ವಹಿಸಿದ್ದರು.
ಈ ಸಂದರ್ಭದಲ್ಲಿ CITU ಜಿಲ್ಲಾ ನಾಯಕರಾದ ವಸಂತ ಆಚಾರಿ, ಯು ಬಿ ಲೋಕಯ್ಯ, ಬಿ ಕೆ ಇಮ್ತಿಯಾಜ್, ಲೋಲಾಕ್ಷಿ, ಮಹಮ್ಮದ್ ಮುಸ್ತಫಾ, ಸಂತೋಷ್ ಆರ್ ಎಸ್, ರಿಯಾಝ್, ನೌಶಾದ್, ನಾಗೇಶ್ ಕೋಟ್ಯಾನ್, ಮೊಯಿದಿನ್, ಉದಯ ಕುಮಾರ್, ರಾಧಾಕೃಷ್ಣ, ಅನ್ಸಾರ್ ಫೈಸಲ್ ನಗರ, ಆಸಿಫ್ ಉರುಮನೆ, ಯುವ ನಾಯಕರಾದ ಸಂತೋಷ್ ಬಜಾಲ್, ವರಪ್ರಸಾದ್, ಜಗದೀಶ್ ಬಜಾಲ್, ಮಹಿಳಾ ಮುಖಂಡರಾದ ಅಸುಂತಾ ಡಿಸೋಜ, ಪ್ರಮೀಳಾ ಶಕ್ತಿನಗರ, ಪ್ರಿಯದರ್ಶಿನಿ ಮುಂತಾದವರು ಉಪಸ್ಥಿತರಿದ್ದರು.




