ದಾವಣಗೆರೆ: ಸ್ವಯಂ ಉದ್ಯೋಗ ಕೈಗೊಳ್ಳಲು ಸರ್ಕಾರದಿಂದ ಹಲವಾರು ಯೋಜನೆಗಳಿದ್ದು, ಅವುಗಳನ್ನು ಸರಿಯಾದ ರೀತಿಯಲ್ಲಿ ಬಳಸಿಕೊಂಡು ಉದ್ಯೋಗಸ್ಥರಾಗಬೇಕು ಎಂದು ಜಿಲ್ಲಾ ಕೌಶಲ್ಯಾಭಿವೃದ್ದಿ ಅಧಿಕಾರಿ ಬಸನಗೌಡ ಮನವಿ ಮಾಡಿದರು.
ನಗರದ ಕಿತ್ತೂರು ರಾಣಿ ಚೆನ್ನಮ್ಮ ಮತ್ತು ಸಂಗೊಳ್ಳಿ ರಾಯಣ್ಣ ಮಹಿಳಾ ಸಂಘದ, ಸಭಾಂಗಣದಲ್ಲಿ ಉದ್ಯಮಾಕಾಂಕ್ಷಿಗಳಿಗೆ ಹಮ್ಮಿಕೊಳ್ಳಲಾದ ಹತ್ತು ದಿನಗಳ ಉದ್ಯಮಶೀಲತಾಭಿವೃದ್ಧಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸ್ವಯಂ ಉದ್ಯೋಗ ಮಾಡಲು ಹಲವಾರು ಅವಕಾಶಗಳಿವೆ. ಅವುಗಳಲ್ಲಿ ನಮಗೆ ಯಾವುದು ಸರಿಯಾದುದು ಎಂದು ಆಯ್ಕೆಮಾಡಿಕೊಳ್ಳಬೇಕು ಎಂದರು.
ಅಲ್ಲದೆ ಸ್ವಂತ ಉದ್ಯಮ ಮಾಡುವವರಿಗೆ ಸರ್ಕಾರದಿಂದ ಪಿ.ಎಂ. ಸ್ವನಿಧಿ ಯೋಜನೆ, ಪಿ.ಎಂ.ವಿಶ್ವಕರ್ಮ ಯೋಜನೆ ಇನ್ನೂ ಅನೇಕ ಯೋಜನೆಗಳಿವೆ. ಅವುಗಳನ್ನು ಸರಿಯಾದ ರೀತಿಯಲ್ಲಿ ಬಳಸಿಕೊಳ್ಳಬೇಕು ಮತ್ತು ಹತ್ತು ದಿನಗಳ ಉದ್ಯಮಶೀಲತಾಭಿವೃದ್ದಿ ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸುವ ಮೂಲಕ ಸ್ವಂತ ಉದ್ಯೋಗವನ್ನು ಪ್ರಾರಂಭಿಸಬೇಕು. ಬೇರೆಯವರಿಗೂ ಕೂಡಾ ಉದ್ಯೋಗವನ್ನು ಕೊಡುವಂತವರಾಗಬೇಕು ಆಗ ಮಾತ್ರ ನಿರುದ್ಯೋಗ ಸಮಸ್ಯೆಯನ್ನು ಹೋಗಲಾಡಿಸಲು ಸಾಧ್ಯ ಎಂದರು.
ಇ-ಕಾರ್ಟ್ ಸರ್ವಿಸ್, ವಿಸ್ ಮಾಸ್ಟರ್ ಆರ್. ಮಧುಶ್ರೀ ಮಾತನಾಡಿ ನಾವು ಯಾವುದಕ್ಕೂ ಸೀಮಿತವಾಗಿರದೆ ನಮ್ಮಲ್ಲಿರುವ ಕೌಶಲ್ಯವನ್ನು ಉಪಯೋಗಿಸಿಕೊಂಡು ಸ್ವಯಂ ಉದ್ಯೋಗ ಮಾಡಿದಲ್ಲಿ ಯಶಸ್ಸು ಖಂಡಿತ ಸಿಗುತ್ತದೆ. ಹಾಗಾಗಿ ಈ ತರಬೇತಿಯ ಸದುಪಯೋಗ ಪಡೆದುಕೊಂಡು ಯಶಸ್ವಿ ಉದ್ಯಮಿಗಳಾಗಬೇಕು. ಇ-ಕಾರ್ಟ್ ಸರ್ವೀಸ್ಸ್ ದಾವಣಗೆರೆಯ ಮೊದಲ ಹಾಗೂ ಏಕೈಕ ಮಹಿಳಾ ವಿಶ್ ಮಾಸ್ಟರ್ ತಾನಾಗಿರುವುದಕ್ಕೆ ಬಹಳ ಹೆಮ್ಮೆಯಿದೆ ಎಂದರು.
ಲೀಡ್ ಬ್ಯಾಂಕ್, ಜಿಲ್ಲಾ ವಿಭಾಗೀಯ ಮಾರ್ಗದರ್ಶಿ ವ್ಯವಸ್ಥಾಪಕ ಪ್ರಕಾಶ್ ಮಾತನಾಡಿ, ಯಾವುದೇ ಸ್ವಯಂ ಉದ್ಯೋಗ ಅಥವಾ ಉದ್ಯಮವನ್ನು ಮಾಡಬೇಕಾದರೆ ಯೋಜನಾ ವರದಿ ಅತ್ಯಂತ ಅವಶ್ಯಕವಾಗಿರುತ್ತದೆ. ಈ ಒಂದು ಯೋಜನಾ ವರದಿಯನ್ನು ಹೇಗೆ ಮಾಡಬಹುದೆಂದು ಸಂಕ್ಷಿಪ್ತವಾಗಿ ವಿವಸಿದರು ಮತ್ತು ಬ್ಯಾಂಕ್ಗಳಿಂದ ಸಿಗುವಂತಹ ಯೋಜನೆಗಳನ್ನು ಬಳಸಿಕೊಂಡು ನೀವು ಸ್ವಯಂ ಉದ್ಯೋಗಿಗಳಾಗುವುದಲ್ಲದೆ ನಾಲ್ಕೈದು ಜನರಿಗೆ ಉದ್ಯೋಗ ನೀಡಬಹುದು ಎಂದರು.
ಕಾರ್ಯಕ್ರಮದಲ್ಲಿ ಸಿಡಾಕ್ ಸಂಸ್ಥೆಯ ಜಂಟಿ ನಿರ್ದೇಶಕ ಆರ್.ಪಿ. ಪಾಟೀಲ್, ಕಿತ್ತೂರು ರಾಣಿ ಚೆನ್ನಮ್ಮ ಮತ್ತು ಸಂಗೊಳ್ಳಿರಾಯಣ್ಣ ಮಹಿಳಾ ಸಂಘದ ಅಧ್ಯಕ್ಷೆ ಶಿಲ್ಪಾ, ಸಿಡಾಕ್ ಸಂಸ್ಥೆಯ ತರಬೇತುದಾರರಾದ ವಿನಯ್ ಜಿ.ಕೆ, ಬಸವರಾಜ ಜಿ.ಬಿ, ಜಿಲ್ಲಾ ಕೌಶಲ್ಯ ಮಿಶನ್ ಸಹಾಯಕ ನಿರ್ದೇಶಕ ಡಾ. ಸಿದ್ದೇಶ್, ಮಿಷನ್ ಮ್ಯಾನೇಜರ್ ಡಾ.ವಿ.ಟಿ. ಬಸವರಾಜ್, ಮೇಲ್ವಿಚಾರಕ ಹರೀಶ್ ಉಪಸ್ಥಿತರಿದ್ದರು.




