ಜನಸ್ಪಂದನೆಯೆಂದರೆ ಜನರ ನೋವು, ನಲಿವುಗಳಿಗೆ ಸ್ಪಂದಿಸುವ ಕೆಲಸವಾಗಬೇಕು: ಜಿ.ಸಿ.ಚಂದ್ರಶೇಖರ್

4 years ago

ಬೆಂಗಳೂರು: ಜನಸ್ಪಂದನೆಯೆಂದರೆ ಜನರ ಸಂಕಷ್ಟ, ನೋವು ನಲಿವುಗಳಿಗೆ ಸ್ಪಂದಿಸುವ ಕೆಲಸವಾಗಬೇಕು ಎಂದು ರಾಜ್ಯಸಭೆ ಸದಸ್ಯ ಜಿ.ಸಿ.ಚಂದ್ರಶೇಖರ್ ಹೇಳಿದರು.

ಮಹಾಲಕ್ಷ್ಮೀಲೇಔಟ್ ವಿಧಾನಸಭಾ ಕ್ಷೇತ್ರದ ಕಮಲಾನಗರದಲ್ಲಿ ಸಮಾಜ ಸೇವಕ ಮಹದೇವಪ್ಪ ಅವರ 2ನೇ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಇಂದಿರಾ ಹೆಲ್ತ್ ಕೇರ್ ನಲ್ಲಿ ಮಹದೇವಪ್ಪ ಪ್ರತಿಷ್ಠಾನ ಮತ್ತು ಅಕ್ಷಯ ಟ್ರಸ್ಟ್, ವಿಜಯ ನೇತ್ರಾಲಯ ಜಿಲ್ಲಾ ಅಂಧತ್ವ ನಿವಾರಣಾ ಸಂಸ್ಥೆಯ ಸಹಯೋಗದಲ್ಲಿ ಉಚಿತ ಕಣ್ಣಿನ ತಪಾಸಣೆ ಹಾಗೂ ಶಸ್ತ್ರ ಚಿಕಿತ್ಸಾ ಶಿಬಿರ ಉದ್ಘಾಟಿಸಿ ಮಾತಾಡಿದ ಅವರು, ಇಂದು ರಾಜ್ಯದ ಜನರು ಸಂಕಷ್ಟದಲ್ಲಿ ಇದ್ದಾರೆ. ಇಂತಹ ಕಷ್ಟಕರ ಸಂದರ್ಭದಲ್ಲಿ ಯಾವ ಸಾಧನೆ ಮಾಡದ ಬಿ.ಜೆ.ಪಿ. ಸರ್ಕಾರ ಜನಸ್ಪಂದನಾ ಕಾರ್ಯಕ್ರಮ ಮಾಡಿರುವುದು ನಗೆಪಾಟಿಲಿಗೆ ಗುರಿಯಾಗಿದೆ ಎಂದರು.

ಆಹಾರ ಪದಾರ್ಥಗಳ ಮೇಲೆ ಏರಿಕೆಯಿಂದ ಬಡವರು ಜೀವನ ಸಾಗಿಸುವುದು ಕಷ್ಟವಾಗಿದೆ. ಕೇಂದ್ರ ಸರ್ಕಾರ ಬಡವರ ಹೊಟ್ಟೆಯ ಮೇಲೆ ತೆರಿಗೆ ಎಂಬ ಬರೆ ಎಳೆದಿದೆ ಎಂದರು.

ಕಾಂಗ್ರೆಸ್ ಪಕ್ಷ ಬಡವರ ಪರ ಇರುವ ಪಕ್ಷ. ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡ ಇತಿಹಾಸವಿರುವುದು ಕಾಂಗ್ರೆಸ್ ಪಕ್ಷಕ್ಕೆ. ದೇಶದ ಅಭಿವೃದ್ದಿಗೆ ಪಂಚವಾರ್ಷಿಕ ಯೋಜನೆಗಳನ್ನು ಕೊಡುಗೆ ನೀಡಿ, ದೇಶದ ಸಮ್ಮದ್ದಿ, ಸಂಪತ್ಭರಿತವಾಗಲು ಕಾರಣವಾಗಿದೆ ಎಂದರು.

ನಾಯಕ ಎಮ್.ಶಿವರಾಜು ಮಾತನಾಡಿ, ಮೇರುನಟ ಡಾ.ರಾಜ್ ಕುಮಾರ್ ರವರು, ಪದ್ಮಭೂಷಣ ಪುರಸ್ಕೃತ ಡಾ.ಎಂ.ಸಿ.ಮೋದಿರವರು ನೇತ್ರ ದಾನದ ಮಹತ್ವವನ್ನು ಸಾರಿದರು. ಈ ನಿಟ್ಟಿನಲ್ಲಿ ಮಹದೇವಪ್ಪ ಪ್ರತಿಷ್ಠಾನ ಆರೋಗ್ಯ, ಶಿಕ್ಷಣ ಮತ್ತು ಪರಿಸರ ರಕ್ಷಣೆಗಾಗಿ ಶ್ರಮಿಸುತ್ತಿದೆ. ಪ್ರತಿ ವರ್ಷ ಶಾಲಾ ಮಕ್ಕಳಿಗೆ ಉಚಿತ ನೋಟ್ ಬುಕ್ ಮತ್ತು ವಿದ್ಯಾರ್ಥಿ ವೇತನ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್ ಹಾಗೂ ಟ್ಯಾಬ್ ಗಳನ್ನು ನೀಡಲಾಗುತ್ತಿದೆ ಎಂದರು.

ಉಚಿತ ಆರೋಗ್ಯ ತಪಾಸಣೆ ಶಿಬಿರ ಮತ್ತು ಪ್ರತಿದಿನ ನಮ್ಮ ಇಂದಿರಾ ಕ್ಲಿನಿಕ್ ಇ.ಸಿ.ಜಿ. ಮತ್ತು ಸಕ್ಕರೆ ಖಾಯಿಲೆ, ಬಿ.ಪಿ., ಜನರಲ್ ಚೆಕ್ ಅಪ್ ಗಳನ್ನು ತಜ್ಞ ವೈದ್ಯರಿಂದ ಉಚಿತವಾಗಿ ತಪಾಸಣೆ ಮಾಡಲಾಗುತ್ತಿದೆ. ಈಗಾಗಲೇ ಮಹದೇವಪ್ಪ ಪ್ರತಿಷ್ಠಾನ ವತಿಯಿಂದ 300ಕ್ಕೂ ಹೆಚ್ಚು ಜನರಿಗೆ ಕಣ್ಣಿನಪೊರೆ ಶಸ್ತ್ರ ಚಿಕಿತ್ಸೆ ಮಾಡಲಾಗಿದೆ. ಕಣ್ಣಿನ ದೋಷ ಇರುವವರಿಗೆ ಉಚಿತವಾಗಿ ಕನ್ನಡಕ ವಿತರಿಸಲಾಗುತ್ತಿದೆ. ಧ್ವನಿ ಇಲ್ಲದ, ನೊಂದವರ ಬಾಳಿಗೆ ಆಸರೆಯಾಗಬೇಕು ಎಂದು ಮಹದೇವಪ್ಪ ಪ್ರತಿಷ್ಠಾನ ಶ್ರಮಿಸುತ್ತಿದೆ ಎಂದರು.

ಇದೇ ಸಂದರ್ಭದಲ್ಲಿ 50ಕ್ಕೂ ಹೆಚ್ಚು ಬೀದಿ ಬದಿಯ ವ್ಯಾಪಾರಿಗಳಿಗೆ ಬಿಸಿಲು, ಮಳೆಯಿಂದ ರಕ್ಷಣೆಗಾಗಿ ಬೃಹತ್ ಛತ್ರಿಗಳನ್ನು ವಿತರಿಸಲಾಯಿತು. 500 ಜನರಿಗೆ ಕಣ್ಣಿನ ತಪಾಸಣೆ ಮತ್ತು ಶಸ್ತ್ರ ಚಿಕಿತ್ಸೆಗೆ ಪರೀಕ್ಷೆ ಮಾಡಲಾಯಿತು.

ಮಹಾನಗರ ಪಾಲಿಕೆ ಮಾಜಿ ಸದಸ್ಯರಾದ ಮಹದೇವಮ್ಮ, ಎಸ್.ಕೇಶವಮೂರ್ತಿ ಮೊದಲಾದವರು ಹಾಜರಿದ್ದರು.

Leave a Reply