ಬೆಂಗಳೂರು: ಸ್ಮಶಾನ ನೌಕರರನ್ನು ಇನ್ನು ಮುಂದೆ ಸತ್ಯ ಹರಿಶ್ಚಂದ್ರ ಬಳಗ ಎಂದು ಕರೆಯುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಲಹೆ ನೀಡಿದರು.
ರೇಸ್‌ಕೋರ್ಸ್ ರಸ್ತೆಯಲ್ಲಿನ ಮುಖ್ಯಮಂತ್ರಿಗಳ ಅಧಿಕೃತ ನಿವಾಸದಲ್ಲಿ ಒಂದು ಹೃದಯಸ್ಪರ್ಶಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಸ್ಮಶಾನಗಳಲ್ಲಿ ಕೆಲಸ ಮಾಡುವ ಕಾರ್ಮಿಕರನ್ನು ಮುಖ್ಯಮಂತ್ರಿಗಳ ನಿವಾಸಕ್ಕೆ ಬರುವಂತೆ ಆಹ್ವಾನಿಸಲಾಗಿತ್ತು.
ತಮ್ಮ ನಿವಾಸಕ್ಕೆ ಬಂದವರೊಂದಿಗೆ ಬಸವರಾಜ ಬೊಮ್ಮಾಯಿ ಉಪಾಹಾರ ಸೇವಿಸಿದರು. ಇವರಿಗೆ ಸಚಿವರಾದ ಆರಗ ಜ್ಞಾನೇಂದ್ರ, ಗೋವಿಂದ ಕಾರಜೋಳ, ಶ್ರೀನಿವಾಸ ಪೂಜಾರಿ ಸೇರಿದಂತೆ ಹಲವು ಗಣ್ಯರು ಜೊತೆಯಾದರು.
ಈ ವೇಳೆ ಮಾತನಾಡಿದ ಸಿ.ಎಂ. ಬೊಮ್ಮಾಯಿ
ಸ್ಮಶಾನ ಕಾರ್ಮಿಕರಿಗೆ ಸಂಬಳವಿರಲಿ, ಉದ್ಯೋಗ ಕೂಡ ಇರಲಿಲ್ಲ.ಇದನ್ನು ಗಮನಿಸಿದ ನಮ್ಮ ಸರ್ಕಾರ ಪೌರಕಾರ್ಮಿಕರ ರೀತಿಯಲ್ಲಿ ಇವರ ಸೇವೆಯನ್ನು ಖಾಯಂ ಮಾಡುತ್ತಿದ್ದೇವೆ ಎಂದು ಹೇಳಿದರು
ಸ್ಮಶಾನ ಕಾರ್ಮಿಕರನ್ನು ಇನ್ನು ಮುಂದೆ ಸತ್ಯಹರಿಶ್ಚಂದ್ರ ಬಳಗ ಎಂದು ಕರೆಯಬೇಕು ಎಂದ ಅವರು, ಇಷ್ಟು ದಿನ ಸ್ಮಶಾನ ಕಾರ್ಮಿಕರ ಸಮಸ್ಯೆಗಳನ್ನು ಯಾವ ಸರ್ಕಾರವೂ ಕೇಳಿರಲಿಲ್ಲ. ನಮ್ಮದು ಬಡವರ ಪರ ಕಾಳಜಿ ಇರುವ ಸರ್ಕಾರ ಮೊದಲ ಹಂತದಲ್ಲಿ 117 ಜನರಿಗೆ ಖಾಯಂ ಉದ್ಯೋಗ ನೀಡಿ ಆಗಿ ಆದೇಶ ಮಾಡಲಾಗಿದೆ. ಇನ್ನಳಿದ 30 ಜನರು ವಯೋಮಿತಿ ಆಧಾರದಲ್ಲಿ ಖಾಯಂ ಆಗುತ್ತಾರೆ. ಬೇರೆ ಬೇರೆ ಜಿಲ್ಲೆಯ ಸ್ಮಶಾನ ನೌಕರರಿಗೂ ಖಾಯಂ ಮಾಡುವ ಕೆಲಸ ಮಾಡುತ್ತೇವೆ ಎಂದರು.
ಇಂತಹ ಸೇವೆ ಮಾಡುವವರ ಮೇಲೆ ನಮ್ಮ ಕಾಳಜಿ ಇರಬೇಕು. ಇಷ್ಟು ವರ್ಷ ಆದರೂ ಇವರ ಕಡೆ ಯಾರೂ ತಿರುಗಿಯೇ ನೋಡಿಲ್ಲ. ಯಾವ ಸರ್ಕಾರ ಕೂಡ ಇವರ ಕಡೆ ನೋಡಿಯೇ ಇಲ್ಲ. ಪೌರಕಾರ್ಮಿಕರ ಖಾಯಂ ಮಾಡುವಾಗ ಸಾಕಷ್ಟು ಚರ್ಚೆಯಾಯಿತು. ನಾವು ನಾಗರೀಕರಾಗಿ ಬದುಕುತ್ತಿದ್ದರೆ ಅದಕ್ಕೆ ಅವರೇ ಕಾರಣ. 40 ಸಾವಿರ ಪೌರಕಾರ್ಮಿಕರ ಖಾಯಂ ಉದ್ಯೋಗ ನೀಡುವ ಕೆಲಸ ಮಾಡುತ್ತೇವೆ. ಈಗಾಗಲೇ 11 ಸಾವಿರ ಖಾಯಂ ಮಾಡಿದ್ದೇವೆ ಎಂದು ಹೇಳಿದರು.
ರಾಜ್ಯದಲ್ಲಿ ಬಡವರು, ಜನಗಳ ಪರ ಸರ್ಕಾರವಿದೆ. ತಳಸಮುದಾಯದ ವಿಚಾರದಲ್ಲಿ ಸರ್ಕಾರ ಹತ್ತು ಹಲವು ನಿರ್ಣಯ ತೆಗೆದುಕೊಳ್ಳಲಿದೆ. ಸ್ಮಶಾನ ಕಾರ್ಮಿಕರು ಮುಕ್ತಿ ನೀಡುವ ಕೆಲಸ ಮಾಡುತ್ತಾರೆ. ಬದುಕಿದ್ದಾಗ ಅಷ್ಟೇ ಭೂಮಿ, ಸತ್ತ ಮೇಲೆ ನಾವು ಭೂಮಿ ಒಂದೇ. ನನ್ನ ಜೀವನದಲ್ಲಿ ಸತ್ಯ ಹರಿಶ್ಚಂದ್ರ ಪ್ರತಿಮೆ ಸಿಕ್ಕಿದ್ದು ಇದೇ ಮೊದಲು. ನಾನು ದಿನನಿತ್ಯ ಪೂಜಿಸುವ ಕಡೆ ಈ ಸತ್ಯ ಹರಿಶ್ಚಂದ್ರ ಪ್ರತಿಮೆ ಇಡುತ್ತೇನೆ. ಇನ್ನುಮೇಲೆ ಇವರು ಸ್ಮಶಾನ ಕಾರ್ಮಿಕರಲ್ಲ. ಇವರು ಸತ್ಯ ಹರಿಶ್ಚಂದ್ರ ಬಳಗದವರು ಬೇರೆ ಎಲ್ಲ ವೃತ್ತಿಗಳ ರೀತಿ ಇವರೂ ಪೌರ ನೌಕರರು ಎಂದರು.
ಇದಕ್ಕೂ ಮೊದಲು ಮಾತನಾಡಿದ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಸ್ಮಶಾನದಲ್ಲಿ ಕೆಲಸ ಮಾಡುವ ಕಾರ್ಮಿಕರು ಬಹಳ ದಿನಗಳಿಂದ ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳುತ್ತಿದ್ದರು. ತಮ್ಮೊಂದಿಗೆ ಉಪಾಹಾರಕ್ಕೆ ಬರಲಿ ಎಂದು ಹೇಳಿದ ನಿದರ್ಶನವನ್ನು ನನ್ನ ರಾಜಕಾರಣದ ಜೀವನದಲ್ಲಿ ಮೊದಲ ಬಾರಿಗೆ ಇಂತಹ ಅಪರೂಪದ ಸಮಾರಂಭದಲ್ಲಿ ಪಾಲ್ಗೊಂಡಿದ್ದೇನೆ ಎಂದರು.




