ಪ್ರಜೆಗಳ ಹಿಡಿತದಿಂದ ಪ್ರಜಾಪ್ರಭುತ್ವ ಮತ್ಯಾರೋದೋ ಕೈಯಲ್ಲಿ ಸಿಲುಕಿದೆ: ಕೆ.ಎಸ್.ನಾಗರಾಜ್

3 years ago

ಪ್ರತಿದಿನವೂ ಪತ್ರಿಕೆಗಳನ್ನು ಗಮನಿಸುತ್ತಾ ರಾಜಕೀಯ ಸುದ್ದಿಗಳನ್ನು ಓದಿದಂತಹ ಸಂದರ್ಭದಲ್ಲಿ ಪ್ರಜಾಪ್ರಭುತ್ವ ಈ ಹಿಂದೆ ಮತದಾರರ, ಪ್ರಜ್ಞಾವಂತರ, ಬುದ್ಧಿಜೀವಿಗಳ, ಸಮಾಜಮುಖಿ ಚಿಂತಕರ, ಜನಪರ ಕಾಳಜಿಯ ಜನರ ಹಿಡಿತದಲ್ಲಿತ್ತು ಎನ್ನುವ ಸಂತೋಷವಿತ್ತು. ಆದರೆ ಈಗ ಇತ್ತೀಚಿನ ದಿನಗಳಲ್ಲಿ ಪ್ರಜಾಪ್ರಭುತ್ವ ದಳ್ಳಾಳಿಗಳ, ಹೆಣ್ಣಿನ ವ್ಯಾಪಾರ ಮಾಡುವ, ಭೂಗಳ್ಳರ, ಲೂಟಿಕೋರರ, ಹಿಡಿತದಲ್ಲಿ ಸಿಕ್ಕಿ ತನ್ನ ಮೂಲ ಆಶಯವನ್ನೇ ಕಳೆದುಕೊಳ್ಳುತ್ತಿದೆ.

ಆಪರೇಷನ್ ಕಮಲ ಎನ್ನುವ ಕೆಟ್ಟ ಸಂಸ್ಕೃತಿಯೊಂದು ತಲೆ ಎತ್ತಿ ಶಾಸಕರುಗಳ ಖರೀದಿಯ ಪ್ರಕ್ರಿಯೆ ಬಹಿರಂಗವಾಗಿಯೇ ಆರಂಭವಾಗಿ ಇದು ಎಲ್ಲ ಹಂತಕ್ಕೂ ತಲುಪಿದೆ. ಶಾಸಕರು, ಮಂತ್ರಿಗಳು, ಅಧಿಕಾರಿಗಳು ಇವರ ಕಛೇರಿಗಳಲ್ಲಿ ಅಥವಾ ಇವರ ಸುತ್ತುಮುತ್ತಲೂ ಸಜ್ಜನರು ಸುಳಿದಾಡುತ್ತಿದ್ದ ಕಾಲ ಮಾಯವಾಗಿ ಮಧ್ಯವರ್ತಿಗಳು ಇವರ ಎಲ್ಲ ರೀತಿಯ ಆಸೆಗಳನ್ನು ಪೂರೈಸುವವರು ಬೇಲಿಗಳನ್ನು ಹಾಕಿ ಇವರುಗಳನ್ನು ಬಂಧಿಸಿಟ್ಟಿದ್ದಾರೆ. ಹೀಗಾಗಿ ಇವರು ಹೇಳುವ ಎಲ್ಲ ಕೆಲಸಗಳು ಇವರು ಬಯಸುವ ರೀತಿಯ ಆಡಳಿತಾತ್ಮಕವಾದ ನಿರ್ಧಾರಗಳು ಸರ್ಕಾರಗಳಿಂದ ಜಾರಿಯಾಗುತ್ತಿದೆ. ಇದರಿಂದಾಗಿ ಇಂತಹ ಸಂಸ್ಕೃತಿಯ ಜನರ ಸಂಖ್ಯೆಯೂ ಹೆಚ್ಚಾಗುತ್ತಿದೆ. ಇವರುಗಳ ಪ್ರಭಾವ ದಿನದಿಂದ ದಿನಕ್ಕೆ ಪ್ರಜಾಪ್ರಭುತ್ವದ ಮೇಲೆ ಹೆಚ್ಚಾಗಿ ಹಿಡಿತವನ್ನು ಸಾಧಿಸುತ್ತಿದೆ. ಇತ್ತೀಚಿನ ದಿನಗಳಲ್ಲಿ ಕೆಟ್ಟ ರೀತಿಯ ವ್ಯವಹಾರಗಳನ್ನು ಮಾಡುವ ವ್ಯಕ್ತಿಗಳ ಹಿಡಿತದಲ್ಲಿ ಇರುವವರ ಪಟ್ಟಿಗಳನ್ನು ಮಾಧ್ಯಮಗಳಲ್ಲಿ ಗಮನಿಸುತ್ತಾ ಹೋದಾಗ ರಾಜಕೀಯ ಸಂಸ್ಕೃತಿ ಯಾವ ದಿಕ್ಕಿನತ್ತ ಸಾಗುತ್ತಿದೆ ಹಾಗೂ ಎಂತಹ ಅಪಾಯಕಾರಿಯಾದ ಬೆಳವಣಿಗೆ ನಾವು ಕಾಣುತ್ತಿದ್ದೇವೆ ಎನ್ನುವುದು ಅತ್ಯಂತ ಗಂಭೀರವಾಗಿ ಆಲೋಚಿಸಬೇಕಾದಂತಹ ಸಂಗತಿಯಾಗಿದೆ.

ನಮ್ಮ ನಾಯಕರುಗಳ ಮತ್ತು ಅಧಿಕಾರಿಗಳ ಬಹಳಷ್ಟು ಜನರ ದೌರ್ಬಲ್ಯಗಳು ಹೀಗೆಯೇ ಹೆಚ್ಚಾಗುತ್ತಾ ಹೋದರೆ ಮುಂದೊಂದು ದಿನ ಯಾವ ರೀತಿಯಲ್ಲಿ ಉದ್ಯಮಿಗಳು ರಾಜಕೀಯ ಅಧಿಕಾರವನ್ನು ಕಬಳಿಸಿದ್ದಾರೋ ಅದೇ ರೀತಿ ನೀಚರು, ಅಯೋಗ್ಯರು, ಮಧ್ಯವರ್ತಿಗಳು, ಹೆಣ್ಣಿನ ವ್ಯಾಪಾರಸ್ಥರು ಸರ್ಕಾರದ ಪಾಲುದಾರರಾಗುವಂತಹ ದಿನಗಳು ಬಂದರೂ ಅಚ್ಚರಿಯಿಲ್ಲ.
– ಕೆ.ಎಸ್‌. ನಾಗರಾಜ್‌, ಬೆಂಗಳೂರು

Leave a Reply