ಬೆಂಗಳೂರು: ರಾಜ್ಯದಲ್ಲಿ ಸಂಚಲನ ಮೂಡಿಸಿರುವ ಹಸುಗೂಸು ಮಾರಾಟ ಜಾಲದ ಆರೋಪಿಗಳು ಕಳೆದ ಮೂರು ವರ್ಷಗಳಿಂದ ವ್ಯವಸ್ಥಿತವಾಗಿ ಕೃತ್ಯ ನಡೆಸುತ್ತಿರುವುದು ಸಿಸಿಬಿ ಪೊಲೀಸರ ತನಿಖೆಯಲ್ಲಿ ಬಹಿರಂಗವಾಗಿದೆ.
ಬಂಧಿತ ಆರೋಪಿಗಳಿಂದ 20 ದಿನದ ಮಗುವೊಂದನ್ನು ರಕ್ಷಿಸಿ ವಿಚಾರಣೆ ನಡೆಸಿದ ವೇಳೆ ಕಳೆದ ಮೂರು ವರ್ಷಗಳಿಂದ ಕೃತ್ಯ ನಡೆಸಿ ಸುಮಾರು 60 ಹಸುಗೂಸುಗಳನ್ನು ಮಾರಾಟ ಮಾಡಿರುವ ಸಂಗತಿಯನ್ನು ಒಪ್ಪಿಕೊಂಡಿದ್ದಾರೆ.
ಆರೋಪಿಗಳು 2021 ರಿಂದ ಬಾಡಿಗೆ ತಾಯಿಯಾಗಿ ಮಕ್ಕಳನ್ನು ಕೊಡಿಸುವ ಏಜೆಂಟ್ ಗಳಾಗಿ ಕೆಲಸ ಮಾಡುತ್ತಿದ್ದು, 2021 ರ ಬಳಿಕ ಯಾರು ಗರ್ಭಪಾತ ಮಾಡಿಸಲು ಆಸ್ಪತ್ರೆಗೆ ಬರಲಿದ್ದಾರೆ ಎಂಬ ಮಾಹಿತಿ ತಿಳಿದು. ಅಂತವರನ್ನು ಸಂಪರ್ಕಿಸಿ ಅವರಿಗೆ ಗರ್ಭಪಾತ ಮಾಡಿಸಬೇಡಿ, ನಾವು ಮಗು ನೋಡಿಕೊಳ್ಳುವಾಗಿ ಮತ್ತು ಮಗು ಆಗುವವರೆಗೂ ಖರ್ಚು ವೆಚ್ಚ ಎಲ್ಲವೂ ನಮ್ಮದೆ, ಹೆರಿಗೆ ಬಳಿಕ ಮಗುವನ್ನು ನಮಗೆ ಕೊಡಿ ಎಂದು ಮನವೊಲಿಕೆ ಮಾಡಿ, ಹೆಣ್ಣು ಮಗುವಿಗೆ 2 ಲಕ್ಷ, ಗಂಡು ಮಗುವಿಗೆ 3 ಲಕ್ಷ ಕೊಡುವ ಒಪ್ಪಂದ ಮಾಡಿಕೊಳ್ಳುತ್ತಿದ್ದರು. ಆ ಮಕ್ಕಳನ್ನು ಹೊರಗಡೆ 8ರಿಂದ 10 ಲಕ್ಷಕ್ಕೆ ಮಾರಾಟ ಮಾಡುತ್ತಿದ್ದರು ಎಂಬ ಸಂಗತಿಯನ್ನು ಪೊಲೀಸರು ಬಹಿರಂಗಗೊಳಿಸಿದ್ದಾರೆ.
ಬಂಧಿತರು ಮಗು ಹುಟ್ಟಿದ ಬಳಿಕ ತಾಯಿಗೆ ಒಪ್ಪಂದದ ಹಣ ಕೊಟ್ಟು, ಆ ಮಕ್ಕಳ ಫೋಟೋಗಳನ್ನು ಅವರದೇ ಗ್ರೂಪಲ್ಲಿ ಶೇರ್ ಮಾಡುವಂತೆ ಹೇಳಿ ಕಿರಾಕಿಗಳಿಗೆ ಗಾಳ ಹಾಕುತ್ತಿದ್ದರು. ಮಗು ಅಗತ್ಯವಿರುವವರು ಸಂಪರ್ಕಿಸಿದರೆ ಲಿಂಗ, ಬಣ್ಣದ ಮೇಲೆ ಬೆಲೆ ನಿಗದಿಯಾಗುತ್ತಿತ್ತು.
ಹೆಣ್ಣು ಮಗು ಆದರೆ 4ರಿಂದ 6 ಲಕ್ಷ, ಗಂಡು ಮಗು ಆದರೆ, 8ರಿಂದ 10 ಲಕ್ಷಕ್ಕೆ ಮಾರಾಟ ಮಾಡುತ್ತಿದ್ದರು. ಇನ್ನು ಆರೋಪಿಗಳಲ್ಲಿ ಮುರುಗೇಶ್ವರಿ ತನ್ನದೇ ಮಗುವನ್ನು ಮಾರಾಟ ಮಾಡಲು ಮುಂದಾಗಿದ್ದರು. ಜನನ ಪತ್ರವನ್ನೂ ಅಕ್ರಮವಾಗಿ ಮಾಡಿಕೊಟ್ಟಿರುವುದು ತನಿಖೆ ವೇಳೆ ಬಹಿರಂಗವಾಗಿದೆ.
ಕೆಲ ಆಸ್ಪತ್ರೆಗಳ ವೈದ್ಯರೇ ದಂಧೆಕೋರರಿಗೆ ಮಾಹಿತಿದಾರರಾಗಿದ್ದು ಆಸ್ಪತ್ರೆಗೆ ಗರ್ಭಪಾತಕ್ಕೆ ಬರುವವರ ಮಾಹಿತಿಯನ್ನು ಪಡೆದ ವೈದ್ಯರು, ಮಾಹಿತಿ ಜೊತೆಗೆ ವಿಳಾಸ ಹಾಗೂ ಮೊಬೈಲ್ ನಂಬರ್ ಪಡೆದು ನಂತರ ಅದೇ ಮಾಹಿತಿಯನ್ನು ದಂಧೆಕೋರರಿಗೆ ಕೊಡುತ್ತಿದ್ದರು.
ಈ ದಂಧೆಕೋರರು ತಮಿಳುನಾಡು ಹಾಗೂ ಕರ್ನಾಟಕದಲ್ಲಿ ಎರಡು ತಂಡಗಳಾಗಿ ಕೆಲಸ ಮಾಡುತ್ತಿದ್ದು, ತಮಿಳುನಾಡಿನಲ್ಲಿ ರಾಧ ಮತ್ತವಳ ತಂಡವಿದ್ದರೆ, ಕರ್ನಾಟಕದಲ್ಲಿ ಮಹಾಲಕ್ಷ್ಮೀ ಮತ್ತವಳ ಗ್ಯಾಂಗ್ ಇತ್ತು. ತಮಿಳುನಾಡಿನ ಮಕ್ಕಳನ್ನು ಕರ್ನಾಟಕದಲ್ಲಿ, ಕರ್ನಾಟಕದ ಮಕ್ಕಳನ್ನು ತಮಿಳುನಾಡಿನಲ್ಲಿ ಮಾರಾಟ ಮಾಡುತ್ತಿದ್ದರು. ಆರೋಪಿಗಳಿಗೆ ಯಾರೆಲ್ಲ ವೈದ್ಯರು ಮಾಹಿತಿ ನೀಡುತ್ತಿದ್ದರು ಎಂಬ ಬಗ್ಗೆ ತನಿಖೆ ನಡೆಯುತ್ತಿದ್ದು ಬಳಿಕ ವೈದ್ಯರ ಬಂಧನ ಕಾರ್ಯಾಚರಣೆ ನಡೆಯಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದರು.
ಆರೋಪಿ ಶರಣ್ಯ ಮತ್ತೊಬ್ಬ ಆರೋಪಿ ರಾಧ ಮಗುವನ್ನು ಮಾರಾಟ ಮಾಡುವಾಗ ಜೊತೆಗೆ ಹೋಗುವುದು ಮಾರಾಟದ ಹಣವನ್ನು ಪಡೆಯುವ ಕೆಲಸ ಮಾಡುತ್ತಿದ್ದರು. ಆರೋಪಿ ಸುಹಾಸಿನಿ ಮಕ್ಕಳು ಯಾರಿಗೆ ಬೇಕು ಮತ್ತು ಮಕ್ಕಳನ್ನು ಯಾರು ಕೊಡಲು ಒಪ್ಪುತ್ತಾರೆ ಅವರ ಜೋಪಾನ ಮಾಡುತ್ತಿದ್ದಳು.
ಆರೋಪಿ ರಾಧ ತಮಿಳುನಾಡು ಗ್ಯಾಂಗ್ ನ ಲೀಡರ್ ಆಗಿ ಕೆಲಸ ನಿರ್ವಹಿಸುತ್ತಿದ್ದು, ತಂಡದ ಹೇಮಲತಾ ಮತ್ತು ಶರಣ್ಯರನ್ನು ಕಳುಹಿಸಿ ಮಗುವನ್ನು ಕೊಟ್ಟು ಹಣ ಪಡೆಯುವ ಕೆಲಸ ಮಾಡಿಸುತ್ತಿದ್ದಳು. ಆರೋಪಿ ಕಣ್ಣನ್ ರಾಮಸ್ವಾಮಿ ಏಜೆಂಟ್ ಆಗಿದ್ದುಕೊಂಡು, ನಗರದ ಮಹಾಲಕ್ಷ್ಮಿ ಜೊತೆ ಸಂಪರ್ಕ ಹೊಂದಿ ಬೆಂಗಳೂರಿನಲ್ಲಿ ಮಗು ಸಿಕ್ಕರೆ ತಮಿಳುನಾಡಿಗೆ ಕೊಂಡೊಯ್ಯುವ ಕೆಲಸ ಮಾಡುತ್ತಿದ್ದ ಎಂದು ಮಾಹಿತಿ ಸಿಕ್ಕಿದೆ.
ಆರೋಪಿ ಮಹಾಲಕ್ಷ್ಮಿ ಕರ್ನಾಟಕದಲ್ಲಿ ಗ್ಯಾಂಗ್ ನ ಲೀಡರ್ ಆಗಿದ್ದು, ಮಗು ಯಾರಿಗೆ ಬೇಕು ಎಂದು ಮಾಹಿತಿ ಪಡೆದು ತಮಿಳುನಾಡಿದ ಗ್ಯಾಂಗ್ ನೀಡುತ್ತಿದ್ದು, ಆಗ ತಮಿಳುನಾಡಿನ ಗ್ಯಾಂಗ್ ಕೆಲಸ ಶುರು ಮಾಡುತ್ತಿತ್ತು. ಆರೋಪಿ ಗೋಮತಿ ತಮಿಳುನಾಡಿನಿಂದ ಮಗು ಮತ್ತು ಮಗುವಿನ ತಾಯಿಯನ್ನು ಕರೆದುಕೊಂಡು ಬಂದರೆ, ಹೇಮಲತಾ ಆರೋಪಿ ರಾಧ ಹೇಳಿದಂತೆ ಮಗುವನ್ನು ತಂದು ಕೊಡುವ ಕೆಲಸ ಮಾಡುತ್ತಿದ್ದಳು. ಮಕ್ಕಳ ಮಾರಾಟದ ಜಾಲದಲ್ಲಿ ಇನ್ನು ಹಲವರು ಭಾಗಿಯಾಗಿರುವ ಅನುಮಾನ ಸಿಸಿಬಿ ಪೊಲೀಸರಿಗೆ ವ್ಯಕ್ತವಾಗಿದ್ದು, ಪೊಲೀಸರು ಎಲ್ಲ ನಿಟ್ಟಿನಿಂದ ತನಿಖೆಯನ್ನು ತೀವ್ರಗೊಳಿಸಿರುವುದಾಗಿ ಮಾಹಿತಿ ನೀಡಿದ್ದಾರೆ.




