ಬೆಂಗಳೂರು: ಕೆಲಸದ ಬೇಟೆಯಲ್ಲಿರುವ ಉದ್ಯೋಗಾಕಾಂಕ್ಷಿಗಳನ್ನು ಸಂಪರ್ಕಿಸಿ, ದುಬಾರಿ ಸಂಬಳದ ಖಾಯಂ ಉದ್ಯೋಗ ಕೊಡಿಸುವುದಾಗಿ ನಂಬಿಸಿ ಹಣ ಪಡೆದು ವಂಚಿಸಿ ಸುಮಾರು ಇಪ್ಪತ್ತು ಕೋಟಿ ರೂಪಾಯಿ ಸಂಪಾದಿಸಿದ ಹೈಟೆಕ್ ವಂಚಕನನ್ನು ಬಂಧಿಸಿರುವ ಬೆಂಗಳೂರು ಪೊಲೀಸರು ಈ ಕುರಿತ ವ್ಯವಸ್ಥಿತ ಜಾಲವನ್ನು ಪತ್ತೆ ಹಚ್ಚಿದ್ದಾರೆ.
ಹೈಟೆಕ್ ವಂಚಕ ಪವನ್ ಕುಮಾರ್ ಬಂಧಿತ ಆರೋಪಿ. ಬಂಧಿತ ಆರೋಪಿ ಒಂದೂ ಸಾವಿರಕ್ಕೂ ಹೆಚ್ಚು ಯುವಕ ಯುವತಿಯರಿಗೆ ಮೋಸ ಮಾಡಿ ಲಕ್ಷಾಂತರ ವಂಚಿಸಿದ ಆರೋಪ ಕೇಳಿಬಂದಿದೆ.
ಬಂಧಿತ ಆರೋಪಿ ಪವನ್ ಕುಮಾರ್ ಸೈಮಕ್ ಟೆಕ್ನಾಲಜಿ ಎಂಬ ಕಂಪನಿ ತೆರೆದಿದ್ದ. ಟೆಕ್ ಪಾರ್ಕ್ ನಲ್ಲಿ ಕಚೇರಿ ಮಾಡುತ್ತಿದ್ದು, ನಮ್ಮ ಕಂಪನಿಯಲ್ಲಿ ಉದ್ಯೋಗ ನೀಡಲಾಗುವುದು ಎಂದು ಪರಿಚಯಸ್ಥರ ಮೂಲಕ ನಿರುದ್ಯೋಗಿ ಯುವಕ, ಯುವತಿಯರಿಗೆ ಗಾಳ ಹಾಕುತ್ತಿದ್ದ.
ಪವನ್ ಮತ್ತು ತಂಡ ಆಂಧ್ರ ಮೂಲದ ವಿದ್ಯಾವಂತರನ್ನೇ ಹೆಚ್ಚು ಗುರಿಯಾಗಿಸಿಕೊಂಡಿದ್ದು, ಇದುವರೆಗೂ ಒಂದು ಸಾವಿರಕ್ಕೂ ಹೆಚ್ಚು ಯುವಕ ಯುವತಿಯರಿಗೆ ಮೋಸ ಮಾಡಿ 20 ಕೋಟಿಗೂ ಅಧಿಕ ವಂಚನೆ ನಡೆಸಿರುವ ಮಾಹಿತಿ ಸಿಕ್ಕಿದೆ.
ಉದ್ಯೋಗಾಕಾಂಕ್ಷಿಗಳಿಗೆ ಪವನ್ ಮತ್ತವನ ತಂಡ ವರ್ಷಕ್ಕೆ ಐದು ಲಕ್ಷ ಪ್ಯಾಕೇಜ್ ನೀಡುವ ಆಮಿಷವೊಡ್ಡುತ್ತಿತ್ತು. ಅಷ್ಟೇ ಅಲ್ಲ ಬೇರೆ ಕಂಪನಿಯಲ್ಲಿಯೂ ಕೆಲಸ ಕೊಡಿಸುವುದಾಗಿ ನಂಬಿಸುತ್ತಿತ್ತು.
ಬಳಿಕ ಒಬ್ಬೊಬ್ಬರಿಂದ ಒಂದರಿಂದ ಎರಡು ಲಕ್ಷದವರೆಗೆ ಸುಲಿಗೆ ಮಾಡುತ್ತಿದ್ದು ಸೆಕೆಂಡ್ ಹ್ಯಾಂಡ್ ಲ್ಯಾಪ್ ಟಾಪ್ ಕೊಟ್ಟು ಕೆಲಸಕ್ಕೆ ಸೇರಿಸಿಕೊಳ್ಳುತ್ತಿದ್ದರು.
ಒಂದು ತಿಂಗಳ ಸಂಬಳ ಕೂಡ ನೀಡಿ ಬಳಿಕ ಕಂಪನಿಯ ಬಾಗಿಲು ಮುಚ್ಚಿ ಪರಾರಿಯಾಗುತ್ತಿದ್ದರು. ಹೀಗೆ ನಗರದ ಬೇರೆ ಬೇರೆ ಭಾಗಗಳಲ್ಲಿ ವಂಚನೆ ಮಾಡಿದ್ದಾರೆ. ಹಣ ಕಳೆದುಕೊಂಡ ಯುವಕ, ಯುವತಿಯರು ಕಂಗಾಲಾಗಿ ವೈಟ್ ಫೀಲ್ಡ್ ಪೊಲೀಸ್ ಠಾಣೆಗೆ ದೂರು ನೀಡಿದ್ದು,ಪ್ರಕರಣ ದಾಖಲಿಸಿ ಕಾರ್ಯಾಚರಣೆ ಕೈಗೊಂಡ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಸಾವಿರಕ್ಕೂ ಅಧಿಕ ಜನರನ್ನು ವಂಚಿಸಿದ್ದ ಪವನ್ ತನ್ನ ವಿರುದ್ಧ ಪ್ರಕರಣ ದಾಖಲಾಗುತ್ತಿದ್ದಂತೆ ನಾಪತ್ತೆಯಾಗಿದ್ದ. ಪ್ರಕರಣ ದಾಖಲಿಸಿಕೊಂಡಿದ್ದ ವೈಟ್ ಫೀಲ್ಡ್ ಪೊಲೀಸರು ಈತನ ಸಂಪರ್ಕ ಜಾಲವನ್ನು ಪತ್ತೆಹಚ್ಚಿ ದೆಹಲಿಯಲ್ಲಿ ಕುಳಿತಿದ್ದ ಆರೋಪಿಯನ್ನು ನಗರಕ್ಕೆ ಕರೆಸಿಕೊಂಡಿದೆ.
ಬಡ ಪಟ್ಟಿಗೆ ಈತ ಬಗ್ಗುವ ಆಸಾಮಿಯಲ್ಲ. ಪೊಲೀಸರು ಸಂತ್ರಸ್ತರ ಜೊತೆ ಸೇರಿ ಪ್ರಯತ್ನ ನಡೆಸಿ ಮೂವತ್ತು ಮಂದಿ ಕಂಪನಿ ಸೇರಿಕೊಳ್ಳಲು ಬಂದಿದ್ದಾರೆ. ಹಣದ ಜೊತೆಗೆ ರೆಡಿ ಇರುವುದಾಗಿ ನಂಬಿಸಿದ್ದು ಕೂಡಲೇ ವಿಮಾನದಲ್ಲಿ ಬಂದ ಅವನನ್ನು ನಗರದ ಖಾಸಗಿ ಹೋಟೆಲ್ ಗೆ ಕರೆಸಿಕೊಂಡು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.




