ಪೈಕಿ ಮತ್ತು ಪಹಣಿ ಸಮಸ್ಯೆ ಬಗೆಹರಿಸಲು ಅಧಿಕಾರ ಎರಡು ತಿಂಗಳ ಗಡುವು
32 ಲಕ್ಷ ರೈತರ ಖಾತೆಗೆ ರೂ.575 ಕೋಟಿ ಪರಿಹಾರದ ಹಣ ಬಿಡುಗಡೆ
ತಹಶೀಲ್ದಾರ್ ನ್ಯಾಯಾಲಯಗಳ ತಕರಾರು ಪ್ರಕರಣಗಳ ಶೀಘ್ರ ವಿಲೇ: ಸಚಿವರು ಸಂತಸ
ಇ-ಆಫೀಸ್ ಬಳಕೆಯಲ್ಲೂ ಕೊಡಗು ಜಿಲ್ಲೆ ಉತ್ತಮ ಸಾಧನೆ
ಪ್ರಾಯೋಗಿಕ ಭೂ ಸುರಕ್ಷಾ ಯೋಜನೆಗೆ ಕೊಡಗಿನಲ್ಲಿ ಚಾಲನೆ
ಕೊಡಗು: ಪೈಕಿ ಮತ್ತು ಪಹಣಿ ಕಾಲಂ 3 ಮತ್ತು 9ರಲ್ಲಿ ವ್ಯತ್ಯಾಸವಿರುವ ಪ್ರಕರಣಗಳ ಸಂಖ್ಯೆ ಕೊಡಗಿನಲ್ಲಿ ಅಧಿಕವಾಗಿದ್ದು ದಶಕಗಳ ಕಾಲದಿಂದ ಉಳಿದಿದ್ದ ಈ ಎಲ್ಲಾ ಸಮಸ್ಯೆಗಳಿಗೂ ಮುಕ್ತಿ ಸನ್ನಿಹಿತ ಎಂದು ಸಚಿವ ಕೃಷ್ಣ ಬೈರೇಗೌಡ ಸೂಚಿಸಿದರು.
ಕೊಡಗಿನ ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ಸೋಮವಾರ ಪ್ರಗತಿ ಪರಿಶೀಲನಾ ಸಭೆ ನಡೆಸಿ ಮಾತನಾಡಿದ ಅವರು, “ಪ್ರಸ್ತುತ ರಾಜ್ಯಾದ್ಯಂತ ಪೈಕಿ ಮತ್ತು ಪಹಣಿ ಕಾಲಂ 3 ಮತ್ತು 9ರಲ್ಲಿ ವ್ಯತ್ಯಾಸವಿರುವ ಪ್ರಕರಣಗಳ ಸಂಖ್ಯೆ ಒಟ್ಟಾರೆ 1,32,618. ಈ ಪೈಕಿ ಕೊಡಗಿನಲ್ಲೇ ಸುಮಾರು 60,000ಕ್ಕೂ ಹೆಚ್ಚಿನ ಪ್ರಕರಣಗಳಿವೆ” ಎಂದು ವಿಷಾಧಿಸಿದರು.
ಸಮಸ್ಯೆಯ ಕಾರಣಗಳ ಕುರಿತು ಸಭೆಯಲ್ಲಿ ಚರ್ಚಿಸಿದ ಅವರು, “ಸೋಮವಾರ ಪೇಟೆ ತಾಲೂಕಿನಲ್ಲಿ ಅಧಿಕ ಸಂಖ್ಯೆಯಲ್ಲಿ ಸರ್ಕಾರಿ ಮಂಜೂರು ಭೂಮಿ ಇದ್ದರೆ, ಉಳಿದ ತಾಲೂಕುಗಳಲ್ಲಿ ಜಮಾ ಬಾಣೆ ಭೂಮಿ ಹೆಚ್ಚಿದೆ. ಹೀಗಾಗಿ ಪೈಕಿ ಮತ್ತು ಪಹಣಿ ಕಾಲಂ 3 ಮತ್ತು 9ರಲ್ಲಿ ವ್ಯತ್ಯಾಸವಿರುವ ಪ್ರಕರಣಗಳ ಸಂಖ್ಯೆಯೂ ಅಧಿಕವಾಗಿದೆ. ಈ ಸಮಸ್ಯೆ ಬಗೆಹರಿಸುವಂತೆ ಅಲ್ಲಿನ ಸ್ಥಳೀಯ ಶಾಸಕರು ಒತ್ತಾಯಿಸುತ್ತಿದ್ದಾರೆ. ಹೀಗಾಗಿ ಕೊಡಗಿನಲ್ಲಿ ವಿಶೇಷ ಆದ್ಯತೆಯ ಮೇಲೆ ಕೆಲಸ ನಿರ್ವಹಿಸುವ ತುರ್ತು ಇದೆ. ಸಂಬಂಧಿತ ಕಂದಾಯ ಮತ್ತು ಸರ್ವೇ ಇಲಾಖೆ ಹಿರಿಯ ಅಧಿಕಾರಿಗಳು ಈಗಲೇ ಕೊಡಗಿಗೆ ತೆರಳಿ ಸರ್ವೇ ತಯಾರಿ ಕೆಲಸ ಆರಂಭಿಸಬೇಕು. ಲೈಸೆನ್ಸ್ ಸರ್ವೇಯರ್ ಗಳ ಸಹಾಯ ಪಡೆದುಕೊಳ್ಳಿ. ಗ್ರಾಮ ಲೆಕ್ಕಿಗರಿಗೂ ಸರ್ವೇ ತರಬೇತಿ ನೀಡಿ ಎಂದರು.
ಈ ಕೆಲಸಕ್ಕೆ ಹೊಸ ತಂತ್ರಜ್ಞಾನ ಮತ್ತು ಉಪಕರಣಗಳನ್ನು ಬಳಸಿಕೊಳ್ಳಿ. ಕಂದಾಯ ಇಲಾಖೆ ಅಧಿಕಾರಿಗಳು ತಮ್ಮನ್ನು ಸಂಪೂರ್ಣ ತೊಡಗಿಸಿಕೊಂಡು ಸರ್ವೇ ಕೆಲಸವನ್ನು ಮುಂದಿನ 60 ದಿನಗಳಲ್ಲಿ ಪೂರೈಸಬೇಕು. ಕಂದಾಯ ಅಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳು ಪ್ರತಿ 15 ದಿನಗಳಿಗೊಮ್ಮೆ ಸಭೆ ನಡೆಸಿ ಚರ್ಚಿಸಬೇಕು” ಎಂದು ಅವರು ಅಧಿಕಾರಿಗಳಿಗೆ ಸೂಚಿಸಿದರು.
32 ಲಕ್ಷ ರೈತರಿಗೆ 575 ಕೋಟಿ ಹಣ ಬಿಡುಗಡೆ: ರಾಜ್ಯಾದ್ಯಂತ ಬರ ಪೀಡಿತ ಪ್ರದೇಶಗಳಲ್ಲಿ ಪ್ರತಿ ರೈತರಿಗೆ ತಲಾ 2,000 ರೂ. ನಂತೆ 32 ಲಕ್ಷ ರೈತರಿಗೆ ಈವರೆಗೆ 575 ಕೋಟಿ ರೂ. ಹಣವನ್ನು ಪರಿಹಾರದ ರೂಪದಲ್ಲಿ ರಾಜ್ಯ ಸರ್ಕಾರವೇ ಬಿಡುಗಡೆ ಮಾಡಿದೆ ಎಂದು ಸಭೆಯಲ್ಲಿ ಅವರು ತಿಳಿಸಿದರು.
ರಾಜ್ಯದಲ್ಲಿ ಈ ವರ್ಷ ಇತಿಹಾಸ ಕಾಣದ ಬರ ಎದುರಾಗಿದೆ. ಕೇಂದ್ರದಿಂದ ಬರ ಪರಿಹಾರ ಈವರೆಗೆ ಲಭ್ಯವಾಗಿಲ್ಲ. ಹೀಗಾಗಿ ರಾಜ್ಯ ಸರ್ಕಾರವೇ ಮೊದಲ ಕಂತಿನಲ್ಲಿ ರೈತರಿಗೆ 2,000 ರೂ ನೀಡಲು ನಿರ್ಧರಿಸಿ ಈಗಾಗಲೇ 32 ಲಕ್ಷ ರೈತರಿಗೆ ಪರಿಹಾರದ ಹಣ ನೀಡಲಾಗಿದೆ. ಕೊಡಗಿನಲ್ಲೂ ಸಹ 11,000 ರೈತರಿಗೆ 1.5 ಕೋಟಿ ರೂ. ಬಿಡುಗಡೆ ಮಾಡಲಾಗಿದೆ ಎಂದು ಅವರು ಮಾಹಿತಿ ನೀಡಿದರು.
ರೈತರ ಪರಿಹಾರದ ಹಣ ದುರುಪಯೋಗ ತಡೆಗಟ್ಟಲು ಈ ಬಾರಿ ಕಠಿಣ ಕ್ರಮ ತೆಗೆದುಕೊಳ್ಳಲಾಗಿದೆ. ಫ್ರೂಟ್ಸ್ ತಂತ್ರಾಂಶದ ಮೂಲಕ ಎಲ್ಲಾ ರೈತರಿಗೆ ಪರಿಹಾರದ ಹಣವನ್ನು ನೇರವಾಗಿ ಬ್ಯಾಂಕ್ ಖಾತೆಗೆ ಪಾರದರ್ಶಕವಾಗಿ ಜಮಾ ಮಾಡಲಾಗಿದೆ ಎಂದು ಅವರು ತಿಳಿಸಿದರು.
ಕುಡಿಯುವ ನೀರು ಪೂರೈಸಿ: ಕೊಡಗು ಜಿಲ್ಲೆಯ ಯಾವುದೇ ಭಾಗದಲ್ಲಿ ಎಲ್ಲೇ ಕುಡಿಯುವ ನೀರಿನ ಸಮಸ್ಯೆ ಉಂಟಾದರೂ ಖಾಸಗಿ ಟ್ಯಾಂಕರ್ ಮೂಲಕ ನೀರು ಪೂರೈಸಿ ಎಂದು ಅವರು ಸಭೆಯಲ್ಲಿ ಅಧಿಕಾರಿಗಳಿಗೆ ಸೂಚಿಸಿದರು.
ಈ ವರ್ಷ ಬರಗಾಲ ಎದುರಾಗಿದೆ. ಮುಂದಿನ ಬೇಸಿಗೆ ಅಥವಾ ಅದಕ್ಕೂ ಮುನ್ನವೇ ಕೊಡಗಿನ ಕೆಲವೆಡೆ ಕುಡಿಯುವ ನೀರಿನ ಸಮಸ್ಯೆ ಎದುರಾಗುವ ಸಾಧ್ಯತೆ ಇದೆ. ಹೀಗಾಗಿ ಅಧಿಕಾರಿಗಳು ಎಲ್ಲೆಲ್ಲಿ ನೀರಿನ ಸಮಸ್ಯೆ ಇದೆ ಎಂದು ಸರ್ವೆ ನಡೆಸಿ ನೀರಿನ ಸಮಸ್ಯೆ ಕಂಡುಬರುವ ಕಡೆಗಳಲ್ಲಿ ಖಾಸಗಿ ಟ್ಯಾಂಕರ್ ಮೂಲಕ ನೀರನ್ನು ಪೂರೈಸಬೇಕು ಎಂದರು.
ರಾಜ್ಯಾದ್ಯಂತ ಈಗಾಗಲೇ 3000 ಖಾಸಗಿ ಬೋರ್ ವೆಲ್‌ಗಳನ್ನು ಗುರುತಿಸಲಾಗಿದೆ. ಕೊಡಗಿನಲ್ಲೂ ಸಹ ಅಧಿಕಾರಿಗಳು ಯಾವ ಭಾಗದಲ್ಲೂ ಸಾರ್ವಜನಿಕರು ನೀರಿನ ಸಮಸ್ಯೆ ಎದುರಿಸದಂತೆ ನೋಡಿಕೊಳ್ಳಿ, ಈ ಖರ್ಚಿಗೆ ಜಿಲ್ಲಾಧಿಕಾರಿಗಳ ಖಾತೆಯಿಂದ ಎಸ್ ಡಿ ಆರ್ ಎಫ್ ಹಣವನ್ನು ಬಳಸಿಕೊಳ್ಳಿ ಎಂದು ಸಲಹೆ ನೀಡಿದರು.
ಮೇವು ಪೂರೈಕೆಗೆ ಸೂಚನೆ: ಜನವರಿ, ಫೆಬ್ರುವರಿ ಮತ್ತು ಮಾರ್ಚ್ನಲ್ಲಿ ಜಾನುವಾರುಗಳಿಗೆ ಮೇವಿನ ಪೂರೈಕೆಗೆ ಅನುಕೂಲವಾಗುವಂತೆ ರಾಜ್ಯಾದ್ಯಂತ 7,63,000 ಮೇವಿನ ಬೀಜದ ಕಿಟ್‌ಗಳನ್ನು ವಿತರಿಸಲಾಗಿದೆ. ಕೊಡಗು ಜಿಲ್ಲೆಗೂ ಈಗಾಗಲೇ ಅಗತ್ಯ ಮೇವಿನ ಕಿಟ್ ಗಳನ್ನು ರವಾನಿಸಲಾಗಿದೆ. ಈ ಕಿಟ್‌ಗಳನ್ನು ಗ್ರಾಮಪಂಚಾಯತಿ ಮಟ್ಟದಲ್ಲಿ ಪಾರದರ್ಶಕವಾಗಿ ವಿತರಿಸಬೇಕು. ಈ ಕೆಲಸಕ್ಕೆ ಹಾಲು ಉತ್ಪಾಕರ ಸಹಕಾರ ಸಂಘದ ಸಹಾಯ ಪಡೆದುಕೊಳ್ಳಿ ಎಂದು ಅವರು ಅಧಿಕಾರಿಗಳಿಗೆ ಸೂಚಿಸಿದರು
ರೈತರಿಗೆ ಉಚಿತ ಮೇವಿನ ಕಿಟ್ ವಿತರಿಸಲು ಹೆಚ್ಚುವರಿ 20 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಅಲ್ಲದೆ, ರಾಜ್ಯದ ಮೇವನ್ನು ಬೇರೆಡೆ ಸಾಗಿಸದಂತೆ ನವೆಂಬರ್ 22ರಂದೇ ನಿರ್ಬಂಧ ಆದೇಶ ಹೊರಡಿಸಲಾಗಿದೆ. ನೀರು ಸರಬರಾಜು, ಮೇವು ಖರೀದಿ ಸೇರಿದಂತೆ ಬರ ನಿರ್ವಹಣೆಗಾಗಿ ಜಿಲ್ಲಾಧಿಕಾರಿಗಳ ಖಾತೆಯಲ್ಲೂ ಅಗತ್ಯ ಹಣ ಇದೆ ಎಂದು ಅವರು ಮಾಹಿತಿ ನೀಡಿದರು.
ತಕರಾರು ಪ್ರಕರಣ ಶೀಘ್ರ ವಿಲೇ: ಸಚಿವರು ಸಂತಸ: ಕೊಡಗಿನ ಎಲ್ಲಾ ತಾಲೂಗಳ ತಹಶೀಲ್ದಾರ್ ನ್ಯಾಯಾಲಯಗಳಲ್ಲಿ ಒಂದು ವರ್ಷಕ್ಕಿಂತ ಹೆಚ್ಚು ಕಾಲ ಬಾಕಿ ಇರುವ ತಕರಾರು ಪ್ರಕರಣಗಳ ವಿಲೇವಾರಿ ಚುರುಕುಗೊಂಡಿರುವುದು ಉತ್ತಮ ಬೆಳವಣಿಗೆ ಎಂದು ಅವರು ಸಂತಸ ವ್ಯಕ್ತಪಡಿಸಿದರು.
ಐದು ತಿಂಗಳ ಹಿಂದೆ ತಹಶೀಲ್ದಾರ್ ನ್ಯಾಯಾಲಯಗಳಲ್ಲಿ ಒಂದು ವರ್ಷಕ್ಕಿಂತ ಮೇಲ್ಪಟ್ಟ 2315 ಪ್ರಕರಣಗಳಿದ್ದವು. ಆದರೆ, ಈ ಪ್ರಕರಣಗಳ ಸಂಖ್ಯೆ ಇದೀಗ ಕೇವಲ 107 ಕ್ಕೆ ಇಳಿದಿದೆ. ಈ ಮೊದಲು ಒಂದು ಪ್ರಕರಣದ ಇತ್ಯರ್ಥಕ್ಕೆ 260 ದಿನಗಳು ತೆಗೆದುಕೊಳ್ಳುತ್ತಿತ್ತು. ಆದರೆ, ಪ್ರಸ್ತುತ 90 ದಿನಗಳಲ್ಲೇ ತಕರಾರು ಪ್ರಕರಣಗಳು ಇತ್ಯರ್ಥವಾಗುತ್ತಿರುವುದು ಉತ್ತಮ ಬೆಳವಣಿಗೆ ಎಂದರು.
ಆದರೆ, ಉಪ ವಿಭಾಗಾಧಿಕಾರಿ (ಎಸಿ) ನ್ಯಾಯಾಲಯಗಳಲ್ಲಿ ಬಾಕಿ ಇರುವ ಪ್ರಕರಣಗಳ ಇತ್ಯರ್ಥ ಇನ್ನೂ ವೇಗಗೊಂಡಿಲ್ಲ. ಎಸಿ ಗಳ ಕಾರ್ಯವೈಖರಿ ತೃಪ್ತಿಕರವಾಗಿಲ್ಲ. ಹೀಗಾಗಿ ಜಿಲ್ಲಾಧಿಕಾರಿಗಳು ಈ ಬಗ್ಗೆ ಹೆಚ್ಚಿನ ಗಮನವಹಿಸಬೇಕು ಎಂದು ಸೂಚಿಸಿದರು.
ಬಗರ್ ಹುಕುಂ ವಿಲೇಗೆ 8 ತಿಂಗಳ ಗಡುವು: ಜಿಲ್ಲೆಯಲ್ಲಿ ಸಾವಿರಾರು ಬಗರ್ ಹುಕುಂ ಅರ್ಜಿಗಳು ಸಲ್ಲಿಕೆಯಾಗಿದ್ದು ಮುಂದಿನ 8 ತಿಂಗಳಲ್ಲಿ ಈ ಎಲ್ಲಾ ಅರ್ಜಿಗಳನ್ನೂ ವಿಲೇಗೊಳಿಸಿ ಅರ್ಹರಿಗೆ ಭೂಮಿ ನೀಡಬೇಕು ಎಂದು ಅವರು ಅಧಿಕಾರಿಗಳಿಗೆ ಸೂಚಿಸಿದರು.
ಫಾರ್ಮ್ 57ರ ಅಡಿಯಲ್ಲಿ ಸಲ್ಲಿಸಲಾಗಿರುವ ಬಗರ್ ಹುಕುಂ ಅರ್ಜಿಗಳನ್ನು ಶೀಘ್ರ ವಿಲೇವಾರಿಗೊಳಿಸಬೇಕು ಎಂದು ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಹೈಕೋರ್ಟ್ ಆದೇಶಿಸಿದೆ. ಹೀಗಾಗಿ ಅಧಿಕಾರಿಗಳು ಬಗರ್ ಹುಕುಂ ಆ್ಯಪ್ ಸಹಾಯದಿಂದ ಅರ್ಹರಿಗೆ ಶೀಘ್ರವಾಗಿ ಸಾಗುವಳಿ ಚೀಟಿ ಮಂಜೂರು ಮಾಡಬೇಕು. ಅಧಿಕಾರಿಗಳು ಯಾವುದೇ ಒತ್ತಡಕ್ಕೂ ಮಣಿಯದೆ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಬೇಕು ಎಂದರು.
ರೈತರ ಆರ್ಟಿಸಿ ಆಧಾರ್ ಲಿಂಕ್ ಗೆ ಕರೆ: ರೈತರ ಆರ್‌ಟಿಸಿ ಜೊತೆಗೆ ಆಧಾರ್ ಲಿಂಕ್ ಜೋಡಣೆ ನಮ್ಮ ಮುಂದಿನ ಆದ್ಯತೆಯಾಗಬೇಕು ಎಂದು ಸಭೆಯಲ್ಲಿ ಅವರು ಅಧಿಕಾರಿಗಳಿಗೆ ಸೂಚಿಸಿದರು.
ಈ ಬಗ್ಗೆ ಗಮನ ಸೆಳೆದ ಅವರು, “ರಾಜ್ಯದಲ್ಲಿ ಸಣ್ಣ ರೈತರ ಸಂಖ್ಯೆ ಕನಿಷ್ಠ ಶೇ.77 ರಷ್ಟಿದೆ. ಆದರೆ, ಕೇಂದ್ರ ಸರ್ಕಾರದ ಅಂಕಿಅಂಶದ ಪ್ರಕಾರ ಈ ಸಂಖ್ಯೆ ಕೇವಲ ಶೇ.44 ರಷ್ಟು ಮಾತ್ರ. ಪರಿಣಾಮ ಕೇಂದ್ರದ ಮಾನದಂಡದ ಪ್ರಕಾರ ರಾಜ್ಯಕ್ಕೆ ಕನಿಷ್ಠ ಮೊತ್ತದ ಬರ ಪರಿಹಾರ ಲಭ್ಯವಾಗುತ್ತಿದೆ. ಹೀಗಾಗಿ ಫ್ರೂಟ್ಸ್ ತಂತ್ರಾಂಶದಲ್ಲಿ ರೈತರ ಮಾಹಿತಿ ನಮೂದಿಸುವಾಗ ಅವರ ಆರ್ಟಿಸಿ ಜೊತೆಗೆ ಆಧಾರ್ ಲಿಂಕ್ ಮಾಡಬೇಕು. ಆ ಮೂಲಕ ಪರಿಹಾರ ಹಣದ ದುರ್ಬಳಕೆಯನ್ನು ತಡೆಯುವ ಜೊತೆಗೆ ರಾಜ್ಯದ ರೈತರ ನಿಖರ ಅಂಕಿಅಂಶ ಪಡೆಯಬಹುದು ಎಂದು ಅವರು ವಿವರಿಸಿದರು.




