ಕೇಂದ್ರ ಸರ್ಕಾರ ಜಿ.ಎಸ್.ಟಿ. ವ್ಯವಸ್ಥೆಯನ್ನು ಜಾರಿಗೆ ತಂದ ಮೇಲೆ ರಾಜ್ಯಗಳ ಆರ್ಥಿಕ ಸ್ವಾಯತ್ತತೆಗೆ ನಿಜಕ್ಕೂ ಪೆಟ್ಟಾಗಿದೆ. ತಮ್ಮ ಪಾಲಿನ ಜಿ.ಎಸ್.ಟಿ. ಹಣಕ್ಕಾಗಿ ಕೇಂದ್ರದ ಮುಂದೆ ಪದೇ ಪದೇ ಬೇಡುತ್ತಾ ನಿಲ್ಲಬೇಕಾಗಿದೆ.
ರಾಜ್ಯಗಳ ಪಾಲು ಹಲವಾರು ಸಂದರ್ಭದಲ್ಲಿ ಬೆಟ್ಟದಂತೆ ಬೆಳೆದು ಒತ್ತಡ ಹೆಚ್ಚಿದಾಗ ಒಂದಷ್ಟು ಪಾಲನ್ನು ನೀಡುತ್ತಾ ರಾಜ್ಯಗಳಿಗೆ ದೊಡ್ಡ ಉಪಕಾರವನ್ನು ಮಾಡಿದೆ ಎಂಬ ರೀತಿಯಲ್ಲಿ ಬಿಂಬಿಸಿಕೊಳ್ಳುತ್ತಿದೆ ಕೇಂದ್ರ ಸರ್ಕಾರ.
ಇದರ ಬದಲಿಗೆ ಪ್ರತಿದಿನವೂ ಸಂಗ್ರಹವಾಗುವ ಜಿ.ಎಸ್.ಟಿ. ಹಣದಲ್ಲಿ ರಾಜ್ಯದ ಪಾಲು ಮತ್ತು ಕೇಂದ್ರದ ಪಾಲು ಎಂದು ವಿಭಜಿಸಿ ಆಯಾ ದಿನದ ಜಿ.ಎಸ್.ಟಿ. ಪಾಲನ್ನು ಆಯಾದಿನವೇ ಸಂಬಂಧಪಟ್ಟ ಸರ್ಕಾರಗಳ ಖಜಾನೆಗೆ ನೀಡುವಂತಹ ತಂತ್ರಾಂಶವನ್ನು ಅಳವಡಿಸಿ. ಇಂತಹ ಒಂದು ವ್ಯವಸ್ಥೆ ಬರದಿದ್ದರೆ ರಾಜ್ಯಗಳು ಬಹಳಷ್ಟು ಸಂದರ್ಭದಲ್ಲಿ ಆರ್ಥಿಕ ಸಂಕಷ್ಟಗಳಿಗೆ ಗುರಿಯಾಗುತ್ತದೆ. ಇನ್ನು ಕೇಂದ್ರ ಸರ್ಕಾರ ಹಲವಾರು ಯೋಜನೆಗಳಿಗೆ ರಾಜ್ಯಗಳೂ ನೀಡುವ ಪಾಲಿಗಿಂತ ಕಡಿಮೆ ಮೊತ್ತವನ್ನು ನೀಡಿ ಇದು ತನ್ನ ಯೋಜನೆಗಳು ಎಂದು ಬಿಂಬಿಸಿಕೊಂಡು ಕೇಂದ್ರ ಸರ್ಕಾರದ ಸಾಧನೆಗಳ ಜಾಹೀರಾತುಗಳಲ್ಲಿ ಇದನ್ನು ಸೇರಿಸಿಕೊಳ್ಳುತ್ತಿದ್ದಾರೆ.
ಹೀಗಾಗಿ ಯಾವುದೇ ಯೋಜನೆಗೆ ಕೇಂದ್ರದ ಪಾಲು ಮತ್ತು ರಾಜ್ಯದ ಪಾಲು ಸಮವಾಗಿದ್ದರೆ ಇಲ್ಲವೇ ರಾಜ್ಯದ ಪಾಲು ಹೆಚ್ಚಿದ್ದರೆ ಇದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಕಾರ್ಯಕ್ರಮವೆಂತಲೂ ಇದರ ಸಾಧನೆಯ ಪಾಲು ರಾಜ್ಯ ಮತ್ತು ಕೇಂದ್ರದ್ದೂ ಎಂಬ ರೀತಿಯಲ್ಲಿ ಜಾಹೀರಾತುಗಳು ಬಿಂಬಿತವಾಗಬೇಕು.
ಜನಸಾಮಾನ್ಯರ ದೃಷ್ಟಿಯಲ್ಲಿ ಎಲ್ಲ ಹೆದ್ದಾರಿ ರಸ್ತೆಗಳೂ, ವಸತಿ ಯೋಜನೆಗಳೂ, ಕುಡಿಯುವ ನೀರಿನ ಯೋಜನೆಗಳೂ, ಸಾಮಾಜಿಕ ಭದ್ರತೆ ಪಿಂಚಣಿಗಳೂ ಎಲ್ಲವೂ ಕೇಂದ್ರದ ಕೃಪೆಯಿಂದ ನಡೆಯುತ್ತಿರುವುದು, ಇದರಲ್ಲಿ ರಾಜ್ಯಗಳ ಪಾಲು ಏನೂ ಇಲ್ಲ ಎಂಬ ರೀತಿಯಲ್ಲಿ ಚಿತ್ರಿಸಲಾಗುತ್ತಿದೆ.
ಈ ಹಿನ್ನೆಲೆಯಲ್ಲಿ ಬದಲಾವಣೆಗಳು ಆಗದಿದ್ದರೆ ಎಲ್ಲ ಯಶಸ್ಸಿನ ಪಾಲು ಕೇಂದ್ರವೇ ಪಡೆದುಕೊಳ್ಳುತ್ತಾ ಅಭಿವೃದ್ಧಿಯ ವಿಚಾರದಲ್ಲಿ ರಾಜ್ಯಗಳ ಸಾಧನೆ ಶೂನ್ಯವೆಂಬ ರಾಜಕೀಯ ವಿಮರ್ಶೆಗಳಿಗೆ ದಾರಿಯಾಗುತ್ತಿದೆ.
– ಕೆ.ಎಸ್.ನಾಗರಾಜ್, ಬೆಂಗಳೂರು




