ಮನಮೋಹನ್ ಸಿಂಗ್ ನೀಡಿದ್ದಕ್ಕಿಂತ 3 ಪಟ್ಟು ಅಧಿಕ ತೆರಿಗೆಪಾಲು, ಅನುದಾನ ನೀಡಿದ್ದು ಮೋದಿ: ಬಿಜೆಪಿ

2 years ago

ಬೆಂಗಳೂರು: ರಾಜ್ಯ ಸರ್ಕಾರಕ್ಕೆ ಅನುದಾನ ಬಿಡುಗಡೆ ಮಾಡುವಲ್ಲಿ ಕೇಂದ್ರ ಸರ್ಕಾರ ತಾರತಮ್ಯ ಮಾಡುತ್ತಿದೆ‌ ಎಂದು ಆರೋಪಿಸಿ, ‌ಪ್ರತಿಭಟನೆಗೆ ಮುಂದಾಗಿರುವ ರಾಜ್ಯ ಸರ್ಕಾರಕ್ಕೆ ತಿರುಗೇಟು ನೀಡಿರುವ ಬಿಜೆಪಿ ರಾಜ್ಯಕ್ಕೆ ಕೇಂದ್ರ ‌ಬಿಡುಗಡೆ ಮಾಡಿರುವ ಅನುದಾನದ ಕುರಿತು ಶ್ವೇತಪತ್ರ ಹೊರಡಿಸುವಂತೆ ಆಗ್ರಹಿಸಿದೆ.

ಜಲ ಜೀವನ್ ಮಿಷನ್, ಅಮೃತ್ ಯೋಜನೆ, ಸ್ಮಾರ್ಟ್ ಸಿಟಿ, ಪಿಎಂ ಆವಾಸ್ ಯೋಜನೆ ಸೇರಿದಂತೆ ನೀರಾವರಿ ಯೋಜನೆಗಳಿಗೆ ಕೇಂದ್ರ ಸರ್ಕಾರ ಇದುವರೆಗೆ ನೀಡಿದ ಅನುದಾನವನ್ನು ಎಷ್ಟರ ಮಟ್ಟಿಗೆ ಬಳಸಿಕೊಂಡಿದ್ದೀರಾ ಎಂಬ ಶ್ವೇತಪತ್ರ ಹೊರಡಿಸುವ ತಾಕತ್ತು, ದಮ್ಮು ನಿಮ್ಮಲ್ಲಿದೆಯೇ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬಹಿರಂಗ ಸವಾಲು ಹಾಕಿದೆ.

ತನ್ನ ಅಧಿಕೃತ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಸರಣಿ ಪೋಸ್ಟ್ ಮಾಡಿರುವ ಬಿಜೆಪಿ, ಅಷ್ಟಕ್ಕೂ ಕೇಂದ್ರ ಸರ್ಕಾರ ಅನುದಾನ ನೀಡುತ್ತಿಲ್ಲ ಎಂದು ಪಟಾಲಂ ಕಟ್ಟಿಕೊಂಡು ಬೊಬ್ಬೆ ಹೊಡೆಯುತ್ತಿರುವ ಸಿದ್ದರಾಮಯ್ಯನವರೇ, ಕನ್ನಡಿಗರ ಶ್ರಮದ ತೆರಿಗೆ ಹಣವನ್ನು ವಾಮಮಾರ್ಗದಲ್ಲಿ ಸಂಗ್ರಹಿಸಿ, ತೆಲಂಗಾಣ, ಛತ್ತಿಸ್ಗವಢ, ಮಧ್ಯಪ್ರದೇಶ, ರಾಜಸ್ಥಾನದ ಚುನಾವಣೆಗೆ ನೀಡಿದ ನಿಮಗೆ ಈ ವಿಚಾರದ ಬಗ್ಗೆ ಮಾತನಾಡುವ ನೈತಿಕತೆಯೇ ಇಲ್ಲ ಎಂದು ಆರೋಪಿಸಿದೆ.

ಪಿಎಂ ಗತಿ ಶಕ್ತಿ ಯೋಜನೆ, ಸಾಗರಮಾಲಾ ಯೋಜನೆ, ಬಡವರಿಗೆ ಸ್ವಂತ ಮನೆ ಖಾತರಿಪಡಿಸುವ ಪಿಎಂ ಆವಾಸ್ ಯೋಜನೆಯಡಿ ರಾಜ್ಯಕ್ಕೆ 1 ಲಕ್ಷ ಕೋಟಿ ರೂ.ಗೂ ಅಕ ನೆರವು 2014ರ ನಂತರ ಹರಿದುಬಂದಿದೆ. ಕೊರೊನಾದ ಪ್ರಕ್ಷುಬ್ಧ ಪರಿಸ್ಥಿತಿಯಲ್ಲಿ ಮೋದಿ ಸರ್ಕಾರ ಕರ್ನಾಟಕಕ್ಕೆ ಉಚಿತವಾಗಿ ನೀಡಿದ ಲಸಿಕೆಯೇ 10 ಕೋಟಿಗೂ ಹೆಚ್ಚು. ಆ ಪ್ರಮಾಣದಲ್ಲಿ ನಿಮ್ಮ ಪಕ್ಷದ ಸರ್ಕಾರಗಳು ಪೋಲಿಯೋ ಲಸಿಕೆಗಳನ್ನೂ ನೀಡಿಲ್ಲ ಎಂಬ ಅಂಶ ನಿಮ್ಮ ತಲೆಯಲ್ಲಿರಲಿ ಎಂದಿದೆ.

ಕಳೆದ 5 ವರ್ಷಗಳಲ್ಲಿ ಮೋದಿ ಸರ್ಕಾರ ರಾಜ್ಯದ ರಾಷ್ಟ್ರೀಯ ಹೆದ್ದಾರಿಗಳಿಗೆ ನೀಡಿರುವುದು 30,000 ಕೋಟಿ. ಕರ್ನಾಟಕದ ರೈತರ ಜೇಬಿಗೆ ಬಂದ ಕಿಸಾನ್ ಸಮ್ಮಾನದ ಮೌಲ್ಯ 10,990 ಕೋಟಿ. ಕಾಂಗ್ರೆಸ್ ಸರ್ಕಾರಗಳಿಗೆ 67 ವರ್ಷಗಳಲ್ಲಿ ಯೋಚಿಸಲೂ ಸಾಧ್ಯವಾಗದಿದ್ದ ಆಯುಷ್ಮಾನ್ ಭಾರತ ಯೋಜನೆಯ ಲಾಭವನ್ನು ಪಡೆದ ಕನ್ನಡಿಗರು 62,00,000 ಕ್ಕೂ ಅಧಿಕ. ಕರ್ನಾಟಕಕ್ಕೆ ಮೊದಲ ಐಐಟಿ ನೀಡಿದ್ದು ಸಹ ಮೋದಿ ಸರ್ಕಾರ ಎಂಬುದು ನಿಮಗೆ ತಿಳಿದಿತ್ತೇ ಮುಖ್ಯಮಂತ್ರಿ ಸಾಹೇಬರೇ ಎಂದಿದೆ.

ತಮ್ಮ ಆಡಳಿತದ ದಯನೀಯ ವೈಫಲ್ಯವನ್ನು ಮರೆಮಾಚಿಕೊಳ್ಳಲು ಸಿಎಂ ಸಿದ್ದರಾಮಯ್ಯ ಅವರು ಸದಾ ಆರೋಪಿಸುವುದು ಕೇಂದ್ರ ಸರ್ಕಾರವನ್ನು. ಕರ್ನಾಟಕದ ಇತಿಹಾಸದಲ್ಲಿಯೇ ಹಿಂದೆಂದೂ ಕಂಡು ಕೇಳರಿಯದಂತಹ ಆಡಳಿತ ವಿರೋಧಿ ಅಲೆ ಸದ್ಯ ಕಾಂಗ್ರೆಸ್ ಸರ್ಕಾರಕ್ಕಿದೆ. ಆಡಳಿತ ವಿರೋಧಿ ಅಲೆಯಿಂದ ಜನರ ಗಮನವನ್ನು ಬೇರೆಡೆ ಸೆಳೆಯಲು ಕಾಂಗ್ರೆಸ್ ಮತ್ತು ಸಿಎಂ ಸಿದ್ದರಾಮಯ್ಯನವರು ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸುವ ವ್ಯರ್ಥ ಪ್ರಯತ್ನ ಮಾಡುತ್ತಿದ್ದಾರೆ ಎಂದಿದೆ.

ಜೀವನ ಪೂರ್ತಿ ಪರರನ್ನು ಬೊಟ್ಟು ಮಾಡಿ ಜಾರಿಕೊಳ್ಳಲು ಯತ್ನಿಸುತ್ತಿರುವ ಸಿದ್ದರಾಮಯ್ಯನವರೇ, ಈ ಮಾಹಿತಿ ನಿಮ್ಮ ಸರ್ಕಾರದ ಬಳಿ ಇಲ್ಲದಿರುವುದು ನಿಮ್ಮ ಆಡಳಿತದ ಅಸಾಮರ್ಥ್ಯ ತೋರಿಸುತ್ತದಷ್ಟೆ. ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರ್ಕಾರ ನೀಡಿದ್ದಕ್ಕಿಂತ ಮೂರು ಪಟ್ಟು ಅಧಿಕ ತೆರಿಗೆಪಾಲು ಮತ್ತು ಅನುದಾನಗಳನ್ನು ನೀಡಿದ್ದು ಹಾಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಎಂದಿದೆ.

Leave a Reply