ಬೆಂಗಳೂರು: ಆರ್ಥಿಕವಾಗಿ ಹಿಂದುಳಿದಿರುವ ಬ್ರಾಹ್ಮಣ ಕುಟುಂಬಗಳ ಶ್ರೇಯೋಭಿವೃದ್ದಿಗಾಗಿ ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ 5 ಲಕ್ಷದವರೆಗಿನ ಸಾಲಕ್ಕೆ ಶೇ.20ರಷ್ಟು ಸಹಾಯಧನ ನೀಡುವ ಸ್ವಾವಲಂಬಿ ಯೋಜನೆಯನ್ನು ಫೆ.25ರ ವರೆಗೆ ವಿಸ್ತರಿಸಲಾಗಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಘಟಕ ವೆಚ್ಚ/ಗರಿಷ್ಠ ಸಾಲದ ಮೊತ್ತ ರೂ. 5 ಲಕ್ಷದವರೆಗೆ ಇದ್ದಲ್ಲಿ ಈ ಸಾಲದ ಮೊತ್ತದ ಶೇ.20ರಷ್ಟು ಹಣವನ್ನು ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಸಹಾಯಧನವನ್ನಾಗಿ ನೀಡಲಿದೆ. ವ್ಯಾಪಾರ, ಅಂಗಡಿ, ಹೈನುಗಾರಿಕೆ, ಹೊಲಿಗೆ ವೃತ್ತಿ, ಆಟಿಕೆ ತಯಾರಿಕೆ, ಮೊಬೈಲ್ ಅಂಗಡಿ, ಗುಡಿ ಕೈಗಾರಿಕೆ ಸೇರಿದಂತೆ ಹೆಚ್ಚಿನ ಘಟಕ ವೆಚ್ಚವಿರುವ ಆದಾಯ ಬರುವಂತಹ ಲಾಭದಾಯಕ ಉದ್ಯಮಗಳನ್ನು ಸ್ಥಾಪಿಸಲು ರಾಷ್ತ್ರೀಕೃತ ಬ್ಯಾಂಕ್ ಗಳಿಂದ ಸಾಲ ಪಡೆದವರು ಈ ಯೋಜನೆ ಅರ್ಹರಾಗಿರುತ್ತಾರೆ ಎಂದಿದ್ದಾರೆ.
ಅರ್ಹರು ಅರ್ಜಿ ಸಲ್ಲಿಸಲು ಈ ಹಿಂದೆ ಜನವರಿ 31 ರ ವರೆಗೆ ಅವಕಾಶ ನೀಡಲಾಗಿತ್ತು. ಆದರೆ, ಈ ಯೋಜನೆ ಮತ್ತಷ್ಟು ಜನರಿಗೆ ಅನುಕೂಲವಾಗಲಿ ಎಂಬ ಕಾರಣಕ್ಕೆ ಅರ್ಜಿ ಸಲ್ಲಿಸುವ ದಿನಾಂಕವನ್ನು ಫೆ.25ರ ವರೆಗೆ ವಿಸ್ತರಿಸಲಾಗಿದೆ ಎಂದಿದ್ದಾರೆ.




