ಶ್ರೇಷ್ಠ ಸಂಗೀತ ಕಲಾವಿದ, ಟಿ.ಎಂ.ಕೃಷ್ಣ ವ್ಯಕ್ತಿತ್ವಕ್ಕೆ ಮಸಿ ಬಳಿಯಲು ಹೊರಟ ಮೂರ್ಖಶಿಖಾಮಣಿಗಳು
ಮಿತ್ರರೇ,
ಈ ಬಾರಿ ಮದ್ರಾಸ್ ಮ್ಯೂಸಿಕ್ ಅಕಾಡೆಮಿ ವತಿಯಿಂದ ಪ್ರತಿಷ್ಟಿತ ಕಲಾನಿಧಿ ಪ್ರಶಸ್ತಿ ಪಡೆದ ಸಮಕಾಲೀನ ಕರ್ನಾಟಕ ಸಂಗೀತದ ಶ್ರೇಷ್ಠ ಕಲಾವಿದ ಟಿ.ಎಂ.ಕೃಷ್ಣ ಅವರ ಬಗ್ಗೆ ಬ್ರಾಹ್ಮಣ್ಯವನ್ನು ಉಂಡು, ಹೊದ್ದಿ, ಹಾಸಿ ಮಲಗುವ ತಮಿಳು ಕಲಾವಿದರು ಮುಗಿಬಿದ್ದಿದ್ದಾರೆ.
- ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಮಸೂದೆ ಅಂಗೀಕಾರವಾಗಿದೆ
- ಮಹಿಳಾ ಮೀಸಲಾತಿ ವಿಷಯದಲ್ಲಿ ಮೋದಿ ಸರ್ಕಾರದಿಂದ ಮಹಿಳೆಯರಿಗೆ ದ್ರೋಹ: ಸಿದ್ದರಾಮಯ್ಯ
- ಕಾಂಗ್ರೆಸ್ಗೆ ಮಹಿಳಾ ಮೀಸಲಾತಿ ಬೇಕಿಲ್ಲ ಎಂಬುದು ಸ್ಪಷ್ಟ: ಬಸವರಾಜ ಬೊಮ್ಮಾಯಿ
- ಸಾರ್ವಜನಿಕ ಆರೋಗ್ಯ ವ್ಯವಸ್ಥೆ ಎಷ್ಟು ಹದಗೆಟ್ಟಿದೆ ಎನ್ನುವುದಕ್ಕೆ ಕನ್ನಡಿ: ಆರ್ ಅಶೋಕ್
- ನಮ್ಮ ಪ್ರತಿಭೆಗಳು ದೆಹಲಿಯಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಿರುವುದು ಸಂತಸದ ವಿಷಯ: ಕೆ.ಸುಧಾಕರ್
ಕೃಷ್ಣ ಅವರ ಕುರಿತು ಪ್ರಶಸ್ತಿ ಪ್ರಕಟವಾದ ತಕ್ಷಣ ನಾನು ಲೇಖನ ಬರೆದು ಪ್ರತಿಷ್ಟಿತ ಪತ್ರಿಕೆಗೆ ಕಳಿಸಿರುವ ಕಾರಣ ಈಗ ವಿವರವಾಗಿ ಅದರ ಬಗ್ಗೆ ಏನನ್ನೂ ಬರೆಯುವುದಿಲ್ಲ.
ಚೆನ್ನೈ ನಗರದ ಪ್ರತಿಷ್ಠಿತ ಬ್ರಾಹ್ಮಣರ ಕುಟುಂಬದಲ್ಲಿ ಜನಿಸಿದ ಕೃಷ್ಣಾ ಅವರು ಸಂಗೀತಕ್ಕೆ ಜಾತಿ ಮತ್ತು ಧರ್ಮದ ಹಂಗಿಲ್ಲ ಎಂದು ನಂಬಿ ಬದುಕಿದವರು. ತಮ್ಮ ಸಂಗೀತ ಮತ್ತು ಚಿಂತನೆಗಳ ಮೂಲಕ ಅದನ್ನು ಪ್ರತಿಪಾದಿಸಿದವರು.

ಬ್ರಾಹ್ಮಣರ ವಿರುದ್ಧ ಹೋರಾಡಿದ್ದ ಪೆರಿಯಾರ್ ಬಗ್ಗೆ ಕೃಷ್ಣ ಅವರಿಗೆ ಅಪಾರ ಗೌರವ ಇರುವುದು ಈಗ ಬ್ರಾಹ್ಮಣ ಕಲಾವಿದರೆಂಬ ಕುರಿಗಳಿಗೆ ನುಂಗಲಾರದ ತುತ್ತಾಗಿದೆ. 1942 ರಿಂದ ಮ್ಯೂಸಿಕ್ ಅಕಾಡೆಮಿ ಕಲಾನಿಧಿ ಪ್ರಶಸ್ತಿ ನೀಡುತ್ತಾ ಬಂದಿದೆ.
ಈಗ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿರುವವರು ಸಾಮಾನ್ಯ ವ್ಯಕ್ತಿಯಲ್ಲ. ಅವರು ಎನ್. ಮುರುಳಿ. ಹಿಂದೂ ದಿನಪತ್ರಿಕೆ ಸಂಸ್ಥಾಪಕರಾದ ಕಸ್ತೂರಿ ಶ್ರೀನಿವಾಸ ಅಯ್ಯರ್ ಅವರ ಮೊಮ್ಮಗ ಹಾಗೂ ಖ್ಯಾತ ಪತ್ರಕರ್ತ ಮತ್ತು ಹಿಂದೂ ಪತ್ರಿಕೆಯ ಸಂಪಾದಕರಾಗಿದ್ದ ಎನ್.ರಾಮು ಅವರ ಸಹೋದರ.
ಈ ಸಹೋದರರು ಮದ್ರಾಸ್ ಮ್ಯೂಸಿಕ್ ಅಕಾಡೆಮೆಯ ಆವರಣದಲ್ಲಿ ಎರಡು ಅಂತಸ್ತಿನ ಹವಾನಿಯಂತ್ರಿತ ಡಿಜಿಟಲ್ ಲೈಬ್ರರಿಯನ್ನು ತಾತನ ಹೆಸರಿನಲ್ಲಿ ನಿರ್ಮಿಸಿದ್ದಾರೆ. ಕರ್ನಾಟಕ ಸಂಗೀತದ ಎಲ್ಲಾ ದಾಖಲೆಗಳು, ಕಲಾವಿದರ ಚಿತ್ರಗಳು ಅಲ್ಲಿ ದೊರೆಯುತ್ತವೆ.
ಇಪ್ಪತ್ತನೆಯ ಶತಮಾನದ ಆದಿಭಾಗದಲ್ಲಿ ಕರ್ನಾಟಕ ಸಂಗೀತಕ್ಕೆ ಬೆಂಬಲ ನೀಡಿ ಅದನ್ನು ಪ್ರೋತ್ಸಾಹಿಸಿದ ಮಹನೀಯರಲ್ಲಿ ಕಸ್ತೂರಿ ಶ್ರೀನಿವಾಸ ಅಯ್ಯರ್ ಪ್ರಮುಖರು. ಶತಮಾನದ ಇತಿಹಾಸವಿರುವ ಹಿಂದೂ ಪತ್ರಿಕೆಯಲ್ಲಿ ಪ್ರತಿ ವಾರ ಸಂಗೀತ ಕಲಾವಿದರ ಕುರಿತಾಗಿ, ಸಂಗೀತ ಕುರಿತಾಗಿ ಪ್ರಬುದ್ಧ ಲೇಖನಗಳು ಪ್ರಕಟವಾಗುತ್ತವೆ.
ಟಿ.ಎಂ. ಕೃಷ್ಣ ಅವರೂ ಸಹ ಕಳೆದ ಒಂದು ದಶಕದಿಂದ ನಿರಂತರವಾಗಿ ಲೇಖನ ಬರೆಯುತ್ತಿದ್ದಾರೆ. ಇಂದಿನ ಬ್ರಾಹ್ಮಣ್ಯದ ಆರ್ಭಟಕ್ಕೆ ಮುರುಳಿ ಮಣಿಯುವವರಲ್ಲ. ಏಕೆಂದರೆ. ಅವರ ತಾತ ಬ್ರಾಹ್ಮಣ ಕುಟುಂಬದಿಂದ ಬಂದರೂ ಸಹ ಪತ್ರಿಕಾ ಮೌಲ್ಯಗಳನ್ನು ಎತ್ತಿ ಹಿಡಿದು, ಧರ್ಮ ಮತ್ತು ಜಾತಿಯ ಎಲ್ಲೆಯನ್ನು ಮೀರಿ ತಮ್ಮ ಮಕ್ಕಳು ಮತ್ತು ಮೊಮ್ಮಕ್ಕಳಿಗೆ ಅದನ್ನು ಧಾರೆ ಎರೆದಿದ್ದಾರೆ.
ನಿನ್ನೆಯಿಂದ ಟಿ.ಎಂ. ಕೃಷ್ಣ ಅವರು ತಮ್ಮ ಮನೆಯಲ್ಲಿ ವಿಸ್ಕಿ ಬಾಟಲ್ ಹಿಡಿದು ಹಾಡು ಹೇಳುತ್ತಿರುವ ದೃಶ್ಯ ಸಾಮಾಜಿಕ ತಾಣದಲ್ಲಿ ಹರಿದಾಡುತ್ತಿದೆ ನಾನು ಬಲ್ಲಂತೆ ಕೃಷ್ಣ ಅವರು ಅಪರೂಪಕ್ಕೆ ಗೆಳೆಯರ ಜೊತೆ ಕುಡಿಯುವವರು.
ಕೆಲವು ಕಲಾವಿದರಿಗೆ ಮದ್ಯಪಾನ ಅವರ ಸಂಗೀತಕ್ಕೆ ಸ್ಪೂರ್ತಿಯಾಗಿತ್ತು ಎಂಬುದು ಈ ಮುಠಾಳರಿಗೆ ಗೊತ್ತಿಲ್ಲ. ನಾಗಸ್ವರ ವಾದನದಲ್ಲಿ ದಂತಕಥೆಯಾಗಿದ್ದ ಟಿ.ಎಂ. ರಾಜರತ್ನಂ ಪಿಳ್ಳೈ ಅವರು ನಾಗಸ್ವರ ಅಥವಾ ನಾದಸ್ವರವನ್ನು ಕರ್ನಾಟಕ ಸಂಗೀತದಲ್ಲಿ ವೇದಿಕೆಗೆ ತಂದವರು. ಅವರು ಕಂಠಪೂರ್ತಿ ಕುಡಿದು ವೇದಿಕೆ ಹತ್ತುತ್ತಿದ್ದರು. ಕೊಳಲು ಮಾಂತ್ರಿಕ ಮಾಲಿ ಅಥವಾ ಟಿ.ಆರ್. ಮಹಾಲಿಂಗಂ ಕೂಡಾ ಕುಡಿದು ಕಾರ್ಯಕ್ರಮ ನೀಡುತ್ತಿದ್ದರು. ಇವರಿಬ್ಬರಿಗೂ ಕಲಾನಿಧಿ ಪ್ರಶಸ್ತಿ ದೊರೆತಿದೆ ಎಂಬುದನ್ನು ಈಗ ಹಾರಾಡುತ್ತಿರುವ ಪುಡಿ- ಪುಕ್ಕಗಳು ಅರ್ಥ ಮಾಡಿಕೊಳ್ಳಬೇಕಿದೆ.
ಅಷ್ಟೇ ಏಕೆ? ಹಿಂದೂಸ್ತಾನಿ ಸಂಗೀತದ ಗಾಯನದಲ್ಲಿ ಭಾರತ ರತ್ನ ಪ್ರಶಸ್ತಿ ಪಡೆದ ನಮ್ಮ ಹೆಮ್ಮೆಯ ಕನ್ನಡಿಗರಾದ ಪಂಡಿತ್ ಭೀಮಸೇನ ಜೋಷಿಯವರು ಸ್ಟೀಲ್ ಪಾತ್ರೆಯಲ್ಲಿ ನೀರಿನ ಹಾಗೆ ವಿಸ್ಕಿಯನ್ನು ಇಟ್ಟುಕೊಂಡು ಕಾರ್ಯಕ್ರಮ ನೀಡುತ್ತಿದ್ದರು. ಅವರನ್ನು ನಾವು ಕುಡುಕರು ಎನ್ನಲಾದೀತೆ?
ವಿರೋಧ ವ್ಯಕ್ತ ಪಡಿಸುವುದಕ್ಕೂ ಒಂದು ಸೈದ್ಧಾಂತಿಕ ಹಿನ್ನೆಲೆ ಇರಬೇಕು. ಈಗ ತಮಿಳುನಾಡಿನ ಬ್ರಾಹ್ಮಣ ಸಮುದಾಯದ ಹಲವಾರು ಕಲಾವಿದರು ಸಂಘ ಪರಿವಾರ ಮತ್ತು ಬಿ.ಜೆ.ಪಿ.ಯ ಎರಡು ರೂಪಾಯಿ ಸಂಭಾವನೆಗೆ ಜೋತು ಬಿದ್ದಿದ್ದಾರೆ.
– ಜಗದೀಶ್ ಕೊಪ್ಪ, ಹಿರಿಯ ಪತ್ರಕರ್ತರು




