ಸೆಪ್ಟೆಂಬರ್ 1 ರಂದು ಕಲ್ಯಾಣ ಮಂಡಳಿ ಮುತ್ತಿಗೆ
ಬೆಂಗಳೂರು: ಜುಲೈ 27 ರಂದು ಶಾಸಕರ ಕೈಗೆ ಕಟ್ಟಡ ಕಾರ್ಮಿಕ ಮಂಡಳಿಯ ಆಹಾರ ಕಿಟ್ ಯಾಕೆ? ಎನ್ನುವ ಘೋಷಣೆಯೊಂದಿಗೆ ಜೊತೆಗೆ ಆಹಾರ ಕಿಟ್, ಟೂಲ್ ಕಿಟ್, ಸೇಪ್ಟೀ ಕಿಟ್, ತಂತ್ರಾಂಶ ಖರೀದಿ ಮೊದಲಾದವುಗಳ ಬಗ್ಗೆ ನಾಯ್ಯಾಂಗ ತನಿಖೆಗೆ ಆಗ್ರಹಿಸಿ ಪ್ರತಿಭಟನೆ ನಡೆಸಲು ರಾಜ್ಯದ ಕಟ್ಟಡ ಕಾರ್ಮಿಕ ಸಂಘಗಳ ಒಕ್ಕೂಟ ಕಟ್ಟಡ ಕಾರ್ಮಿಕ ಸಂಘಗಳ ಸಮನ್ವಯ ಸಮಿತಿ ಕರೆ ನೀಡಿದೆ. ಇತ್ತೀಚಿಗೆ ನಡೆದ ಸಮನ್ವಯ ಸಮಿತಿ ಮುಖಂಡರ ರಾಜ್ಯ ಮಟ್ಟದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಶನ್ ಸಂಚಾಲಕ ಸಮನ್ವಯ ಸಮಿತಿ ಪ್ರಧಾನ ಕಾರ್ಯದರ್ಶಿ ಕೆ.ಮಹಾಂತೇಶ ಹೇಳಿದ್ದಾರೆ.
ಮಂಡಳಿ ಇತ್ತೀಚಿಗೆ 2033 ಕೋಟಿ ಹಣವನ್ನು 21-22 ಸಾಲಿನಲ್ಲಿ ಖರ್ಚು ಮಾಡುವ ತೀರ್ಮಾನ ಕೈಗೊಂಡಿದೆ. ಈ ಹಲವು ತೀರ್ಮಾನಗಳಲ್ಲಿ ಕೋಟ್ಯಾಂತರ ರೂಪಾಯಿಗಳ ಭ್ರಷ್ಟಾಚಾರ ನಡೆಯುವ ಖಚಿತ ಸಾಧ್ಯತೆಗಳಿವೆ. ಆದ್ದರಿಂದ ಕೂಡಲೇ ಮಧ್ಯಪ್ರವೇಶಿಸುವಂತೆ ಕೋರಿ ಕಾನೂನು ಸೇವಾ ಪ್ರಾಧಿಕಾರದ ಮುಖ್ಯಸ್ಥರು ಹಾಗೂ ರಾಜ್ಯ ಸರ್ಕಾರದ ಮುಖ್ಯಕಾರ್ಯದರ್ಶಿ ಅವರನ್ನು ಭೇಟಿ ಮಾಡಲು ಸಭೆ ನಿರ್ಧರಿಸಿದೆ.
ಒಂದು ಲಕ್ಷ ಅಂಚೆ ಕಾರ್ಡಗಳ ಚಳವಳಿ
ಒಂದು ತಿಂಗಳ ಕಾಲ ಒಂದು ಲಕ್ಷ ಅಂಚೆ ಕಾರ್ಡುಗಳ ಮೂಲಕ ಮತ್ತು ಇ-ಮೇಲ್ ಮಾಸಾಚರಣೆ ನಡೆಸಿ ಮುಖ್ಯಮಂತ್ರಿ, ಕಾರ್ಮಿಕ ಸಚಿವರಿಗೆ, ಕಾನೂನು ಸೇವಾ ಪ್ರಾಧಿಕಾರದ ಮುಖ್ಯಸ್ಥರಿಗೆ, ಕಾರ್ಮಿಕ ಸಚಿವರು ಹಾಗೂ ಮಂಡಳಿ ಕಾರ್ಯದರ್ಶಿಯವರಿಗೆ ಕಾರ್ಮಿಕರಿಂದ ಬರೆಸುವುದು ಮತ್ತು ಕೇಂದ್ರ ಸರ್ಕಾರದ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯಕ್ಕೆ ಅದರ ನಿರ್ದೇಶನ ಉಲ್ಲಂಘನೆ ಕುರಿತಾಗಿ ದೂರು ಸಲ್ಲಿಸಲು ನಿರ್ಧರಿಸಲಾಗಿದೆ.
ಶಾಸಕರಿಗೆ ಕಿಟ್ ನೀಡುವುದು ಸೇರಿ ಕಟ್ಟಡ ಕಾರ್ಮಿಕರ ಹಲವು ಬೇಡಿಕೆಗಳ ಕುರಿತು online Petition ತಯಾರಿಸಿ ವ್ಯಾಪಕವಾಗಿ ಸಾಮಾಜಿಕ ಜಾಲತಾಣದಲ್ಲಿ ಮಂಡಳಿ ಮತ್ತು ಕಾರ್ಮಿಕ ಸಚಿವರ ನಿರ್ಧಾರಗಳನ್ನು ಕುರಿತು ಗಣ್ಯರಿಂದ, ನಿವೃತ್ತ ನ್ಯಾಯಮೂರ್ತಿಗಳು ಇತರರಿಂದ ಅಭಿಪ್ರಾಯ ಪಡೆಯಲು ನಿರ್ಧರಿಸಲಾಗಿದೆ.
ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಸರಣಿ ಕಾರ್ಯಕ್ರಮಗಳ ಮೂಲಕ ಕಟ್ಟಡ ಕಾರ್ಮಿಕ ಕಲ್ಯಾಣ ಮಂಡಳಿ ಈ ತೀರ್ಮಾನಗಳ ಕುರಿತು ಪ್ರಸಾರ ಮಾಡಿ ಕಾರ್ಮಿಕರಲ್ಲಿ ಜಾಗೃತಿ ಮೂಡಿಸಲು ತೀರ್ಮಾನ ಮಾಡಲಾಗಿದೆ. ಜೊತೆಗೆ ಅಗತ್ಯ ದಾಖಲೆಗಳೊಂದಿಗೆ ಎಸಿಬಿ ಅಥವಾ ಸಕ್ರಮ ತನಿಖಾ ಸಂಸ್ಥೆಯಲ್ಲಿ ದೂರು ಸಲ್ಲಿಸಲು ನಿರ್ಧರಿಸಲಾಗಿದೆ.
ಕಲ್ಯಾಣ ಮಂಡಳಿ ಮುತ್ತಿಗೆ
ಒಂದು ತಿಂಗಳ ವ್ಯಾಪಕ ಪ್ರಚಾರದ ಬಳಿಕ ಸೆಪ್ಟೆಂಬರ್ 1 ರಂದು ಹತ್ತು ಸಾವಿರ ಕಾರ್ಮಿಕರನ್ನು ಸೇರಿಸಿ ಕಲ್ಯಾಣ ಮಂಡಳಿ ಕೈಗೊಂಡ ಕಾರ್ಮಿಕ ವಿರೋಧಿ ತೀರ್ಮಾನಗಳನ್ನು ಕೈ ಬಿಡಲು ಆಗ್ರಹಿಸಿ ಕಲ್ಯಾಣ ಮಂಡಳಿ ಮುತ್ತಿಗೆ ಹಾಕಲು ನಿರ್ಧರಿಸಲಾಗಿದೆ.




