ಜಾನಪದ ವಿದ್ವಾಂಸ ಗುರುಲಿಂಗ ಕಾಪಸೆ ನಿಧನ

2 years ago

ಕನ್ನಡ ಸಾಹಿತ್ಯಲೋಕದ ಪ್ರಮುಖ ಜಾನಪದ ವಿದ್ವಾಂಸರಾದ ಗುರುಲಿಂಗ ಕಾಪಸೆಯವರು ಇಂದು ನಿಧನರಾಗಿದ್ದಾರೆ. 1928 ಏಪ್ರಿಲ್ 2ರಂದು ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಲೋಣಿಯಲ್ಲಿ ಜನಿಸಿದ ಇವರು, ತಮ್ಮ 96ನೇ ವಯೋಮಾನದಲ್ಲಿ ಅನಾರೋಗ್ಯಕ್ಕೆ ತುತ್ತಾಗಿ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಇಂದು ಮಧ್ಯಾಹ್ನ 2ರವರೆಗೆ ಧಾರವಾಡದ  ದುರ್ಗಾ ಕಾಲೋನಿಯಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.

ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ ಇವರು, ಅಕ್ಕಮಹಾದೇವಿ, ಮಧುರಚೆನ್ನ, ಶ್ರೀಅರವಿಂದರು, ಬಸವೇಶ್ವರ, ಹಲಸಂಗಿ ಗೆಳೆಯರು ಮುಂತಾದ ವಿಶಿಷ್ಟ ಕೃತಿಗಳನ್ನು ರಚಿಸಿದ್ದಾರೆ.

ಶಾಲ್ಮಲೆಯಿಂದ ಗೋದಾವರಿಯವರೆಗೆ ಇವರ ಪ್ರವಾಸ ಕಥನ. ಸಾಹಿತ್ಯ ಸಂಬಂಧ, ಬೇಂದ್ರೆ – ಮಧುರಚೆನ್ನ ಸಖ್ಯಾಯೋಗ್ಯ ಎಂಬ ವಿಮರ್ಶಾ ಕೃತಿಗಳು, ಹರಿಹರನ ಐದು ರಗಳೆಗಳು ಅರವಿಂದ ಪರಿಮಳ, ಹೈಮಾವತಿ ಶೈಶವಲೀಲೆ, ಚೆಂಬೆಳಕು, ಬೆಳಗಲಿ, ಭವ್ಯಮಾನವ ಕಾವ್ಯದರ್ಶನ, ಮಧುರಚೆನ್ನರ ಲೇಖನಗಳು, ಮುಗಿಯದ ಹಾಡು ಮುಂತಾದ ಕೃತಿಗಳನ್ನು ಸಂಪಾದಿಸಿದ್ದಾರೆ.

ರಾಜ್ಯ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಸಾಹಿತ್ಯ ಶ್ರೀ ಪ್ರಶಸ್ತಿ ಮುಂತಾದ ಹಲವು ಪ್ರಶಸ್ತಿಗಳು ಇವರ ಸಾಹಿತ್ಯ ಸೇವೆಗೆ ಸಂದಿವೆ. 2014ರಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿಯೂ ಕೂಡ ಕೆಲಸ ನಿರ್ವಹಿಸಿದ್ದರು.

Leave a Reply