ಮುಡಾ ಪ್ರಕರಣದಲ್ಲಿ ಸಿದ್ದರಾಮಯ್ಯ ವಿರುದ್ಧ ಎಫ್ ಐ ಆರ್ ದಾಖಲು

2 years ago

ಬೆಂಗಳೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ)ದ ನಿವೇಶನ ಹಂಚಿಕೆ ಅಕ್ರಮ ಆರೋಪದ ಸುಳಿಯಲ್ಲಿ ಸಿಲುಕಿರುವ ಸಿಎಂ ಸಿದ್ದರಾಮಯ್ಯ ವಿರುದ್ಧ ಎಫ್ ಐ ಆರ್ ದಾಖಲಾಗಿದೆ. ಜನಪ್ರತಿನಿಧಿಗಳ ನ್ಯಾಯಾಲಯದ ಆದೇಶದಂತೆ ಮೈಸೂರು ಲೋಕಾಯುಕ್ತ ಎಸ್ಪಿ ಉದೇಶ್ ಅವರು ಸಿಆರ್ಪಿ ಸೆಕ್ಷನ್ 156(3)ರಡಿ ಸಿದ್ದರಾಮಯ್ಯ (ಎ 1 ಆರೋಪಿ), ಅವರ ಪತ್ನಿ ಪಾರ್ವತಿ (ಎ 2 ಆರೋಪಿ), ಬಾಮೈದುನ ಮಲ್ಲಿಕಾರ್ಜುನ ಸ್ವಾಮಿ (ಎ 3 ಆರೋಪಿ), ಜಮೀನು ಮಾಲೀಕ ದೇವರಾಜ್ (ಎ 4 ಆರೋಪಿ) ಹಾಗೂ ಇತರರ ವಿರುದ್ಧ ಎಫ್ ಐ ಆರ್ ದಾಖಲಿಸಿದ್ದಾರೆ.

ಸಾಮಾಜಿಕ ಕಾರ್ಯಕರ್ತ ಸ್ನೇಹ ಮಯಿ ಕೃಷ್ಣ ಸಿದ್ದರಾಮಯ್ಯ ವಿರುದ್ಧ ಸಲ್ಲಿಸಿದ್ದ ಖಾಸಗಿ ದೂರಿನ ವಿಚಾರಣೆ ನಡೆಸಿದ ಜನಪ್ರತಿನಿಧಿಗಳ ನ್ಯಾಯಾಲಯ ಸಿದ್ದರಾಮಯ್ಯ ವಿರುದ್ಧ ತನಿಖೆಗೆ ಆದೇಶ ಹೊರಡಿಸಿತ್ತು.

ಸಿದ್ದರಾಮಯ್ಯ ವಿರುದ್ಧ ಯಾವ ನ್ಯಾಯಿಕ ಪ್ರಕ್ರಿಯೆ ಅಡಿಯಲ್ಲಿ ಪ್ರಕರಣ ದಾಖಲಿಸಬೇಕು ಎಂಬ ವಿಷಯ ಕುರಿತು ಲೋಕಾಯುಕ್ತ ಪೊಲೀಸರಲ್ಲಿ ಜಿಜ್ಞಾಸೆ ಉಂಟಾಗಿತ್ತು. ಸಿದ್ದರಾಮಯ್ಯ ವಿರುದ್ಧ ಸಿಆರ್ ಪಿಸಿ ಅಥವಾ ಭಾರತೀಯ ನ್ಯಾಯ ಸಂಹಿತೆ ಅಡಿಯಲ್ಲಿ ಪ್ರಕರಣ ದಾಖಲಿಸಬೇಕೆ ಎಂಬ ವಿಷಯದ ಕುರಿತು ಸ್ಪಷ್ಟನೆ ನೀಡುವಂತೆ ಕೋರಿ ಮೈಸೂರು ಲೋಕಾಯುಕ್ತ ಎಸ್ ಪಿ ಉದೇಶ್ ರಾಜ್ಯ ಲೋಕಾಯುಕ್ತರಿಗೆ ಮನವಿ ಮಾಡಿದ್ದರು.

ಮನವಿಯ ಕುರಿತು ಕಾನೂನಾತ್ಮಕ ಅಂಶಗಳನ್ನು ಪರಿಶೀಲಿಸಿದ ಲೋಕಾಯುಕ್ತ ಎಡಿಜಿಪಿ ಜಿ ಪಿ ಮನೀಷ್ ಕರ್ಬೀಕರ್ ಜನಪ್ರತಿನಿಧಿಗಳ ನ್ಯಾಯಾಲಯ ಸಿ ಆರ್ ಪಿ ಸಿ  ಅನ್ವಯ ಪ್ರಕರಣ ದಾಖಲಿಸುವಂತೆ ಸೂಚಿಸಿದೆ. ಈ ಹಿನ್ನೆಲೆಯಲ್ಲಿ ಕೋರ್ಟ್ ಆದೇಶದಂತೆ ಪ್ರಕರಣ ದಾಖಲಿಸಬಹುದು ಎಂದು ಸ್ಪಷ್ಟನೆ ನೀಡಿದರು. ಸ್ಪಷ್ಟನೆ ದೊರೆತ ನಂತರ ಮೈಸೂರು ಲೋಕಾಯುಕ್ತ ಪೊಲೀಸರು ಸಿದ್ದರಾಮಯ್ಯ ಸೇರಿದಂತೆ ಇತರರ ವಿರುದ್ಧ ಸಿಆರ್ಪಿ ಸೆಕ್ಷನ್ 156(3)ರಡಿ ಎಫ್ ಐ ಆರ್ ದಾಖಲಿಸಿದರು.

ಅಲ್ಲದೆ ಆರೋಪಿಗಳ ವಿರುದ್ಧ ಸೆಕ್ಷನ್ 120ಬಿ(ಅಪರಾಧಿಕ ಒಳಸಂಚು), 166 – ಯಾವುದೇ ವೈಯಕ್ತಿಗೆ ಹಾನಿ ಉಂಟು ಮಾಡುವ ಉದ್ದೇಶದಿಂದ ಸಾರ್ವಜನಿಕ ನೌಕರನು ಕಾನೂನುಬದ್ದ ಆದೇಶ ಪಾಲಿಸದಿರುವುದು, 403 ಸ್ವತ್ತಿನ ಅಪ್ರಮಾಣಿಕ ದುರುಪಯೋಗ, 406 ಅಪರಾಧಿಕ ನಂಬಿಕೆ ದ್ರೋಹ, 420 ವಂಚನೆ ಮಾಡುವುದು ಮತ್ತು ಸ್ವತ್ತನ್ನ ನೀಡಲು ಅಪ್ರಮಾಣಿಕವಾಗಿ ಪ್ರೇರೇಪಿಸುವುದು, 42 ಕೇಡಿನ ಅಪರಾಧಕ್ಕಾಗಿ ದಂಡನೆ, 465 ಖೋಟಾ ತಯಾರಿಕೆಗೆ ದಂಡನೆ, 468 ವಂಚನೆ ಉದ್ದೇಶಕ್ಕಾಗಿ ಖೋಟಾ ತಯಾರಿಕೆ, 340 ಅಕ್ರಮ ಬಂಧನ ಮತ್ತು ಕಲಂ 351ರ ಅಡಿಯಲ್ಲಿ ತನಿಖೆ ನಡೆಯಲಿದೆ.

ಸಿಬಿಐಗೆ ತನಿಖೆ ವಹಿಸಲು ಒತ್ತಾಯ: ಇದರ ಬೆನ್ನಲ್ಲೇ ದೂರುದಾರ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಅವರು ಪ್ರಕರಣದ ಬಗ್ಗೆ ಸಿಬಿಐ ತನಿಖೆಗೆ ಆದೇಶಿಸಬೇಕು ಎಂದು ಕೋರಿ ಹೈಕೋರ್ಟಿಗೆ ರಿಟ್ ಸಲ್ಲಿಸಿದ್ದಾರೆ.

ಪ್ರಕರಣದಲ್ಲಿ ಆರೋಪಿಯಾಗಿರುವ ಸಿದ್ದರಾಮಯ್ಯ ಅವರು ರಾಜ್ಯದ ಮುಖ್ಯಮಂತ್ರಿ ಆಗಿದ್ದಾರೆ. ಹೀಗಾಗಿ ಅವರು ತನಿಖೆ ಮತ್ತು ತನಿಖಾ ಸಂಸ್ಥೆಗಳ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇದೆ. ಲೋಕಾಯುಕ್ತ ಸ್ವತಂತ್ರ ತನಿಖಾ ಸಂಸ್ಥೆಯಾದರೂ  ಇದರ ಪೊಲೀಸರು ರಾಜ್ಯ ಸರ್ಕಾರದ ಅಧೀನದಲ್ಲಿ ಬರುತ್ತಾರೆ. ಹೀಗಾಗಿ ಅವರಿಂದ ನಿಷ್ಪಕ್ಷ ತನಿಖೆ ಸಾಧ್ಯವಿಲ್ಲ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಸರ್ಕಾರದ ಅತ್ಯಂತ ಪ್ರಭಾವಿಗಳ ವಿರುದ್ಧದ ಈ ಪ್ರಕರಣ ಪ್ರಾಮಾಣಿಕ ಹಾಗೂ ನಿಷ್ಪಕ್ಷಪಾತ ತನಿಖೆಗೆ ಒಳಪಡಬೇಕಾದ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ಪ್ರಕರಣದ ಬಗ್ಗೆ ಸಿಬಿಐ ತನಿಖೆಗೆ ಆದೇಶಿಸಬೇಕು ಎಂದು ಕೋರಿದ್ದಾರೆ. ಸದರಿ ಅರ್ಜಿಯ ವಿಚಾರಣೆ ಮುಂದಿನ ವಾರ ಬರುವ ಸಾಧ್ಯತೆ ಇದೆ.

ಸಿಎಂ ವಿರುದ್ಧ ಕಲಂಗಳು ಮತ್ತು ಶಿಕ್ಷೆ:
ಐಪಿಸಿ 120B  – ಕ್ರಿಮಿನಲ್ ಪಿತೂರಿ, ಒಳ ಸಂಚು (ಜೀವಾವಧಿ ಶಿಕ್ಷೆ)
ಐಪಿಸಿ 166  – ಸರ್ಕಾರಿ ಸೇವಕನಿಂದ ಕಾನೂನು ಉಲ್ಲಂಘನೆ
ಐಪಿಸಿ 403 – ಅಪ್ರಾಮಾಣಿಕವಾಗಿ ಆಸ್ತಿಯ ದುರ್ಬಳಕೆ
ಐಪಿಸಿ 406 – ಅಪರಾಧಿಕ ನಂಬಿಕೆ ದ್ರೋಹಕ್ಕೆ ಶಿಕ್ಷೆ (3 ವರ್ಷ ಜೈಲು ಅಥವಾ ದಂಡ)
ಐಪಿಸಿ 420 – ವಂಚನೆ (ಮೋಸದಿಂದ ಲಾಭ ಪಡೆಯುವುದು)
ಐಪಿಸಿ 426 – ಕಿಡಿಗೇಡಿತನಕ್ಕೆ ಶಿಕ್ಷೆ (3 ತಿಂಗಳ ಶಿಕ್ಷೆ ಅಥವಾ ದಂಡ)
ಐಪಿಸಿ 465 – ಫೋರ್ಜರಿ
ಐಪಿಸಿ 468 – ಫೋರ್ಜರಿ ಮಾಡಿದ್ದಕ್ಕೆ ಶಿಕ್ಷೆ (5 ವರ್ಷ ಜೈಲು ಮತ್ತು ದಂಡ)
ಐಪಿಸಿ – 340 – ವ್ಯಕ್ತಿಯೊಬ್ಬನನ್ನು ನಿರ್ಬಂಧಿಸುವುದು
ಐಪಿಸಿ – 351 – ಮುಂದುವರಿದ್ರೆ ದಾಳಿ ಮಾಡುವ ಭಯ ಹುಟ್ಟಿಸುವುದು
ಐಪಿಸಿ – 9 – ಲಂಚ ಸ್ವೀಕಾರ, ಅಥವಾ ಲಂಚ ನೀಡಲು ಶಿಕ್ಷೆ, ವೈಯಕ್ತಿಕ ಪ್ರಭಾವ
ಐಪಿಸಿ 13 – ಸರ್ಕಾರಿ ನೌಕರನಿಂದ ಅಪರಾಧಿಕ ದುರ್ನಡತೆ.

Leave a Reply