ಎಫ್.ಐ.ಆರ್ ದಾಖಲಿಸಿ ಮುಡಾ ಆರೋಪದ ಕುರಿತು ತನಿಖೆ ಪೂರ್ಣಗೊಳಿಸಿ

2 years ago

ಬೆಂಗಳೂರು: ಸಿಎಂ ಸಿದ್ದರಾಮಯ್ಯ ವಿರುದ್ಧ ಮೈಸೂರು ನಗರ ಅಭಿವೃದ್ಧಿ ಪ್ರಾಧಿಕಾರದ (ಮುಡಾ) ನಿವೇಶನ ಹಂಚಿಕೆ ಅಕ್ರಮ ಆರೋಪದ ಬಗ್ಗೆ 3 ತಿಂಗಳ ಒಳಗೆ  ತನಿಖೆ ಪೂರ್ಣಗೊಳಿಸುವಂತೆ ಜನಪ್ರತಿನಿಧಿಗಳ ನ್ಯಾಯಾಲಯ ಲೋಕಾಯುಕ್ತ ಪೊಲೀಸರಿಗೆ ಆದೇಶಿಸಿದೆ.

ತಮ್ಮ ಅಧಿಕಾರ ದುರ್ಬಳಕೆ ಮಾಡಿಕೊಂಡು ಸಿಎಂ ಸಿದ್ದರಾಮಯ್ಯ ತಮ್ಮ ಪತ್ನಿ ಹೆಸರಿನಲ್ಲಿ ಪರ್ಯಾಯ ನಿವೇಶನ ಪಡೆದಿದ್ದಾರೆ ಎಂದು ಆರೋಪಿಸಿ  ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ಸ್ನೇಹಮಯಿ ಕೃಷ್ಣ ಹಾಗೂ ಟಿ.ಜೆ.ಅಬ್ರಹಾಂ ದೂರು ಸಲ್ಲಿಸಿದ್ದರು.

ಖಾಸಗಿ ಕ್ರಿಮಿನಲ್ ದೂರಿನ ವಿಚಾರಣೆ ಆಲಿಸಿ ಕಾಯ್ದಿರಿಸಿದ್ದ ಆದೇಶವನ್ನು, ‘ಶಾಸಕರು-ಸಂಸದರ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ವಿಚಾರಣೆ’ಯ ನ್ಯಾಯಾಲಯದ ನ್ಯಾಯಾಧೀಶ ಸಂತೋಷ ಗಜಾನನ ಭಟ್ ತೆರೆದ ನ್ಯಾಯಾಲಯದಲ್ಲಿ ಉಕ್ತಲೇಖನದ ಮೂಲಕ ಆದೇಶ ಹೊರಡಿಸಿದರು.

ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಲು ರಾಜ್ಯಪಾಲರು ನೀಡಿದ್ದ ಆದೇಶಕ್ಕೆ ಹೈಕೋರ್ಟ್ ನಿನ್ನೆ (ಸೆ.23) ಅನುಮತಿ ನೀಡಿತ್ತು. ಭ್ರಷ್ಟಾಚಾರ ನಿಗ್ರಹ ಕಾಯ್ದೆ- 1988ರ ಕಲಂ 17 ಎ ಅಡಿಯಲ್ಲಿ ತನಿಖೆಗೆ ಅನುಮತಿ ನೀಡಿದ್ದ ರಾಜ್ಯಪಾಲರ ಆದೇಶವನ್ನು ಪ್ರಶ್ನಿಸಿ ಸಿದ್ದರಾಮಯ್ಯ ಹೈಕೋರ್ಟ್ ನಲ್ಲಿ ಸಲ್ಲಿಸಿದ್ದ ರಿಟ್ ಅರ್ಜಿಯನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ವಜಾ ಮಾಡಿತ್ತು.

ಈ ಹಿನ್ನೆಲೆಯಲ್ಲಿ ದೂರುದಾರ ಮೈಸೂರಿನ ಸ್ನೇಹಮಯಿ ಕೃಷ್ಣ ಬುಧವಾರ ಬೆಳಗ್ಗೆ ತಮ್ಮ ವಕೀಲ ಲಕ್ಷ್ಮಿ ಅಯ್ಯಂಗಾರ್ ಅವರ ಮುಖಾಂತರ ಹೈಕೋರ್ಟ್ ತೀರ್ಪಿನ ಪ್ರತಿಯನ್ನು ನ್ಯಾಯಾಧೀಶ ಸಂತೋಷ ಗಜಾನನ ಭಟ್ ಅವರಿಗೆ ಸಲ್ಲಿಕೆ ಮಾಡಿದರು.

ವಿಚಾರಣೆ ಆಲಿಸಿದ ನ್ಯಾಯಾಧೀಶರು ಖಾಸಗಿ ದೂರಿನ ಅನುಸಾರ ಕ್ರಿಮಿನಲ್ ಪ್ರಕರಣದ ಆರೋಪಿಯಾಗಿ ಸಿದ್ದರಾಮಯ್ಯ ವಿರುದ್ಧ ಅಪರಾಧ ದಂಡ ಪ್ರಕ್ರಿಯಾ ಸಂಹಿತೆ ಅಡಿಯಲ್ಲಿ ಸಕ್ಷಮ ಪ್ರಾಧಿಕಾರ ಎಫ್ಐ ಆರ್ ದಾಖಲಿಸಿ ತನಿಖೆ ನಡೆಸುವಂತೆ ಪೊಲೀಸರಿಗೆ ಆದೇಶ ಹೊರಡಿಸಿದರು.

ತನಿಖೆಗೆ ಹೆದರಲ್ಲ ಎಂದ ಸಿದ್ದರಾಮಯ್ಯ: ಕೋರ್ಟ್ ಆದೇಶದ ಬಗ್ಗೆ ಪ್ರತಿಕ್ರಿಯಿಸಿರುವ ಸಿಎಂ ಸಿದ್ದರಾಮಯ್ಯ, ನಾನು ತನಿಖೆಯನ್ನು ಎದುರಿಸಲು ತಯಾರಾಗಿದ್ದೇನೆ. ತನಿಖೆಗೆ ಹೆದುರುವುದಿಲ್ಲ ಹಾಗೂ ಕಾನೂನು ರೀತಿ ಹೋರಾಟ ಮಾಡಲು ತಯಾರಾಗಿದ್ದೇನೆ ಎಂದರು.

ಜನ ಪ್ರತಿನಿಧಿಗಳ ನ್ಯಾಯಾಲಯ ನಿನ್ನೆ ಆದೇಶ ನೀಡಿದಂತೆ 17 ಎ ಪ್ರಕಾರ ತನಿಖೆ ಮಾಡಲು ಅನುಮತಿ ನೀಡಲಾಗಿದೆ. ಆದೇಶದ ಪ್ರತಿ ನನಗೆ ದೊರೆತಿಲ್ಲ. ಆದೇಶವನ್ನು ಪೂರ್ಣವಾಗಿ ಓದಿದ ನಂತರ ಪ್ರತಿಕ್ರಿಯೆ ನೀಡುವೆ ಎಂದರು.

ನಿನ್ನೆ ಕೂಡ  ಮಾತುಗಳನ್ನು ಹೇಳಿದ್ದು ಈಗಲೂ ಅದನ್ನೇ ಪುನರುಚ್ಚರಿಸುತ್ತಿದ್ದೇನೆ. ನನಗೆ ತಿಳಿದಂತೆ ಮೈಸೂರು ಲೋಕಾಯುಕ್ತಕ್ಕೆ ಪ್ರಕರಣವನ್ನು ಶಿಫಾರಸ್ಸು ಮಾಡಲಾಗಿದೆ. ಮೈಸೂರಿನಲ್ಲಿಯೇ ದೂರು ನೀಡಲಾಗಿದ್ದು, ದೂರುದಾರರು ಮೈಸೂರಿನವರು, ಮೂಡಾ ಕೂಡ ಅಲ್ಲಿಯೇ ಇರುವುದರಿಂದ  ಮೈಸೂರಿಗೆ ಶಿಫಾರಸ್ಸು ಮಾಡಿರಬೇಕು  ಎಂದು ಭಾವಿಸಿದ್ದೇನೆ ಎಂದರು.

ಇಂದಿನ ಪೂರ್ಣ ಆದೇಶ ಸಿಕ್ಕಿದ ಮೇಲೆ ವಕೀಲರೊಂದಿಗೆ ಚರ್ಚೆ ಮಾಡಿ ನಿರ್ಧಾರ ಮಾಡಲಾಗುವುದು. ಮೂಡಾ ಪ್ರಕರಣದ ತನಿಖೆಗೆ ಸರ್ಕಾರ ರಚಿಸಿದ್ದ ನಿವೃತ್ತ ನ್ಯಾ.ಪಿ.ಎನ್.ದೇಸಾಯಿಯವರ ಆಯೋಗದ    ನ್ಯಾಯಾಂಗ ತನಿಖೆ ಮುಂದುವರೆಯುತ್ತದೆ ಎಂದರು.

Leave a Reply