ಮುಖ್ಯಮಂತ್ರಿ ಪದಕ ವಿಜೇತ ಎ ವಿ ಕುಮಾರ್ ವಿರುದ್ಧ ಎಫ್ ಐ ಆರ್

1 year ago

ಬೆಂಗಳೂರು: ಕ್ರಿಮಿನಲ್ ಪ್ರಕರಣ ದಾಖಲಿಸುವ ಬೆದರಿಕೆ ಹಾಕಿ ಬರೋಬ್ಬರಿ 4 ಕೋಟಿ ರೂಪಾಯಿ ಮೌಲ್ಯದ ಮನೆಯನ್ನು ಕೇವಲ 60 ಲಕ್ಷ ರೂ.ಗಳಿಗೆ ಕಬಳಿಸಲು ಮುಂದಾಗಿದ್ದ ಮುಖ್ಯಮಂತ್ರಿ ಪದಕ ವಿಜೇತ ಇನ್ಸ್ಪೆಕ್ಟರ್ ಎ.ವಿ. ಕುಮಾರ್ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. ಜೊತೆಗೆ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯ ಮೂವರು ಸಿಬ್ಬಂದಿ ಹಾಗೂ ಇತರೆ ನಾಲ್ವರು ಖಾಸಗಿ ವ್ಯಕ್ತಿಗಳು ಸೇರಿ 7 ಮಂದಿ ವಿರುದ್ಧ ಎಫ್ಐಆರ್ ದಾಖಲಾಗಿದೆ.

ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆ ಮೇಲೆ ಲೋಕಾಯುಕ್ತ ದಾಳಿ ಪ್ರಕರಣದಲ್ಲಿ ಇನ್ಸ್ಪೆಕ್ಟರ್ ಕುಮಾರ್, ಇಬ್ಬರು ಕಾನ್ಸ್ಟೇಬಲ್ ಸೇರಿ 7 ಜನರ ಮೇಲೆ ಬೆಂಗಳೂರು ಲೋಕಾಯುಕ್ತ ಕಚೇರಿಯಲ್ಲಿ ಎಫ್ಐಆರ್ ದಾಖಲಾಗಿದೆ.

ಎಫ್ ಐಆರ್ ನಲ್ಲಿ ಇನ್ಸ್ಪೆಕ್ಟರ್ ಎ ವಿ ಕುಮಾರ್ ಎ1ಆಗಿದ್ದರೆ, ಕಾನ್ಸ್ಟೇಬಲ್ಗಳಾದ ಉಮೇಶ್ ಹಾಗೂ ಅನಂತ್ ಇತರ ಆರೋಪಿಗಳಾಗಿದ್ದಾರೆ. ಮೂವರು ಸರ್ಕಾರಿ ನೌಕರರು ಹಾಗೂ ನಾಲ್ಕು ಖಾಸಗಿ ವ್ಯಕ್ತಿಗಳ ಹೆಸರನ್ನು ಎಫ್ಐಆರ್ನಲ್ಲಿ ಉಲ್ಲೇಖಿಸಲಾಗಿದೆ. 

ಆಸ್ತಿ ಮಾಲೀಕ ಚೆನ್ನೇಗೌಡ ಅವರು ನೀಡಿದ ದೂರಿನ ಮೇಲೆ ಲೋಕಾಯುಕ್ತ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ. ಭ್ರಷ್ಟಾಚಾರ ತಡೆ ಕಾಯ್ದೆ ಕಲಂ 7ಎ ಅಡಿ ಎಫ್ಐಆರ್ ಆಗಿದೆ. ಭ್ರಷ್ಟ ಅಥವಾ ಕಾನೂನುಬಾಹಿರ ವಿಧಾನಗಳಿಂದ ವೈಯಕ್ತಿಕ ಪ್ರಭಾವ ಬೀರುವುದು ಹಾಗೂ ಅನಗತ್ಯ ಪ್ರಯೋಜನ ಪಡೆಯುವ ಅಪರಾಧವನ್ನು 7ಎ ಅಡಿ ಉಲ್ಲೇಖ ಮಾಡಲಾಗಿದೆ. 3 ವರ್ಷಗಳಿಗಿಂತ ಕಡಿಮೆಯಿಲ್ಲದ 7 ವರ್ಷಗಳಿಗೆ  ವಿಸ್ತರಿಸಬಹುದಾದ ಜೈಲು ಶಿಕ್ಷೆ ಮತ್ತು ದಂಡ ಒಳಗೊಂಡ 7ಎ ಸೆಕ್ಷನ್ ಇದಾಗಿದೆ.

ಕಳೆದ ವಾರ ಲೋಕಾಯುಕ್ತ ಇಲಾಖೆ ಅಧಿಕಾರಿಗಳು ಅನ್ನಪೂರ್ಣೇಶ್ವರಿ ಠಾಣೆ ಮೇಲೆ ದಾಳಿ ಮಾಡಿದ್ದರು. ಇದೇ ವೇಳೆ ಖಾಸಗಿ ಹೋಟೆಲ್ ಮೇಲೆಯೂ ದಾಳಿ ನಡೆದಿತ್ತು. ಅಲ್ಲಿ 4 ಕೋಟಿ ಮೌಲ್ಯದ ಕಟ್ಟಡವನ್ನು ಕೇವಲ 60 ಲಕ್ಷಕ್ಕೆ ಬರೆಸಿಕೊಳ್ಳಲು ಮುಂದಾಗಿದ್ದ ನಾಲ್ವರನ್ನು ವಶಕ್ಕೆ ಪಡೆದು ವಿಚಾರಣೆ ನಡೆದಿತ್ತು. ಪೊಲೀಸರಿಂದಲೇ ಕಟ್ಟಡವನ್ನು ಕಡಿಮೆ ಬೆಲೆಗೆ ಬರೆಸಿಕೊಳ್ಳಲು ಮುಂದಾಗಿರುವ ಸಂಗತಿ ವಿಚಾರಣೆ ವೇಳೆ ತಿಳಿದಿತ್ತು. 

ಇಬ್ಬರು ಕಾನ್ಸ್ಸ್ಟೇಬಲ್ ನೇತೃತ್ವದಲ್ಲಿ ನಡೆಯುತ್ತಿದ್ದ ಮಾತುಕತೆ ವೇಳೆ ಲೋಕಾಯುಕ್ತ ಪೊಲೀಸರಿಂದ ಟ್ರ್ಯಾಪ್ ಕಾರ್ಯಾಚರಣೆ ನಡೆಸಲಾಗಿತ್ತು. ಇನ್ನು ದೂರುದಾರ ಚನ್ನೇಗೌಡ ಅವರ ಮನೆಯನ್ನು ತಮಗೆ ಬರೆದುಕೊಡುವಂತೆ ಮನೆಗೆ ನುಗ್ಗಿ ಧಮ್ಕಿ ಹಾಕಿದ್ದ ಬಗ್ಗೆ ವಿಡಿಯೋ ಬಿಡುಗಡೆಯಾಗಿದೆ. 

ಲೋಕಾಯುಕ್ತ ಪೊಲೀಸರು ಇದೀಗ ಎಫ್ಐಆರ್ ದಾಖಲಿಸಿ, ತನಿಖೆ ಚುರುಕುಗೊಳಿಸಿದ್ದಾರೆ. ಇತ್ತೀಚೆಗೆ ನಡೆದ ಮುಖ್ಯಮಂತ್ರಿ ಚಿನ್ನದ ಪದಕ ಪಡೆಯಲು ಬೆಸ್ಟ್ ಇನ್ಸ್ಪೆಕ್ಟರ್ ಕೆಟಗರಿ ಅಡಿಯಲ್ಲಿ ಆಯ್ಕೆಯಾಗಿದ್ದ ಇನ್ಸ್ಪೆಕ್ಟರ್ ಎ.ವಿ.ಕುಮಾರ್ ಅವರ ಹಲವು ಅಕ್ರಮಗಳು ಬೆಳಕಿಗೆ ಬಂದು ವ್ಯಾಪಕ ಟೀಕೆಗೆ ಗುರಿಯಾಗಿವೆ.

Leave a Reply