ಹುಬ್ಬಳ್ಳಿ: ಸಿನಿಮಾ ಕಥೆಯ ಮೂಲಕ ಕೇವಲ ಒಂದು ಸಂದೇಶ ನೀಡಿದರೆ ಸಾಲದು, ನೋಡಿದವರಿಗೆ ಆ ಚಿತ್ರ ತಮ್ಮದೆ, ತಮ್ಮ ಬದುಕಿನ ಭಾಗ ಎನ್ನುವ ಭಾವನೆ ಮೂಡಬೇಕು. ಸಾಮಾನ್ಯವಾಗಿ ರವಿಕೆ ಅಂದ ತಕ್ಷಣ ಅದರ ಬಗ್ಗೆ ಗಂಭೀರ ಚಿಂತನೆಗಿಂತ ಹತ್ತು ಹಲವು ಹಾಸ್ಯಾಸ್ಪದವಾದ ಭಾವನೆ ಬಹುತೇಕರಲ್ಲಿ ಸಹಜವಾಗಿ ಮೂಡುತ್ತದೆ. ಆದರೆ ಆ ರವಿಕೆಯಿಂದಲೇ ರವಿಕೆಯೊಳಗಿನ ಮನಸ್ಸಿನ ಭಾವನೆಯನ್ನು ಅನಾವರಣಗೊಳಿಸಿ, ಸಮಾಜದಲ್ಲಿ ಅದೆಷ್ಟೋ ಇಂತಹ ಸಂದಿಗ್ಧ ಸ್ಥಿತಿಯಲ್ಲಿರುವ ಹಾಗೂ ಇಂತಹ ಸ್ಥಿತಿಯನ್ನು ಅನುಭವಿಸಿರುವ ಮಹಿಳೆಯರ ಭಾವನೆಗೆ ಈ ಸಿನಿಮಾ ಮೂಲಕ ಬಣ್ಣ ತುಂಬಬೇಕು ಎನ್ನುವ ಹಂಬಲ ಚಿತ್ರ ತಂಡದ್ದು ಎಂದು ನಿರ್ದೇಶಕ ಸಂತೋಷ ಕೊಂಡಂಕೇರಿ ಹೇಳಿದರು.

ಹುಬ್ಬಳ್ಳಿಯ ಪತ್ರಿಕಾಭವನದಲ್ಲಿ ರವಿಕೆ ಪ್ರಸಂಗ ಸಿನಿಮಾ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಧ್ಯಮ ವರ್ಗದ ಕುಟುಂಬವೊಂದು ಗ್ರಾಮೀಣ ಸೊಗಡಿನಲ್ಲಿ ಇರುವ ವಾತಾವರಣ, ಸ್ಥಳೀಯ ಸಂಸ್ಕೃತಿ, ಸಂಪ್ರದಾಯದ ಜೊತೆಗೆ ಹಾಸ್ಯದ ಸ್ಪರ್ಶವನ್ನು ದಕ್ಷಿಣ ಕನ್ನಡದ ಭಾಷೆಯನ್ನೆ ವಿಭಿನ್ನವಾಗಿ ತೋರಿಸುವ ಮೂಲಕ ಭಾಷಾ ಹಾಗೂ ಆಹಾರ ಸಂಸ್ಕೃತಿಯನ್ನು ಕೂಡ ರವಿಕೆ ಪ್ರಸಂಗದಲ್ಲಿ ಸೂಕ್ಷ್ಮವಾಗಿ ತೋರಿಲಾಗಿದೆ. ಒಬ್ಬ ಟೈಲರ್ ಅಂಗಡಿಯಿಂದ ಆರಂಭವಾದ ಈ ರವಿಕೆ ಪ್ರಸಂಗ ಕೋರ್ಟ್ ಮೆಟ್ಟಿಲೇರಿದಾಗ ಅದಕ್ಕೆ ಸಮಾಜ ಹೆಣ್ಣನ್ನು ನೋಡುವ ಪರಿಯೇ ಈ ಚಿತ್ರದ ಎಳೆಯಾಗಿದೆ ಎಂದು ಹೇಳಿದರು.
ರವಿಕೆಯನ್ನು ಆಧಾರವಾಗಿಟ್ಟುಕೊಂಡು ಕನ್ನಡ ಚಿತ್ರರಂಗದಲ್ಲಿ ಒಂದು ಹೊಸ ಪ್ರಯೋಗದ ಮೂಲಕ ಪ್ರಯೋಗಶೀಲತೆಯ ತಂಡದಿಂದ ಶೀಘ್ರವೆ ರವಿಕೆ ಪ್ರಸಂಗ ಚಿತ್ರ ತೆರೆಗೆ ಬರಲು ಸಿದ್ಧವಾಗಿದೆ. ಇಡೀ ಸಿನಿಮಾ ರವಿಕೆ ವಿಚಾರವಾಗಿ ಹತ್ತ-ಹಲವು ಚರ್ಚೆಗಳನ್ನು ಹುಟ್ಟು ಹಾಕುವ ಜೊತೆಗೆ ಮಹಿಳೆಯ ಮಾನಸಿಕ ವೇದನೆ ಹಾಗೂ ಆಕೆಯ ಕನಸುಗಳಿಗಾದ ನಿರಾಶೆ, ಹೋರಾಟದ ಛಲ, ಸಮಾಜ ಆಕೆಯನ್ನು ಕಾಣುವ ರೀತಿ ಹೀಗೆ ಹಲವಾರು ವಿಚಾರಗಳನ್ನು ರವಿಕೆ ಸುತ್ತ ಸುತ್ತುವರೆಯುತ್ತವೆ. ಹಕ್ಕಿಗಾಗಿ ಹೋರಾಟ, ಸಮಸಮಾಜದ ಸಂದೇಶ, ಮಹಿಳೆ ಸಂವೇದನೆ ಹೀಗೆ ಸಮಾಜಕ್ಕೊಂದು ಸಂದೇಶವನ್ನು ರವಿಕೆ ಪ್ರಸಂಗ ನೀಡಲಿದೆ ಎಂದರು.
ಈಗಾಗಲೇ ಸಿನಿಮಾ ಟೀಸರ್ ಬಿಡುಗಡೆಯಾಗಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುವ ಜೊತೆಗೆ ಸಿನಿಮಾ ಕುರಿತು ಸಿನಿಪ್ರಿಯರಲ್ಲಿ ಹಲವು ನಿರೀಕ್ಷೆ ಮೂಡಿಸಿದೆ. ದೃಷ್ಟಿ ಮೀಡಿಯಾ ಮತ್ತು ಪ್ರೊಡಕ್ಷನ್ಸ್ ಬ್ಯಾನರ್ ಜೊತೆಗೆ ಶಂತನು ಮಹರ್ಷಿ, ನಿರಂಜನಗೌಡ, ಗಿರೀಶ್ ಎಸ್.ಎಮ್, ಶಿವರುದ್ರಯ್ಯ ಎಸ್.ವಿ ಅವರು ಬಂಡವಾಳ ಹೂಡಿದ್ದಾರೆ. ಕಥೆ ಮತ್ತು ಸಂಭಾಷಣೆ ಪತ್ರಕರ್ತೆ ಪಾವನಾ ಸಂತೋಷ ಅವರದ್ದು. ಚಿತ್ರಕಥೆ ನಿರ್ಮಿಸಿ ಚಿತ್ರಕ್ಕೆ ಸಂತೋಷ ಕೊಡಂಕೇರಿ ಆ‌್ಯಕ್ಷನ್ ಕಟ್ ಹೇಳಿದ್ದಾರೆ. ಗೀತಾ ಭಾರತಿ ಭಟ್, ಸುಮನ್ ರಂಗನಾಥ್, ಪದ್ಮಜಾ ರಾವ್, ರಾಕೇಶ್ ಮೈಯ್ಯ, ರಘು ಪಾಂಡೇಶ್ವರ, ಸಂಪತ್ ಮೈತ್ರಿಯಾ, ಕೃಷ್ಣಮೂರ್ತಿ ಕವತ್ತಾರ್, ಹನುಮಂತರಾವ್ ಕೌಜಲಗಿ, ಹನುಮಂತೇಗೌಡ, ಪ್ರವೀಣ್ ಅಥರ್ವ, ಮೀನಾ ಸೇರಿದಂತೆ ಹಲವಾರು ಕಲಾವಿದರ ತಂಡ ಈ ಚಿತ್ರದಲ್ಲಿ ಅಭಿನಯಿಸಿದೆ ಎಂದು ಹೇಳಿದರು.
ವಿನಯ್ ಶರ್ಮಾ ಸಂಗೀತ ನಿರ್ದೇಶನ, ಕಿರಣ್ ಕಾವೇರಪ್ಪ ಅವರ ಸಾಹಿತ್ಯ, ಚೈತ್ರಾ ಎಚ್.ಜಿ, ಜೋಗಿ ಸುನೀತಾ, ಮಾನಸಾ ಹೊಳ್ಳ, ಚೇತನ್ ನಾಯಕ ಅವರು ಚಿತ್ರದ ಗೀತೆಗೆ ಸ್ವರ ನೀಡಿದ್ದಾರೆ. ಮುರಳೀಧರ್ ಎನ್. ಅವರ ಛಾಯಾಗ್ರಹಣ ಉತ್ತಮವಾಗಿ ಮೂಡಿ ಬಂದಿದೆ. ಸಂಕಲನಕಾರರಾಗಿ ರಘು ಶಿವರಾಮ್ ಕಾರ್ಯನಿರ್ವಹಿಸಿದ್ದಾರೆ ಎಂದು ತಿಳಿಸಿದರು.
ಚಿತ್ರದ ಟೈಟಲ್ ಸಾಂಗ್ ಝೇಂಕಾರ್ ಮ್ಯೂಸಿಕ್ ನಿಂದ ಈಗಾಗಲೇ ಬಿಡುಗಡೆಯಾಗಿದ್ದು, ಜನಮನ ಸೆಳೆಯುತ್ತಿದೆ. ಚಿತ್ರ ನೋಡಿದ ಮೇಲೆ ಸಿನಿಪ್ರೀಯರು ನಿರಾಶರಾಗದೆ ಏನೋ ಒಂದು ಸಂತೃಪ್ತಿಯಿಂದ ಮರಳಬೇಕು ಎನ್ನುವ ಉದ್ದೇಶ ಚಿತ್ರತಂಡದ್ದು. ಹೀಗಾಗಿ ಇಡೀ ಚಿತ್ರದ ಮೌಲ್ಯದಲ್ಲಿ ಸ್ವಲ್ಪವೂ ಕೂಡ ಹೊಂದಾಣಿಕೆಯಾಗದಂತೆ ಬಹಳಷ್ಟು ಜಾಗೃತಿ ಮತ್ತು ಕಾಳಜಿಯಿಂದ ಚಿತ್ರ ನಿರ್ಮಿಸಲಾಗಿದೆ ಎಂದರು.
ಈಗಾಗಲೇ ಕನ್ನಡ ಚಿತ್ರರಂಗದಲ್ಲಿ ದೃಷ್ಟಿ ಮಿಡಿಯಾ ಪ್ರೊಡಕ್ಷನ್ ಹೌಸ್ ತನ್ನನ್ನು ತಾನು ತೊಡಗಿಸಿಕೊಂಡಿದೆ. ನಿರಂತರ ಹೊಸತನದತ್ತ ಯೋಚಿಸುವ ಈ ತಂಡ, ಹೊಸ ಪ್ರಯೋಗಗಳಿಗೆ ತನ್ನನ್ನು ತಾನು ತೊಡಗಿಸಿಕೊಂಡಿರುವುದು ವಿಶೇಷವಾಗಿದೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಕಥೆಗಾರರಾದ ಪಾವನಾ ಸಂತೋಷ್, ಪತ್ರಕರ್ತ ನೂರ ಅಹ್ಮದ್ ಮಕಾನದಾರ ಇದ್ದರು.




