ಉಡುಪಿ ಜಿಲ್ಲೆಯ ಬೈಂದೂರು ಕ್ಷೇತ್ರದಲ್ಲಿ ರಾಜಕೀಯ ರಣರಂಗ
ದಿನೇ ದಿನೇ ಗೊಂದಲ ಸೃಷ್ಟಿಸುತ್ತಿರುವ ಬಿಜೆಪಿ ನಾಯಕ
ಬಿಜೆಪಿಯಲ್ಲಿ ಮನೆಯೊಂದು ಮೂರು ಬಾಗಿಲು
ಇಬ್ಬರ ಜಗಳದ ನಡುವೆ ಮನನೊಂದ ಕಾರ್ಯಕರ್ತರು ಮಣೆ ಹಾಕಲಿದ್ದಾರೆ ಶಾಸಕ ಸುಕುಮಾರ್ ಶೆಟ್ಟಿ ಶಿಷ್ಯನಿಗೆ
ಶಾಸಕ ಕುಮಾರ್ ಶೆಟ್ಟಿ ಶಿಷ್ಯ ತಲ್ಲೂರು ರಘುರಾಮ ಶೆಟ್ಟಿ ಹೆಸರು ಸೂಚಿಸುತ್ತಿರುವ ಕಾರ್ಯಕರ್ತರು
ಮಂಗಳೂರು: ಉಡುಪಿ ಜಿಲ್ಲೆಯ ಬೈಂದೂರು ಕ್ಷೇತ್ರದಲ್ಲಿ ಬೂದಿ ಮುಚ್ಚಿದ ಕೆಂಡದಂತೆ ರಾಜಕೀಯ ರಣರಂಗ, ಬಿಜೆಪಿಯಲ್ಲಿ ಇದೀಗ ಗೊಂದಲದ ವಾತಾವರಣ ಕಾರ್ಯಕರ್ತರಲ್ಲಿ ಸಂಚಲನ ಮೂಡಿದೆ.
ಬೈಂದೂರು ಕ್ಷೇತ್ರದಲ್ಲಿ ಒಂದು ರೀತಿ ವಿಭಿನ್ನವಾದ ರಾಜಕೀಯ ಶೈಲಿ ಇದೆ. ಯಾಕೆಂದರೆ ಬೈಂದೂರು ಕ್ಷೇತ್ರದಲ್ಲಿ ಆರಿಸಿ ಬರುವ ಶಾಸಕರ ಪಟ್ಟಿಯೇ ಹಾಗಿದೆ. ಇದುವರೆಗಿನ ಇತಿಹಾಸವನ್ನು ಗಮನಿಸಿದರೆ ಇಲ್ಲಿ ಸೌಮ್ಯ ಸ್ವಭಾವದ ಶಾಸಕರೇ ಆಡಳಿತದ ಚುಕ್ಕಾಣಿ ಹಿಡಿದುಕೊಂಡು ಬಂದಿದ್ದಾರೆ. ಲಕ್ಷ್ಮೀನಾರಾಯಣ ಶೇರಿಗಾರ್, ಗೋಪಾಲ್ ಪೂಜಾರಿ ಹಾಗೂ ಸುಕುಮಾರ್ ಶೆಟ್ಟಿ ಕೂಡ ಒಂದು ರೀತಿಯ ಸೌಮ್ಯ ಸ್ವಭಾವದ ಜನನಾಯಕರೆ ಹೌದು. ಆದರೆ ಇಲ್ಲಿಯ ಜನರು ಅಪೇಕ್ಷೆ ಪಡುವುದು ಜಯಪ್ರಕಾಶ್ ಹೆಗ್ಡೆಯಂತಹ ನಾಯಕತ್ವವನ್ನು. ಯಾಕೆಂದರೆ ಹೆಗ್ಡೆಯವರು ಕಾರ್ಯಕರ್ತರನ್ನ ಕಡೆಗಣಿಸದೆ ಕಾರ್ಯಕರ್ತರನ್ನ ಜೊತೆ ನಿಷ್ಟೂರ ಹೊಂದದೆ ತನ್ನದೇ ಆದ ಶೈಲಿಯ ರಾಜಕೀಯ ಮಾಡಿ ರಾಜಕೀಯದ ಚಾಣಕ್ಯ ಎಂಬ ಬಿರುದು ಹೊಂದಿದ್ದಾರೆ.
ಬೈಂದೂರು ಕ್ಷೇತ್ರದಲ್ಲಿ ಹಿಂದೆಂದೂ ಕಾಣದಂತಹ, ರಾಜಕೀಯ ಬದಲಾವಣೆ ಗಾಳಿ ಬೀಸುತ್ತಿದೆ. ಬಿಜೆಪಿಯ ಕಾರ್ಯಕರ್ತರೇ ಇದೀಗ ಶಾಸಕ ಸುಕುಮಾರ್ ಶೆಟ್ಟಿ ವಿರುದ್ಧ ತೊಡೆತಟ್ಟಿದ್ದಾರೆ. ಇವರ ವಿರುದ್ಧ ಇದೀಗ ಬೈಂದೂರು ಕ್ಷೇತ್ರದಲ್ಲಿ ಎರಡು ಬಣ ನಿರ್ಮಾಣವಾಗಿವೆ. ಒಂದು ಬಾಬು ಹೆಗಡೆ ಬಣವಾದರೆ, ಇನ್ನೊಂದು ತಲ್ಲೂರು ರಘುರಾಮ್ ಶೆಟ್ಟಿಯವರ ಬಣ. ಇಲ್ಲೂ ವಿಶೇಷವೇನೆಂದರೆ ಬಿಜೆಪಿಯಲ್ಲಿ ಮತ್ತೊಂದಿಷ್ಟು ಹೆಸರುಗಳು ಕೇಳಿ ಬರ್ತಾ ಇವೆ. ಆದರೆ ಅಂತಿಮವಾಗಿ ಯಾರಿಗೆ ಟಿಕೆಟ್ ಸಿಗುತ್ತದೆ ಎಂಬುದು ಇನ್ನೂ ಖಾತ್ರಿ ಇಲ್ಲ. ಆದರೆ ಇದೀಗ ಬೂದಿ ಮುಚ್ಚಿದ ಕೆಂಡದಂತಿದ್ದ ಶಾಸಕ ಸುಕುಮಾರ್ ಸುಕುಮಾರ್ ಶೆಟ್ಟಿ ಆಪ್ತ ತಲ್ಲೂರು ರಘುರಾಮ್ ಶೆಟ್ಟಿ ಹೆಸರು ಹೇಳಿ ಬರುತ್ತಿದೆ.
ತಲ್ಲೂರು ರಘುರಾಮ್ ಶೆಟ್ಟಿ ಅವರ ಹಿಂಬಾಲಕರಿಂದಲೇ ಬಿಜೆಪಿ ಬೈಂದೂರು ಅಭ್ಯರ್ಥಿಯಾಗಿ ಘೋಷಣೆ ಮಾಡುವಂತೆ ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳ ಒತ್ತಾಯ ಹೆಚ್ಚಾಗುತ್ತಿದ್ದಂತೆ ಶಾಸಕ ಸುಕುಮಾರ್ ಶೆಟ್ಟಿಗೆ ನುಂಗಲಾರದ ತುತ್ತಾಗಿದೆ.
ರಾಘುರಾಮ್ ಶೆಟ್ಟಿಗೆ ಕ್ಷೇತ್ರದಾದ್ಯಂತ ತನ್ನದೇ ಆದ ಅಭಿಮಾನಿಗಳ ವರ್ಗ ಇದೆ. ಸುಕುಮಾರ್ ಶೆಟ್ಟಿ ಕಳೆದ ಬಾರಿ ಗೆಲ್ಲಲು ತೊಡೆ ತಟ್ಟಿ ನಿಂತಿದ್ದೆ ಇದೇ ತಲ್ಲೂರು ರಘುರಾಮ್ ಶೆಟ್ಟಿ ಅನ್ನುವುದು ಅಷ್ಟೇ ಸತ್ಯ. ತಲ್ಲೂರು ರಘುರಾಮ್ ಶೆಟ್ಟಿ ಬಗ್ಗೆ ಎಲ್ಲೋ ಹೆಸರು ಕೇಳದೆ ಇದೀಗ ಏಕಾಏಕಿ ಹೆಸರು ಕೇಳಿ ಬರಲು ಕಾರಣ ಬಿಜೆಪಿ ಬೈಂದೂರು ವಲಯದಲ್ಲಿ ಮನೆಯೊಂದು ಮೂರು ಬಾಗಿಲು ಆಗಿದ್ದೆ ದೊಡ್ಡ ಕಾರಣ.
ಕಾರ್ಯಕರ್ತರೇ ಬೇಸತ್ತು ಬಿಜೆಪಿಯನ್ನು ಕಟ್ಟಲು ನಾವು ವಹಿಸಿದ ಶ್ರಮ ವ್ಯರ್ಥವಾಗುತ್ತಿದೆ. ಇದರಿಂದ ಕಾಂಗ್ರೆಸ್ ಗೆ ಲಾಭವಾಗಲಿದೆ ಎಂದು ತಲ್ಲೂರು ರಘುರಾಮ ಶೆಟ್ಟಿ ಅವರ ಮೊರೆ ಹೋಗಿದ್ದಾರೆ. ಬಿಜೆಪಿಯ ಬೈಂದೂರು ಕ್ಷೇತ್ರದ ಕೆಲವು ವ್ಯವಸ್ಥೆಗಳನ್ನ ಇದುವರೆಗೂ ಸರಿಪಡಿಸಿಕೊಂಡು ಬಂದಿದ್ದು ಇದೇ ರಾಘುರಾಮ್ ಶೆಟ್ಟಿ ಎನ್ನುವುದು ಕಾರ್ಯಕರ್ತರ ಅಭಿಪ್ರಾಯ.
ತನ್ನ ಶಿಷ್ಯನೇ ನನಗೆ ರಾಜಕೀಯವಾಗಿ ಮುಳುವಾಗುತ್ತಾನೆ ಎಂದು ಸುಕುಮಾರ್ ಶೆಟ್ಟಿಯವರಿಗೆ ತಿಳಿದಿರಲಿಲ್ಲ. ಬೈಂದೂರು ಕ್ಷೇತ್ರದ ರಾಜಕೀಯ ಗುದ್ದಾಟ ಕಾಂಗ್ರೆಸ್ ಬಿಜೆಪಿಗೆ ಅನ್ನೋದಕ್ಕಿಂತ ಮುಖ್ಯವಾಗಿ ಸ್ವಪಕ್ಷದಲ್ಲೆ ಗೊಂದಲ ಸೃಷ್ಟಿಯಾಗಿದೆ. ಇದರಿಂದ ಕಾಂಗ್ರೆಸ್ ಸಂಪೂರ್ಣವಾಗಿ ಲಾಭ ಪಡೆದುಕೊಳ್ತಾ ಇದೆ. ಗೋಪಾಲ್ ಪೂಜಾರಿ ಈ ಬಾರಿ ಜಯಭೇರಿ ಬಾರಿಸುತ್ತಾರೆ ಎನ್ನುವುದು ಕಾಂಗ್ರೆಸ್ ವಲಯದ ಅಭಿಪ್ರಾಯವಾದರೆ, ಆದಷ್ಟು ಬೇಗ ಬಿಜೆಪಿಯ ಒಳ ಜಗಳವನ್ನ ಸರಿ ಮಾಡಿಕೊಂಡು ಸಮರ್ಥ ಅಭ್ಯರ್ಥಿ ಆಯ್ಕೆ ಆಗಬೇಕು ಎನ್ನುವುದು ಬಿಜೆಪಿ ಕಾರ್ಯಕರ್ತರ ಒತ್ತಾಯವಾಗಿದೆ.




