ಸಕ್ಕರೆ ಉಪ ಉತ್ಪನ್ನಗಳ ಉತ್ಪಾದನೆ ಸಂದರ್ಭದಲ್ಲಿ ರೈತರಿಗೂ ಲಾಭಾಂಶದಲ್ಲಿ ಪಾಲು

1 year ago

ಬೆಂಗಳೂರು: ಸಕ್ಕರೆ ಕಾರ್ಖಾನೆಗಳು ಉಪ ಉತ್ಪನ್ನಗಳ ಉತ್ಪಾದನೆ ಸಂದರ್ಭದಲ್ಲಿ ರೈತರಿಗೂ ಲಾಭಾಂಶದಲ್ಲಿ ಪಾಲು ನೀಡುವ ಕುರಿತು ನಿಯಮ ರೂಪಿಸಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ.

ಸದ್ಯ ಮಹಾರಾಷ್ಟ್ರ ಮತ್ತು ತಮಿಳುನಾಡಿನಲ್ಲಿ ಈ ರೀತಿಯ ನಿಯಮ ಇದೆ. ಅದಕ್ಕಾಗಿ ಅವರು ಅನುಸರಿಸುತ್ತಿರುವ ನಿಯಮಗಳನ್ನು ಪರಿಶೀಲಿಸುವಂತೆ ಅಧಿಕಾರಿಗಳಿಗೆ ಸಿಎಂ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ.

ರಾಜ್ಯದ ವಿವಿಧ ಕೈಗಾರಿಕೆ ಪ್ರದೇಶಗಳಲ್ಲಿ ಬಂಡವಾಳ ಹೂಡಲು ಸಲ್ಲಿಕೆಯಾಗಿರುವ ಪ್ರಸ್ತಾವನೆಗಳ ಬಗ್ಗೆ ಪರಿಶೀಲನೆ ನಡೆಸಲು ನಡೆದ ಉನ್ನತ ಮಟ್ಟದ ಪ್ರಾಧಿಕಾರ ಸಭೆಯಲ್ಲಿ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಅಧಿಕಾರಿಗಳಿಗೆ ಈ ಸೂಚನೆ ನೀಡಿದರು.

ಇದೇ ವೇಳೆ 5,605 ಉದ್ಯೋಗ ಸೃಷ್ಟಿಯ 9,823 ಕೋಟಿ ಹೂಡಿಕೆ ಯೋಜನೆಗಳಿಗೆ ಸಮಿತಿ ಒಪ್ಪಿಗೆ ನೀಡಿತು. ಅನುಮೋದನೆ ಪಡೆದವುಗಳಲ್ಲಿ ಡಿ.ಎನ್.ಸೊಲ್ಯೂಷನ್ಸ್ ನ 998 ಕೋಟಿ (ಐಟಿಐಆರ್ , ದೇವನಹಳ್ಳಿ), ಸೈಲೆಕ್ಟ್ರಿಕ್ ಸೆಮಿಕಂಡಕ್ಟರ್ಸ್ ಮ್ಯಾನುಫ್ಯಾಕ್ಚರಿಂಗ್ ನ 3,425. 60 ಕೋಟಿ (ಕೋಚನಹಳ್ಳಿ ಕೈಗಾರಿಕಾ ಪ್ರದೇಶ, ಮೈಸೂರು) ಮತ್ತು ಸನ್ಸೆರಾ ಇಂಜಿನಿಯರಿಂಗ್ ಸಂಸ್ಥೆಯ 2150 ಕೋಟಿ (ಹಾರೋಹಳ್ಳಿ) ಹೂಡಿಕೆ ಯೋಜನೆಗಳು ಹೊಸದಾಗಿವೆ. ಇವುಗಳಿಂದ ಕ್ರಮವಾಗಿ 467, 460 ಮತ್ತು 3,500 ಉದ್ಯೋಗಗಳು ಸೃಷ್ಟಿಯಾಗಲಿವೆ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.

ಮಿಕ್ಕಂತೆ, 6 ಯೋಜನೆಗಳು ಹೆಚ್ಚುವರಿ ಬಂಡವಾಳ ಹೂಡಿಕೆಯ ಪ್ರಸ್ತಾವನೆಗಳಾಗಿವೆ. ಇವುಗಳಲ್ಲಿ ಮುಸಾಶಿ ಆಟೋ ಪಾರ್ಟ್ಸ್ (ದೊಡ್ಡಬಳ್ಳಾಪುರ) 122.66 ಕೋಟಿ, ಜೆಎಸ್ ಡಬ್ಲ್ಯು ಸಿಮೆಂಟ್ (ತೋರಣಗಲ್, ಬಳ್ಳಾರಿ) 486.82 ಕೋಟಿ, ನೈಡೆಕ್ ಇಂಡಸ್ಟ್ರಿಯಲ್ ಆಟೋಮೇಷನ್ (ಬೇಲೂರು, ಧಾರವಾಡ) 200 ಕೋಟಿ, ಎಪ್ಸಿಲಾನ್ ಕಾರ್ಬನ್ (ಸಂಡೂರು) 740 ಕೋಟಿ, ಕೆ.ಬಿ.ಸ್ಟೀಲ್ಸ್ (ಹೊಸಪೇಟೆ, ವಿಜಯನಗರ) 852.49 ಕೋಟಿ ಮತ್ತು ಸಿಫಿ ಡೇಟಾ ಮ್ಯಾನೇಜ್ಡ್ ಸರ್ವೀಸಸ್ (ಹೈಟೆಕ್ ಡಿಫೆನ್ಸ್ ಮತ್ತು ಏರೋಸ್ಪೇಸ್ ಪಾರ್ಕ್) 847.74 ಕೋಟಿಗಳನ್ನು ರಾಜ್ಯದಲ್ಲಿ ಹೆಚ್ಚುವರಿಯಾಗಿ ಹೂಡಿಕೆ ಮಾಡಲಿವೆ. ಇವುಗಳಿಂದ ಕ್ರಮವಾಗಿ ಮೊದಲ ನಾಲ್ಕು ಕಂಪನಿಗಳಲ್ಲಿ ಮಾತ್ರ 478, 225, 150 ಮತ್ತು 325 ಉದ್ಯೋಗಗಳು ಸೃಷ್ಟಿಯಾಗಲಿವೆ ಎಂದು ವಿವರಿಸಿದ್ದಾರೆ.

ಸಭೆಯಲ್ಲಿ ಮಾತನಾಡಿದ ಸಿದ್ದರಾಮಯ್ಯ, ಸೆಮಿಕಂಡಕ್ಟರ್ ವಲಯದ ಪ್ರಥಮ ಯೋಜನೆಯು ಮೈಸೂರಿನ ಬಳಿಕ ಕೋಚನಹಳ್ಳಿಯ ಎಲೆಕ್ಟ್ರಾನಿಕ್ಸ್ ಮ್ಯಾನುಫ್ಯಾಕ್ಚರಿಂಗ್ ಕ್ಲಸ್ಟರ್ ನಲ್ಲಿ ಅಸ್ತಿತ್ವಕ್ಕೆ ಬರಲಿದೆ. ಕೆಐಎಡಿಬಿಯಿಂದ ಜಮೀನು ಪಡೆದುಕೊಳ್ಳುವ ಉದ್ಯಮಿಗಳು/ಕಂಪನಿಗಳು ನಿಗದಿತ ಸಮಯದಲ್ಲಿ ಕೈಗಾರಿಕೆಯನ್ನು ಆರಂಭಿಸಬೇಕು. ಇಲ್ಲದಿದ್ದರೆ ದಂಡ ವಿಧಿಸುವುದು ಸೇರಿದಂತೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.

Leave a Reply