ಬೆಂಗಳೂರು: ಆನೇಕಲ್ ತಾಲ್ಲೂಕಿನ ಅತ್ತಿಬೆಲೆಯ ಆಕ್ಸ್ಫರ್ಡ್ ಆಸ್ಪತ್ರೆಯಲ್ಲಿ ಹೃದಯಬೇನೆಯಿಂದ ನರಳುತ್ತಿದ್ದು 26.11.2021 ರಂದು ತಡರಾತ್ರಿ ಮೃತರಾದ ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲ್ಲೂಕು ಬುದರಕುಂಟೆ ಗ್ರಾಮವಾಸಿ ರೇಣುಕಮ್ಮ (45) ಅವರ ಕಣ್ಣುಗಳನ್ನು ನಾರಾಯಣ ನೇತ್ರಾಲಯ(ಬೊಮ್ಮಸಂದ್ರ)ಕ್ಕೆ ದಾನ ಮಾಡಲಾಗಿದೆ.
ಮೃತರ ಕಣ್ಣುಗಳನ್ನು ಹೊಸಬೆಳಕು ಟ್ರಸ್ಟ್‍ನ ಮುಖಾಂತರ ನಾರಾಯಣ ನೇತ್ರಾಲಯ ಕಣ್ಣಿನ ಆಸ್ಪತ್ರೆಗೆ ದಾನ ಮಾಡಿಸಿ ಕಡುಬಡತನದ ಕುಟುಂಬದ ಸಾವಿನಲ್ಲೂ ಮಾನವೀಯತೆ ಮೆರೆದು ಜಗಕೆ ಮಾದರಿಯಾಗಿದ್ದಾರೆ ಮಗ ತಿಮ್ಮೇಶ್ ಮತ್ತು ಗಂಡ ಕಲ್ಲೇಶಪ್ಪ.
ನೇತ್ರದಾನ ಕುರಿತು ಮಾತಾಡಿದ ತಿಮ್ಮೇಶ್, ಸಂವಿಧಾನ ಸಮರ್ಪಣಾ ದಿನದಂದು ನನ್ನ ಅಮ್ಮನ ನೇತ್ರದಾನ ಮಾಡುತ್ತಿರುವುದು ನಮಗೆ ಹೆಮ್ಮೆ ಮತ್ತು ಗೌರವತಂದಿದೆ ಎಂದರು.
ರೇಣುಕಮ್ಮನ ಕುಟುಂಬದವರು ಕಡುಬಡವರಾಗಿದ್ದು, ಮೃತದೇಹವನ್ನು ಬೆಂಗಳೂರಿನಿಂದ ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲ್ಲೂಕು ಬುದರಕುಂಟೆ ಗ್ರಾಮಕ್ಕೆ ಆಂಬುಲೆನ್ಸ್ ನಲ್ಲಿ ತೆಗೆದುಕೊಂಡುಹೋಗಲು ಹಣವಿಲ್ಲದೆ ಅಳುತ್ತಿದ್ದಾಗ ಹೊಸಬೆಳಕು ಟ್ರಸ್ಟ್ ಪ್ರಯತ್ನದಿಂದ ಡಾ.ಭುವನ, ಡಾ.ಅನ್ಸು, ಶ್ರೀ ಸಾಯಿ ವಿನೋದ್ ಚಾರಿಟಬಲ್ ಟ್ರಸ್ಟ್ ನ ಜಿಗಣಿ ವಿನೋದ್, ಮಧುಸೂಧನ್, ಕಿಕ್ ಡ್ರಾಪ್ಸ್‍ನ ರಾಘವೇಂದ್ರ, ಶಿರಡಿಸಾಯಿ ಬಾಬ ಚಾರಿಟಬಲ್ ಟ್ರಸ್ಟ್ ನ ಮಧು, ಅಶೋಕ್, ಆಕ್ಸ್ಫರ್ಡ್ ಆಸ್ಪತ್ರೆಯ ರಘು, ಮಂಜುಳಾ ಜಿಗಣಿ ರಾಮಕೃಷ್ಣ ಅವರ ಸಹಾಯ ಹಸ್ತದಿಂದ ಆಂಬುಲೆನ್ಸ್‍ಗೆ ಆಗುವಷ್ಟು ಹಣದ ವ್ಯವಸ್ಥೆ ಮಾಡಿ ಮೃತದೇಹ ಕಳುಹಿಸಿಕೊಡಲಾಯಿತು.
ಮೃತರ ರಕ್ತ ಮತ್ತು ಸ್ವಾಬ್ ಮಾದರಿ ತೆಗೆದು ಕೊಂಡಿದ್ದು ರಿಫೋರ್ಟ್ ಬಂದನಂತರವೆ ಕಾರ್ನಿಯಗಳನ್ನು ಇತರರಿಗೆ ಅಳವಡಿಸಲಾಗುವುದು ಎಂದು ವೈದ್ಯರು ಹೇಳಿದ್ದಾರೆ.
ಇಡೀ ದೇಶವೇ ಕರೋನಾದಿಂದ ಚೇತರಿಸ್ಕೊಳ್ಳುತ್ತಿದ್ದು ಸಾವಿರಾರು ಕಾರ್ನಿಯಾಗಳು ಅಗತ್ಯವಿದ್ದು, ಸಾವಿನ ನಂತರ ಕಣ್ಣುಗಳನ್ನು ಮಣ್ಣಲ್ಲಿ ಮಣ್ಣಾಗಿಸದೆ, ಬೆಂಕಿಯಲ್ಲಿ ಸುಡದೆ ದಾನ ಮಾಡಿ ಕಣ್ಣು ಕಾಣದ ಇಬ್ಬರು ಅಂಧಮಕ್ಕಳಿಗೆ ಹೊಸಬೆಳಕು ನೀಡಬೇಕೆಂದು ಜಿಗಣಿ ರಾಮಕೃಷ್ಣ ಜನರಲ್ಲಿ ಪ್ರಾರ್ಥಿಸಿದ್ದಾರೆ.
ನೇತ್ರದಾನದ ಸಮಯ ಬಂದಾಗ ಹತ್ತಿರದ ನೇತ್ರ ನಿಧಿ ಅಥವಾ ಹೊಸಬೆಳಕು ಟ್ರಸ್ಟ್(ರಿ) ಅಥವಾ ಶ್ರೀ ಸಾಯಿ ವಿನೋದ್ ಚಾರಿಟಬಲ್ ಟ್ರಸ್ಟ್ 9945028899 ಸಂಪರ್ಕಿಸಬಹುದಾಗಿದೆ.




