ಸಿ.ವಿ.ಶಿವಶಂಕರ್ ‌ಅವರನ್ನು ದೃಶ್ಯಮಾದ್ಯಮದವರು ಇಷ್ಟೊಂದು ಕಡೆಗಣಿಸಬಾರದಿತ್ತು

3 years ago

#CVSivashankar #ignored #visual #media #ksnagaraj #music #cinema #sandalwood

ಸಿರಿವಂತನಾದರು ಕನ್ನಡ ನಾಡಲ್ಲಿ ಮೆರೆವೆ ಭಿಕ್ಷುಕನಾದರು ಕನ್ನಡ ನಾಡಲ್ಲೇ ಮಡಿವೆ ಎಂಬ ಅತ್ಯಂತ ಜನಪ್ರಿಯವಾದಂತಹ ಚಲನಚಿತ್ರ ಗೀತೆಯನ್ನು ನೀಡಿದಂತಹ 300ಕ್ಕೂ ಹೆಚ್ಚು ಚಲನಚಿತ್ರ ಗೀತೆಗಳನ್ನು ಬರೆದಂತಹ ಹತ್ತಾರು ಚಿತ್ರಗಳಿಗೆ ಸಂಭಾಷಣೆಗಳನ್ನು ಬರೆದವರು ನಿರ್ದೇಶಕರಾಗಿದ್ದವರು, ಕನ್ನಡ ನಾಡು ನುಡಿಯ ವಿಚಾರದಲ್ಲಿ ಅತ್ಯಂತ ಬದ್ಧತೆಯಿಂದ ತಮ್ಮ ಕೊನೆಯ ದಿನದತನಕ ಕ್ರಿಯಾಶೀಲವಾಗಿ ದುಡಿದಂತಹ ಕನ್ನಡ ಚಲನಚಿತ್ರ ರಂಗಕ್ಕೆ 7 ದಶಕಗಳಿಗೂ ಹೆಚ್ಚುಕಾಲ ಸೇವೆ ಮಾಡಿರುವ ಚಲನಚಿತ್ರ ರಂಗದ ಜ್ಞಾನಭಂಡಾರವೇ ಆಗಿದ್ದ ಚಿತ್ರ ಸಾಹಿತಿ, ರಂಗಭೂಮಿ ಕಲಾವಿದ, ನಿರ್ದೇಶಕ ಸಿ.ವಿ.ಶಿವಶಂಕರ್‌ರವರು ದಿನಾಂಕ: 27/06/2023 ರಂದು ನಿಧನರಾಗಿರುತ್ತಾರೆ. ನಂತರದ ದಿನ ದಿನಾಂಕ: 28/06/2023 ರಂದು ಟಿ.ಆರ್.ಮಿಲ್‌ನ ರುದ್ರಭೂಮಿ ಅವರ ಅಂತ್ಯಸಂಸ್ಕಾರವಾಗುತ್ತದೆ. ಇವರ ಹಾಡನ್ನು ಹಲವಾರು ದಶಕಗಳಿಂದ ಕೇಳಿದಂತಹ ಲಕ್ಷಾಂತರ ಕನ್ನಡಿಗರು ಇದ್ದರೂ ಸಹ ಇವರ ಅಂತಿಮದರ್ಶನಕ್ಕೆ ಮತ್ತು ಅಂತ್ಯಸಂಸ್ಕಾರದ ಸಮಯದಲ್ಲಿ ಬೆರಳೆಣಿಕೆಯ ಜನರು ಸಹ ತಿರುಗಿ ನೋಡದೇ ಇರುವುದು ಅತ್ಯಂತ ನೋವಿನ ಸಂಗತಿ.

ಭಾಷೆಗಾಗಿ ತಮ್ಮ ಬದುಕನ್ನು ಮಿಸಲಿಟ್ಟಂತಹ ಹಿರಿಯ ಜೀವಕ್ಕೆ ಕನಿಷ್ಠ ಗೌರವವೂ ದೊರೆಯಲಿಲ್ಲ. ರಾಜ್ಯೋತ್ಸವ ಪ್ರಶಸ್ತಿ ಪಡೆದಿದ್ದ ಇವರ ಮನೆಯ ಕಡೆ ಕನ್ನಡ ಸಂಸ್ಕೃತಿ ಇಲಾಖೆಯ ಜವಾನರು ತಿರುಗಿ ನೋಡಲಿಲ್ಲ.

ಇನ್ನು ಸಣ್ಣಪುಟ್ಟ ನಟ, ನಟಿಯರು ನಿಶ್ಚಿತಾರ್ಥವಾದರೆ ಅಥವಾ ಮದುವೆಯಾದರೆ ಅಥವಾ ಅವರ ಮನೆಯಲ್ಲಿ ಸೀಮಂತವಾದರೆ ಬೆಳಿಗ್ಗೆಯಿಂದ ರಾತ್ರಿಯವರೆಗೆ ಅದೇ ಸುದ್ದಿಯನ್ನು ಬಿತ್ತರಿಸುವ ದೃಶ್ಯ ಮಾಧ್ಯಮದವರು ಬಹುತೇಕ ಇವರನ್ನು ನಿರ್ಲಕ್ಷಿಸಿಬಿಟ್ಟರು. ಒಂದೆರಡು ಮಾಧ್ಯಮಗಳಲ್ಲಿ ಸಣ್ಣದಾಗಿ ಸುದ್ದಿಯನ್ನು ಪ್ರಕಟಿಸಿದ್ದು ಬಿಟ್ಟರೆ ಬೇರೆ ಏನೂ ಆಗಲಿಲ್ಲ.

ಪ್ರಚಾರದಲ್ಲಿರುವ ಜನರಿಗೆ ಪ್ರಚಾರ ಮಾಧ್ಯಮದವರು ಸಾಧಕರನ್ನು ಸತ್ತಾಗಲೂ ಸ್ಮರಿಸದೇ ಇರುವುದು ಅತ್ಯಂತ ಬೇಸರದ ಸಂಗತಿಯಾಗಿರುತ್ತದೆ. ಶಿವಶಂಕರ್‌ ರವರ ಅಂತಿಮಸಂಸ್ಕಾರದ ಸಮಯದಲ್ಲಿ ದೃಶ್ಯ ಮಾಧ್ಯಮಗಳು ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಡೆದುಕೊಂಡ ರೀತಿಯನ್ನು ಗಮನಿಸಿದಾಗ ಯಾವ ಪುರುಷಾರ್ಥಕ್ಕಾಗಿ ಇಂತಹ ಪುಣ್ಯಾತ್ಮರು ತಮ್ಮ ಬದುಕಿನ ಉದ್ದಕ್ಕೂ ಹೋರಾಟ ನಡೆಸಬೇಕಾಗಿತ್ತು ಎಂಬ ಪ್ರಶ್ನೆ ಕಾಡುತ್ತದೆ.

ಇದರ ನಡುವೆಯೂ ಸಹ ಮುದ್ರಣ ಮಾದ್ಯಮದವರು ಸಿ.ವಿ.ಶಿವಶಂಕರ್‌ರವರಿಗೆ ಅಚ್ಚುಕಟ್ಟಾದ ಲೇಖನಗಳ ಮೂಲಕ ತಮ್ಮ ಘನತೆಯನ್ನು ಎತ್ತಿ ಹಿಡಿದಿದ್ದಾರೆ. ಮುದ್ರಣ ಮಾಧ್ಯಮಗಳು ಇರುವುದರಿಂದ ಕಡೆಯಪಕ್ಷ ಇಂತಹ ಸಾಧಕರ ಸತ್ತ ಸುದ್ದಿಯನ್ನು ಕಾಣಬಹುದಾಗಿದೆ.

ಕೆ.ಎಸ್.ನಾಗರಾಜ್, ಬೆಂಗಳೂರು

One Response

  1. ಕನ್ನಡ ರಂಗಭೂಮಿ ಮತ್ತು ಚಲನಚಿತ್ರ ಕಲಾವಿದರೂ ನಿರ್ದೇಶಕರೂ ನಟರೂ ಗೀತರಚನಕಾರರೂ ಆಗಿದ್ದ ಸಿ.ವಿ‌ಶಿವಶಂಕರ್ ಅವರ ಬಗ್ಗೆ ನಿಮ್ಮ ಅಭಿಪ್ರಾಯ ಸರಿಯಾಗಿದೆ. ಸರ್ಕಾರ ಮತ್ತು ದೃಶ್ಯ ಮಾಧ್ಯಮದವರು ನಿರ್ಲಕ್ಷಿಸಿರುವುದು ಅತ್ಯಂತ ವಿಷಾದನೀಯ. ಹಿಂದೆ ರಂಗಭೂಮಿಯ ಹಿರಿಯ ಚೇತನ ಮಾಸ್ಟರ್ ಹಿರಣ್ಣಯ್ಯನವರು ನಿಧನರಾದಾಗಲೂ ಸರ್ಕಾರಿ ಗೌರವ ನೀಡಲಿಲ್ಲ. ಹೀಗೇ ನಿರ್ಲಕ್ಷಿಸಲಾಗಿತ್ತು. ಸರ್ಕಾರದ ಮತ್ತು ಮಾಧ್ಯಮಗಳ ಈ ಧೋರಣೆ ಅತ್ಯಂತ ಖಂಡನೀಯ.

Leave a Reply