ಬೆಂಗಳೂರು: ನೀರಾವರಿ ಇಲಾಖೆಯ ₹20,000 ಕೋಟಿ ಯೋಜನೆಯಲ್ಲಿ 10% ಕಿಕ್ ಬ್ಯಾಕ್ ಪಡೆಯಲಾಗಿದೆ ಎಂಬ ಆರೋಪ ಜೀವಂತವಾಗಿರುವಾಗಲೇ ಅಬಕಾರಿ ಇಲಾಖೆಯ ಅಕ್ರಮ ಬಯಲಾಗಿದೆ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ಅಬಕಾರಿ ಸಚಿವರಿಗೆ ಪ್ರತಿ ಜಿಲ್ಲೆಯಿಂದ ₹5 ಲಕ್ಷ ಹೋಗಬೇಕು ಎಂಬ ಅಧಿಕಾರಿಗಳ ಸಂಭಾಷಣೆ ಬಹಿರಂಗವಾಗಿದೆ. ಹಣ ಖರ್ಚು ಮಾಡಿ ಅಧಿಕಾರಕ್ಕೆ ಬಂದ ಬಿಜೆಪಿ ಹಣ ಲೂಟಿ ಮಾಡುವಲ್ಲಿ ನಿರತವಾಗಿದೆ ಎಂದು ಅವರು ಹೇಳಿದ್ದಾರೆ.
ಆಡಿಯೊ ಬಹಿರಂಗವಾಗುತ್ತಲೇ ಅಬಕಾರಿ ಇಲಾಖೆಯ ಮೂವರು ಇನ್ಸ್‌ಪೆಕ್ಟರ್‌ಗಳನ್ನು ಅಮಾನತು ಮಾಡಲಾಗಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಕೊಟ್ಟಿರಬಹುದಾದವರಿಗೆ ಶಿಕ್ಷೆ ಕೊಟ್ಟ ಮೇಲೆ ಈಸ್ಕೋಂಡಿರಬಹುದಾದವರಿಗೆ ಶಿಕ್ಷೆ ಇಲ್ಲ ಏಕೆ? ಅಧಿಕಾರಿಗಳ ಮೇಲಿನ ಕ್ರಮ ಭ್ರಷ್ಟಾಚಾರಕ್ಕಾಗಿಯೋ ಅಥವಾ ಸರ್ಕಾರದ ಬಂಡವಾಳ ಬಯಲು ಮಾಡಿದರು ಎಂಬ ಕಾರಣಕ್ಕೋ? ಎಂದು ಪ್ರಶ್ನಿಸಿದ್ದಾರೆ.
₹2 ಸಾವಿರ ಕೋಟಿ ಕಿಕ್ ಬ್ಯಾಕ್ ಪ್ರಕರಣವನ್ನು ತನಿಖೆಗೆ ಒಳಪಡಿಸುವಂತೆ ಈಗಾಗಲೇ ನಾನು ಆಗ್ರಹಿಸಿದ್ದೇನೆ. ಅದರಲ್ಲಿನ @BSYBJP ಕುಟುಂಬದ ಪಾತ್ರದ ಬಗ್ಗೆ ತನಿಖೆಯಾಗಲಿ ಎಂದು ಹೇಳಿದ್ದೇನೆ. ಅದರ ಜೊತೆಗೆ ಅಬಕಾರಿ ಇಲಾಖೆಯಲ್ಲಿನ ಈ ಪ್ರಕರಣದ ಬಗ್ಗೆಯೂ ತನಿಖೆಯಾಗಬೇಕು. ಸರ್ಕಾರ ಈ ಪ್ರಕರಣವನ್ನು ಕೂಡಲೇ ಸೂಕ್ತ ತನಿಖಾ ಸಂಸ್ಥೆಗೆ ವಹಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಜೊತೆಗೆ, ಕೋವಿಡ್ ಮತ್ತು ಬ್ಲಾಕ್ ಫಂಗಸ್ ಸ್ಥಿತಿಗತಿಗಳು, ಕೈಗೊಂಡ ಕ್ರಮಗಳು, ಕೊಟ್ಟ ಪರಿಹಾರ, ಅಕ್ರಮ ಆರೋಪಗಳ ಕುರಿತು ಚರ್ಚಿಸಲು ಅಧಿವೇಶನ ಕರೆಯಬೇಕೆಂದು ನಾನು ಆಗ್ರಹಿಸಿದ್ದೇನೆ. ಅದರ ಬಗ್ಗೆ ಸಿಎಂ ಈ ವರೆಗೆ ಮಾತನಾಡಿಲ್ಲ. ಪ್ರತಿಪಕ್ಷಗಳ ಮುಂದೆ ನಿಲ್ಲಲು ಅವರಿಗೆ ಭಯವಿದ್ದಂತೆ ಕಾಣುತ್ತಿದೆ. ಭಯವಿಲ್ಲದೇ ಹೋದರೆ ಅಧಿವೇಶನ ಕರೆಯಬೇಕು ಎಂದಿದ್ದಾರೆ.
