ವರಿಷ್ಠರು ಏನು ತೀರ್ಮಾನ ತೆಗೆದುಕೊಳ್ಳುತ್ತಾರೋ ಎಲ್ಲವೂ ಅದರ ಮೇಲೆ ನಿಂತಿದೆ: ಡಾ. ಜಿ. ಪರಮೇಶ್ವರ್

3 months ago

ಬೆಂಗಳೂರು: ಗಣರಾಜ್ಯೋತ್ಸವ ದಿನದಂದೇ (ಜನವರಿ-26) ರಾಜ್ಯ ರಾಜಕೀಯದಲ್ಲಿ ಬದಲಾವಣೆಯ ನಿರೀಕ್ಷೆ ಬಗ್ಗೆ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಸುಳಿವು ನೀಡಿದ್ದಾರೆ. ಯಾರಿಗೆ ಪದೋನ್ನತಿಯಾಗುತ್ತದೆಯೋ ತಿಳಿಯದು. ವರಿಷ್ಠರು ತೆಗೆದುಕೊಳ್ಳುವ ನಿರ್ಧಾರದ ಮೇಲೆ ಎಲ್ಲವೂ  ನಿಂತಿದೆ ಎಂದು ಹೇಳಿದ್ದಾರೆ.

ಹೊಸ ವರ್ಷ ಆರಂಭದ ದಿನ ಸರ್ಕಾರಿ ನಿವಾಸದಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳ ಜೊತೆ ಉಪಹಾರ ಕೂಟದಲ್ಲಿ ಭಾಗವಹಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಪರಮೇಶ್ವರ್ ಈ  ಬಾಂಬ್ ಸಿಡಿಸಿದ್ದಾರೆ.

ಅಧಿಕಾರ ಹಸ್ತಾಂತರ ಮತ್ತು ತಮಗೆ ಪದೋನ್ನತಿ ಇಲ್ಲವೆ ಎಂಬ ಪ್ರಶ್ನೆಗೆ ಗಣರಾಜ್ಯೋತ್ಸವ ದಿನಾಂಕವನ್ನು ಬಹಿರಂಗಪಡಿಸಿದ್ದಲ್ಲದೆ, ರಾಜಕಾರಣ ಎಂದ ಮೇಲೆ ಒಂದು ಹಂತದಿಂದ ಇನ್ನೊಂದು ಹಂತಕ್ಕೆ ತಲುಪುವ ಬಯಕೆ ಇದ್ದೇ ಇರುತ್ತದೆ ಎಂದರು.

ರಾಜಕೀಯಕ್ಕೆ ಬಂದ ನಂತರ ಶಾಸಕನಾಗಬೇಕೆಂದು, ಜನಪ್ರತಿನಿಧಿಯಾಗುತ್ತಿದ್ದಂತೆ, ಮಂತ್ರಿಯಾಗಬೇಕೆಂದು, ನಂತರ ಮುಖ್ಯಮಂತ್ರಿಯೂ ಆಗಬೇಕೆಂಬ ಹಂಬಲ ಎಲ್ಲರಿಗೂ ಇರುತ್ತದೆ. ಅದೇ ರೀತಿ ನನಗೂ ಇದೆ. ನೋಡೋಣ. ಜನವರಿ 26ಕ್ಕೆ ವರಿಷ್ಠರು ಏನು ತೀರ್ಮಾನ ತೆಗೆದುಕೊಳ್ಳುತ್ತಾರೋ ಎಲ್ಲವೂ ಅದರ ಮೇಲೆ ನಿಂತಿದೆ ಎಂದ ಅವರು, ಹೆಚ್ಚಿನ ಮಾಹಿತಿ ನೀಡಲು ನಿರಾಕರಿಸಿದರು.

ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾಕ್ಕೆ ಎರಡೂವರೆ ವರ್ಷ ಅವಧಿ ಪೂರ್ಣಗೊಂಡ ನವೆಂಬರ್ 20 ರಿಂದಲೇ ಅಧಿಕಾರ ಹಸ್ತಾಂತರ ವಿಷಯ ತಾರಕಕ್ಕೇರಿದೆ.
ಅಧಿಕಾರ ಹಸ್ತಾಂತರ ವಿಚಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬೆಂಬಲಿಗರು ಬಹಿರಂಗವಾಗಿಯೇ ತಮ್ಮ ತಮ್ಮ ನಾಯಕರನ್ನು ಬೆಂಬಲಿಸುವ ಕಾರ್ಯ ನಡೆದಿದೆ.
ಸಿದ್ದರಾಮಯ್ಯ ತಮ್ಮ ಅಧಿಕಾರ ಉಳಿಸಿಕೊಳ್ಳಲು, ಡಿ.ಕೆ. ಶಿವಕುಮಾರ್ ಪದೋನ್ನತಿ ಪಡೆಯಲು ತೆರೆಮರೆಯಲ್ಲೇ ಕಸರತ್ತು ನಡೆಸಿರುವ ಸಂದರ್ಭದಲ್ಲೇ ಗೃಹ ಸಚಿವರು ಬಾಂಬ್ ಸಿಡಿಸಿರುವುದು ರಾಜಕೀಯ ವಲಯದಲ್ಲಿ ತೀವ್ರ ಕುತೂಹಲಕ್ಕೆ ಎಡೆಮಾಡಿದೆ.

ರಾಜ್ಯಾದ್ಯಂತ ಹೊಸ ವರ್ಷಾಚರಣೆ ಸಂದರ್ಭದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಿದ್ದಕ್ಕೆ ಸಂತಸ ವ್ಯಕ್ತಪಡಿಸಿದ್ದಲ್ಲದೆ, ಸಾರ್ವಜನಿಕರು ಪೊಲೀಸರೊಂದಿಗೆ ಕೈಜೋಡಿಸಿದ್ದರಿಂದ ಸುಗಮವಾಗಿ ಸಂಭ್ರಮಾಚರಣೆ ನಡೆಯಿತು ಎಂದು ಪರಮೇಶ್ವರ್ ಇದೇ ಸಂದರ್ಭದಲ್ಲಿ ತಿಳಿಸಿದರು.

Leave a Reply