ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಸಂಭವಿಸಿದ ಕಾಲ್ತುಳಿತಕ್ಕೆ ರಾಜ್ಯ ಸರ್ಕಾರವೇ ನೇರ ಹೊಣೆ ಎಂದು ಆಪಾದಿಸಿರುವ ರಾಜ್ಯ ಎನ್ ಡಿ ಎ ನಾಯಕರು ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿ ರಾಜೀನಾಮೆಗೆ ಪಟ್ಟು ಹಿಡಿದಿದ್ದಾರೆ.
- ಕೇಂದ್ರ ಸಚಿವ ಸಂಪುಟ ಸಭೆ ಬೇರೆ ರಾಜ್ಯಗಳಲ್ಲಿ ನಡೆಯಲಿ
- ಪಿ.ಪಿ.ಪಿ ಮಾದರಿ ಕೈ ಬಿಡಲು ಒತ್ತಾಯಿಸಿ ಸಚಿವ ಸಂಪುಟ ಸಭೆಗೆ ಮೆರವಣಿಗೆ: ಸಿಪಿಐಎಂ
- ಜನಸಹಭಾಗಿತ್ವದೊಂದಿಗೆ ಸ್ವಚ್ಛತಾ ಅಭಿಯಾನಕ್ಕೆ ಸಜ್ಜು
- UPI ಡಿಜಿಟಲ್ ಮೇಲಿನ ಹೆಚ್ಚುವರಿ ಶುಲ್ಕ ಪ್ರಸ್ತಾವನೆ ಹಿಂಪಡೆಯಬೇಕು
- ಪ್ರಧಾನಿ ನರೇಂದ್ರ ಮೋದಿ ಹುಟ್ಟುಹಬ್ಬ: ಪೌರ ಕಾರ್ಮಿಕರಿಗೆ ಸನ್ಮಾನ
ವಿಧಾನಸಭೆಯ ವಿಪಕ್ಷ ನಾಯಕ ಆರ್. ಅಶೋಕ್, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರೊಂದಿಗೆ ಸುದ್ದಿಗೋಷ್ಠಿ ನಡೆಸಿದ ಕೇಂದ್ರ ಸಚಿವ ಕುಮಾರಸ್ವಾಮಿ, ಕಾಂಗ್ರೆಸ್ ಹೈಕಮಾಂಡ್ ಗೆ ಮಾನ ಮರ್ಯಾದೆ, ಕನ್ನಡಿಗರ ಮೇಲೆ ಕಿಂಚಿತ್ತಾದರೂ ಗೌರವ ಇದ್ದರೆ ತಕ್ಷಣವೇ ಈ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿಯನ್ನು ಕಿತ್ತೆಸೆಯಬೇಕು ಎಂದರು.
ಈ ದುರಂತಕ್ಕೆ ಮುಖ್ಯಮಂತ್ರಿ ಮತ್ತವರ ಕಚೇರಿ ನೇರ ಕಾರಣ. ಎರಡು ಮೂರು ಕಡೆ ವಿಜಯೋತ್ಸವ ಮಾಡಲು ಸಾಧ್ಯವಿಲ್ಲ. ಭದ್ರತೆ ಕೊಡುವುದು ಕಷ್ಟ ಆಗುತ್ತದೆ ಎಂದು ಪೊಲೀಸರು ಪರಿಪರಿಯಾಗಿ ಹೇಳಿದರೂ ಕೇಳದೇ ವಿಜಯೋತ್ಸವ ಆಗಲೇಬೇಕು ಎಂದು ಸಿಎಂ ಪಟ್ಟು ಹಿಡಿದರು. ಅಲ್ಲದೆ ಪೊಲೀಸರಿಗೆ ತಾಕೀತು ಮಾಡಿ ಧಮ್ಕಿಯನ್ನು ಹಾಕಿದ್ದರು ಎಂದರು.
ವಿಜಯೋತ್ಸವ ಆಚರಣೆಗೆ ಮೊದಲೇ ಆರ್ ಸಿಬಿ ಪೊಲೀಸರ ಅನುಮತಿ ಕೇಳಿತ್ತು. ಆ ಮನವಿಯನ್ನು ಪೊಲೀಸರು ತಿರಸ್ಕರಿಸಿದ್ದರು. ಹಾಗಿದ್ದರೂ ವಿಜಯೋತ್ಸವ ಆಗಲೇಬೇಕು ಎಂದು ಸಿಎಂ ತಾಕೀತು ಮಾಡಿದ್ದು ಯಾಕೆ ಎಂದು ಪ್ರಶ್ನಿಸಿದರು.
ಹನ್ನೊಂದು ಜನ ಅಮಾಯಕರ ಸಾವಿಗೆ ಸಿಎಂ, ಡಿಸಿಎಂ ಹಾಗೂ ಸಿಎಂ ಅವರ ರಾಜಕೀಯ ಕಾರ್ಯದರ್ಶಿ ಗೋವಿಂದ ರಾಜು ಅವರೇ ಕಾರಣ. ಮಾತೆತ್ತಿದರೆ ನಾವು ಜನರ ಪರ ಎಂದು ರಾಗ ತೆಗೆಯುವ ರಾಹುಲ್ ಗಾಂಧಿ ಹಾಗೂ ಮಲ್ಲಿಕಾರ್ಜುನ ಖರ್ಗೆ ಅವರು ಇವರಿಂದ ರಾಜಿನಾಮೆ ಪಡೆಯಬೇಕು. ಮಾತೆತ್ತಿದರೆ ಸಿಎಂ ಗೋವಿಂದ.. ಗೋವಿಂದ.. ಎನ್ನುತ್ತಾರಲ್ಲ.. ಈ ದುರಂತಕ್ಕೆ ಮೂಲ ಪುರುಷನೇ ಆತ ಎಂದು ಆರೋಪಿಸಿದರು.
ತಪ್ಪು ಮಾಡಿದ್ದು ಸರ್ಕಾರ, ಶಿಕ್ಷೆಗೆ ಗುರಿಯಾಗಿದ್ದು ಅಧಿಕಾರಿಗಳು. ದಕ್ಷ ಪೊಲೀಸ್ ಆಯುಕ್ತ ದಯಾನಂದ್ ಅವರೂ ಸೇರಿ ಐವರು ಪೊಲೀಸ್ ಅಧಿಕಾರಿಗಳನ್ನು ಅಮಾನತು ಮಾಡುವ ಮೂಲಕ ಜನತೆಗೆ ರಾಜ್ಯ ಕಾಂಗ್ರೆಸ್ ಸರ್ಕಾರ ಅತ್ಯಂತ ಕೆಟ್ಟ ಸಂದೇಶ ನೀಡಿದೆ ಎಂದರು.
ದಯಾನಂದ್ ಅವರು ದಕ್ಷ ಅಧಿಕಾರಿ. ಹೊಸ ವರ್ಷದ ಆಚರಣೆ, ಅನೇಕ ಕ್ರಿಕೆಟ್ ಪಂದ್ಯಗಳು ಸೇರಿದಂತೆ ಅನೇಕ ಸಂದರ್ಭಗಳಲ್ಲಿ ಅವರೇ ನಗರದ ಪೊಲೀಸ್ ಕಮೀಷನರ್ ಅಗಿದ್ದರು. ಹೊಸ ವರ್ಷದ ಹಿಂದಿನ ದಿನ ಮಹಾತ್ಮಾ ಗಾಂಧಿ ರಸ್ತೆ ಮತ್ತು ಬ್ರಿಗೇಡ್ ರಸ್ತೆಗಳಲ್ಲಿ ಲಕ್ಷಾಂತರ ಜನ ಸೇರಿ ಸಂಭ್ರಮಾಚರಣೆಯಲ್ಲಿ ತೊಡಗಿದ್ದರೂ ಯಾವುದೇ ಅಹಿತಕರ ಘಟನೆ ನಡೆಯದಂತೆ ಭದ್ರತಾ ವ್ಯವಸ್ಥೆ ಮಾಡಿದ್ದರು. ಅಂಥ ಅಧಿಕಾರಿಯನ್ನು ಸಸ್ಪೆಂಡ್ ಮಾಡಿ ಇವರು ಯಾವ ರೀತಿಯ ಸಂದೇಶ ನೀಡಿದ್ದಾರೆ ಎಂದರು.
ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಗೋವಿಂದ ರಾಜ್ ಎಂಬ ವ್ಯಕ್ತಿ ಇಷ್ಟೆಲ್ಲಾ ಸಾವು ನೋವುಗಳಿಗೆ ಕಾರಣ. ಅವರ ಬಗ್ಗೆ ಏನೇನೋ ಕಥೆಗಳನ್ನು ಹೇಳುತ್ತಾರೆ. ಸಿಎಂ ಅವರು ತಮ್ಮ ಸುತ್ತಲೂ ಎಂತಹ ವ್ಯಕ್ತಿಗಳನ್ನು ಇಟ್ಟುಕೊಂಡಿದ್ದಾರೆ ಎಂಬುದು ಪ್ರಶ್ನಾರ್ಹ. ಈ ಸರ್ಕಾರದ ಮಾನ ಮರ್ಯಾದೆ ಉಳಿಯಬೇಕು ಎನ್ನುವುದಾದರೆ ತಮ್ಮ ಸುತ್ತಮುತ್ತ ಇರುವ ಇಂತಹ ಕೆಟ್ಟ ಹುಳಗಳನ್ನು ಮೊದಲು ಕಿತ್ತು ಬಿಸಾಡಬೇಕು ಎಂದರು.
ಕಾಂಗ್ರೆಸ್ ಹೈಕಮಾಂಡ್ ಎನ್ನುವುದು ಇದ್ದರೆ, ಅದಕ್ಕೆ ಸಂಕೋಚ ನಾಚಿಕೆ ಎನ್ನುವುದು ಇದ್ದರೆ ಮೊದಲು ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಅವರನ್ನು ತೆಗೆದು ಅವರ ಜಾಗಕ್ಕೆ ಸಭ್ಯರನ್ನು ತರಬೇಕು ಎಂದರು.
ಕುಮಾರಸ್ವಾಮಿ ಅವರು ಮಾತಾಡಿದರೆ ಅಸೂಯೆ ಎಂದು ಟೀಕೆ ಮಾಡುತ್ತಾರೆ. ನಾನು ಕೇಂದ್ರ ಮಂತ್ರಿ ಆಗಿದ್ದೇನೆ. ಪ್ರಧಾನಿ ಮೋದಿ ಅವರು ಎರಡು ಖಾತೆಗಳನ್ನು ಕೊಟ್ಟಿದ್ದಾರೆ. ಅವರ ದೂರದೃಷ್ಟಿ ಅನುಸಾರ ಉತ್ತಮವಾಗಿ ಕೆಲಸ ಮಾಡಲು ಪ್ರಯತ್ನ ಮಾಡುತ್ತಿದ್ದೇನೆ. ನನಗೆ ಅಸೂಯೆ ಎನ್ನುವುದು ಯಾಕೆ ಬರುತ್ತದೆ ಎಂದರು.
ವಿಧಾನಸೌಧ ಮೆಟ್ಟಿಲು ಮೇಲಿನ ವೇದಿಕೆಯಲ್ಲಿ ನಡೆದ ವಿಜಯೋತ್ಸವ ಸರ್ಕಾರಿ ಕಾರ್ಯಕ್ರಮ ಆಗಿರಲಿಲ್ಲ. ಮಂತ್ರಿಗಳ ಮಕ್ಕಳು, ಮೊಮ್ಮಕ್ಕಳು ಸೇರಿ ಕುಟುಂಬದ ಕಾರ್ಯಕ್ರಮ ಆಗಿತ್ತು. ಸನ್ ಗ್ಲಾಸ್ ಹಾಕಿಕೊಂಡು ಎಲ್ಲಾರೂ ಪೋಸ್ ಕೊಟ್ಟಿದ್ದೇ ಕೊಟ್ಟಿದ್ದು. ವೇದಿಕೆಯ ಮೇಲೆಯೇ ಡಿಕೆಶಿ ಒಬ್ಬರ ಮೇಲೆ ಹಲ್ಲೆ ನಡೆಸಿ ಕುತ್ತಿಗೆ ಹಿಡಿದು ಆಚೆ ತಳ್ಳಿದರು. ಇದೆಲ್ಲಾ ಏನು? ಅಸಹ್ಯ ಅಲ್ಲವೇ? ಎಂದರು.




