ತರವಲ್ಲ ತಗೀ ನಿನ್ನ ತಂಬೂರಿ ಸ್ವರ
ಯಾವುದೇ ಒಂದು ಗ್ರಾಮೀಣ ಜನಪದ ಕ್ರೀಡೆಗೆ ನಮ್ಮ ಕರ್ನಾಟಕದಲ್ಲಿ ಮಾತ್ರವಲ್ಲ, ಬಹು ಸಂಸ್ಕೃತಿಯ ನೆಲವಾದ ಭಾರತದಲ್ಲಿ ಅದರದೇ ಆದ ಪ್ರಾದೇಶಿಕ ಸಂಸ್ಕೃತಿಯ ಚಹರೆಗಳಿರುತ್ತವೆ. ದಕ್ಷಿಣ ಜಿಲ್ಲೆಯ ಕೆಸರು ಗದ್ದೆಗಳಲ್ಲಿ ನಡೆಯುತ್ತಿದ್ದ ಕಂಬಳ ಹೆಸರಿನ ಕೋಣಗಳ ಓಟದ ಸ್ಪರ್ಧೆಯನ್ನು ಬೆಂಗಳೂರಿನ ಅರಮನೆಯ ಮೈದಾನದಲ್ಲಿ ನಡೆಸುತ್ತಿರುವುದು ಮೂರ್ಖತನದ ಪರಮಾವಧಿ. ಇದು ಪ್ರಾದೇಶಿಕ ಸಂಸ್ಕೃತಿಯ ಪ್ರದರ್ಶನವಾಗುವುದಿಕ್ಕಿಂತ ಹೆಚ್ಚಾಗಿ ಸಂಸ್ಕೃತಿ ಹೆಸರಿನಲ್ಲಿ ಹಣ ಮಾಡಲು ಹೊರಟ ದಂಧೆಕೋರರ ಲಕ್ಷಣವಾಗಿದೆ.
ಯಕ್ಷಗಾನದಂತಹ ಶ್ರೇಷ್ಠ ಕಲೆ ಇಂದು ರಾಜಕಾರಣಿಗಳ ಒಡ್ಡೋಲಗ ಮತ್ತು ಮೆರವಣಿಗೆಯ ಮುಂದೆ ಕುಣಿಯುವ ವಿದೂಷಕರ ನೃತ್ಯವಾದಂತೆ, ಈಗ ಕಂಬಳ ಕ್ರೀಡೆಯನ್ನು ಹಣ ಸೃಷ್ಟಿಸುವ ಕ್ರೀಡೆಯನ್ನಾಗಿ ಪರಿವರ್ತಿಸುವ ಸಂಚು ನಡೆದಿದೆ.
ಭಾರತದ ಮಹಿಳಾ ಕುಸ್ತಿಪಟುಗಳ ಮೇಲಿನ ಲೈಂಗಿಕ ಹಿಂಸೆಯ ಪ್ರಕರಣದಲ್ಲಿ ಆರೋಪಿಯಾಗಿರುವ ಹಾಗೂ ತನ್ನ ಹಣ ಬಲ ಮತ್ತು ತೋಳ್ಬಲದಿಂದ ಎಲ್ಲವನ್ನೂ ದಕ್ಕಿಸಿಕೊಳ್ಳುತ್ತಿರುವ ಸಂಸ್ಕೃತಿಹೀನ ಬಿ.ಜೆ.ಪಿ. ಸಂಸದನನ್ನು ಈ ಕಂಬಳ ಕ್ರೀಡೆಗೆ ಆಹ್ವಾನಿಸಿರುವುದು ನಾಚಿಕೆಗೇಡಿನ ಸಂಗತಿ.
ಈ ಕ್ರೀಡೆಗೆ ಕರ್ನಾಟಕ ಸರ್ಕಾರ ಒಂದು ಕೋಟಿ ಅನುದಾನ ನೀಡುವುದರ ಜೊತೆಗೆ ಅರಮನೆ ಮೈದಾನದ 72 ಎಕರೆ ಭೂಮಿಯನ್ನು ಕೆಸರು ಗದ್ದೆ ಮಾಡಲು ಅನುಮತಿ ನೀಡಿರುವುದು ಅವಿವೇಕದ ನಡೆಯಾಗಿದೆ. ಈ ಅಮಾನುಷ ಕ್ರಿಯೆಯ ಬಗ್ಗೆ ಈ ನಾಡಿನ ಪ್ರತಿಯೊಬ್ಬ ಪ್ರಜ್ಞಾವಂತನೂ ಕೂಡ ಗಟ್ಟಿ ಧ್ವನಿಯಲ್ಲಿ ಪ್ರತಿಭಟಿಸಬೇಕು.
- ಜಗದೀಶ್ ಕೊಪ್ಪ, ಹಿರಿಯ ಪತ್ರಕರ್ತರು



