ನಿನ್ನೆ ಭಾರತ- ಆಸ್ಟ್ರೇಲಿಯಾದ ನಡುವಿನ ಕ್ರಿಕೆಟ್ ಫೈನಲ್ ಪಂದ್ಯಕ್ಕೆ ಭಾರತ ಸಜ್ಜಾಗಿದ್ದ ಪರಿ ನೋಡಿ ಬೆರಗಾಗಿದ್ದೆ. ನಿನ್ನೆ ಮೈಸೂರಿನ ವಾತಾವರಣ ನೋಡಿ ಆಶ್ಚರ್ಯವಾಯಿತು. ಇಡೀ ದೇಶವೇ ಒಂದು ರೀತಿಯಲ್ಲಿ ಬಂದ್ ಆಗಿದೆ ಎನಿಸತೊಡಗಿತು. ಮಧ್ಯಾಹ್ನ ನಿದ್ದೆ ಮಾಡಿ ಎದ್ದು, ಸಂಜೆ ವಾಕ್ ಹೋದಾಗ ರಸ್ತೆಗಳು ಬಿಕೋ ಎನ್ನುತ್ತಿದ್ದವು. ಬಹುತೇಕ ಅಂಗಡಿಗಳು ಮುಚ್ಚಿಹೋಗಿದ್ದವು.
ಭಾರತದ ಇತರೆ ಕ್ರೀಡೆಗಳಂತೆ ಸಾಮಾನ್ಯ ಕ್ರೀಡೆಯಾಗಿದ್ದ ಕ್ರಿಕೆಟ್ ಇಂದು ಅತ್ಯಂತ ಜನಪ್ರಿಯ ಕ್ರೀಡೆ ಮಾತ್ರವಲ್ಲ ಹಣದ ಭರ್ಜರಿ ಫಸಲು ತೆಗೆಯುವ ಕ್ರೀಡೆಯಾಗಿದೆ. ಈ ಕಾರಣದಿಂದ ಇಂದು ರಾಜಕಾರಣಿಗಳು, ಶ್ರೀಮಂತ ಉದ್ಯಮಿಗಳು ಇದರ ಹಿಂದೆ ಬಿದ್ದಿದ್ದಾರೆ. ಇದರಿಂದಾಗಿ ಉಳಿದ ಕ್ರೀಡೆಗಳು ನಶಿಸಿ ಹೋಗುತ್ತಿವೆ.
ನಾನು 1970 ರ ದಶಕದಲ್ಲಿ ಚಾಮರಾಜಪೇಟೆಯ ಅಕ್ಕನ ಮನೆಗೆ ಬಂದು ಬೇಸಿಗೆ ದಿನಗಳನ್ನು ಕಳೆಯುತ್ತಿದ್ದೆ. ಕಂಠೀರವ ಕ್ರೀಡಾಂಗಣ, ಮಲ್ಲೇಶ್ವರಂ ಮೈದಾನ ಮತ್ತು ರಾಜಾಜಿನಗದ ರಾಮಮಂದಿರದ ಬಳಿಯ ಮೈದಾನದಲ್ಲಿ ಪ್ರತಿ ಭಾನುವಾರ ಪುಟ್ ಬಾಲ್ ಪಂದ್ಯಗಳು ನಡೆಯುತ್ತಿದ್ದವು. ನ್ಯಾಷನಲ್ ಕಾಲೇಜ್ ಮೈದಾನದಲ್ಲಿ ಬಾಲ್ ಬ್ಯಾಡ್ ಮಿಂಟನ್ ಮತ್ತು ಕೆಂಪೇಗೌಡ ರಸ್ತೆಯ ಕಾವೇರಿ ಭವನದ ಎದುರು ಬ್ಯಾಸ್ಕೆಟ್ ಬಾಲ್ ಪಂದ್ಯಗಳು ದಿನ ನಿತ್ಯದ ಸಂಗತಿಗಳಾಗಿದ್ದವು.
ಇಂದು ಹಳ್ಳಿಯಿಂದ ದಿಲ್ಲಿಯವರೆಗೂ ಯಾವುದೇ ಮೈದಾನ ಅಥವಾ ಗಲ್ಲಿಗಳಲ್ಲಿ ಕಾಣುವುದು ಕ್ರಿಕೆಟ್ ಕ್ರೀಡೆ ಮಾತ್ರ. ಈ ಬಗ್ಗೆ ಸಮಾಜದಲ್ಲಿ ತಿಳುವಳಿಕೆ ಮೂಡಿಸಬೇಕಾದ ಮಾಧ್ಯಮಗಳು ಕ್ರಿಕೆಟ್ ಮತ್ತು ಸಿನಿಮಾ ತಾರೆಯರ ಹಿಂದೆ ಬಿದ್ದಿವೆ.
ಕೇರಳ, ಪಶ್ಚಿಮ ಬಂಗಾಳ ಮತ್ತು ಗೋವಾದ ಯಾವುದೇ ಹಳ್ಳಿಗಳ ಹೊಲಗದ್ದೆಗಳಲ್ಲಿ, ಮೈದಾನಗಳಲ್ಲಿ ಫುಟ್ಬಾಲ್ ಆಡುವ ಹುಡುಗರು ಕಾಣುತ್ತಿದ್ದರು. ಈಗ ಅವರೂ ಸಹ ಕಾಣೆಯಾಗುತ್ತಿದ್ದಾರೆ. ಈ ಬಗ್ಗೆ ನಾವೆಲ್ಲರೂ ಗಂಭೀರವಾಗಿ ಆಲೋಚಿಸಬೇಕಿದೆ.
ನಾನು ಕ್ರಿಕೆಟ್ ದ್ವೇಷಿಯೇನಲ್ಲ. ಬಾಲ್ಯದಲ್ಲಿ ಕ್ರಿಕೇಟ್ ಆಡುತ್ತಿದ್ದವನು. 1981 ರಿಂದ 1984 ರ ವರೆಗೆ ಮದ್ರಾಸ್ ನಗರದಲ್ಲಿ ಇದ್ದ ದಿನಗಳಲ್ಲಿ ಹಿಂದೂ ಪತ್ರಿಕೆಯಲ್ಲಿ ರಾಂ ಎನ್ನುವರು ಬರೆಯುತ್ತಿದ್ದ ಲೇಖನಗಳನ್ನು ಓದಿ ಪ್ರಭಾವಗೊಂಡಿದ್ದೆ.
ಡೆಕ್ಕನ್ ಹೆರಾಲ್ಡ್ ನಲ್ಲಿ ರಾಜನ್ ಬಾಲ ಮತ್ತು ಪ್ರಜಾವಾಣಿಯಲ್ಲಿ ನನ್ನ ಆತ್ಮೀಯ ಮಿತ್ರರಾಗಿದ್ದ ಎಸ್.ದೇವನಾಥ್ ಮತ್ತು ಗೋಪಾಲಕೃಷ್ಣ ಹೆಗ್ಡೆ ಬರೆಯುತ್ತಿದ್ದ ಕ್ರಿಕೆಟ್ ವರದಿಗಳು ಕಾವ್ಯದ ರೂಪದಲ್ಲಿ ಇರುತ್ತಿದ್ದವು. ಮತ್ತೋರ್ವ ಮಿತ್ರ ವಿಜು ಪೂಣಚ್ಚ ಅವರು ಬರೆಯುತ್ತಿದ್ದ ಫುಟ್ ಬಾಲ್, ಹಾಕಿಯ ವರದಿಗಳು ಸಹ ಇಂದಿನ ಕ್ರೀಡಾ ವರದಿಗಾರರಿಗೆ ಮಾದರಿಯಾಗಬಲ್ಲವು.
ಕ್ರೀಡೆಯ ಕುರಿತಾಗಿ ನಮ್ಮ ಯುವಜನತೆಯ ಮನೋಭಾವ ಇಂದು ತುರ್ತಾಗಿ ಬದಲಾಗಬೇಕಿದೆ. ಭವಿಷ್ಯದ ದಿನಗಳಲ್ಲಿ ಈ ಕ್ರಿಕೆಟ್ ಒಂದು ದೊಡ್ಡ ಬೆಟ್ಟಿಂಗ್ ದಂಧೆಯಾಗುವುದರಲ್ಲಿ ಯಾವುದೇ ಸಂಶಯವಿಲ್ಲ.
- ಜಗದೀಶ್ ಕೊಪ್ಪ, ಹಿರಿಯ ಪತ್ರಕರ್ತರು




