24, ಜನವರಿ 2024ರಂದು ಸಮಾಜವಾದಿ ನಾಯಕ ಕರ್ಪೂರಿ ಠಾಕೂರ್ ರವರಿಗೆ ನೂರು ವರ್ಷ ತುಂಬುತ್ತದೆ. ಈ ನೆಪದಲ್ಲಿ ಈ ಜನನಾಯಕರ ಲೆಗಸಿಯನ್ನು ಅರಿಯುವ ಸಣ್ಣ ಪ್ರಯತ್ನ….
ಕ್ವಿಟ್ ಇಂಡಿಯಾ ಚಳುವಳಿಯಲ್ಲಿ ಕಾಂಗ್ರೆಸ್ ಸೋಷಿಯಲಿಸ್ಟ್ ಕಾರ್ಯಕರ್ತರಾಗಿ ಭಾಗವಹಿಸಿದ್ದ ಬಿಹಾರದ ಮಾಜಿ ಸಿಎಂ ಕರ್ಪೂರಿ ಠಾಕೂರ್ ಸಹ ಎಲ್ಲಾ ಲೋಹಿಯಾವಾದಿಗಳಂತೆ ಕಾಂಗ್ರೆಸ್ ವಿರೋಧಿ ಧೋರಣೆ ಬೆಳೆಸಿಕೊಂಡಿದ್ದರು. ಆದರೆ ಇತರರಂತೆ ಅದು ಗೀಳು ಆಗಿರಲಿಲ್ಲ. ಬದಲಿಗೆ ಲೋಹಿಯಾರ ‘ಹಿಂದುಳಿದ ಜಾತಿಗಳ’ ಸಂಘಟನೆಯ ಚಿಂತನೆಯನ್ನು ರಾಜಕಾರಣದಲ್ಲಿ ಸಮರ್ಥವಾಗಿ ಜಾರಿಗೊಳಿಸಿದರು ಮತ್ತು ಮುಂದುವರೆದು ‘ಅತಿ ಹಿಂದುಳಿದ ವರ್ಗಗಳನ್ನು’ ಗುರುತಿಸಿ ಅವರ ಪ್ರಾತಿನಿಧ್ಯಕ್ಕಾಗಿ ನೀತಿಗಳನ್ನು ರೂಪಿಸಿದರು.
1978ರಲ್ಲಿ ಮುರಾರಿಲಾಲ್ ಆಯೋಗದ ಶಿಫಾರಸುಗಳನ್ನು ಆಧರಿಸಿ ಅತಿ ಹಿಂದುಳಿದ ವರ್ಗಗಳಿಗೆ ಶೇ.12, ಹಿಂದುಳಿದ ವರ್ಗಗಳಿಗೆ ಶೇ.8 ಮೀಸಲಾತಿ ಜಾರಿಗೊಳಿಸಿದರು. ಇಂದು ಬಿಹಾರದಲ್ಲಿ ನಿತೀಶ್ ಕುಮಾರ್ ನೇತೃತ್ವದ ಸರ್ಕಾರ ಬಿಡುಗಡೆ ಮಾಡಿದ ‘ಜಾತಿ ಗಣತಿಯ’ ವರದಿಯ ಹಿಂದೆ ಕರ್ಪೂರಿ ಠಾಕೂರ್ ಅವರ ಲೆಗಸಿಯಿದೆ. ಕರ್ನಾಟಕದಂತೆ ಬಿಹಾರ್ ನಲ್ಲಿಯೂ ಭೂ ಸುಧಾರಣೆ ಜಾರಿಗೊಳಿಸಿದರು. ಆದರೆ ಭೂಮಿಹಾರ್ ಒಳಗೊಂಡಂತೆ ಬಲಿಷ್ಠ ಜಾತಿಗಳು ಇದನ್ನು ತೀವ್ರವಾಗಿ ವಿರೋಧಿಸಿದವು. ಅರಸು ಅವರು ಇದನ್ನು ಮೀರಿದಷ್ಟು ಸುಲಭವಾಗಿ ಕರ್ಪೂರಿಯವರಿಗೆ ಸಾಧ್ಯವಾಗಲಿಲ್ಲ. ಅದಕ್ಕೆ ಬಿಹಾರ್ ರಾಜ್ಯದ ಬಲಿಷ್ಠ ಬ್ರಾಹ್ಮಣ-ಫ್ಯೂಡಲಿಸಂನ ನೆಟ್ ವರ್ಕ್ ಸಹ ಮುಖ್ಯ ಕಾರಣ. ಮತ್ತು ಗಟ್ಟಿಯಾದ ಪಕ್ಷ ಸಂಘಟನೆ ಇಲ್ಲದ ಇಲ್ಲಿನ ಸಮಾಜವಾದಿಗಳು ಹಗಲೂ ರಾತ್ರಿ ವಿರೋಧಿಸಿದ ಕಾಂಗ್ರೆಸ್ ಪಕ್ಷ ಅರಸು ಅವರ ಪಾಲಿಗೆ ಮುಖ್ಯ ಭೂಮಿಕೆಯಾಗಿದ್ದು ಮತ್ತೊಂದು ಕಾರಣ.
ಅತಿ ಹಿಂದುಳಿದ ಕ್ಷೌರಿಕ ಸಮುದಾಯದಲ್ಲಿ ಜನಿಸಿದ ಕರ್ಪೂರಿ ಠಾಕೂರ್ ಮುಂದೆ ನಿಷ್ಠಾವಂತ ಸಮಾಜವಾದಿಯಾಗಿ ರೂಪುಗೊಂಡಿದ್ದು, ಹಿಂದುಳಿದ ಜಾತಿಗಳ ಪ್ರಾತಿನಿಧ್ಯದ ಪರವಾಗಿ ಹೋರಾಡಿ ‘ಜನನಾಯಕ’ ಎಂದು ಖ್ಯಾತರಾಗಿದ್ದು ಒಂದು ಚಾರಿತ್ರಿಕ ಕಥನ.
ಆರಂಭದಲ್ಲಿ ಜಾತಿ ಹಿಂದೂಗಳ ಬೆಂಬಲ ಪಡೆದುಕೊಂಡು ರಾಜಕೀಯ ಆರಂಭಿಸಿದ ಜನನಾಯಕ ನಂತರ ಹಿಂದುಳಿದ ಜಾತಿಗಳ ಪ್ರತಿನಿಧಿಯಾಗಿ ಬೆಳೆಯುತ್ತಾ ಮೂರನೆಯ ಹಂತದಲ್ಲಿ ದಲಿತರನ್ನು ಒಳಗೊಂಡ ಅತಿ ಹಿಂದುಳಿದ ಜಾತಿಗಳನ್ನು ಸಂಘಟಿಸುತ್ತಾ ಕ್ರಮೇಣವಾಗಿ ಮೊದಲನೆ ಹಂತದ ಬಲಿಷ್ಠ ಜಾತಿಗಳ ಬೆಂಬಲದ ಕಳೆದುಕೊಂಡರು. ಇದು ಬಿಡುಗಡೆಯೂ ಹೌದು. ಪಲ್ಲಟಗಳ ಈ ಸಾಮಾಜಿಕ-ರಾಜಕೀಯ ಪ್ರಕ್ರಿಯೆ ಕುತೂಹಲಕಾರಿಯಾಗಿದೆ.
1990ರ ನಂತರದ ಬಿಹಾರದ ಮಂಡಲ್ ರಾಜಕಾರಣವು ಅರವತ್ತು, ಎಪ್ಪತ್ತರ ದಶಕದ ಕರ್ಪೂರಿ ಠಾಕೂರ್ ಅವರ ಈ ಲೆಗಸಿಯೊಂದಿಗೆ ಬಲವಾಗಿ ಬೆಸೆದುಕೊಂಡಿದೆ.
ಲೋಹಿಯಾರ ಬೌದ್ಧಿಕ ಪ್ರಖರತೆಯಲ್ಲಿ ರೂಪುಗೊಂಡ ಈ ಹಿಂದುಳಿದ ಜಾತಿಗಳ ರಾಜಕಾರಣವನ್ನು ಮುಂದಿನ ಹಂತದಲ್ಲಿ ಪ್ರಯೋಗಾತ್ಮಕವಾಗಿ ಜಾರಿಗೊಳಿಸಿದ ಠಾಕೂರ್ ಸಾಹೇಬರು 1952ರಿಂದ 1988ರವರೆಗೂ ಶಾಸಕರಾಗಿದ್ದರು. ಮಧ್ಯೆ 1977ರಲ್ಲಿ ಸಂಸದರಾಗಿದ್ದರು. ಡಿಸೆಂಬರ್ 1970- ಜೂನ್ 1971 ಮತ್ತು ಜೂನ್, 1977 – ಎಪ್ರಿಲ್ 1979ರ ಅವಧಿಯಲ್ಲಿ ಮುಖ್ಯಮಂತ್ರಿಗಳಾಗಿದ್ದರು.
ಭಾರತದ ರಾಜಕಾರಣದಲ್ಲಿ ಒಂದೆಡೆ ಶಾಸಕ, ಮುಖ್ಯಮಂತ್ರಿಯಾಗಿ ಮತ್ತೊಂದೆಡೆ ಸಮಾಜವಾದಿ ಹೋರಾಟಗಾರರಾಗಿ ಒಂದು living ಉದಾಹರಣೆಯಾಗಿದ್ದು ಕರ್ಪೂರಿ ಠಾಕೂರ್ ಒಬ್ಬರೇ ಇರಬೇಕು.
ಕರ್ನಾಟಕದ ದೇವರಾಜ ಅರಸರಂತೆ ಬಿಹಾರದಲ್ಲಿ ಕರ್ಪೂರಿ ಠಾಕೂರ್ ರ ಸಮುದಾಯದ ಜನಸಂಖ್ಯೆ ಕೇವಲ ಶೇ.1.7 ಪ್ರಮಾಣದಲ್ಲಿತ್ತು. ಅದರೆ ಈ ಮಿತಿಯನ್ನು ಮೀರಿ1978ರಲ್ಲಿ ಸರ್ಕಾರಿ ಹುದ್ದೆಗಳಲ್ಲಿ ಹಿಂದುಳಿದ ವರ್ಗಗಳಿಗೆ ಶೇ.26 ಮೀಸಲಾತಿ ಕಲ್ಪಿಸಿದ್ದು, ಅತಿ ಹಿಂದುಳಿದ ವರ್ಗಗಳಿಗೆ ಒಳ ಮೀಸಲಾತಿ ಜಾರಿಗೊಳಿಸಿದ್ದು ಕರ್ಪೂರಿಯವರ ಬಹು ದೊಡ್ಡ ಸಾಧನೆ. ಮತ್ತು ರಾಜಕೀಯ ಇಚ್ಚಾಶಕ್ತಿಯ ಪ್ರಾಮುಖ್ಯತೆ ಗೊತ್ತಾಗುತ್ತದೆ. ಈ ಸಂಕೀರ್ಣತೆಯನ್ನು ಅರಿಯಲು ಇಲ್ಲಿನ ಸಮಾಜೋ-ಆರ್ಥಿಕ ವ್ಯವಸ್ಥೆಯ ಕನಿಷ್ಠ ಮಾಹಿತಿ ಇರಬೇಕಾಗುತ್ತದೆ.
ಕಳೆದ ವರ್ಷ ಮಧು ಲಿಮಯೆಯವರು ಹುಟ್ಟಿ ನೂರು ವರ್ಷಗಳಾಗಿದ್ದರೆ ಈ ವರ್ಷ ಮಧು ದಂಡವತೆ ಮತ್ತು ಕರ್ಪೂರಿ ಠಾಕೂರ್ ಅವರ ಜನ್ಮ ಶತಮಾನೋತ್ಸವ ಆಚರಿಸಲಾಗುತ್ತಿದೆ. ಆದರೆ ಈ ಮೂವರಲ್ಲಿ ಲಿಮಯೆಯವರು ಚಿಂತನೆಯಲ್ಲಿ ಲೋಹಿಯಾರ ಪ್ರಭಾವ ಮೀರಿ ಬೆಳೆದರೆ ಕರ್ಪೂರಿ ಠಾಕೂರ್ ಚಿಂತನೆ, ಹೋರಾಟ ಮತ್ತು ಕೆಳಹಂತದ ರಾಜಕಾರಣ ಮೂರರಲ್ಲಿಯೂ ಲೋಹಿಯಾರ ವರ್ತುಲದಾಚೆಗೆ ಬೆಳೆದರು. ಬ್ರಾಹ್ಮಣೀಕರಣ ರಹಿತ ರಾಜಕಾರಣದ ಚಳುವಳಿಯನ್ನು ಆರಂಭಿಸಿದರು. ಆದರೆ ಅದನ್ನು ಭವಿಷ್ಯದ ರಾಜಕಾರಣವಾಗಿ ಕಟ್ಟಲು ಸಾಧ್ಯವಾಗಲಿಲ್ಲ. ಇದಕ್ಕೆ ಹಲವಾರು ಕಾರಣಗಳಿವೆ.
ಲೋಹಿಯಾರಂತೆ ಅಪಾರ ಓದಿನ ಹುಚ್ಚು ಬೆಳೆಸಿಕೊಂಡಿದ್ದ ಠಾಕೂರ್ ಫುಲೆ, ಅಂಬೇಡ್ಕರ್, ಪೆರಿಯಾರ್ ರವರ ಚಿಂತನೆಗಳಿಂದ ಪ್ರಭಾವಿತರಾಗಿದ್ದರು. ಈ ಕಾರಣಕ್ಕಾಗಿಯೇ ಪ್ರಜಾಪ್ರಭುತ್ವ, ಸೆಕ್ಯುಲರಿಸಂ ಮತ್ತು ಸಾಮಾಜಿಕ ನ್ಯಾಯ ಒಟ್ಟೊಟ್ಟಿಗೆ ಬಲಗೊಳ್ಳಬೇಕು ಎಂದು ದೃಢವಾಗಿ ನಂಬಿದ್ದರು.
ಜಬೀರ್ ಹುಸೇನ್ ಬರೆದ ‘ಜನರಿಂದ ಸುತ್ತುವರಿದ ವ್ಯಕ್ತಿ’ ಕವನದಲ್ಲಿನ ‘ಅವರ ಕೈಯಲ್ಲಿ ಕಟ್ಟುವ ಕಲ್ಲುಗಳು ಕಣ್ಣುಗಳ ಹೊಳಪಿನಲ್ಲಿ ಕನಸುಗಳು’ ಎನ್ನುವ ಸಾಲುಗಳು ಜನನಾಯಕರ ಸಮಗ್ರ ವ್ಯಕ್ತಿತ್ವದ ಹೊಳಹುಗಳನ್ನು ಕಾಣಬಹುದು.
ಆದರೆ ಲೋಹಿಯಾರಂತೆ ಕರ್ಪೂರಿಯವರೂ ಸಹ ಪಕ್ಷದೊಳಗೆ ಭಿನ್ನಮತದ ಹೆಸರಿನಲ್ಲಿ ಗುಂಪುಗಳನ್ನು ಕಟ್ಟಿದರು, ಪಕ್ಷ ಬಿಡುವುದು, ಪಕ್ಷ ಸೇರುವುದು, ಮತ್ತೊಂದು ಪಕ್ಷ, ಇನ್ನೊಂದು ಹೀಗೆ ಅನೇಕ ಕಡೆಗಳಲ್ಲಿ ಅಲೆದಾಡಿದರು. ಇದರಿಂದಾಗಿ ಹಿಂದುಳಿದ ವರ್ಗಗಳ ಪ್ರಾತಿನಿಧ್ಯ ಮತ್ತು ಸಬಲೀಕರಣಕ್ಕೆ ಅಗತ್ಯವಾದ ಒಂದು ಸುಸ್ಥಿರ ರಾಜಕಾರಣ ರೂಪಿಸಲು ಸಾಧ್ಯವಾಗಲಿಲ್ಲ. ಇದು ಕರ್ಪೂರಿ ಠಾಕೂರ್ ರಾಜಕಾರಣದ ಬಲು ದೊಡ್ಡ ಮಿತಿಯಾಗಿದೆ.
ಬಿಹಾರ್ ರಾಜ್ಯದಿಂದ ರಮಾನಂದ ಮಿಶ್ರ, ಸೂರಜ್ ನಾರಾಯಣ ಸಿಂಗ್, ರಾಂಬ್ರಿಕ್ಷ ಬೇನಿಪುರಿಯಂತಹ ಸಮಾಜವಾದಿಗಳ ಜೊತೆಗೆವ1942ರ ಕ್ವಿಟ್ ಇಂಡಿಯಾ ಚಳುವಳಿಯಲ್ಲಿ ಭಾಗವಹಿಸಿದ ಕರ್ಪೂರಿ ಠಾಕೂರ್ ಅವರ ‘ರೈತ ಚಳುವಳಿ’ಯನ್ನು ವಿಸ್ತರಿಸಿ ಅದಕ್ಕೆ ‘ಆರ್ಥಿಕ ಆಯಾಮ’ ತಂದುಕೊಟ್ಟರು. ಆದರೆ ಇದನ್ನು ಗಟ್ಟಿಗೊಳಿಸಲು ಅಗತ್ಯವಾದ ‘ಸ್ಥಿರ ರಾಜಕಾರಣ’ವನ್ನು ಕಟ್ಟಲು ವಿಫಲರಾದರು. ಈ ಕಾರಣದಿಂದ ‘ಅತಿ ಹಿಂದುಳಿದ ವರ್ಗಗಳ’ ಚಳವಳಿಯು ತಮಿಳುನಾಡಿನ ದ್ರಾವಿಡ ಚಳವಳಿ ರೀತಿ ಸಮಾಜೋ-ರಾಜಕೀಯ-ಸಾಂಸ್ಕ್ರತಿಕ ನೆಲೆಯಲ್ಲಿ ಬಿಹಾರ್ ಮತ್ತು ಉತ್ತರ ರಾಜ್ಯಗಳಲ್ಲಿ ಬೆಳೆಯಲು ಸಾಧ್ಯವಾಗಲಿಲ್ಲ.
ಲೋಹಿಯಾ ರಾಜಕಾರಣದ ಈ ಮಿತಿಯನ್ನು ಕರ್ಪೂರಿ ಠಾಕೂರ್ ಗೂ ಮೀರಲು ಸಾಧ್ಯವಾಗಲಿಲ್ಲ ಎನ್ನುವುದು ಖೇದಕರ ಸಂಗತಿ….
( ಮುಂದುವರಿಯುತ್ತದೆ.)
- ಬಿ. ಶ್ರೀಪಾದ ಭಟ್, ಸಾಮಾಜಿಕ ಹೋರಾಟಗಾರರು




